ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತಚಂದನ ಕಳ್ಳಸಾಗಣೆ ಸೂತ್ರಧಾರರ ರೆಕ್ಕೆ ಕತ್ತರಿಸಿ

Last Updated 8 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಆಂಧ್ರಪ್ರದೇಶದ ತಿರುಪತಿ ಸಮೀಪ ಇರುವ  ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ರಕ್ತಚಂದನದ ಹೆಸರಿನಲ್ಲಿ ನೆತ್ತರು ಹರಿದಿದೆ. ರಕ್ತಚಂದನ ಕಳ್ಳಸಾಗಣೆ ನಿಗ್ರಹ ಉದ್ದೇಶದ ವಿಶೇಷ ಕಾರ್ಯಪಡೆಯ ಗುಂಡಿಗೆ 20 ಮಂದಿ ಮರಗಳ್ಳರು ಬಲಿಯಾಗಿದ್ದಾರೆ.  ಇಂತಹ ಭಯಾನಕ ಎನ್‌ಕೌಂಟರ್‌ ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಬಹುಶಃ ಎಲ್ಲಿಯೂ ನಡೆದಿರಲಿಕ್ಕಿಲ್ಲ. ರಕ್ತಚಂದನದ ದಿಮ್ಮಿಗಳ ಜತೆ ಕೂಲಿಯಾಳುಗಳೂ ಕೊರಡಿನಂತೆ ಸತ್ತುಬಿದ್ದಿರುವ ದೃಶ್ಯ ಕರುಳು ಹಿಂಡುವಂತಹುದು. 

ಇವರೆಲ್ಲ ತಮಿಳುನಾಡು ಮೂಲದವರು. ಬುಡಕಟ್ಟು ಸಮುದಾಯಗಳಿಗೆ ಸೇರಿದವರು ಎಂದು ವರದಿಯಾಗಿದೆ. ಕೂಲಿಗೆ ನಿಯೋಜಿತಗೊಂಡಿದ್ದವರು ಹೆಣವಾಗಿ ಉರುಳುವಂತಹ ಸ್ಥಿತಿ ಒದಗಿದ್ದು ಹೇಗೆ ಎಂಬುದೂ ಸೇರಿದಂತೆ ಈ ಭೀಕರ ಎನ್‌ಕೌಂಟರ್‌ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಎರಡು ರಾಜ್ಯಗಳ ನಡುವೆ ರಾಜಕೀಯ ತಿಕ್ಕಾಟಕ್ಕೂ ಕಾರಣವಾಗಿದೆ. ‘ಮರಗಳ್ಳರ ದಾಳಿಯಿಂದ ಪಾರಾಗಲು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದೇವೆ’ ಅಂತ ವಿಶೇಷ ಕಾರ್ಯಪಡೆ ಮುಖ್ಯಸ್ಥರು ಎನ್‌ಕೌಂಟರನ್ನು ಸಮರ್ಥಿಸಿಕೊಂಡಿದ್ದಾರೆ.

ಆದರೆ ಈ ವಾದವನ್ನು ಒಪ್ಪಲು ಸಿದ್ಧವಿಲ್ಲದ ಮಾನವ ಹಕ್ಕುಗಳ ಸಂಘಟನೆಗಳು, ‘ಇದೊಂದು ಹೇಯ ನರಮೇಧ’ ಎಂದು ಖಂಡಿಸಿವೆ. ಇಂತಹ ತೀವ್ರ ಕ್ರಮಕ್ಕೆ ಪ್ರಚೋದನೆ ಒದಗಿಸಿದ್ದು  ಎಂದು ಹೇಳಲಾದ  ಅಂಶಗಳ ಬಗ್ಗೆಯೂ ಶಂಕೆ ವ್ಯಕ್ತಪಡಿಸಿವೆ. ಘಟನೆ ಬಗ್ಗೆ ವರದಿ ಸಲ್ಲಿಸುವಂತೆ  ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಆಂಧ್ರ ಸರ್ಕಾರಕ್ಕೆ ನೋಟಿಸ್‌ ನೀಡಿರುವುದು ಸರಿಯಾಗಿಯೇ ಇದೆ. ಆತ್ಮರಕ್ಷಣೆಗೆ ಈ ಪರಿ ಗುಂಡಿನ ದಾಳಿ ಸಮರ್ಥನೀಯವಲ್ಲ ಅಂತ ಮೇಲ್ನೋಟಕ್ಕೆ ಯಾರಿಗಾದರೂ ಅನ್ನಿಸದೇ ಇರದು.

ಕಳ್ಳತನಕ್ಕೆ ಇಳಿದವರನ್ನು ಕೊಲೆಗೈಯ್ಯುವಂಥ ವಿಪರೀತದ ನಡೆಯನ್ನು ಯಾವುದೇ ನಾಗರಿಕ ಸಮಾಜ ಒಪ್ಪಲಾರದು. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ 11 ಮಂದಿ ಪೊಲೀಸರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆಯಾದರೂ ಅದರಿಂದಲೇ ಅನುಮಾನಗಳೆಲ್ಲ ನಿವಾರಣೆ ಆಗಲಾರವು. ರಕ್ತಚಂದನ ಮರ ಅಳಿವಿನ ಅಂಚಿಗೆ ಸರಿದ ಅಪರೂಪದ ವೃಕ್ಷಪ್ರಭೇದ. ಆಂಧ್ರದ ಚಿತ್ತೂರು, ಕಡಪ, ಕರ್ನೂಲು, ನೆಲ್ಲೂರು, ಪ್ರಕಾಶಂ ಜಿಲ್ಲೆಗಳ ವ್ಯಾಪ್ತಿಯ ಅರಣ್ಯದ 4.80 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಹರಡಿಕೊಂಡಿದೆ.

ಈ ಮರದ ತುಂಡುಗಳಿಗೆ ಚೀನಾ, ಜಪಾನ್‌ ಮೊದಲಾದ ದೇಶಗಳ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ.  ಬೆಲೆಯೂ ವಿಪರೀತ. ಹೀಗಾಗಿ ಅಂತರರಾಷ್ಟ್ರೀಯ ಜಾಲಗಳು ಕಳ್ಳಸಾಗಣೆ ದಂಧೆಯಲ್ಲಿ ಸಕ್ರಿಯವಾಗಿವೆ. ಇದಕ್ಕೆ ಕಡಿವಾಣ ಹಾಕುವುದು ಅರಣ್ಯ ಹಾಗೂ ಪೊಲೀಸ್‌ ಇಲಾಖೆಗೆ ಸವಾಲಿನ ಕೆಲಸವಾಗಿದೆ. ಆಂಧ್ರದಲ್ಲಿ ಈ ಇಲಾಖೆಗಳ ಸಿಬ್ಬಂದಿ ಹಾಗೂ ರಕ್ತಚಂದನ ಕಳ್ಳಸಾಗಣೆದಾರರ ನಡುವೆ ಪದೇ ಪದೇ ಸಂಘರ್ಷಗಳು ಸಂಭವಿಸುತ್ತಿವೆ. 2013ರ ಡಿಸೆಂಬರ್‌ನಲ್ಲಿ ಇದೇ ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಕಳ್ಳಸಾಗಣೆದಾರರು ಹಾಗೂ ಕೂಲಿಯಾಳುಗಳು ಸೇರಿ ಇಬ್ಬರು ಅರಣ್ಯ ಅಧಿಕಾರಿಗಳನ್ನು ಹತ್ಯೆ ಮಾಡಿದ್ದರು.

ಕರ್ತವ್ಯನಿರತ ಅಧಿಕಾರಿಗಳ ಮೇಲೆ ಭಾರಿ ವಾಹನಗಳನ್ನು ಹತ್ತಿಸಿದ ನಿದರ್ಶನಗಳೂ ಇವೆ. ತಾವು ಅಧಿಕಾರಕ್ಕೆ ಬಂದರೆ ರಕ್ತಚಂದನ ಕಳ್ಳಸಾಗಣೆದಾರರನ್ನು ಬಗ್ಗುಬಡಿಯುವುದಾಗಿ ಎನ್‌. ಚಂದ್ರಬಾಬು ನಾಯ್ಡು, 2014ರ ವಿಧಾನಸಭಾ ಚುನಾವಣೆ ವೇಳೆ ಹೇಳಿದ್ದರು. ಆ ಮಾತಿನಂತೆ ವಿಶೇಷ ಕಾರ್ಯಪಡೆಯನ್ನು ರಚಿಸಿ, ಅದಕ್ಕೆ ಅಗತ್ಯ ಶಸ್ತ್ರಾಸ್ತ್ರಗಳನ್ನು ಒದಗಿಸಿದರು. ದುರದೃಷ್ಟದ ಸಂಗತಿಯೆಂದರೆ ಅವು ಬಡ ಕೂಲಿಕಾರರ ಮೇಲೆ ಬಳಕೆಯಾಗಿವೆ.

ಸೂತ್ರಧಾರರು ಮತ್ತು ಅವರ ಹಿತವನ್ನು ಗುಟ್ಟಾಗಿ ರಕ್ಷಿಸುವ ರಾಜಕಾರಣಿಗಳಿಗೆ ಯಾವುದೇ ಬಾಧಕವಾಗಿಲ್ಲ. ಮೊದಲಿಗೆ  ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಅದಕ್ಕೆ ಬೇಕಾದ ನೀತಿ ರೂಪುಗೊಳ್ಳಬೇಕು. ಕಾನೂನನ್ನು ಬಿಗಿಗೊಳಿಸಬೇಕು. ಮರ ಕಡಿಯುವವರನ್ನು ಗುರಿಯಾಗಿಸುವುದರಿಂದ ಹೆಚ್ಚಿನ ಪ್ರಯೋಜನ ಆಗಲಾರದು. ಪುಡಿಗಾಸಿನ ಆಸೆ ತೋರಿಸಿ ಮತ್ತಷ್ಟು ಮುಗ್ಧರನ್ನು ಈ ದಂಧೆಗೆ ಎಳೆದುತರುವುದು ಮಾಫಿಯಾಗೆ ಕಷ್ಟದ ಕೆಲಸವೇನಲ್ಲ. ಹೀಗಾಗಿ ಸೂತ್ರಧಾರರ ರೆಕ್ಕೆ ಮುರಿಯುವ ಕಡೆ ಗಮನಹರಿಸುವುದು ಅಗತ್ಯ.

ಇದರ ಮಧ್ಯೆ ಆಳುವ ಸರ್ಕಾರ ಬದಲಾದ ಕೂಡಲೇ ಕಳ್ಳಸಾಗಣೆಯಲ್ಲಿ ತೊಡಗಿರುವ ಗುಂಪುಗಳ ಬಲಾಬಲಗಳಲ್ಲೂ ಏರುಪೇರಾಗುವುದು ರೂಢಿ. ಕಾರ್ಯಪಡೆ ಇಂತಹ ಗುಂಪುಗಳ ಕೈಯಲ್ಲಿ ದಾಳವಾಗಬಾರದು. ಮಂಗಳವಾರದ ಎನ್‌ಕೌಂಟರ್‌ ಬಗ್ಗೆ ಅನುಮಾನಗಳಿವೆ. ಸೂಕ್ತ ತನಿಖೆ ಮೂಲಕ ಅವುಗಳನ್ನು ನಿವಾರಿಸಬೇಕು. ತಪ್ಪು ಎಸಗಿದ್ದರೆ ಅಂಥವರಿಗೆ ಶಿಕ್ಷೆಯಾಗಬೇಕು. ಅಂತೆಯೇ ಅಮೂಲ್ಯ ವೃಕ್ಷ ಸಂಪತ್ತಿನ ರಕ್ಷಣೆ ಯಾವುದೇ ಸರ್ಕಾರದ ಆದ್ಯತೆ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT