ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಟೆಕ್ಕಿ ಬರ್ಬರ ಕೊಲೆ

ಆಸ್ಟ್ರೇಲಿಯಾದಲ್ಲಿ ಚಾಕುವಿನಿಂದ ಕತ್ತು ಕೊಯ್ದು ದುಷ್ಕೃತ್ಯ
Last Updated 8 ಮಾರ್ಚ್ 2015, 20:41 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ಟ್ರೇಲಿಯಾದ ಸಿಡ್ನಿ­ಯಲ್ಲಿ ನಗರದ ಸಾಫ್ಟ್‌ವೇರ್‌ ಎಂಜಿನಿ­ಯರ್‌ ಪ್ರಭಾ ಶೆಟ್ಟಿ (41) ಎಂಬುವರು ಶನಿವಾರ ಬರ್ಬರವಾಗಿ ಕೊಲೆಯಾಗಿದ್ದಾರೆ.

‘ಮೈಂಡ್‌ ಟ್ರಿ’ ಕಂಪೆನಿಯಲ್ಲಿ ಉದ್ಯೋ­ಗಿ­­­­ಯಾಗಿದ್ದ ಅವರು ಕಚೇರಿಯ ಕೆಲಸದ ನಿಮಿತ್ತ 2012ರಲ್ಲಿ ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ಸಿಡ್ನಿಯ ಸ್ಟ್ರಾತ್‌ಫೀಲ್ಡ್‌ ಪ್ರದೇಶದ ಬಾಡಿಗೆ ಮನೆಯಲ್ಲಿ ಮೂವರು ಸಹೋದ್ಯೋಗಿ­ಗಳೊಂದಿಗೆ ವಾಸವಾಗಿದ್ದರು.

‘ಅತ್ತೆ ಪ್ರಭಾ ಅವರು ಶನಿವಾರ ರಾತ್ರಿ 8.30ರ ಸುಮಾರಿಗೆ (ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆ) ಕಚೇರಿ­ಯಿಂದ ಮೆಟ್ರೊ

ಸಿಡ್ನಿಗೆ ತೆರಳಿದ ಪತಿ
‘ಮೈಂಡ್‌ ಟ್ರಿ’ ಮಾನವ ಸಂಪ­ನ್ಮೂಲ ವಿಭಾಗದ ಸಿಬ್ಬಂದಿ, ಪ್ರಭಾ ಅವರ ಕುಟುಂಬ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಘಟನೆ ನಂತರ ಅರುಣ್‌ಕುಮಾರ್‌ ಅವರು ಭಾನುವಾರ ಸಿಡ್ನಿಗೆ ಹೋಗಿದ್ದಾರೆ. ಸೋಮ­ವಾರ ಮರಣೋತ್ತರ ಪರೀಕ್ಷೆಯ ಬಳಿಕ ಅರುಣ್‌ಕುಮಾರ್‌ ಅವರಿಗೆ ಶವ ನೋಡಲು ಅವಕಾಶ ಕಲ್ಪಿಸಿಕೊಡುವುದಾಗಿ ಕಂಪೆನಿ ಸಿಬ್ಬಂದಿ ತಿಳಿಸಿದ್ದಾರೆ. ಶವವನ್ನು ಬುಧವಾರ (ಮಾ.11) ನಗರಕ್ಕೆ ತರಲು ವ್ಯವಸ್ಥೆ ಮಾಡುವುದಾಗಿ ಸಿಬ್ಬಂದಿ ಭರವಸೆ ಕೊಟ್ಟಿದ್ದಾರೆ.

ರೈಲಿನಲ್ಲಿ ಸ್ಟ್ರಾತ್‌­ಫೀಲ್ಡ್‌  ಬಳಿಯ ನಿಲ್ದಾಣಕ್ಕೆ ಬಂದಿಳಿ­ದಿದ್ದಾರೆ. ನಂತರ ನಿಲ್ದಾಣದ ಸಮೀ­ಪವೇ ಇರುವ ಮನೆಗೆ ನಡೆದು ಹೋಗುತ್ತಿದ್ದಾಗ ದುಷ್ಕರ್ಮಿ­ಯೊಬ್ಬ ಅವರನ್ನು ಹಿಂಬಾ ಲಿಸಿ ಬಂದು ಚಾಕು ವಿನಿಂದ ಹೊಟ್ಟೆಗೆ ಇರಿದು, ಕತ್ತು ಕೊಯ್ದು ಕೊಲೆ ಮಾಡಿ­ದ್ದಾನೆ’ ಎಂದು ಸಂಬಂಧಿಕರಾದ ತ್ರಿಜೇಶ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಘಟನೆ ವೇಳೆ ಅತ್ತೆಯು ಬೆಂಗಳೂರಿ­ನಲ್ಲಿರುವ ಮಾವ ಅರುಣ್‌ಕುಮಾರ್‌ ಜತೆ ಮೊಬೈಲ್‌ನಲ್ಲಿ ಮಾತನಾಡು­ತ್ತಿದ್ದರು. ಕರೆಯ ಮಧ್ಯೆಯೇ ಅವರು, ಅಪರಿಚಿತ ವ್ಯಕ್ತಿಯೊಬ್ಬ ಅನು­ಮಾ­ನಾ­ಸ್ಪದ ರೀತಿಯಲ್ಲಿ ಹಿಂಬಾಲಿ­ಸುತ್ತಿದ್ದಾನೆ ಎಂದು ಮಾವನಿಗೆ ತಿಳಿಸಿ­ದ್ದಾರೆ.

ನಂತರ ಅವರು, ತನಗೆ ಏನೂ ಮಾಡ­ಬೇಡ. ಹಣ, ಚಿನ್ನಾಭರಣ ಎಲ್ಲಾ ತೆಗೆದುಕೊ. ತನ್ನನ್ನು ಬಿಟ್ಟು ಬಿಡು ಎಂದು ಚೀರಾಡಿದ್ದಾರೆ. ಅಷ್ಟ­ರಲ್ಲೇ ಕರೆ ಸ್ಥಗಿತಗೊಂಡಿದೆ’ ಎಂದು ಹೇಳಿದರು.

ಬಳಿಕ ಅತ್ತೆಯ ಮೊಬೈಲ್‌ಗೆ ಹಲವು ಬಾರಿ ಕರೆ ಮಾಡಿ ಸಂಪರ್ಕಿ­ಸಲು ಯತ್ನಿಸಿದೆವು. ಆದರೆ, ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿದ್ದರಿಂದ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ನಂತರ ಅತ್ತೆಯ ಸಹೋದ್ಯೋಗಿಗಳು ಹಾಗೂ ಪರ್ತ್‌­ನಲ್ಲಿ­­ರುವ ಅತ್ತೆಯ ಅಣ್ಣ ಶಂಕರ್‌ಶೆಟ್ಟಿ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದೆವು. ಸ್ವಲ್ಪ ಸಮಯದಲ್ಲೇ ವಾಪಸ್‌ ಕರೆ ಮಾಡಿದ ಸಹೋದ್ಯೋಗಿ­ಗಳು, ದುಷ್ಕರ್ಮಿ­ಯೊಬ್ಬ ಅತ್ತೆಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಹೇಳಿದರು. ಬಳಿಕ ಶಂಕರ್‌ಶೆಟ್ಟಿ ಅವರು ಸ್ಥಳೀಯ ಪೊಲೀಸ­ರನ್ನು ಸಂಪರ್ಕಿಸಿ­ದಾಗ ಅತ್ತೆ ಕೊಲೆಯಾಗಿರುವ ಸಂಗತಿ ಗೊತ್ತಾ­ಯಿತು ಎಂದು ತ್ರಿಜೇಶ್‌ ಮಾಹಿತಿ ನೀಡಿದರು.

ವೈದ್ಯರಾಗಿರುವ ಶಂಕರ್‌ಶೆಟ್ಟಿ  ಹಲವು ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿದ್ದು, ಅಲ್ಲಿನ ಪೌರತ್ವ ಪಡೆದಿದ್ದಾರೆ. ಘಟನೆ ಸಂಬಂಧ ಪರಾಮಟ್ಟ ನಗರ ಪೊಲೀ­ಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿ­ದ್ದಾರೆ. ಪೊಲೀಸರು, ಆರೋಪಿಗಳ ಬಗ್ಗೆ ಸುಳಿವು ನೀಡುವಂತೆ ಸ್ಥಳೀಯರಿಗೆ ಮನವಿ ಮಾಡಿದ್ದಾರೆ.

ಏಪ್ರಿಲ್‌ನಲ್ಲಿ ಹಿಂದಿರುಗಬೇಕಿತ್ತು:  ಪ್ರಭಾ ಅವರು ಮೂಲತಃ ಬಂಟ್ವಾಳ ತಾಲ್ಲೂಕಿನ ಅಮ್ಟೂರು ಗ್ರಾಮ­ದವರು. ಬಿ.ಇ ಪದವೀಧರೆ­ಯಾದ ಅವರು ವಿವಾಹದ ನಂತರ ಪತಿ ಅರುಣ್‌­ಕುಮಾರ್‌ ಜತೆ ಬೆಂಗ­ಳೂರಿನ ಬಸವೇ­ಶ್ವರ­ನಗರ ಬಳಿಯ ಪ್ರಶಾಂತ್‌ ನಗರ­ದಲ್ಲಿ ವಾಸವಾಗಿದ್ದರು. ದಂಪತಿಗೆ ಮೇಘನಾ ಎಂಬ ಮಗಳಿದ್ದಾಳೆ.

ಸುಮಾರು ಎಂಟು ವರ್ಷಗಳಿಂದ ಮೈಂಡ್‌ ಟ್ರಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಭಾ ಅವರು ಸೀನಿಯರ್‌ ಟೆಕ್ನಿಕಲ್‌ ಅನಲಿಸ್ಟ್‌ ಆಗಿದ್ದರು. ಕಂಪೆನಿಯು ಮೂರು ವರ್ಷಗಳ ಒಪ್ಪಂದದ ಆಧಾರದಲ್ಲಿ ಅವರನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಿತ್ತು. ಅವರು ಏಪ್ರಿಲ್‌್ ಮೊದಲ ವಾರದಲ್ಲಿ ದೇಶಕ್ಕೆ ಹಿಂದಿರುಗಬೇಕಿತ್ತು.

ಅರುಣ್‌ಕುಮಾರ್‌, ಸಾಫ್ಟ್‌ವೇರ್‌ ಕಂಪೆನಿ ನಡೆಸುತ್ತಿದ್ದಾರೆ. ಮೇಘನಾ, ಐದನೇ ತರಗತಿ ಓದುತ್ತಿದ್ದಾಳೆ. ಪ್ರಭಾ ಅವರ ಪೋಷಕರು ಅಮ್ಟೂರು ಗ್ರಾಮದಲ್ಲಿ ನೆಲೆಸಿದ್ದಾರೆ. ಪ್ರಭಾ ಅವರು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ (ಎಸ್‌ಎಚ್‌­ಡಿಪಿ) ಮುಖ್ಯ ಯೋಜನಾಧಿಕಾರಿ ಎಸ್‌.ವಿ. ಜಯಚಂದ್ರ ಅವರ ಸಂಬಂಧಿ.

ಶತ್ರುಗಳಿರಲಿಲ್ಲ
ಎರಡು ವಾರದ ಹಿಂದೆ ನನಗೆ ಕರೆ ಮಾಡಿದ್ದ ಅತ್ತೆಯು, ಮಗಳು ಮತ್ತು ಕುಟುಂಬ ಸದಸ್ಯರಿಂದ ದೂರವಿದ್ದು ಬೇಸರ­ವಾಗಿದೆ. ಇಲ್ಲಿಯ ಜೀವನ ಸಾಕಾಗಿದೆ. ಬೇಗನೆ ದೇಶಕ್ಕೆ ಹಿಂದಿರುಗಿ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಬೇಕು ಎಂದು ಹೇಳಿದ್ದರು. ಅತ್ತೆಗೆ ಯಾರೂ ಶತ್ರುಗಳಿರಲಿಲ್ಲ. ಅವರ ಕೊಲೆಗೆ ಕಾರಣ ಏನು ಎಂಬುದು ಈಗಲೂ ನಿಗೂಢ­ವಾಗಿದೆ. ಅವರ ಸಾವಿನ ಸಂಗತಿ­ಯನ್ನು ಮೇಘನಾಗೆ ತಿಳಿಸಿಲ್ಲ.
 –ತ್ರಿಜೇಶ್‌, ಸಂಬಂಧಿ

ಸಚಿವಾಲಯಕ್ಕೆ ಇ–ಮೇಲ್‌

‘ಪ್ರಕರಣ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಶನಿವಾರ ರಾತ್ರಿಯೇ ಇ–ಮೇಲ್‌ ಕಳುಹಿಸಿ, ನೆರವು ಕೋರಿದ್ದೇವೆ. ಆದರೆ, ಸಚಿವಾಲಯದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಕುಟುಂಬ ಸದಸ್ಯರು ಅಳಲು ತೋಡಿಕೊಂಡಿದ್ದಾರೆ.

ಮುನ್ಸೂಚನೆ ಕೊಟ್ಟಿದ್ದ ಗೆಳತಿಯರು
ಪ್ರಭಾ ಶೆಟ್ಟಿ ಅವರು ಕೊಲೆಯಾದ ಸ್ಥಳದಲ್ಲಿ ಆಗಾಗ್ಗೆ ಅಪರಾಧ ಚಟುವಟಿಕೆಗಳು ನಡೆ­ಯು­ತ್ತಿ­ದ್ದವು. ಈ ಬಗ್ಗೆ ಗೆಳತಿಯರು ಅವರಿಗೆ ಮೊದಲೇ ಎಚ್ಚರಿಕೆ ಕೊಟ್ಟಿದ್ದರು ಎಂದು ‘ಡೈಲಿ ಟೆಲಿಗ್ರಾಫ್‌’ ವರದಿ ಮಾಡಿದೆ.

‘ಮನೆಯ ಸಮೀಪದ ಉದ್ಯಾನದ ಬಳಿ ಸುಲಿಗೆ, ದರೋಡೆ ಕೃತ್ಯಗಳು ನಡೆಯುತ್ತಿದ್ದವು. ದುಷ್ಕರ್ಮಿಗಳು ಉದ್ಯಾ­­ನದ ಬಳಿ ಓಡಾಡುವವರನ್ನು ಬೆದರಿಸಿ ಡಾಲರ್‌, ಚಿನ್ನಾಭರಣ ದೋಚು­ತ್ತಿದ್ದರು’ ಎಂದು ಪ್ರಭಾ ಅವ­ರೊಂದಿಗೆ ವಾಸವಿದ್ದ ಮಹಿಳೆ ತಿಳಿಸಿ­ದ್ದಾರೆ.‘ಉದ್ಯಾನದ ಸುತ್ತಮುತ್ತಲಿನ ಜಾಗ ಸುರಕ್ಷಿತವಲ್ಲ ಎಂದು ಪ್ರಭಾಗೆ ತಿಳಿಸಿದ್ದೆ. ಹೀಗಾಗಿ ಅವರು ಕಚೇರಿ­ಯಿಂದ ಮನೆಗೆ ಬರುವಾಗ ನನಗೆ ಕರೆ ಮಾಡಿ, ರೈಲು ನಿಲ್ದಾಣಕ್ಕೆ ಕರೆಸಿ­ಕೊಳ್ಳುತ್ತಿದ್ದರು. ಬಳಿಕ ಒಟ್ಟಿಗೆ ಮನೆಗೆ ಬರುತ್ತಿದ್ದೆವು’ ಎಂದು ಹೇಳಿದ್ದಾರೆ.

‘ಪ್ರಭಾ ಅವರ ಮನೆಯಿಂದ ಸುಮಾರು 300 ಮೀಟರ್‌ ದೂರ­ದಲ್ಲಿ ಕೊಲೆ ಘಟನೆ ನಡೆದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಭಾ ಅವರನ್ನು ಆಸ್ಪತ್ರೆಗೆ ಕರೆದೊ­ಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಇದೊಂದು ಭೀಕರ ಕೊಲೆ. ಪ್ರಕರಣದಲ್ಲಿ ಎಷ್ಟು ಆರೋಪಿ­ಗಳು ಭಾಗಿಯಾಗಿದ್ದಾರೆ ಎಂಬುದು ಗೊತ್ತಿಲ್ಲ’ ಎಂದು ಪರಾಮಟ್ಟ ನಗರದ ಪೊಲೀಸ್‌ ಸೂಪರಿಂಟೆಂಡೆಂಟ್‌ ವೆಯ್ನೆ ಕಾಕ್ಸ್‌ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT