ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗ ತಾರತಮ್ಯ ಚರ್ಚೆ: ವೇದಿಕೆಯಾದ ಸಿನಿಮೋತ್ಸವ

Last Updated 10 ಡಿಸೆಂಬರ್ 2014, 19:39 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ ಅಂತರರಾಷ್ಟ್ರೀಯ ಸಿನಿಮೋತ್ಸವ ಲಿಂಗ ತಾರತಮ್ಯದ ಚರ್ಚೆ ಹಾಗೂ ಮಹಿಳಾ ದೌರ್ಜನ್ಯಕ್ಕೆ ಕನ್ನಡಿ ಹಿಡಿದ ಜಗತ್ತಿನ ಅತ್ಯುತ್ತಮ ಸಿನಿಮಾಗಳ ಪ್ರದರ್ಶನದ ವಿಭಿನ್ನ ಪ್ರಯೋಗಕ್ಕೆ ವೇದಿಕೆಯಾಗಿದೆ.

‘ಲಿಂಗ ತಾರತಮ್ಯ’ ವರ್ಗಕ್ಕೆ ಸೇರಿದ ಆರು ಸಿನಿಮಾಗಳ ಪ್ರದರ್ಶನಕ್ಕೆ ಅವ­ಕಾಶ ನೀಡಲಾಗಿದ್ದು, ನಾಲ್ಕು ಸಿನಿಮಾ­ಗಳನ್ನು ಚಾಮುಂಡೇಶ್ವರಿ ಸ್ಟುಡಿಯೊ­ದಲ್ಲಿ ಒಂದೇ ದಿನ ಪ್ರದರ್ಶಿಸಿ, ಈ ಕುರಿತು ವಿಚಾರ­ಸಂಕಿರಣವನ್ನೂ ಏರ್ಪಡಿಸ­ಲಾಗಿತ್ತು.

ಸಿನಿಮೋತ್ಸವದಲ್ಲಿ ಇರಾನ್‌ನ ದಿ ‘ಪ್ಯಾಟರ್ನಲ್‌ ಹೌಸ್‌’, ಇಥಿಯೋಪಿಯಾದ ‘ಒಬ್ಲಿವಿಯನ್‌’,  ಸೇರಿದಂತೆ ಒಟ್ಟು ಆರು ಸಿನಿಮಾಗಳು ಪ್ರದರ್ಶನಗೊಂಡವು.
ಜನವಾದಿ ಮಹಿಳಾ ಸಂಘಟನೆ ಹಮ್ಮಿಕೊಂಡಿದ್ದ ಚರ್ಚೆಯಲ್ಲಿ ವಿಮರ್ಶಕ ಪ್ರೊ. ಮನು ಚಕ್ರವರ್ತಿ, ವಿಮರ್ಶಕಿ  ಮೈಥಿಲಿ ರಾವ್‌, ಪ್ಯಾರಿಸ್‌ನ ವಿಮರ್ಶಕಿ ಬಾರ್ಬರ ಲೋರಿ, ಲೇಖಕಿ ಪ್ರತಿಭಾ ನಂದಕುಮಾರ್‌,  ಲೇಖಕಿ ಲತಿಕಾ ಪಟ್ಗಾವ್‌ಕರ್‌. ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಕೆ. ಎಸ್‌. ವಿಮಲಾ ಭಾಗಿಯಾಗಿದ್ದರು.

ಲಿಂಗ ತಾರತಮ್ಯ ವಿಷಯಕ್ಕೆ ಸಂಬಂಧಿಸಿದಂತೆ ಪ್ರದರ್ಶನಗೊಂಡ ಇತರ ಚಿತ್ರಗಳಲ್ಲಿ ಆಪ್ಘಾನಿಸ್ತಾನದ ‘ಒಸಾಮ’, ಅಮೆರಿಕದ ‘ಸ್ಟೋನಿಂಗ್‌ ಆಫ್‌ ಸುರಾಯ’, ಡೆನ್ಮಾರ್ಕ್‌ನ ‘ಮಿಷನ್‌ ರೇಪ್‌’, ಐರ್ಲೆಂಡ್‌ನ ‘ಮ್ಯಾಗ್ಡಲೀನ್‌ ಸಿಸ್ಟರ್ಸ್‌’ ಸೇರಿದ್ದವು.

‘ಒಸಾಮ’ ಚಿತ್ರದಲ್ಲಿ ಹೆಣ್ಣು ಮಗ­ಳೊಬ್ಬಳು ಹುಡುಗನ ವೇಷ ಹಾಕಿಕೊಂಡು ದುಡಿಯಲು ಹೋಗು­ತ್ತಾಳೆ. ನಂತರ ಶಾಲೆಯಲ್ಲಿ ಸಹ ವಿದ್ಯಾರ್ಥಿಗಳ ಕೈಗೆ ಸಿಕ್ಕಿಹಾಕಿಕೊಂಡು ಶಿಕ್ಷೆಗೆ ಒಳಗಾಗುವ ವಿಭಿನ್ನ ಕಥೆ ಚಿತ್ರದಲ್ಲಿದೆ. ಪರ ಪುರುಷನೊಂದಿಗೆ  ಸಂಬಂಧ ಹೊಂದಿದ್ದಾಳೆ ಎಂದು ಸುಳ್ಳು ಸುದ್ದಿ ಹಬ್ಬಿಸಿ, ಗಂಡನೇ ಹೆಂಡತಿಯನ್ನು ಕಲ್ಲು ಹೊಡೆದು ಸಾಯಿಸುವ ಶಿಕ್ಷೆಗೆ ದೂಡುವ ಮನ ಕಲಕುವ ಕಥೆ ಸುರಯ್ಯಾಳದ್ದು, ಬಾಲ್ಕನ್‌ ಯುದ್ಧದ ಸಂದರ್ಭದಲ್ಲಿ ಸೈನಿಕರು ಸಾವಿರಾರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿ ಕೆಲವರನ್ನು ಹತ್ಯೆ ಮಾಡುತ್ತಾರೆ. ಅವರಲ್ಲಿ ಬದುಕುಳಿದ ಕೆಲವರ ಕಥೆ ‘ಮಿಷನ್‌ ರೇಪ್‌’ ಚಿತ್ರದಲ್ಲಿದೆ. ಹೀಗೆ ವಿವಿಧ ದೇಶಗಳ ವಿಭಿನ್ನ ಕಥೆಗಳ ಸಿನಿಮಾ ಪ್ರದರ್ಶನ ಬಳಿಕ ಲಿಂಗ ತಾರತಮ್ಯದ ಚರ್ಚೆ ನಡೆಯಿತು.

ಪ್ರದರ್ಶನಗೊಂಡ ಸಿನಿಮಾಗಳು ಮಹಿಳೆಯ ಸಂಕಟಗಳನ್ನು ಹೇಳಿದರೂ ಎಲ್ಲಾ ದೇಶದ ಕಥೆಗಳಲ್ಲೂ ಮಹಿಳೆಗೆ ಒಂದೇ ಮಾದರಿಯ ಅಸ್ತಿತ್ವದ ಪ್ರಶ್ನೆಗಳು ಎದುರಾಗಿವೆ ಎನ್ನುವ ಅಂಶದಡಿ ಚರ್ಚೆ ನಡೆಯಿತು.

‘ಪಾಶ್ಚಿಮಾತ್ಯ ಮಾದರಿಯಲ್ಲಿ ಇಸ್ಲಾಂ ಧರ್ಮದ ಕಥೆಗಳನ್ನು ನೋಡುವ ರೀತಿಯೇ ಬೇರೆ. ಎಡಪಂಥೀಯ ರಾಷ್ಟ್ರೀಯತೆ ಹಾಗೂ ಬಲಪಂಥೀಯ ರಾಷ್ಟ್ರೀಯತೆ ಎರಡ­ರಲ್ಲೂ ಲಿಂಗ ತಾರತಮ್ಯದ ಹೆಜ್ಜೆಗುರುತುಗಳಿವೆ’ ಎಂದು ಪ್ರೊ. ಮನು ಚಕ್ರವರ್ತಿ ಪ್ರತಿಪಾದಿಸಿದರು.

ಬಾರ್ಬರ ಲೋರಿ ಅವರು ತಮ್ಮ ದೇಶದ ಹೆಣ್ಣು ಮಕ್ಕಳ ಕಥೆಯನ್ನು ಬಿಚ್ಚಿಟ್ಟರು. ‘ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಲಿಂಗ ತಾರತಮ್ಯ ವಿಭಿನ್ನ ಮಾದರಿಯಲ್ಲಿ ಅಸ್ತಿತ್ವದಲ್ಲಿದೆ. ಫ್ರಾನ್ಸ್‌ನ ಸಾಂಪ್ರದಾಯಿಕ ಕುಟುಂಬ­ಗಳು ಈಗಲೂ ಸಲಿಂಗಕಾಮವನ್ನು ಒಪ್ಪಿಕೊಂಡಿಲ್ಲ’ ಎಂದು ಹೇಳಿದರು.

‘ಲಿಂಗ ತಾರತಮ್ಯದ ವಿಷಯ ಬಂದಾಗ ಸಿದ್ಧಾಂತಗಳನ್ನು ಮಾತನಾಡು­ವುದರಲ್ಲಿ ಪ್ರಯೋಜನ ಇಲ್ಲ. ಸಿನಿಮಾದಲ್ಲಿ ಮಹಿಳೆಯನ್ನು ಕೆಟ್ಟದಾಗಿ ಬಿಂಬಿಸುವ ಮಾದರಿ ಬದಲಾಗಬೇಕು. ಕೇವಲ ಪುರುಷ ವೀಕ್ಷಕರಿಗಾಗಿ ಸಿನಿಮಾ ನಿರ್ಮಾಣ ಮಾಡುವುದು ಹೆಚ್ಚಾಗಿದೆ ಹಾಗೂ ನಾಯಕಿಯನ್ನು ಸುಂದರವಾಗಿ ತೋರಿಸುವಲ್ಲಿ ಹೆಚ್ಚು ಮಹತ್ವ ನೀಡಲಾಗುತ್ತಿದೆ’ ಎಂದು ಪ್ರತಿಭಾ ನಂದಕುಮಾರ್‌ ಪ್ರಸ್ತಾಪಿಸಿದರು.

‘ಸಿದ್ಧಾಂತಗಳಿಂದ ಲಿಂಗತಾರತಮ್ಯ ಕಡಿಮೆ ಆಗುವುದಿಲ್ಲ. ಬದಲಾಗಿ ಇಂತಹ ವೇದಿಕೆಗಳಲ್ಲಿ ತಾರತಮ್ಯ ನಿವಾರಣೆಯ ಮಾರ್ಗಗಳ ಬಗ್ಗೆ ಚರ್ಚೆಯಾಗಬೇಕು. ಲಿಂಗ ತಾರತಮ್ಯ ಕೇವಲ ಹೆಣ್ಣು ಮಕ್ಕಳ ಸಮಸ್ಯೆ ಮಾತ್ರ ಅಲ್ಲ. ಗಂಡು, ಹೆಣ್ಣು ಇಬ್ಬರ ಸಮಾನತೆಯ ಚರ್ಚೆಗಳು ಆಗುವುದು ಮುಖ್ಯ’ ಎಂದು ಸಂವಾದದಲ್ಲಿ ಪಾಲ್ಗೊಂಡಿದ್ದ ಸಭಿಕರ  ಪ್ರಶ್ನೆಯೊಂದಕ್ಕೆ ಪ್ರತಿಭಾ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT