ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಳ ವಿದ್ವತ್ ಯಾನಕ್ಕೆ ಎಂಬತ್ತು ವಸಂತ

Last Updated 25 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕಮಲಾ ಹಂಪನಾ (ಜ: ಅ. 28, 1935) ಕನ್ನಡದ ವಿಶಿಷ್ಟ ಲೇಖಕಿ. ಅವರ ಬದುಕು ಜಾತ್ಯತೀತ ವ್ಯಕ್ತಿತ್ವದ ಅಪೂರ್ವ ಮಾದರಿ. ಅವರ ಬರಹ ಕನ್ನಡ ವಿದ್ವತ್‌ ಪರಂಪರೆಯ ಮುಂದುವರಿಕೆ. ಈ ಅಪೂರ್ವ ಸಾಧಕಿಗೆ ಈಗ ಎಂಬತ್ತರ ಸಂಭ್ರಮ. ಎಂಟು ದಶಕಗಳ ಅವರ ಬದುಕು–ಬರಹದ ಅವಲೋಕನ ಕನ್ನಡ ಸಾಂಸ್ಕೃತಿಕ ಸಂದರ್ಭದ ವಿವೇಕ ಮತ್ತು ವಿದ್ವತ್‌ ಮಾದರಿಗಳ ತಡಕಾಟವೇ ಆಗಿದೆ.
ಲಕ್ಷ್ಮೀಪತಿ ಕೋಲಾರ

ನಾಡೋಜ ಪ್ರೊ. ಕಮಲಾ ಹಂಪನಾ ಅವರಿಗೀಗ ಎಂಬತ್ತರ ಹರೆಯ! ಯಾರದೇ ಬದುಕಿನಲ್ಲೂ ಎಂಬತ್ತು ವರ್ಷಗಳೆಂಬುದು ಸುದೀರ್ಘ ಪಯಣದ ಹಾದಿ. ಅದರಲ್ಲೂ ಅರ್ಧ ಶತಮಾನ ಕಾಲ ಸಂಸಾರ, ಅಧ್ಯಾಪನ ಮತ್ತು ಸಭೆ–ಸಮಾರಂಭಗಳಂತಹ ಅನಿವಾರ್ಯತೆಗಳ ನಡುವೆಯೂ ಪ್ರಾಚೀನ ಕನ್ನಡ ಸಾಹಿತ್ಯದ ಅಡವಿಯಲ್ಲಿ ನುಗ್ಗಿ-ನುಲಿದು, ಸಂಶೋಧನೆಯ ಜಂಗಮ ಪ್ರವೃತ್ತಿಯಲ್ಲಿ ಅಲೆದವರು. ಅಕ್ಷರ ಲೋಕದಿಂದ ವಂಚಿತವಾದ ವಂಶಬಳ್ಳಿಯಲ್ಲಿ ಚಿಗುರಿ ಶ್ರದ್ಧೆಯೇ ನನ್ನನ್ನು ಶ್ರದ್ಧಾವಂತಳನ್ನಾಗಿಸೆಂಬ ಮಂತ್ರದಂಡದ ಬೆಳಕಿನಲ್ಲಿ ಅಕ್ಷರಗಳೊಂದಿಗೇ ಅನುಸಂಧಾನಿಸಿ ಸಾವಿರಾರು ಪುಟಗಳ ಸಂಶೋಧನ ಸಾಹಿತ್ಯವನ್ನು ಕನ್ನಡ ಸಾರಸ್ವತ ಲೋಕದ ಮಡಿಲಿಗಿಟ್ಟ ಮೊಟ್ಟ ಮೊದಲ ಗಿರಿಜನ ಮಹಿಳೆ ಈ ಗಟ್ಟಿಗಿತ್ತಿ.

ಬೇಡ ಜನಾಂಗದ ಹಿನ್ನೆಲೆಯ ಕೊತ್ತಕೊಂಡ ರಂಗಧಾಮ ನಾಯಕ ಕಮಲಮ್ಮ ಅವರ ಓದಿನ ಹಟ-ಶ್ರದ್ಧೆಗಳೇ ಒಂದು ಸಾಹಸಗಾಥೆಯಂತಿವೆ. ಕಮಲಮ್ಮ ಅವರ ಅಜ್ಜಿ ರಂಗಮ್ಮ ನಾಯಕ ಜನಾಂಗದವರಾದರೆ, ತಾತ ಚೆಂದಪ್ಪ ಅವರು ಜೈನ ಮೂಲದವರು. ಆದರೂ ಆತ್ಮಗೌರವದ ಹೆಣ್ಣು ರಂಗಮ್ಮ ಪಿತೃಪ್ರಧಾನ ಸಮಾಜದಲ್ಲಿ ತನ್ನ ಮಾತೃಮೂಲೀಯ ಕರುಳ ಪರಂಪರೆಯನ್ನೇ ನೆಚ್ಚಿ ಮುಂದುವರೆಸಿದ ದಿಟ್ಟೆ. ಅಜ್ಜಿಯ ನೆರಳಂತೆಯೇ ಬೆಳೆದ ಈ ಆತ್ಮಗೌರವದ ಹೆಣ್ಣು ಕಮಲಮ್ಮ ಕೂಡ ಜೈನ-ಗಿರಿಜನ ನೆಂಟಸ್ತಿಕೆಯೊಂದಿಗೆ ಮತ್ತೆರಡು ಹೆಜ್ಜೆ ಮುಂದಿಟ್ಟು ಅರ್ಧ ಶತಮಾನದ ಹಿಂದೆಯೇ ಸದ್ದಿಲ್ಲದಂತೆ ಒಲವಿನ ವಿವಾಹ ವೇದಿಕೆಯ ‘ಮಾನವ ಮಂಟಪ’ವನ್ನು ಉದ್ಘಾಟಿಸಿದವರು.

1953ರಿಂದ 1959ರವರೆಗೂ ನಿರಂತರ ಸಹಪಾಠಿಗಳಾಗಿದ್ದ ಕಮಲಾ ಮತ್ತು ಹಂಪನಾ ಅವರ ವಿವಾಹವೇನೂ ಸುಲಭದ ಅಂಗೈ ನೆಲ್ಲೀಕಾಯಿಯಾಗಿರಲಿಲ್ಲ. ಆದರೂ ನಿಸರ್ಗ ಸಹಜ ಪ್ರೇಮದ ಘಾಟನ್ನು ಯಾವ ಅಡೆತಡೆಗಳೂ ಮಣಿಸಲಾಗಲಿಲ್ಲ. ಹಂಪನಾ ಅವರು ‘ತಮಗೂ ತಮ್ಮ ಮನೆಯವರ ಆಸ್ತಿಗೂ ಯಾವುದೇ ಸಂಬಂಧವೂ ಇಲ್ಲ’ ಎಂದು ಹದಿನೈದು ರೂಪಾಯಿಗಳ ಛಾಪಾ ಕಾಗದದಲ್ಲಿ ಬರೆದುಕೊಟ್ಟು ಸ್ವತಂತ್ರರಾದರು. 1961ರ ನವೆಂಬರ್ 24ರಂದು ಬೆಂಗಳೂರಿನ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಮಲಾ ಮತ್ತು ಹಂಪನಾ ಸತಿಪತಿಗಳಾದರು. ಈ ಅಂತರ್‌ಮತೀಯ ವಿವಾಹದ ಗುಟ್ಟನ್ನು ತಮ್ಮ ಸಮುದಾಯದವರಿಗೂ ಬಿಟ್ಟುಕೊಡದಿದ್ದ ರಿಜಿಸ್ಟ್ರಾರ್ ಪದ್ಮನಾಭಯ್ಯ ಅವರೇ ಸ್ವತಃ ಜೈನರಾದರೆ, ಈ ಅಪೂರ್ವ ಮದುವೆಗೆ ಸಾಕ್ಷಿಗಳಾಗಿದ್ದವರಂತೂ ಮುಸ್ಲಿಮರು, ದಲಿತರು, ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣರು ಮತ್ತು ಪರಿವಾರನಾಯಕರಂತಹ ಮಿಶ್ರ ಜಾತಿ-ಕೋಮಿನವರೆಂಬುದು ಕಾಕತಾಳೀಯ! ಕಮಲಮ್ಮ ಅವರ ಓದು ಒಂದು ಹೋರಾಟವೇ ಆಗಿದ್ದರೆ, ಅವರ ವಿವಾಹವೆಂಬುದು ಕುವೆಂಪು ಅವರ ‘ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?’ ಎಂಬ ಉಕ್ತಿಗೆ ಭಾಷ್ಯದಂತಿತ್ತು. ಇಂದಿಗೂ ಕಮಲಾ ಹಂಪನಾ ಅವರ ಕುಟುಂಬವಿಡೀ ಜಾತ್ಯತೀತ ಮೌಲ್ಯಗಳ ಮಾದರಿ ಕುಟುಂಬವೇ ಆಗಿದೆ. ಮಕ್ಕಳೆಲ್ಲರೂ ಅಂತರ್ಜಾತಿ ವಿವಾಹಿತರೇ. ಕನ್ನಡದ ಸಾಹಿತಿಗಳಾದ ಕಮಲಾ–ಹಂಪನಾ ಅವರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲೇ ಓದಿಸಿದರೆಂಬ ವಿಷಯವಂತೂ ಅನೇಕರಿಗೆ ತಿಳಿದಿರಲಾರದು.

ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ವಿಶೇಷವಾಗಿ ಜೈನ ಸಾರಸ್ವತ ವಲಯದಲ್ಲಿ ಪರಿಶ್ರಮಪೂರ್ವಕವಾದ ವಿದ್ವತ್ತಿನ ಕೆಲಸ ನಡೆಸಿರುವ ಕಮಲಾ ಹಂಪನಾ ಅವರು ಸಹಜವಾಗಿಯೇ ಸ್ತ್ರೀಪರವಾದ ದನಿಗೆ ಹೆಚ್ಚು ಒತ್ತುಕೊಟ್ಟಿದ್ದಾರೆ. ಈ ನೆಲದ ಇಡೀ ಮಹಿಳಾ ವರ್ಗವೇ ದನಿಯಿಲ್ಲದ ಚರಿತ್ರೆಯ ವಾರಸುದಾರರಾಗಿದ್ದಾಗ ಇನ್ನು ತಳಸಮುದಾಯದಿಂದ ಬಂದ ಮಹಿಳೆಯೊಬ್ಬರ ತುಮುಲ ಹಾಗು ತಲ್ಲಣಗಳು ಹೇಗಿರಬೇಡ? ಇಡೀ ಜಗತ್ತಿನ ಮಹಿಳೆಯರ ಅವಸ್ಥೆಯು ಭಿನ್ನವಾಗೇನೂ ಇಲ್ಲದಿದ್ದರೂ, ಭಾರತೀಯ ಸಂದರ್ಭದಲ್ಲದು ಬರ್ಬರತೆಯ ಪರಮಾವಧಿಯಂತಿತ್ತು. ನಾಡೋಜ ಗೌರವಕ್ಕೆ ಪಾತ್ರರಾಗಿ, ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗುವ ಅರ್ಹತೆಯನ್ನು ತಳಸಮುದಾಯದ ಕಮಲಾ ಹಂಪನಾ ಅವರು ಪಡೆದ ಸಾಧನೆಯನ್ನು ಇಡೀ ಮಹಿಳಾ ಜಗತ್ತನ್ನು ದಿವ್ಯ ನಿರ್ಲಕ್ಯ್ಷಕ್ಕೆ ದೂಡಿದ ಇಲ್ಲಿನ ಚರಿತ್ರೆಯೊಂದಿಗೆ ತುಲನೆ ಮಾಡಿ ನೋಡಿದಾಗಲಷ್ಟೇ ಯಾರಿಗಾದರೂ ಅವರೇರಿದ ಎತ್ತರದ ಅಂದಾಜು ಸಿಗಬಲ್ಲದೆನಿಸುತ್ತದೆ. ಅವರ ನಿರುದ್ವಿಗ್ನವಾದ ಆದರೆ ತೀವ್ರ ಮಹಿಳಾ ಪರ ನಿಲುವುಗಳ ಹಿಂದಿನ ತಾತ್ವಿಕ ಬದ್ಧತೆಯು ಆಗಷ್ಟೇ ಸ್ಪಷ್ಟವಾಗಬಲ್ಲದು.

ಮಹಿಳೆಯರ ವ್ಯಕ್ತಿಗತವಾದ ಬದುಕಿನ ಯಾತನೆಗಳನ್ನು ವಿವರಿಸದೆ ಒಟ್ಟಾರೆ ಸ್ತ್ರೀ ವರ್ಗದ ಕುರಿತ ಭಾರತೀಯ ಪುರುಷ ಜಗತ್ತಿನ ಕೆಲವು ಗ್ರಹಿಕೆ­­­ಗಳ­ನ್ನಷ್ಟೇ ಇಲ್ಲಿ ಸಂಕ್ಷಿಪ್ತವಾಗಿ ಪ್ರಸ್ತಾಪಿಸುತ್ತಿದ್ದೇನೆ. ಕಮಲಾ ಹಂಪನಾ ಅವರ ‘ಭರಣ’ ಸಂಪುಟದಲ್ಲಿನ ಸ್ತ್ರೀ ಸಂವೇದನೆಗಳ ಕುರಿತ ಲೇಖನಗಳನ್ನು, ಅದರಲ್ಲೂ ವಿಶೇಷವಾಗಿ ದೇವದಾಸಿ, ಧರ್ಮ, ದೇವರು ಕುರಿತು ಬರೆದ ಲೇಖನಗಳನ್ನು ಓದಿದವರಿಗೆ ಈ ಅಂಶಗಳು ನೆನಪಿಗೆ ಬರಬಲ್ಲವು. ಕಮಲಾ ಅವರ ಮಹಿಳಾ ಸಂಸ್ಕೃತಿ ಕುರಿತ ಗ್ರಹಿಕೆಗಳನ್ನೇ ಇಲ್ಲಿ ಬೇರೊಂದು ರೀತಿಯಲ್ಲಿ ನಾನು ಮಂಡಿಸುತ್ತಿದ್ದೇನಷ್ಟೆ.

ಇದು ನಿಜಕ್ಕೂ ಹೆಣ್ಣಿನ ಬಗ್ಗೆ ಭಯಗೊಂಡ ದೇಶ. ಮಾತೃದೇವೋಭವ ಎನ್ನುವ, ಜನನೀ ಜನ್ಮಭೂಮಿಶ್ಚ ಸ್ವರ್ಗಾದಪೀ ಗರೀಯಸಿಯೆಂದು ಗರ್ವಪೂರಿತವಾಗಿ ಗತದ ಸುವರ್ಣ ನೆನಪುಚ್ಚರಿಸುವ ಈ ತಾಯ್ನಾಡಿಗೆ ಹೆಸರಿಡಲು ಒಬ್ಬ ಮಾತೆಯ ಹೆಸರಿರಲಿ, ನೆನಪೂ ಸಿಗಲಿಲ್ಲ. ಯಾವ ಅಜ್ಞಾತ ಭಾರತೀಯ ಈ ನೆಲವನ್ನು ಮಾತೃಭೂಮಿ ಎಂದು ಎಂದಿನಿಂದ ಮತ್ತು ಯಾಕಾಗಿ ಕರೆದನೋ ನನಗಂತೂ ಗೊತ್ತಿಲ್ಲ. ಇಲ್ಲಿನ ಧಾರ್ಮಿಕ ಮತ್ತು ಸಾಮಾಜಿಕ ಇತಿಹಾಸವನ್ನು ಬಲ್ಲವರಿಗೆ ಹಾಗೆ ಕರೆಯಲು ಸಂಕೋಚವೆನಿಸುತ್ತದೆ. ಮಾತೃಭೂಮಿ ಎಂದು ಸುಳ್ಳಾಡಲು ನಾಲಗೆಗೆ ಶಕ್ತಿ ಸಾಲದಾಗುತ್ತದೆ.

ನಮ್ಮ ಪುರಾಣಗಳ ತಿಳಿವಳಿಕೆಯ ಪ್ರಕಾರ ಈ ವಿಶ್ವದ ಸೃಷ್ಟಿಕರ್ತೆ ಆದಿಶಕ್ತಿಯೇ. ಉತ್ತರ ಭಾರತದಲ್ಲಿ ಹೇಗೋ, ದಕ್ಷಿಣದಲ್ಲಂತೂ ಗ್ರಾಮದೇವತೆಯೆಂದರೆ ಅದು ಮಾತೃಮೂರ್ತಿಯೇ. ಯಜಮಾನ ಸಂಸ್ಕೃತಿಯೊಂದಿಗೆ ಸಂಗೋಪಿತಗೊಂಡರೂ ಶಿವ ಮಾತ್ರ ಅರ್ಧನಾರೀಶ್ವರನಾಗಿದ್ದಾನೆ. ಆದರೆ ತ್ರಿಮೂರ್ತಿಗಳಲ್ಲಿ ಒಬ್ಬರೂ ಹೆಣ್ಣಲ್ಲ. ವೇದೋಪನಿಷತ್ತು, ಶಾಸ್ತ್ರ, ಸ್ಮೃತಿ, ಬ್ರಾಹ್ಮಣಗಳ ಸೃಷ್ಟಿಯಲ್ಲಿ ಭಾರತೀಯ ನಾರಿಗೆ ಪಾತ್ರವೇ ಇಲ್ಲ. ಧರ್ಮಸ್ಥಾಪನೆಯಲ್ಲಿ ಒಂದೇ ಒಂದು ಹೆಸರು ಕೂಡ ಹೆಣ್ಣಿನದಲ್ಲ. ಭಾರತದ ನವದರ್ಶನಗಳು ಮತ್ತು ಅರವತ್ತಕ್ಕಿಂತಲೂ ಹೆಚ್ಚಿದ್ದ ಅವೈದಿಕ ಪಂಥಗಳಲ್ಲೂ ಒಬ್ಬಳಾದರೂ ದಾರ್ಶನಿಕಳಿಲ್ಲ. ತೀರ್ಥಂಕರರಲ್ಲೂ ಮಹಿಳೆಯರಿಲ್ಲ. 

ಬಹುಶಃ ಬೌದ್ಧಗುರು ಪರಂಪರೆಯ ಜಾಡೂ ಹೀಗೇ ಇದೆ. ಇದು ದುರಂತದ ಒಂದು ಮಗ್ಗುಲಾದರೆ ಪಾರ್ಶ್ವ ಸತ್ಯವೇ ಬೇರೆಯಿದೆ. ಈ ನೆಲದ ಸಾಂಸ್ಕೃತಿಕ ಇತಿಹಾಸದುದ್ದಕ್ಕೂ ಸಹಜ ಜೀವ ಕರುಳಿನ ಬದುಕುವ ಧರ್ಮದ ಸಾತತ್ಯವುಳಿಸಿ, ಕಾಲಕಾಲಕ್ಕೆ ಅದಕ್ಕೆ ಜೀವ ಪೊರೆಯುತ್ತ ಬಂದವಳು ಮಾತೆಯೇ. ಜೀವದ್ರವ್ಯ ಹೆಣ್ಣು ಗಂಗೆಯಾದರೆ, ಮಣ್ಣು ಧರಣಿಮಾತೆಯಾಗಿದ್ದಾಳೆ. ಅಗ್ನಿ ಜೋತಮ್ಮಗಳಾಗಿವೆ. ಪ್ರಾಣವಾಯುವಾಗಿ ತಾನೇ ಗಾಳೆಮ್ಮನೆಂಬ ಜೀವದಾತೆಯಾಗಿದ್ದಾಳೆ. ವಿಶ್ವವ್ಯಾಪಿ ಅನಂತಾಕಾಶವೇ ಶಕ್ತಿಯಾಗಿ, ಪ್ರಕೃತಿಯಾಗಿದೆ. ಗೌರಿಯಾಗಿ ಕೃಷಿ ಸಮೃದ್ಧಿಯ ದೇವತೆಯಾಗಿ ಸುಗ್ಗಿಯ ಹಿಗ್ಗು ಹಂಚುವವಳೂ ಹೆಣ್ಣೇ. ಅದರ ನಡುವೆ ಧಾರ್ಮಿಕ ರಹಸ್ಯ ಸಾಧಕರಿಗೂ ಈ ಸಿದ್ಧಾಂಗನೆಯೇ ಬೇಕು. ಅಕ್ಷರಶಃ ಸೂರ್ಯನನ್ನೂ ನೋಡದಂತೆ ತಲೆತಗ್ಗಿಸಿ, ಚಂದ್ರಮುಖಿಯೆಂದು ಬಣ್ಣಿಸಿಕೊಂಡೇ, ಪುರುಷ ಜಗತ್ತಿಗೆ ಅರಿವೇ ಆಗದಂತೆ ಮೌನ ಚರಿತ್ರೆಯೊಂದನ್ನು ಕಟ್ಟಿಕೊಂಡು ಬಂದ ಅದೇ ಹೆಣ್ಣು ಆತ್ಮಸ್ಥೈರ್ಯದ ಮಾತನ್ನಾಡಿದಾಗ, ಇಡೀ ಪುರುಷ ಜಗತ್ತಿಗೆ ಅಪರಿಚಿತವಾದ ಹೊಸದನಿ ಕೇಳಿಸಿಬಿಡಬಹುದು. ಅಕ್ಕಮಹಾದೇವಿ, ಲಲ್ಲಾದೇವಿ, ಸಂತೆಮೀರಾ, ಗೋದಾ, ಕನ್ನಗಿ... ಹೀಗೆ ಸ್ತ್ರೀ ಚೇತನ ಗಗನ ತಾಕುವಂತೆ ಒಮ್ಮೊಮ್ಮೆ ಚಿಮ್ಮಿಬಿಡಬಹುದು. ಇಂತಹ ಮೌನ ಪರಂಪರೆಯ ಮುಂದುವರಿಕೆ, ನಮ್ಮ ಕಾಲದ ವಿಶಿಷ್ಟ ದನಿ ಮತ್ತು ಆತ್ಮಸ್ಥೈರ್ಯದ ಧೀಮಂತೆ ಪ್ರೊ. ಕಮಲಾ ಹಂಪನಾ. ಆಡದೆಯೇ ಮಾಡುವ ಕಮಲಾ ಹಂಪನಾರ ಉತ್ತಮಿಕೆಯ ಲೋಕ ವಿವೇಕ, ಸರಳ ಮತ್ತು ನೇರ ಬರವಣಿಗೆ, ಸದ್ದಿಲ್ಲದ ಸಾಧನೆ, ತಾಯಿಯ ತಾಳ್ಮೆ ಗುಣ– ಇವರನ್ನು ಇಂತಹ ಜನಪದ ವಿವೇಕದ ಮೌನ ಪರಂಪರೆಗೆ ಸೇರಿಸಿವೆ.

ಮಾಗಿದ ಮನಸ್ಸಿನ ಕಮಲಾ ಹಂಪನಾ ಅವರು ಬೀದಿಗಿಳಿದು ಜಾತಿ ವಿರೋಧಿ ಚಳವಳಿ ಮಾಡದೆಯೇ ಜಾತಿಭೂತವನ್ನು ಇಕ್ಕಿಮೆಟ್ಟಿ ಬದುಕುತ್ತಿರುವ ಘನವಂತೆ. ಕಥೆ, ಕಾದಂಬರಿಗಳ ಸುತ್ತಲೇ ಗಿರಕಿ ಹೊಡೆಯುವವರಿಗಿಂತ ಭಿನ್ನವಾಗಿ ವಿಚಾರ, ವಿಮರ್ಶೆ, ಸಂಶೋಧನೆ ಮತ್ತು ಸಂಪಾದನೆಯಂತಹ ವಿದ್ವತ್ತಿನ ಕದ ಬಡಿದು ಕಾಲದ ಹೆಜ್ಜೆ ಗುರುತುಗಳನ್ನು ಹಿಡಿದು ಸೈ ಎನಿಸಿಕೊಂಡವರು.

ಅಧ್ಯಯನದೊಂದಿಗೆ ದೇಶ ಸುತ್ತುವ ಚಾರಣಜ್ಞಾನಿಯಾಗಿ ಐವತ್ತಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ನೀಡಿದ ಬರವಣಿಗೆಯ ಶ್ರದ್ಧೆ ಇವರದು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರ ‘ಭಾರತದಲ್ಲಿ ಜಾತಿಗಳು’ ಕೃತಿಯನ್ನು ಅನುವಾದಿಸುವ ಮೂಲಕ ಮೌನವಾಗಿಯೇ ತಮ್ಮ ಸಾಮಾಜಿಕ ನಿಲುವು-ಕಾಳಜಿ ವಿಸ್ತರಿಸಿದವರು.

ಕಮಲಾ ಹಂಪನಾರ ಸಂಶೋಧಕ ಪ್ರತಿಭೆಗೆ ಕನ್ನಡ ವಿದ್ವತ್ ವಲಯವೂ ತಲೆದೂಗಿದೆ. ಪ್ರಾಚೀನ ಸಾಹಿತ್ಯದೊಂದಿಗೆ ಅವರು ನಡೆಸಿರುವ ಅನುಸಂಧಾನಗಳು ಸಂಶೋಧನೆಯ ನಿರ್ಲಕ್ಷ್ಯವೂ ಹಾಗೂ ಅವಜ್ಞೆಗೀಡಾದವೂ ಆದ ನೆಲೆಗಳಲ್ಲಿನ ಅನೇಕ ಒಳದಾರಿಗಳನ್ನು ತೆರೆದಿಟ್ಟಿವೆ. ಪಂಪನ ಆದಿಪುರಾಣದ ಅಭಿವ್ಯಕ್ತಿಯ ಸವಾಲುಗಳಿಂದ ಹಿಡಿದು ಜೈನ ಶಾಸನಗಳು, ಯಕ್ಷ-ಯಕ್ಷಿ, ಕುಮಾರವ್ಯಾಸನ ಪೂರ್ವ ಮತ್ತು ಉತ್ತರಕಾಲೀನ ಜೈನ ಭಾರತಗಳು, ನೋಂಪಿ, ಭವಾವಳಿ, ಚಾವುಂಡರಾಯನ ಸಮಗ್ರ ವ್ಯಕ್ತಿತ್ವ ಮತ್ತು ಕನಕದಾಸರ ಭೌಗೋಳಿಕ ದರ್ಶನದವರೆಗೂ ಅವರ ಅಧ್ಯಯನದ ವೈವಿಧ್ಯಮಯತೆ ಹಬ್ಬಿದೆ.

ಅವರ ಸ್ತ್ರೀ ಸಂವೇದನೆಯ ಬರಹಗಳಂತೂ ಆರುನೂರು ಪುಟಕ್ಕೂ ಮಿಕ್ಕಿದ ಬೃಹತ್ ಸಂಪುಟವೇ ಆಗಿದೆ. ತೊಟ್ಟಿಲು ತೂಗುವ ಕೈಯಿಂದ ಹಿಡಿದು ದೇವದಾಸಿ, ಮಹಿಳೆಯರ ವಿಚಾರ ಸಾಹಿತ್ಯ, ಜೈನ ಮಹಿಳೆ, ಅಜ್ಞಾತ ಜೈನ ಕವಯಿತ್ರಿಯರು, ವಚನಕಾರ್ತಿ ಮುಕ್ತಾಯಕ್ಕ, ಅಕ್ಕಮಹಾದೇವಿ, ಜಕ್ಕಲಾಂಬಾ, ಕುವೆಂಪು ಅವರ ಮಹಿಳಾ ಕಾಳಜಿಗಳು, ಶರತ್‌ಚಂದ್ರರ ಸ್ತ್ರೀ ಪಾತ್ರಗಳು, ಶಾಸನಸ್ಥ ಮಹಿಳೆಯರು, ಕಮಲಾದೇವಿ ಚಟ್ಟೋಪಾಧ್ಯಾಯ, ಸಾವಿರದ ಅತ್ತಿಮಬ್ಬೆ, ಡಾ. ಇಡಾಸ್ಕಡ್ಡರ್ (ತಮಿಳುನಾಡಿನ ವೆಲ್ಲೂರು ಆಸ್ಪತ್ರೆಯ ಸ್ಥಾಪಕಿ) ಮತ್ತು ಅನುಪಮಾ ನಿರಂಜನರ ಸಾಧನೆಗಳನ್ನು ಪರಿಚಯಿಸುವವರೆಗೂ ದಣಿವರಿಯದ ಬರವಣಿಗೆಯನ್ನು ಸಾಧ್ಯವಾಗಿಸಿಕೊಂಡಿದ್ದಾರೆ. ಹೀಗೆ ಕನ್ನಡ ಸಾರಸ್ವತ ಸಂದರ್ಭದಲ್ಲಿ, ವಿಶೇಷವಾಗಿ ಮಹಿಳಾವಲಯದಲ್ಲಿ ವಿರಳವಾಗಿರುವ ವಿದ್ವತ್ ಪ್ರತಿಭೆಯ ಬಹುದೊಡ್ಡ ಕೊರತೆಯನ್ನು ಮೊದಲು ನೀಗಿದವರು ಕಮಲಾ ಹಂಪನಾ. ತಮ್ಮ ಅಧ್ಯಯನ-ಬರವಣಿಗೆಯ ಉದ್ದಕ್ಕೂ ಅವರು ಈ ನೆಲದ ಸಾಂಸ್ಕೃತಿಕ ಚರಿತ್ರೆಯ, ಅದರಲ್ಲೂ ಮಹಿಳಾ ಸಾಂಸ್ಕೃತಿಕ ಚರಿತ್ರೆಯಲ್ಲಿ ಆಗಿರುವ ಲೋಪಗಳನ್ನು ಸಾಮಾಜಿಕ ನ್ಯಾಯಪರತೆಯ ತಾತ್ವಿಕ ಹಿನ್ನೆಲೆಯಲ್ಲಿ ತಿದ್ದಿ, ಮರುಮೌಲ್ಯಮಾಪನ ನಡೆಸಿದ ಕಾರಣದಿಂದಲೇ ನಮ್ಮ ಸಂದರ್ಭದ ಮುಖ್ಯ ಲೇಖಕಿಯಾಗಿದ್ದಾರೆಂಬುದು ಅತಿಶಯೋಕ್ತಿಯಲ್ಲ.

ಸ್ತ್ರೀ ಚರಿತ್ರೆಯ ಪುನರ್‌ ರಚನೆಗೆ ಅಗತ್ಯವಾದ ಸಾಂಸ್ಕೃತಿಕ ರಾಜಕಾರಣವೇ ಅವರ ಬರವಣಿಗೆಯ ಕೇಂದ್ರ ತಾತ್ವಿಕ ನೆಲೆಯಾಗಿದೆ. ಅವರ ಆಸಕ್ತಿ ಸಂಶೋಧನಾ ಪ್ರಧಾನವಾದರೂ ಸೃಜನಶೀಲ ನೆಲೆಯಲ್ಲಿಯೂ ಅವರು ಪ್ರಯೋಗಗಳನ್ನು ನಡೆಸಿದ್ದಾರೆ. ‘ಬಹುಳಾ’ ಎಂಬ ಅವರ ಕಥಾಗುಚ್ಛದ ಒಂದು ಸಂಪುಟವೇ ಸಿದ್ಧವಾಗಿದೆ. ತೊಟ್ಟಿಲು ತೂಗಿದ ಕೈಯೇ ಕವಿತೆಗಳು, ಅನುವಾದಗಳು, ನಾಟಕ ಮತ್ತು ರೂಪಕಗಳಲ್ಲೂ ಕೈಯಾಡಿಸಿದೆ. ಅದು ‘ಬಹುಧಾ’ ಎಂಬ ಸಂಪುಟದಲ್ಲಿ ಸೇರ್ಪಡೆಯಾಗಿದೆ. ಒಟ್ಟಾರೆ ಸಂಶೋಧನೆಯಿಂದ ಮೊದಲ್ಗೊಂಡು ವಿಮರ್ಶೆ, ವೈಚಾರಿಕ, ವ್ಯಕ್ತಿಚಿತ್ರಗಳು, ಮಹಿಳಾ ಸಂವೇದನೆ, ಕಥಾಗುಚ್ಛ ಮತ್ತು ಸೃಜನ ಹಾಗೂ ಸಂಕೀರ್ಣ ಬರಣವಣಿಗೆಗಳ ಎಂಟು ಸಮಗ್ರ ಸಾಹಿತ್ಯ ಸಂಪುಟಗಳವರೆಗೂ ಅವರ ನಾಲ್ಕು ಸಾವಿರ ಪುಟಗಳಿಗೂ ಮಿಕ್ಕಿದ ಸಾಹಿತ್ಯ ಸುಗ್ಗಿ ಅರ್ಧ ಶತಮಾನದ ಕಾಲಾವಧಿಯಲ್ಲಿ ಅಭಿವ್ಯಕ್ತಿಯನ್ನು ಸಾಧಿಸಿದೆಯೆಂಬುದು ಸಾಧಾರಣ ಸಂಗತಿಯಲ್ಲ. ಈಗ ಅವರ ಪಕ್ವ ಮನಸ್ಸು ಆತ್ಮಕಥೆಯತ್ತ ಹೊರಳಿದೆ. ಅವರ ಎಂಟು ಸಮಗ್ರ ಸಾಹಿತ್ಯ ಸಂಪುಟಗಳೂ ‘ಬ’ಕಾರದಿಂದಲೇ ಯಾಕೆ ಶೀರ್ಷಿಕೆಗಳನ್ನು ಪಡೆದಿವೆ ಎನ್ನುವುದೊಂದು ಸೋಜಿಗ.

ಕಮಲಾ ಹಂಪನಾ ಅವರ ಅವಿರತವಾದ ಈ ವಿದ್ವತ್ ಯಾನದ ಹಿಂದಿನ ಪ್ರೇರಣೆಗಳೂ ಹಲವಿವೆ. ಮೊದಲಿಗೆ ಗಂಡು-ಹೆಣ್ಣಿನ ನಡುವೆ ತಾರತಮ್ಯವೆಣಿಸದ ಅವರ ತವರು ಕುಟುಂಬ ಬಾಲ್ಯದಿಂದಲೂ ಸಾಹಿತ್ಯ-ಸಂಗೀತಗಳ ಅಭಿರುಚಿಯನ್ನೂಡಿತು. ಕಮಲಾ ಅವರ ಸೋದರಮಾವ ಬಿ. ದೇವೇಂದ್ರಪ್ಪ ಅವರು ಮೈಸೂರು ಅರಮನೆಯ ಆಸ್ಥಾನ ವಿದ್ವಾಂಸರಾಗಿದ್ದರಲ್ಲದೆ ಜಲತರಂಗ್ ನುಡಿಸುತ್ತಿದ್ದವರು. ಅಣ್ಣ ಪುಣೆಯಲ್ಲಿ ಲಾ ಓದಿದವರು. ಇದರ ಜೊತೆಗೆ ಕಮಲಾ ಹಂಪನಾ ಅವರು ಮೈಸೂರಿನಲ್ಲಿ ಬಿ.ಎ. ಆನರ್ಸ್ ಮತ್ತು ಎಂ.ಎ. ಮಾಡುವಾಗ ಕುವೆಂಪು, ತ.ಸು. ಶಾಮರಾಯರು, ತೀನಂಶ್ರೀ., ಪರಮೇಶ್ವರಭಟ್ಟರಂತಹ ಧೀಮಂತರೊಂದಿಗಿನ ಶಿಷ್ಯತ್ವದಲ್ಲಿ ಅಧ್ಯಯನ ಮತ್ತು ಅಭಿವ್ಯಕ್ತಿಯ ಶಿಸ್ತನ್ನು ರೂಢಿಸಿಕೊಂಡರು. ಡಿ.ಎಲ್.ಎನ್. ಮತ್ತು ಆ.ನೇ. ಉಪಾಧ್ಯರಿಂದ ಸಂಶೋಧನಾಸಕ್ತಿ ಮೈಗೂಡಿತು.

ಹೀಗಾಗಿ ವಿದ್ವತ್ತಿನ ಕ್ಷೇತ್ರದಲ್ಲಿ ಮಹಿಳೆಯರ ಹೆಸರೇ ಕೇಳಿಸದಿದ್ದಾಗ ಕಮಲಾ ಹಂಪನಾ ಅವರು ಆ ಕ್ಷೇತ್ರದಲ್ಲಿ ನೆಲೆಯೂರುವ ಗಟ್ಟಿ ನಿರ್ಧಾರ ಮಾಡಿದರು. ನಂತರ ವಿವಾಹೋತ್ತರದಲ್ಲಿ ಕಮಲಾ ಮತ್ತು ಹಂಪನಾ ಜೋಡಿ ಪರಸ್ಪರರನ್ನು ಪ್ರೀತಿ, ಗೌರವಗಳಿಂದ ನಡೆಸಿಕೊಳ್ಳುವ ಸಭ್ಯ ಪರಿಪಾಠವೇ ಮುಂದುವರೆಯಿತು. ಈಗಲೂ ಪರಸ್ಪರರಿಂದ ಅವರು ಸೃಜನಾತ್ಮಕ ಶಕ್ತಿ ಮತ್ತು ಪ್ರೇರಣೆಗಳನ್ನು ಪಡೆಯುವುದೂ ಮುಂದುವರಿದಿದೆ. ತಮ್ಮ ದೀರ್ಘಕಾಲೀನ ಬದುಕಿನ ಗುರುಗಳು, ಸ್ನೇಹಿತರು ಹಾಗೂ ಹಿತೈಷಿಗಳೊಂದಿಗಿನ ಸಣ್ಣಪುಟ್ಟ ಪ್ರಸಂಗಗಳನ್ನು ಕೂಡಾ ಚಾಚೂ ತಪ್ಪದಂತೆ ನೆನಪಿಟ್ಟುಕೊಂಡಿದ್ದಾರೆ. ಎಲ್ಲರಲ್ಲೂ ಹೊಸ ಭರವಸೆ, ಸಹೃದಯತೆ, ಸಭ್ಯತೆ ಮತ್ತು ಬದುಕಿನ ಕುರಿತಾದ ಗುಣಾತ್ಮಕ ನಿರೀಕ್ಷೆಗಳನ್ನೇ ಕಾಣುವ ಕಮಲಾ ಹಂಪನಾ ಅವರು ಈಗ ಭೂಮಿತೂಕದ ಹೆಣ್ಣಿನಂತಿದ್ದಾರೆ. ಕನ್ನಡ ಸಾರಸ್ವತ ಲೋಕದ ಜಾತ್ಯತೀತ ತೇರಿನ ಪಯಣಿಗರಾದ ಈ ಅಪೂರ್ವ ಅರ್ಧನಾರೀಶ್ವರ ಜೋಡಿ ಶತಾಯುಷಿಗಳಾಗಿ, ನಾಡಿನ ಸಾಕ್ಷಿಪ್ರಜ್ಞೆಗಳಾಗಿ ನಮ್ಮ ನಡುವೆ ಇರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT