ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವನಾಥ್‌ ಅಸ್ತ್ರಕ್ಕೆ ಪ್ರತಾಪ ಪ್ರತ್ಯಸ್ತ್ರ

Last Updated 7 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮೈಸೂರು–-ಮಡಿಕೇರಿ: ಜನತಂತ್ರ ವ್ಯವಸ್ಥೆಯ ನಾಲ್ಕು ಆಧಾರ ಸ್ತಂಭಗಳ ಪ್ರಾತಿನಿಧಿಕ ವ್ಯಕ್ತಿಗಳು ಕಣದಲ್ಲಿ ಇರುವುದು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಈ ಬಾರಿಯ ವಿಶೇಷ. ಒಬ್ಬರು ಶಾಸಕಾಂಗ–ಕಾರ್ಯಾಂಗದ ಅನುಭವಿ­ಯಾದರೆ; ಇನ್ನೊಬ್ಬರು ನ್ಯಾಯಾಂಗದಲ್ಲಿ ಸೇವೆಯಲ್ಲಿದ್ದವರು; ಮತ್ತೊ­ಬ್ಬರು ನಾಲ್ಕನೇ ಸ್ತಂಭವಾದ ಪತ್ರಿಕಾರಂಗದ ಹಿನ್ನೆಲೆಯವರು. ಹಾಗಾಗಿ, ಈ ಕ್ಷೇತ್ರ ‘ಅಪರೂಪದ ಪ್ರಯೋಗ’ವೊಂದಕ್ಕೆ ವೇದಿಕೆಯಾಗಿ ಗಮನ ಸೆಳೆದಿದೆ.

ಹಾಲಿ ಸಂಸದ ಅಡಗೂರು ಎಚ್‌. ವಿಶ್ವನಾಥ್‌ ಕಾಂಗ್ರೆಸ್‌ ಪಕ್ಷದ ಹುರಿಯಾಳು. ನಾಲ್ಕು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದು, ಶಾಸಕರಾಗಿ, ಸಚಿವರಾಗಿ ಅನುಭವ­ವಿರುವ ಅವರು ಮರು ಆಯ್ಕೆ ಬಯಸಿದ್ದಾರೆ.

‘ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಆಯ್ಕೆ’ ಎಂದೇ ಗುರುತಿಸಿಕೊಂಡಿರುವ ಪತ್ರಕರ್ತ ಪ್ರತಾಪ ಸಿಂಹ ಬಿಜೆಪಿ­ಯಿಂದ ಕಣಕ್ಕೆ ಇಳಿದಿರುವ ಹೊಸ ಮುಖ. ಕಡೇ ಕ್ಷಣದಲ್ಲಿ ‘ದಿಢೀರ್ ಅಭ್ಯರ್ಥಿ’ಯಾಗಿ ಜೆಡಿಎಸ್‌ನಿಂದ ಕಣಕ್ಕೆ ಧುಮುಕಿದ ನಿವೃತ್ತ ನ್ಯಾಯಮೂರ್ತಿ ಕೆ. ಚಂದ್ರಶೇಖರಯ್ಯ ಅವರಿಗೂ ಇದು ಮೊದಲ ಸಾರ್ವತ್ರಿಕ ಚುನಾವಣೆ.

ಇಲ್ಲಿ ಕಾಂಗ್ರೆಸ್–ಬಿಜೆಪಿ ನಡುವೆ ನೇರ ಹಣಾಹಣಿ. ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಮೂರ್ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಇರುವಂತೆ ಭಾಸವಾದರೂ, ಪೈಪೋಟಿ ಇರುವುದು ಕಾಂಗ್ರೆಸ್‌–ಬಿಜೆಪಿ ನಡುವೆಯೇ.

ಹೇಳಿ–ಕೇಳಿ ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ. ಕ್ಷೇತ್ರ ವ್ಯಾಪ್ತಿಯ 8 ಶಾಸಕರ ಪೈಕಿ ಐವರು ಕಾಂಗ್ರೆಸ್‌ನವರು. ಹಾಗಾಗಿ, ಈ ಕ್ಷೇತ್ರವನ್ನು ಉಳಿಸಿ­ಕೊಳ್ಳು­ವುದು ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದೆ. ಹಾಗೆಯೇ, ಕಳೆದ ಚುನಾವಣೆಯಲ್ಲಿ ಕೇವಲ 7,691 ಮತಗಳಿಂದ ಕ್ಷೇತ್ರವನ್ನು ಬಿಟ್ಟುಕೊಟ್ಟ ಬಿಜೆಪಿ, ಈ ಬಾರಿ ಅದನ್ನು ಕಸಿದುಕೊಳ್ಳಲು ಹಸಿದು ನಿಂತಿದೆ. ಹಳೇ ಮೈಸೂರು ಭಾಗದಲ್ಲಿ ಪ್ರಭಾವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಜೆಡಿಎಸ್‌ಗೂ ಈ ಕ್ಷೇತ್ರದಲ್ಲಿ ತಮ್ಮ ಬಲವನ್ನು ಖಾತ್ರಿಪಡಿಸಿಕೊಳ್ಳುವ ತವಕ.

ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಮೈಸೂರು ನಗರ ಭಾಗದ ನಾಲ್ಕು, ಮೈಸೂರು ಗ್ರಾಮೀಣ ಮತ್ತು ಕೊಡಗು ಭಾಗದ ತಲಾ ಎರಡು ಕ್ಷೇತ್ರಗಳಿವೆ.

ಜಾತಿವಾರು ಲೆಕ್ಕಾಚಾರದಲ್ಲಿ ಅತಿ ಹೆಚ್ಚು ಮತದಾರರು ಒಕ್ಕಲಿಗರು. ಆ ಸಮುದಾಯದವರು ಅಂದಾಜು ಮೂರೂ­ಮುಕ್ಕಾಲು ಲಕ್ಷದಷ್ಟಿದ್ದಾರೆ. ಬಿಜೆಪಿ–ಜೆಡಿಎಸ್ ಅಭ್ಯರ್ಥಿ­ಗಳಿಬ್ಬರೂ ಇದೇ ಸಮುದಾಯಕ್ಕೆ ಸೇರಿದವರು. ಕಾಂಗ್ರೆಸ್ ಅಭ್ಯರ್ಥಿ, ಅಂದಾಜು 1.60 ಲಕ್ಷ ಮತದಾರರಿರುವ ಕುರುಬ ಸಮುದಾಯಕ್ಕೆ ಸೇರಿದವರು.

ಕ್ಷೇತದಲ್ಲಿ ಸುತ್ತಾಡಿದಾಗ ಕಂಡಿದ್ದು: ಕಳೆದ ಚುನಾವಣೆಯಲ್ಲಿ ಇಲ್ಲಿ ತುರುಸಿನ ಸ್ಪರ್ಧೆ ಒಡ್ಡಿ ಬೆವರಿಳಿಸಿದ್ದ ಕುರುಬ ಸಮುದಾಯದ ಸಿ.ಎಚ್. ವಿಜಯಶಂಕರ್‌ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್‌ ತಪ್ಪಿದ್ದು ವಿಶ್ವನಾಥ್‌ಗೆ ಬೋನಸ್‌ ಸಿಕ್ಕಂತಾಗಿದೆ. ಕುರುಬ ಸಮುದಾಯದ ಮತಗಳು ಹಂಚಿಹೋಗದೆ, ಇಡಿಯಾಗಿ ಅವರ ಬತ್ತಳಿಕೆಗೆ ಸೇರುವುದು ಬಹುತೇಕ ಖಚಿತ ಎಂಬ ಮಾತು ಕ್ಷೇತ್ರದಲ್ಲಿ ವ್ಯಾಪಕವಾಗಿದೆ.

ಹಾಗೆಯೇ, ಮುಸ್ಲಿಂ ನಾಯಕ ಜಾಫರ್ ಷರೀಫ್ ಅವರನ್ನೋ ಅಥವಾ ದಲಿತರ ಮುಖಂಡ ಜೆಡಿಯುನ ಬಿ. ಸೋಮಶೇಖರ್ ಅವರನ್ನೋ ಕಣಕ್ಕೆ ಇಳಿಸುವ ಜೆಡಿಎಸ್‌ ಯತ್ನ ಫಲಿಸಿದ್ದರೆ, ಈ ಎರಡೂ ಸಮುದಾಯಗಳ ‘ಮತಬ್ಯಾಂಕ್’ ನೆಚ್ಚಿಕೊಂಡಿರುವ ಕಾಂಗ್ರೆಸ್‌ಗೆ ಮರ್ಮಾಘಾತ ಆಗುತ್ತಿತ್ತು. ಈ ಎಲ್ಲ ಕಾರಣ­ಗಳಿಂದ ವಿಶ್ವನಾಥ್ ಈಗ ‘ಸುರಕ್ಷಿತ’ ಎಂಬ ನಿರಾಳ ಭಾವ ಕಾಂಗ್ರೆಸ್ ವಲಯದಲ್ಲಿದೆ.

ವಿವಿಧ ಸಾಲ ಮನ್ನಾ, ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿ, ಶಾದಿ ಭಾಗ್ಯ ಮತ್ತಿತರ ‘ಜನಪ್ರಿಯ’ ಯೋಜನೆಗಳ ಮಾತು ಜನಸಾಮಾನ್ಯರ ಬಾಯಲ್ಲಿರುವುದು ವಿಶ್ವನಾಥ್‌ಗೆ ಪ್ಲಸ್ ಪಾಯಿಂಟ್. ಜತೆಗೆ, ಸಾಹಿತಿ–ಕಲಾವಿದರ ಬಳಗ, ಸರ್ವೋದಯ ಪಕ್ಷದ ಬೆಂಬಲವೂ ವಿಶ್ವನಾಥ್‌ಗೆ ಒತ್ತಾಸೆ­ಯಾದಂತಿದೆ.

ಸಂಸದರಾಗಿ ವಿಶ್ವನಾಥ್ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಿಲ್ಲ ಎಂಬ ಆರೋಪ ಮೈಸೂರು ಭಾಗದಲ್ಲಿ ಕ್ಷೀಣವಾಗಿ ಕೇಳಿಬಂದರೂ, ಕೊಡಗು ಭಾಗದಲ್ಲಿ ಅದು ದಟ್ಟವಾಗಿದೆ. ಜಿಲ್ಲೆಯ ಜನರ ಬದುಕಿಗೆ ಸಂಕಷ್ಟ ತಂದೊಡ್ಡುವ ಕಸ್ತೂರಿ ರಂಗನ್‌ ವರದಿ ಹಾಗೂ ಸಾವಿರಾರು ಮರಗಳ ಹನನಕ್ಕೆ ಕಾರಣವಾಗುವ ಹೈಟೆನ್ಷನ್‌ ವಿದ್ಯುತ್‌ ಮಾರ್ಗವನ್ನು ತಡೆಯುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ತಮ್ಮ ಅವಧಿಯ ಕೊನೆಯ ವರ್ಷದಲ್ಲಿ ಮಾತ್ರ ಕೊಡಗಿನತ್ತ ಮುಖ ಮಾಡಿದ್ದರು ಎನ್ನುವುದು ಅವರ ವಿರುದ್ಧ ಕೇಳಿಬರುತ್ತಿರುವ ಪ್ರಮುಖ ದೂರು.

ನಿದ್ದೆಗೆಡಿಸಿದ ಪ್ರತಾಪ:  ‘ಟಿಕೆಟ್‌’ ವಿಚಾರದಲ್ಲಿ ವಿಜಯ­ಶಂಕರ್‌ಗೆ ಬಿಜೆಪಿ ಕೈಕೊಡುತ್ತಿದ್ದಂತೆಯೇ, ನಿರಾಳವಾಗಿದ್ದ ಕಾಂಗ್ರೆಸ್‌ಗೆ ದಿನಗಳು ಕಳೆದಂತೆ ಬಿಸಿ ತಟ್ಟಿದಂತಿದೆ. ಸವಾಲು ಒಡ್ಡುವ ಅಭ್ಯರ್ಥಿಯಲ್ಲ ಅಂದುಕೊಂಡಿದ್ದ ಪ್ರತಾಪ ಸಿಂಹ, ತಮ್ಮ ಬಲವನ್ನು ಹಿಗ್ಗಿಸಿಕೊಂಡು ನಿದ್ದೆಗೆಡಿಸಿದ್ದಾರೆ. ಜತೆಗೆ, ಒಕ್ಕಲಿಗರ ಪ್ರಾಬಲ್ಯವಿರುವ ಹುಣಸೂರು, ಪಿರಿಯಾಪಟ್ಟಣ, ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಜೆಡಿಎಸ್ ಮತಗಳನ್ನು ಕಸಿಯುವ ಯತ್ನಕ್ಕೂ ಕೈಹಾಕಿ, ಆ ಪಕ್ಷದಲ್ಲೂ ತಲ್ಲಣಕ್ಕೆ ಕಾರಣರಾಗಿರುವ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಜತೆಗೆ, ಯುವ, ಹೊಸ ಮತದಾರರಲ್ಲಿ ‘ಮೋದಿ’ ಬಗೆಗಿನ ಒಲವು ಹೆಚ್ಚಾಗಿಯೇ ಕಾಣುತ್ತಿದೆ. 

ಸೋಮವಾರಪೇಟೆ ಭಾಗದ ಒಕ್ಕಲಿಗ ಗೌಡರು ಹಾಗೂ ಮಡಿಕೇರಿ ಭಾಗದ ಅರೆಭಾಷೆ ಗೌಡರ ಮತಗಳನ್ನು ಸೆಳೆಯುವ ಉದ್ದೇಶದಿಂದ ‘ಪ್ರತಾಪ ಸಿಂಹ ಗೌಡ’ ಎಂದು ಪ್ರಚಾರದಲ್ಲಿ ಸಂಬೋಧಿಸಲಾಗುತ್ತಿದೆ. ಇನ್ನೊಂದು ಪ್ರಮುಖ ಸಮುದಾಯ­ವಾದ ಕೊಡವರು ಬಿಜೆಪಿ ಜತೆಗಿರುವುದು ಪ್ಲಸ್‌ಪಾಯಿಂಟ್.
‘ಹೊಸ ಮುಖ, ಕ್ಷೇತ್ರದಲ್ಲಿ ಪರಿಚಯವಿಲ್ಲ, ಸ್ಥಳೀಯರಲ್ಲ ಎಂಬುದು ಸಣ್ಣ ಪ್ರಮಾಣದ ತೊಡಕುಗಳು. ಜತೆಗೆ,  ಪಕ್ಷದಲ್ಲಿ ದುಡಿದ ಹಿರಿಯರಿಗೆ ಟಿಕೆಟ್ ಸಿಗಲಿಲ್ಲ ಎಂಬ ಅಸಮಾಧಾನ ಮೇಲ್ನೋಟಕ್ಕೆ ನಿವಾರಣೆ ಆದಂತೆ ಕಂಡರೂ, ಆಂತರ್ಯದಲ್ಲಿ ಪ್ರವಹಿಸುತ್ತಿರುವುದನ್ನು’ ಬಿಜೆಪಿ ಹಗುರವಾಗಿ ಪರಿಗಣಿಸಲು ಸಾಧ್ಯವೇ ಇಲ್ಲ.

ಜೆಡಿಎಸ್‌ಗೆ ಎಸ್‌ಡಿಪಿಐ ಬಲ: ಜಾಫರ್ ಷರೀಫ್ ಒಲ್ಲೆ ಎಂದಿದ್ದ­ರಿಂದ ಕಡೇ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಇಳಿದ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರು, ಪಕ್ಷದ ಜತೆಗೆ ತಮ್ಮ ವರ್ಚಸ್ಸನ್ನು ಮುಂದಿಟ್ಟು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಎದುರಾಳಿ ಕಾಂಗ್ರೆಸ್‌–ಬಿಜೆಪಿಯ ಪ್ರಚಾರದ ಅಬ್ಬರಕ್ಕೆ ಹೋಲಿಸಿದರೆ, ಜೆಡಿಎಸ್‌ ಇನ್ನೂ ಮೈಕೊಡವಿ ಮೇಲೆದ್ದಂತಿಲ್ಲ. ಬಹುಸಂಖ್ಯಾತ ಒಕ್ಕಲಿಗ ಸಮುದಾಯ ಇರುವ ಈ ಕ್ಷೇತ್ರದಲ್ಲಿ ಜೆಡಿಎಸ್‌ ತೋರುತ್ತಿರುವ ‘ನಿರುತ್ಸಾಹ’ವೇ ರಾಜಕೀಯ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಆದರೆ, ಇತ್ತೀಚಿನ ಚುನಾವಣೆಗಳಲ್ಲಿ ಮುಸ್ಲಿಂ ಮತಗಳನ್ನು ಒಗ್ಗೂಡಿಸಿ ಗಮನ ಸೆಳೆದಿರುವ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಣಕ್ಕೆ ನುಗ್ಗಿ  ಕೆಲಸ ಮಾಡಿದರೆ ಎರಡನೇ ದೊಡ್ಡ ಸಮುದಾಯವಾದ ಮುಸ್ಲಿಂ ಮತಗಳನ್ನು ಸೆಳೆಯಬಹುದು ಎಂಬ ಮಾತಿದೆ. ಕಳೆದ ಮೈಸೂರು ಮಹಾನಗರಪಾಲಿಕೆ ಹಾಗೂ ಮಡಿಕೇರಿ ನಗರಸಭೆ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ಎಸ್‌ಡಿಪಿಐ, ಮುಸ್ಲಿಂ ಮತದಾರರನ್ನು ಎಷ್ಟರಮಟ್ಟಿಗೆ ಜೆಡಿಎಸ್‌ಗೆ ಸೆಳೆದುಕೊಡಲಿದೆ ಎಂಬುದನ್ನು ಕಾದು­ನೋಡಬೇಕಿದೆ.

ಕೊಡಗು ಭಾಗದಲ್ಲಿ ಚಂದ್ರಶೇಖರಯ್ಯ ಅವರ ಮುಖ ಪರಿಚಯವೇ ಇಲ್ಲ. ಪಕ್ಷದ ಪ್ರಮುಖ ನಾಯಕರಾರೂ ರಸ್ತೆ­ಗಿಳಿದು ಪ್ರಚಾರ ಕೂಡ ಮಾಡುತ್ತಿಲ್ಲ. ಸೋಮವಾರಪೇಟೆ ಭಾಗ­ದಲ್ಲಿ ಪಕ್ಷದ ಒಂದಿಷ್ಟು ಸಾಂಪ್ರದಾಯಿಕ  ಮತಗಳನ್ನು ಸೆಳೆಯುವಲ್ಲಿ ಮಾತ್ರ ಸಫಲವಾಗಬಹುದಷ್ಟೇ ಎಂಬ ವಾತಾವರಣವಿದೆ.
ಜಾತಿ ಲೆಕ್ಕಾಚಾರ: ಒಕ್ಕಲಿಗ ಮತಗಳನ್ನು ಬಾಚಲು ಜೆಡಿಎಸ್– ಬಿಜೆಪಿ ಮುಂದಾಗಿದ್ದರೆ; ಕುರುಬ ಮತಗಳು ಸಾಲಿಡ್‌ ಆಗಿ ತಮಗೇ ಎಂಬುದು ಕಾಂಗ್ರೆಸ್ ಲೆಕ್ಕಾಚಾರ. ಒಕ್ಕಲಿಗರ ನಂತರ ಹೆಚ್ಚಿರುವುದು ಮುಸ್ಲಿಮರು.

ಈ ಮತಗಳ ಮೇಲೆ ಕಾಂಗ್ರೆಸ್–ಜೆಡಿಎಸ್ ಎರಡೂ ಕಣ್ಣಿಟ್ಟಿವೆ. ಎರಡೂವರೆ ಲಕ್ಷಕ್ಕೂ ಹೆಚ್ಚಿ­ರುವ ಈ ಸಮುದಾಯದ ಮತಗಳು ಹಂಚಿಹೋದರೆ ಬಿಜೆಪಿಗೆ ಲಾಭ. ಈ ಸಮುದಾಯ ಬಿಜೆಪಿಯೇತರ ಪಕ್ಷದ ‘ಗೆಲ್ಲುವ ಅಭ್ಯರ್ಥಿ’ಯತ್ತ ಮುಖ ಮಾಡುವ ಸಾಧ್ಯತೆ ಹೆಚ್ಚು. ಹಾಗಾಗಿ, ಈ ಸಮುದಾಯದ ಮತದಾರರ ವಶೀಕರಣಕ್ಕೆ ಇವೆರಡೂ ಪಕ್ಷಗಳು ಮುಗಿಬಿದ್ದಿವೆ. ಜತೆಗೆ, ಕ್ಷೇತ್ರದಲ್ಲಿ ಒಟ್ಟಾರೆ ಐದು ಲಕ್ಷದಷ್ಟಿರುವ ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರ ಹಿಂದುಳಿದ ವರ್ಗದ ಮತಗಳೇ ನಿರ್ಣಾಯಕ ಎಂಬುದು ಎಲ್ಲ ಪಕ್ಷಗಳಿಗೂ ಅರಿವಿದೆ. 

ಆಮ್‌ ಆದ್ಮಿ ಪಕ್ಷದ ಎಂ.ವಿ. ಪದ್ಮಮ್ಮ, ಬಿಎಸ್‌ಪಿಯ ಸಿ. ಮೋಹನ್‌ಕುಮಾರ್, ಸಿಪಿಐನ (ಎಂಎಲ್) ಡಿ.ಎಸ್. ನಿರ್ವಾಣಪ್ಪ ಅವರೂ ತಮ್ಮದೇ ಸೀಮಿತ ಬಲದೊಂದಿಗೆ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇವರೂ ಸೇರಿದಂತೆ ಒಟ್ಟು 15 ಮಂದಿ ಕಣದಲ್ಲಿ ಇದ್ದಾರೆ.

ಮುಖ್ಯಮಂತ್ರಿ ತವರಿನಲ್ಲಿ ಕಾಂಗ್ರೆಸ್‌ನ ‘ಗೆಲುವಿನ ಓಟ’ಕ್್ಕೆ ಬ್ರೇಕ್ ಹಾಕಲು ಹೊಸ ಮುಖಗಳಿಗೆ ಸಾಧ್ಯವೇ? ಹೊಸಬರ ಪ್ರತಿರೋಧವನ್ನು ಹತ್ತಿಕ್ಕಿ, ವಿಶ್ವನಾಥ್ ೨ನೇ ಬಾರಿಗೆ ವಿಜಯ ಪತಾಕೆ ಹಾರಿಸಲಿದ್ದಾರೆಯೇ? ಎಲ್ಲದಕ್ಕೆ ಫಲಿತಾಂಶ ದಿನವನ್ನು ಕಾಯಬೇಕಿದೆ.

ಎಲ್ಲಿ ಯಾರ ಬಲ?
ಮೈಸೂರು ನಗರ ಭಾಗದ ಕೃಷ್ಣರಾಜ ಹಾಗೂ ಚಾಮರಾಜ ಕ್ಷೇತ್ರ ಮತ್ತು ಕೊಡಗಿನ ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌–ಬಿಜೆಪಿ ನಡುವೆ ನೇರಸ್ಪರ್ಧೆ ಬಹುತೇಕ ನಿಶ್ಚಿತ. ಮುಸ್ಲಿಂ ಪ್ರಾಬಲ್ಯವಿರುವ ನಗರ ಸರಹದ್ದಿನ ನರಸಿಂಹರಾಜ ಕ್ಷೇತ್ರ, ನಗರ ವ್ಯಾಪ್ತಿಯ ಚಾಮುಂಡೇಶ್ವರಿ ಹಾಗೂ ಗ್ರಾಮೀಣ ಭಾಗದ ಹುಣಸೂರು ಮತ್ತು ಪಿರಿಯಾಪಟ್ಟಣಗಳಲ್ಲೂ ನೇರಸ್ಪರ್ಧೆ ಖಚಿತವಾದಂತಿದ್ದರೂ, ಈ ಭಾಗಗಳಲ್ಲಿ ಜೆಡಿಎಸ್ ಸ್ವಲ್ಪ ಪ್ರತಿರೋಧ ಒಡ್ಡಬಹುದು ಎಂದು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT