ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಸ್ಮಯ ವೀಕ್ಷಿಸಲು ಪ್ರವಾಸಿಗರ ಲಗ್ಗೆ

ಪ್ರಕೃತಿ ನಿರ್ಮಿತ ಕಲ್ಸಂಕ ಸೇತುವೆ
Last Updated 20 ಫೆಬ್ರುವರಿ 2014, 6:07 IST
ಅಕ್ಷರ ಗಾತ್ರ

ಕಾರ್ಗಲ್:  ಜೋಗ ಜಲಪಾತ ಮತ್ತು ಇಲ್ಲಿನ ಪಶ್ಚಿಮ ಘಟ್ಟಗಳ ತಪ್ಪಲು ಅನೇಕ ರಹಸ್ಯ, ನಿಗೂಢ, ವಿಸ್ಮಯಗಳ ಗೂಡಾಗಿದೆ. ಸಾವಿರಾರು ವರ್ಷಗಳ ಹಿಂದಿನಿಂದಲೂ ಪ್ರಕೃತಿಯಲ್ಲಿ ಉಂಟಾಗಿರುವ ಅಸಮತೋಲನ, ಜೀವ ಜಗತ್ತಿನಲ್ಲಿ ಆದ ಬದಲಾವಣೆಯ ಕುರುಹು ಇಲ್ಲಿ ಕಾಣಲು ಸಾಧ್ಯ. ಭೂ ವಿಸ್ಮಯಗಳಲ್ಲಿ ಒಂದಾದ ಪ್ರಕೃತಿ ನಿರ್ಮಿತ ಕಲ್ಸಂಕ ಸೇತುವೆ ಕೂಡ ಈಚೆಗಿನ ದಿನಗಳಲ್ಲಿ ನಿಸರ್ಗ ಪ್ರಿಯರ ಮತ್ತು ಪ್ರವಾಸಿಗರನ್ನು ಹೆಚ್ಚು ಗಮನ ಸೆಳೆಯುತ್ತಿದೆ.

ಸಾಗರ ಮಾರ್ಗವಾಗಿ 3 ಕಿ.ಮೀ ದೂರಕ್ಕೆ ಸಾಗಿದರೆ ಸಿಗುವ ಆಡುಕಟ್ಟಾ ಮತ್ತು ಮನ್ಮನೆ ಗ್ರಾಮ ಪಂಚಾಯ್ತಿಯ ಮಧ್ಯಭಾಗದಲ್ಲಿರುವ ಊರು ಮಲವಳ್ಳಿ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಕೇವಲ 50ಮೀಟರ್ ದೂರ ಕಾಲ್ನಡಿಗೆಯಲ್ಲಿ ನಡೆದರೆ ಕಾಣ ಸಿಗುವುದು ಮಲವಳ್ಳಿಯಲ್ಲಿ ಪ್ರಕೃತಿ ನಿರ್ಮಿತ ಬಲು ಅಪರೂಪ ಕಲ್ಸಂಕ ಸೇತುವೆ.

ಕಲಗಾರಿನಲ್ಲಿ ಹುಟ್ಟಿ ಮುಂದೆ ವರದಾ ನದಿಗೆ ಸೇರುವ ನೈಸರ್ಗಿಕ ಹೊಳೆಗೆ ಅಡ್ಡಲಾಗಿ ನಿರ್ಮಾಣವಾಗಿರುವ ಸೇತುವೆ ಇದು. ಹೊಳೆಗೆ ಅಡ್ಡವಾಗಿದ್ದ ಬೃಹತ್ ಗಾತ್ರದ ಲ್ಯಾಟ್ರೈಟ್ ಶಿಲಾ ಪದರದ ಕೆಳಭಾಗದ ಮಣ್ಣು ನೀರಿನಲ್ಲಿ ಕೊಚ್ಚಿ ಹೋಗಿ, ಮೇಲ್ಭಾಗದ ಗಟ್ಟಿಯಾದ ಶಿಲಾಪದರ ಉಳಿದು ಸೇತುವೆಯ ಮಾದರಿಯಲ್ಲಿ ರಚನೆಯಾಗಿದೆ.

ಇದು ಸುಮಾರು 50ಅಡಿ ಉದ್ಧವಿದ್ದು, 6ಅಡಿ ಅಗಲ, 4ಅಡಿ ದಪ್ಪವಿದೆ. ಹೊಳೆಯ ತಳದಿಂದ ಸುಮಾರು 15ಅಡಿ ಎತ್ತರದಲ್ಲಿ ಸೇತುವೆಯಾಗಿ ನಿಂತಿದೆ. ಈ ಸೇತುವೆ ಸ್ಥಳೀಯ ಜನರು ತಮ್ಮ ಜಾನುವಾರುಗಳೊಂದಿಗೆ ಓಡಾಡಿಕೊಂಡು ದಿನ ನಿತ್ಯದ ಸಂಪರ್ಕ ರಸ್ತೆಯಾಗಿ ಬಳಸುವಷ್ಟುಗಟ್ಟಿಯಾಗಿದೆ.  ಭಾರತದಲ್ಲಿ ಹೊಳೆಗೆ ಅಡ್ಡಲಾಗಿ ಪ್ರಕೃತಿದತ್ತವಾಗಿ ನಿರ್ಮಾಣವಾಗಿರುವ ಏಕೈಕ ಸೇತುವೆ ಇದಾಗಿದ್ದು, ಭಾರತ ಸರ್ಕಾರದ ಜಿಯೋಮಾರ್ಪಲಾಜಿಕಲ್ ನಕ್ಷೆಯಲ್ಲಿ ಇದು ನಮೂದಾಗಿದೆ.

ವಿಶ್ವದಲ್ಲಿ ಪ್ರಕೃತಿ ನಿರ್ಮಿತವಾಗಿರುವ ಸೇತುವೆಗಳಲ್ಲಿ ಇದು 2ನೇಯದ್ದಾಗಿದೆ ಎಂದು ಪರಿಸರ ಪ್ರೇಮಿ ಕಲಗಾರು ಲಕ್ಷ್ಮೀನಾರಾಯಣ ಹೆಗಡೆ ಮಾಹಿತಿ ನೀಡಿದ್ದಾರೆ. ಈ ಶಿಲಾ ಸೇತು ಲ್ಯಾಟ್ರ್ಯೇಟ್ ಕಲ್ಲಿನ ಪದರಾಗಿದ್ದು, ಪ್ರತಿ ವರ್ಷ ಹೊಳೆಯಲ್ಲಿ ಹರಿಯುವ ನೀರಿನ ರಭಸಕ್ಕೆ ಸೇತುವೆಯ ಅಗಲ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಕುಸಿದು ಬೀಳುವ ಸಾಧ್ಯತೆಯಿದೆ.

ಈ ಅಪರೂಪದ ವಿಸ್ಮಯ ತಾಣವನ್ನು ಜವಾಬ್ದಾರಿಯುತವಾಗಿ ನಯ ನಾಜೂಕಿನಿಂದ ಉಳಿಸಿ ಕೊಳ್ಳಬೇಕಾದ ಅನಿವಾರ್ಯ ಇದೆ. ಜೋಗ ಅಭಿವೃದ್ಧಿ ಪ್ರಾಧಿಕಾರ ಮತ್ತು ಸರ್ಕಾರ ಇತ್ತ ಗಮನ ಹರಿಸಬೇಕು ಎಂದು ಕಲಗಾರು, ಮಲವಳ್ಳಿ, ಮುಸ್ವಳ್ಳಿ ಗ್ರಾಮಸ್ಥರು ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT