ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಚಾರಿಕ ದಿನವಾಗಿ ಕುವೆಂಪು ಜನ್ಮದಿನ

ಕುಪ್ಪಳಿಯಲ್ಲಿ ಮುಖ್ಯಮಂತ್ರಿ ಘೋಷಣೆ
Last Updated 29 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕುಪ್ಪಳಿ (ಶಿವಮೊಗ್ಗ ಜಿಲ್ಲೆ): ಕುವೆಂಪು ಅವರ ಜನ್ಮದಿನವನ್ನು ಇನ್ನು ಮುಂದೆ ವೈಚಾರಿಕ ದಿನವನ್ನಾಗಿ ಆಚರಿಸಲಾಗು­ವುದು ಎಂದು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಇಲ್ಲಿನ ಹೇಮಾಂಗಣದಲ್ಲಿ ಸೋಮ­ವಾರ ಹಮ್ಮಿಕೊಂಡಿದ್ದ ಕುವೆಂಪು ಅವರ 110ನೇ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವೈಚಾರಿಕ ಸಾಹಿತ್ಯದ ಮೂಲಕ ಕುವೆಂಪು ನಾಡಿನ ಜನರಲ್ಲಿ ವೈಚಾರಿಕ ಚಿಂತನೆ ಮೂಡಿಸಿದ್ದರಿಂದ ಅವರ ಜನ್ಮದಿನ­­ವನ್ನು ವೈಚಾರಿಕ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಇದೇ ಮೊದಲ ಬಾರಿ ಪುಣ್ಯಭೂಮಿ ಕವಿಶೈಲ ನೋಡುವ ಪುಣ್ಯ ಲಭಿಸಿದೆ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್‌.ಹನುಮಂತಯ್ಯ ಮಾತ­ನಾಡಿ,  ಪುರೋಹಿತಶಾಹಿ, ಸಾಮ್ರಾಜ್ಯ­ಶಾಹಿ ವಿರೋಧಿಸಿದ ಕುವೆಂಪು ಜನಸಾಮಾನ್ಯರ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟರು. ವರ್ಣಾಶ್ರಮ ವ್ಯವಸ್ಥೆ ಸಂಪೂರ್ಣ ತೊಲಗಿಸಲು, ಜಾತಿ, ಪಂಗಡ ನಿರ್ಮೂ­ಲನೆಗೆ ಕರೆಕೊಟ್ಟರು ಎಂದು ಸ್ಮರಿಸಿದರು.

ಅಂತಹ ವೈಚಾರಿಕ ಚಿಂತನೆಯ ಕವಿಯ ಜನ್ಮದಿನವನ್ನು ವೈಚಾರಿಕ ದಿನ­ವಾಗಿ ಆಚರಿಸಲು ಸರ್ಕಾರ ಕ್ರಮ ಕೈಗೊಳ್ಳ­ಬೇಕು. ಸರ್ಕಾರಿ ರಜೆ ನೀಡದೇ, ಆಚರಣೆ ಜಾರಿಗೊಳಿಸಬೇಕು. ಅಂದು ಎಲ್ಲ ಶಾಲೆ–ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಒಂದು ಗಂಟೆ ಸಮಯ­ವನ್ನು ಕುವೆಂಪು ಅವರ ವೈಚಾರಿಕ ಸ್ಮರಣೆಗೆ ಮೀಸಲಿಡಬೇಕು. ಮುಂದಿನ ಪೀಳಿಗೆಗೆ ಅವರ ವೈಚಾರಿಕೆ ಚಿಂತನೆ ತಲುಪಲಿ ಎನ್ನುವ ಉದ್ದೇಶ ಇದರ ಹಿಂದಿದೆ ಎಂದರು.

ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಮಾತನಾಡಿ, ಕನ್ನಡ ಭಾಷಾ ಮಾಧ್ಯಮದ ಬಗ್ಗೆ ಜನರಿಗೆ ಪ್ರೀತಿ ಮೂಡುವಂತೆ ಯೋಜನೆ ರೂಪಿಸಬೇಕು. ಆಗ ಮಾತ್ರ ಕುವೆಂಪು ಚಿಂತನೆ ಅರ್ಥ-­ಪೂರ್ಣ-ವಾಗುತ್ತದೆ ಎಂದರು.

ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಮಾತನಾಡಿ, ಕುವೆಂಪು ಅವರು ‘ನೂರು ದೇವರ ನೂಕಾಚೆ’ ಎಂದರು. ಆದರೆ, ಇಂದು ಬೀದಿಗೊಂದು ಗುಡಿ ಕಟ್ಟುತ್ತಿದ್ದೇವೆ. ಜನ ಸಾಯಲು ಬೇಕಾ­ದರೆ ಸಿದ್ಧ. ಆದರೆ, ಧರ್ಮ, ಜಾತಿ ಬಿಡು­ತ್ತಿಲ್ಲ. ಸಾಮಾಜಿಕ ಸಮಾನತೆ ವಿರುದ್ಧ ಜಾಗೃತಿ ಮೂಡಿಸಿದ ಬುದ್ಧ, ಬಸವಣ್ಣ, ಗಾಂಧಿ, ಕುವೆಂಪು  ಅವರ ಆಶಯಗಳನ್ನು ಗಾಳಿಗೆ ತೂರಲಾಗಿದೆ ಎಂದರು.

ಕುವೆಂಪು ಮಲ್ಟಿಮೀಡಿಯಾ ಹಾಲ್‌, ತೇಜಸ್ವಿ ಗ್ಯಾಲರಿ ಉದ್ಘಾಟಿಸಿದ ಮುಖ್ಯಮಂತ್ರಿ   ಸಿದ್ದರಾಮಯ್ಯ ನಂತರ ವೇದಿಕೆಗೆ ಆಗಮಿಸಿ ಕುವೆಂಪು ನುಡಿ ತೋರಣ ಹಾಗೂ ಕಿರು ಚಿತ್ರದ ಡಿವಿಡಿ ಬಿಡುಗಡೆ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕಲಗೋಡು ರತ್ನಾಕರ ಉಪಸ್ಥಿತರಿದ್ದರು.

ವೇದಿಕೆ ಹಂಚಿಕೊಳ್ಳದ ಕಾಗೋಡು: ಬೆಳಿಗ್ಗೆ 11ಕ್ಕೆ ಬಂದಿದ್ದ ಕಾಗೋಡು, ಮುಖ್ಯಮಂತ್ರಿ ಬರುವವರೆಗೂ ಕಾದರು. ಮುಖ್ಯಮಂತ್ರಿ ಬಂದ ನಂತರ ಅವರ ಕೈಕುಲುಕಿ ನಿಮಿಷವೂ ಕಾಯದೆ ವೇದಿಕೆಯಿಂದ ಹೊರನಡೆದರು.

ಒಳಗೆ ವಿಚಾರ; ಹೊರಗೆ ಕಾತರ!
ಕುವೆಂಪು ಜನ್ಮದಿನಾಚರಣೆ ಕಾರ್ಯ­ಕ್ರಮ ನಿಗದಿಯಾಗಿದ್ದು ಬೆಳಿಗ್ಗೆ 11ಕ್ಕೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದು ಮಧ್ಯಾಹ್ನ 2.15ಕ್ಕೆ.

ಮುಖ್ಯಮಂತ್ರಿಗಳು, ಬೆಂಗಳೂರಿನಲ್ಲಿ ನಡೆದ ಉನ್ನತಮಟ್ಟದ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಬರುವುದು ತಡವಾಗುತ್ತದೆ ಎಂಬ ಸಂದೇಶ ಬಂದ ಕಾರಣ 12ಕ್ಕೆ ಕಾರ್ಯಕ್ರಮ ಆರಂಭಿಸಲಾಯಿತು. ಅರ್ಧಗಂಟೆಯ ನಂತರ ಡಿ.ಎಚ್‌.ಶಂಕರಮೂರ್ತಿ ಅವರು ಮಾತು ಆರಂಭಿಸಿದರು. ಆಗ ಸಿ.ಎಂ ಎದುರು­ಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ, ನಗರಾಭಿವೃದ್ಧಿ ಸಚಿವ ವಿನಯಕುಮಾರ ಸೊರಕೆ ಸೇರಿದಂತೆ ವೇದಿಕೆಯ ಮೇಲಿದ್ದ ಬಹುತೇಕ ಗಣ್ಯರು ಜಾಗ ಖಾಲಿ ಮಾಡಿದರು. ವೇದಿಕೆಯ ಮೇಲೆ ಉಳಿದದ್ದು ಕಾಗೋಡು ತಿಮ್ಮಪ್ಪ, ಡಾ.ಎಲ್‌.ಹನುಮಂತಯ್ಯ ಹಾಗೂ ಅಧ್ಯಕ್ಷತೆ ವಹಿಸಿದ್ದ ಪ್ರೊ. ಹಂ. ಪ.ನಾಗರಾಜಯ್ಯ ಮಾತ್ರ!

ಒಳಗೆ ಕುವೆಂಪು ಅವರ ವಿಚಾರ ಮಂಥನ ನಡೆಯುತ್ತಿದ್ದರೆ, ಹೊರಗೆ ಅಷ್ಟೇ ಸಂಖ್ಯೆಯ ಜನ ಮುಖ್ಯಮಂತ್ರಿ ಬರುವಿಕೆಗಾಗಿ ಕಾಯುತ್ತಿದ್ದರು. ಅದು ಸರಿಸುಮಾರು 2 ಗಂಟೆ ಸಮಯ. ಅಷ್ಟರಲ್ಲಾಗಲೇ ಅಧ್ಯಕ್ಷರ ಮಾತುಗಳೂ ಮುಗಿದಿದ್ದವು. ಮೂರು ಗಂಟೆ ತಡವಾಗಿ ಬಂದ ಸಿದ್ದರಾಮಯ್ಯ ಮಾತನಾಡಿದ್ದು ಆರೇ ನಿಮಿಷ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT