ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಕಟ್ಟಡ ಕಾಮಗಾರಿ ನೆನೆಗುದಿಗೆ

ಗಡಿ ಭಾಗದ ಲಿಂಗನಪುರ ಗ್ರಾಮ
Last Updated 23 ಮೇ 2013, 8:21 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಗಡಿ ಭಾಗದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಜತೆಗೆ, ಕಟ್ಟಡಗಳ ಕೊರತೆಯೂ ಇದೆ. ಇದರಿಂದ ಮಕ್ಕಳ ಶೈಕ್ಷಣಿಕ ಭವಿಷ್ಯ ಮಸುಕಾಗುತ್ತಿದೆ ಎನ್ನುವುದು ಪೋಷಕರ ಆತಂಕ.

ಸರ್ಕಾರದಿಂದ ಅನುದಾನ ಲಭಿಸಿದರೂ ನಿಗದಿತ ಅವಧಿಯಲ್ಲಿ ಶಾಲಾ ಕಟ್ಟಡಗಳು ಮಾತ್ರ ಪೂರ್ಣ ಗೊಳ್ಳುವುದಿಲ್ಲ. ಇದಕ್ಕೆ ತಾಲ್ಲೂಕಿನ ಗಡಿಭಾಗದ ಲಿಂಗನಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡವೇ ಮೂಕಸಾಕ್ಷಿಯಾಗಿದೆ.

ಲಿಂಗನಪುರ ಗ್ರಾಮ ಅರಕಲವಾಡಿ ಗ್ರಾಮ ಪಂಚಾಯಿತಿಗೆ ಸೇರಿದೆ. ಗ್ರಾಮದಲ್ಲಿರುವ ಶಾಲೆಯು 50 ವಸಂತ ಪೂರ್ಣಗೊಳಿಸಿದೆ. ಇರುವಂತಹ ಎರಡು ಕಟ್ಟಡ ಶಿಥಿಲಗೊಂಡಿವೆ. ಹೆಂಚುಗಳು ಒಡೆದು ಹೋಗಿದ್ದು, ಮಳೆಗಾಲದಲ್ಲಿ ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಾರೆ.

ಈ ಶಾಲೆಯ ಸಮೀಪವೇ ಬಸ್‌ನಿಲ್ದಾಣವಿದೆ. ಹೀಗಾಗಿ, ಸಾರ್ವಜನಿಕರು ಮತ್ತು ವಾಹನಗಳ ಶಬ್ದದಿಂದ ಮಕ್ಕಳ ಪಾಠ ಪ್ರವಚನಕ್ಕೆ ಅಡ್ಡಿಯಾಗಿದೆ. ಶಾಲೆಗೆ ಆಟದ ಮೈದಾನವೂ ಇಲ್ಲ.

ಈ ಎಲ್ಲ ಸಮಸ್ಯೆ ಬಗ್ಗೆ ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿರುವ ಸರ್ಕಾರಕ್ಕೆ ಸೇರಿದ 38 ಗುಂಟೆ ಪ್ರದೇಶದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ದೊರೆತು ಅನುದಾನವೂ ಬಿಡುಗಡೆಯಾಯಿತು.

ಶಾಲಾ ಕಟ್ಟಡದ ಕಾಮಗಾರಿ ಕೂಡ ಆರಂಭಿಸಲಾಯಿತು. ಆದರೆ, ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, 8 ತಿಂಗಳು ಉರುಳಿವೆ. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಹೊಸ ಕಟ್ಟಡಕ್ಕೆ ಹೋಗುತ್ತೇವೆ ಎಂಬ ಆಸೆಯಲ್ಲಿದ್ದ ಮಕ್ಕಳಿಗೆ ಈಗ ಭಾರಿ ನಿರಾಸೆಯಾಗಿದೆ. ಕಾಮಗಾರಿ ಸ್ಥಗಿತಕ್ಕೆ ನಿರ್ದಿಷ್ಟ ಕಾರಣ ಗೊತ್ತಿಲ್ಲ. ಶಿಕ್ಷಣ ಇಲಾಖೆ ಅಧಿಕಾರಿ ಗಳು ಕೂಡ ಪರಿಶೀಲನೆ ನಡೆಸಿಲ್ಲ ಎನ್ನುವುದು ಗ್ರಾಮಸ್ಥರ ದೂರು.

ಕಟ್ಟಡದ ಕಾಮಗಾರಿ ಗುಣಮಟ್ಟ ದಿಂದ ಕೂಡಿಲ್ಲ. ಕಟ್ಟಡಕ್ಕೆ ಸಮರ್ಪಕ ವಾಗಿ ನೀರಿನ ಕ್ಯೂರಿಂಗ್ ಮಾಡಿಲ್ಲ. ಮಳೆ ಬಂದರೆ ಸೋರುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕ್ರಮಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಿಂದಲೇ ಮಕ್ಕಳು ನೂತನ ಕಟ್ಟಡದಲ್ಲಿ ಕಲಿಯಲು ಅವಕಾಶ ಕಲ್ಪಿಸಬೇಕು. ಈ ಹಿನ್ನೆಲೆಯಲ್ಲಿ ಅರ್ಧಕ್ಕೆ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಈ ಸಂಬಂಧ ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಚನ್ನಬಸಪ್ಪ, ಬಸವಣ್ಣ, ದೊಡ್ಡಯ್ಯ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT