ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಷ್ಯನಿಗೆ ಕುಲಸಚಿವರ ಪಟ್ಟ!

Last Updated 4 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸ್ಪಷ್ಟ ಸೂಚನೆ ನೀಡಿ­ದ್ದರೂ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಬೋಧ ಕೇತರ ಸಿಬ್ಬಂದಿ ನೇಮಕಾತಿ ನಡೆಸಿದ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಂದಿನ ಕುಲಪತಿ ಪ್ರೊ.ಬಿ.ಆರ್‌.ಅನಂತನ್‌ ಅವರು ಬೋಧಕರ ನೇಮಕಾತಿ­ಯ­ಲ್ಲಿಯೂ ಅಕ್ರಮ ನಡೆಸಿದ್ದಾರೆ ಎಂದು ದೂರಲಾಗಿದೆ.ಈ ಕುರಿತಂತೆ ರಾಜ್ಯಪಾಲ ವಜುಭಾಯ್‌ ವಾಲಾ ಅವರಿಗೆ ದೂರು ಸಲ್ಲಿಕೆಯಾಗಿದೆ.

ಪ್ರೊಫೆಸರ್‌ ಆಗುವ ಅರ್ಹತೆ ಇಲ್ಲದೇ ಇದ್ದರೂ ವಿಷ್ಣುಕಾಂತ್‌ ಚಟಪಲ್ಲಿ ಅವರನ್ನು ಮ್ಯಾನೇಜ್‌ ಮೆಂಟ್‌ ವಿಭಾ­ಗದ ಪ್ರೊಫೆಸರ್‌ ಮಾಡಿದ್ದೇ ಅಲ್ಲದೆ ಅವರನ್ನು ಕುಲಸಚಿವರನ್ನಾಗಿಯೂ ಅನಂತನ್‌ ನೇಮಿಸಿದರು ಎಂದು ಆರೋಪಿ­ಸಲಾಗಿದೆ.

ದೂರಿನ ವಿವರಗಳು: ‘ವಿಶ್ವವಿದ್ಯಾಲ­ಯದಲ್ಲಿ 2010ರಲ್ಲಿ ಮ್ಯಾನೇಜ್‌ಮೆಂಟ್‌ ವಿಭಾಗವನ್ನು ಅತಿಥಿ ಉಪನ್ಯಾಸಕರ ನೆರವಿನಿಂದ ಆರಂಭಿಸ­ಲಾಯಿತು. ನಂತರ ಒಬ್ಬ ಪ್ರೊಫೆಸರ್‌, ಇಬ್ಬರು ಸಹ ಪ್ರಾಧ್ಯಾ­ಪಕರು ಹಾಗೂ ಮೂವರು ಸಹಾಯಕ ಪ್ರಾಧ್ಯಾಪಕರ ನೇಮಕದೊಂದಿಗೆ ಅದೇ ವರ್ಷ ವಿಭಾಗ ಆರಂಭವಾಯಿತು. ಇಲ್ಲಿ ಇನ್ನೊಬ್ಬ ಪ್ರಾಧ್ಯಾಪಕರ ಅಗತ್ಯವಿಲ್ಲ­ದಿದ್ದರೂ ಕೌಶಲ್ಯ ಅಭಿವೃದ್ಧಿಗೆ ಒಬ್ಬರು ಪ್ರಾಧ್ಯಾಪಕರು ಬೇಕು ಎಂದು ಜಾಹೀರಾತು ನೀಡಲಾಯಿತು.

‘2012ರ ನವೆಂಬರ್‌ 19ರಂದು ಈ ಹುದ್ದೆಗೆ ಸಂದರ್ಶನ ನಡೆಯಿತು. ಪ್ರೊ.ಅನಂತನ್‌ ಅವರೇ ಸಂದರ್ಶನ ಸಮಿತಿ ಮುಖ್ಯಸ್ಥರಾಗಿದ್ದರು. ಚಟಪಲ್ಲಿ ಅವರ ಜೊತೆ ಇನ್ನೂ ಐವರು ಅಭ್ಯರ್ಥಿಗಳು ಇದ್ದರೂ ವಿಶ್ವವಿದ್ಯಾಲ­ಯದ ಪ್ರಾಧ್ಯಾಪಕ ಹುದ್ದೆಗೆ  ಅಗತ್ಯ­ವಾದ ಅರ್ಹತೆ ಇಲ್ಲದ ಚಟಪಲ್ಲಿ ಅವರೇ ಆಯ್ಕೆಯಾದರು.

‘ಚಟಪಲ್ಲಿ ಅವರಿಗೆ ಮೂಲತಃ ಎಂಬಿಎ ಪದವಿಯೇ ಇರಲಿಲ್ಲ. ಅವರು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಎಂ.ಇ ಪದವಿ ಪಡೆದಿದ್ದರು. ಆದರೆ ಅವರು ಪ್ರೊ. ಅನಂತನ್‌ ಮಾರ್ಗದರ್ಶ­ನ­ದಲ್ಲಿ ಬಿಜಿನೆಸ್‌ ಮ್ಯಾನೇಜ್‌­ಮೆಂಟ್‌ನಲ್ಲಿ ಪಿಎಚ್‌.ಡಿ ಪಡೆದಿದ್ದರು.

ಕೌಶಲ್ಯ ಅಭಿವೃದ್ಧಿ ವಿಷಯದಲ್ಲಿಯೇ ಅವರು ಪಿಎಚ್‌.ಡಿ ಪಡೆದಿದ್ದ ರಿಂದ ಪ್ರಾಧ್ಯಾಪಕ ಹುದ್ದೆಗೆ ಅವರನ್ನು ಆಯ್ಕೆ ಮಾಡಲಾಯಿತು. ಆದರೆ ಇದು ಯುಜಿಸಿ ನಿಯ­ಮದ ಪ್ರಕಾರ ತಪ್ಪು ಎಂದು ವಾದಿಸಲಾಗುತ್ತದೆ.

ಯುಜಿಸಿ ನಿಯಮದ ಪ್ರಕಾರ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆ ಗಳಿಸಲು ಬಿಜಿನೆಸ್‌ ಮ್ಯಾನೇಜ್‌ ಮೆಂಟ್‌ ವಿಷಯದಲ್ಲಿ ಅಭ್ಯರ್ಥಿ ಕನಿಷ್ಠ 55 ಅಂಕ ಪಡೆದು ಪದವಿ ಗಳಿಸಿರಬೇಕು. ಇದೇ ವಿಷಯದಲ್ಲಿ ಶೇ 55ಕ್ಕಿಂತ ಕಡಿಮೆ ಇಲ್ಲದ ಅಂಕ ಪಡೆದು ಸ್ನಾತಕೋತ್ತರ ಪದವಿಯನ್ನೂ ಹೊಂದಿರಬೇಕು.

‘ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆ ಪಡೆಯಲು ಕನಿಷ್ಠ 400 ಎಪಿಐ (ಶೈಕ್ಷಣಿಕ ಸಾಧನಾ ಸೂಚ್ಯಂಕ) ಅಂಕ ಇರಬೇಕು. ಸಂಬಂಧ­ಪಟ್ಟ ವಿಷಯಗಳ ಮೇಲಿನ ಪ್ರಬಂಧಗಳ ಪ್ರಕಟಣೆ, ಪಿಎಚ್‌.ಡಿ, ಎಂ.ಫಿಲ್‌ ಮಾರ್ಗ ದರ್ಶನ, ವಿಚಾರ ಸಂಕಿರಣ­ಗಳಲ್ಲಿ ಪ್ರಬಂಧ ಮಂಡನೆ, ಪ್ರತಿಷ್ಠಿತ ಸಂಸ್ಥೆಗಳಿಂದ ಪ್ರಾಜೆಕ್ಟ್‌ ಪಡೆಯುವುದು ಮುಂತಾ ದವುಗಳಿಂದ ಈ ಅಂಕವನ್ನು ಪಡೆದಿರಬೇಕಾ ಗುತ್ತದೆ. ಆದರೆ ಚಟಪಲ್ಲಿ ಅವರು ಎಂಬಿಎ ಬೋಧನೆಗೆ ಸಂಬಂಧವೇ ಇಲ್ಲದ ತಾವು ಎಂಜಿನಿ ಯ­ರಿಂಗ್‌ ವಿಷಯದಲ್ಲಿ ಮಂಡಿಸಿದ ಪ್ರಬಂಧಗಳ ಪಟ್ಟಿ ಯನ್ನು ಸಲ್ಲಿಸಿದ್ದರು. ಎಂಬಿಎ ಗೆ ಸಂಬಂಧಿ ಸಿದಂತೆ ಅವರ ಬಳಿ ಎಪಿಐ ಅಂಕಗಳು ಇರಲಿಲ್ಲ.

‘2012ರ ನವೆಂಬರ್‌ 29ರಂದು ಚಟಪಲ್ಲಿ ಅವರು ಎಂಬಿಎ ವಿಭಾಗದ ಪ್ರಾಧ್ಯಾಪಕರಾಗಿ ಅಧಿಕಾರ ವಹಿಸಿ­ಕೊಂಡರು. 2012ರ ಡಿಸೆಂಬರ್‌ 31ರಂದು ಅವರನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾ ಲಯದ ಕುಲಸಚಿವರನ್ನಾಗಿ ನೇಮಿಸಲಾಯಿತು.

‘ಯಾವುದೇ ವಿಶ್ವವಿದ್ಯಾಲಯದ ಕುಲಸ ಚಿವರಾಗಲು ಅಭ್ಯರ್ಥಿ ಕನಿಷ್ಠ 5 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರ­ಬೇಕು. ಚಟಪಲ್ಲಿ ಅವರಿಗೆ ಈ ಅನುಭವ ಇರಲಿಲ್ಲ. ಚಟಪಲ್ಲಿ ಅವರ ನೇಮಕವನ್ನು ಬೆಳಗಾವಿಯ ಹಿರಿಯ ಪತ್ರಕರ್ತ ರಾಘವೇಂದ್ರ ಜೋಶಿ ಅವರು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ ನಂತರ ರಾಜ್ಯ ಸರ್ಕಾರ 2013ರ ಆಗಸ್ಟ್ 14ರಂದು ಚಟಪಲ್ಲಿ ಅವರನ್ನು ಕುಲ­ಸಚಿವ ಸ್ಥಾನದಿಂದ ಬಿಡುಗಡೆಗೊಳಿಸಿತು.

‘ಕುಲಸಚಿವ ಸ್ಥಾನ ಕಳೆದುಕೊಂಡ ಚಟಪಲ್ಲಿ ಅವರನ್ನು ಕೆಲವೇ ದಿನಗಳಲ್ಲಿ ಪ್ರೊ.ಅನಂತನ್‌ ಅವರು  ಕುಲಪತಿ ಅವರ ವಿಶೇಷ ಕರ್ತವ್ಯಾಧಿಕಾರಿ ಹುದ್ದೆಗೆ ನೇಮಿಸಿದರು. ಸರ್ಕಾರದ ಅನುಮತಿ ಪಡೆಯದೆ ಅವರಿಗೆ ಮಾಸಿಕ ₨ 6 ಸಾವಿರ ಹೆಚ್ಚುವರಿ ಭತ್ಯೆಯನ್ನೂ ನೀಡಿದರು.

‘ಚಟಪಲ್ಲಿ ಅವರನ್ನು ಪ್ರಾಧ್ಯಾಪಕ ಹುದ್ದೆಗೆ ನೇಮಿಸುವಾಗ ಅವರ ಮೂಲ ವೇತನ ₨ 37 ಸಾವಿರ ಇತ್ತು. ಪ್ರೊ. ಅನಂತನ್‌ ಅವರು ಚಟಪಲ್ಲಿ ಅವರಿಗೆ ನಾಲ್ಕು ಬಡ್ತಿ ನೀಡಿ ಮೂಲವೇತನವನ್ನು ₨ 42,093ಕ್ಕೆ ಹೆಚ್ಚಿಸಿದರು. ಇದಲ್ಲದೆ ಚಟಪಲ್ಲಿ ಸೇರಿ 7 ಮಂದಿಗೆ ಯುಜಿಸಿ ನಿಯಮಾವಳಿ ವಿಧಿ 4 ಮತ್ತು ವಿಧಿ 6.8.0 ಪ್ರಕಾರ ಮೂಲವೇತನವನ್ನು ₨ 43 ಸಾವಿರಕ್ಕೆ ಹೆಚ್ಚಿಸಿದರು. ಆದರೆ ಯುಜಿಸಿಯ ಈ ನಿಯಮ ಕೇವಲ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಸ್ವಾಯತ್ತ (ಡೀಮ್ಡ್) ವಿಶ್ವವಿದ್ಯಾಲಯಕ್ಕೆ ಮಾತ್ರ ಅನ್ವಯವಾಗುತ್ತದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕೇಂದ್ರೀಯ ವಿಶ್ವವಿದ್ಯಾಲಯವೂ ಅಲ್ಲ. ಡೀಮ್ಡ್ ವಿಶ್ವವಿದ್ಯಾಲಯವೂ ಅಲ್ಲ.

ಕುಲಪತಿ ಅನಂತನ್‌ ಅವರು 7 ಮಂದಿ ಪ್ರಾಧ್ಯಾಪಕರ ಮೂಲ ವೇತನ­ವನ್ನು ಏಕಾಏಕಿ ಏರಿಸಿದ್ದನ್ನು ಕೆಲವು ಸಿಂಡಿಕೇಟ್‌ ಸದಸ್ಯರು ಆಕ್ಷೇಪಿ­ಸಿದರು. 2014ರ ಮೇ 7ರಂದು ನಡೆದ ಸಿಂಡಿಕೇಟ್‌ ಸಭೆಯಲ್ಲಿ ಆಕ್ಷೇಪಣಾ ಪತ್ರವನ್ನೂ ಸಲ್ಲಿಸಿದರು.

2014ರ ಜುಲೈ 16ರಂದು ನಡೆಯುವ ಸಿಂಡಿಕೇಟ್‌ ಸಭೆಯಲ್ಲಿಯೂ ಈ ಬಗ್ಗೆ ಒಪ್ಪಿಗೆ ನೀಡಬಾರದು ಎಂದು ಸಿಂಡಿಕೇಟ್‌ನ ಕೆಲವು ಸದಸ್ಯರು ವಿನಂತಿಸಿಕೊಂಡರೂ ಕುಲಪತಿ ಅವರು ವೇತನ ಹೆಚ್ಚಳ ಪ್ರಸ್ತಾಪಕ್ಕೆ ಒಪ್ಪಿಗೆ ಪಡೆದು ಈ ಸಂಬಂಧ ಆದೇಶ ಹೊರಡಿಸುವಂತೆ ಕುಲ ಸಚಿವರಿಗೆ ಸೂಚಿಸಿದರು. ಈ ವೇತನ ಹೆಚ್ಚಳವನ್ನು ಉನ್ನತ ಶಿಕ್ಷಣ ಇಲಾಖೆ ತಡೆ ಹಿಡಿದಿದೆ.
(ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT