ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತ ವಿವಿ ನೇಮಕಾತಿ: ದೂರುಗಳ ಮಹಾಪೂರ!

Last Updated 12 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೇವಲ ನಾಲ್ಕು ವರ್ಷಗಳ ಹಿಂದೆಯಷ್ಟೇ ಅಸ್ತಿತ್ವಕ್ಕೆ ಬಂದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ 2012ರ ಜುಲೈ ತಿಂಗಳಿನಿಂದ 2014ರ ಮೇವರೆಗೆ 5 ನೇಮಕಾತಿ ಅಧಿಸೂಚನೆ­ಯನ್ನು ಹೊರಡಿಸಿ 47 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಾಗಿದೆ. ಆದರೆ ಈ ಬಗ್ಗೆ ವ್ಯಾಪಕ ದೂರುಗಳು ದಾಖಲಾಗಿವೆ. 40ಕ್ಕೂ ಹೆಚ್ಚು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ.

ರಾಜ್ಯ ವೇತನ ಶ್ರೇಣಿಯ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಗೆ 2012ರ ಜುಲೈ 16, 2013ರ ಜನವರಿ 10 ಮತ್ತು 2014ರ ಜನವರಿ 9ರಂದು ಅಧಿಸೂಚನೆ ಹೊರಡಿಸ­ಲಾಗಿದೆ. ಆದರೆ ಈವರೆಗೂ ವಿಶ್ವವಿದ್ಯಾಲಯದಲ್ಲಿ ‘ವೃಂದ ಮತ್ತು ನೇಮಕಾತಿ ಪರಿನಿಯಮ’ವನ್ನೇ ರಚಿಸಿಲ್ಲ ಎಂದು ಆರೋಪಿಸಲಾಗುತ್ತಿದೆ.

2012ರ ಜುಲೈ 16ರಂದು ಉಪ ಕುಲಸಚಿವರ ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗೆ ಸಾಮಾನ್ಯ ವರ್ಗದ ಅಭ್ಯರ್ಥಿಗೆ ಗರಿಷ್ಠ 35 ವರ್ಷ ಎಂದು ನಿಗದಿಪಡಿಸಲಾಗಿದೆ. ಆದರೆ ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಪ್ರಕಾಶ ಆರ್‌.ಪಾಗೋಜಿ ಅವರ ವಯಸ್ಸು 44 ಆಗಿತ್ತು. ಈ ಹುದ್ದೆಗೆ ಅಧಿ­ಸೂಚನೆ­ಯಲ್ಲಿ ನಿಗದಿ ಪಡಿಸಿದ ವಯಸ್ಸಿನ ಹಲವು ಮಂದಿ ಇದ್ದರೂ ಪ್ರಕಾಶ್‌ ಪಾಗೋಜಿ ಅವರನ್ನೇ ಆಯ್ಕೆ ಮಾಡಲಾಗಿದೆ ಎಂದು ಆಪಾದಿಸ­ಲಾಗಿದೆ.

ಅಧಿಸೂಚನೆಯ ಪ್ರಕಾರ ಈ ಹುದ್ದೆಗೆ ಅರ್ಹರಾ­ಗಿ­ರುವವರು  28,100–50100 ವೇತನ ಶ್ರೇಣಿಯ ಸೇವಾ­ನುಭವ ಹೊಂದಿರಬೇಕು ಎಂದಿತ್ತು. ಆದರೆ ಪಾಗೋಜಿ ಅವರು  22,800–43,200 ವೇತನ ಶ್ರೇಣಿಯ ಅನುಭವ ಮಾತ್ರ ಹೊಂದಿದ್ದರು.

ಕ್ರಿಮಿನಲ್‌ ಮೊಕದ್ದಮೆ: 2010ರ ಡಿ.11ರಂದು ಧಾರವಾಡ ಉಪನಗರ ಪೊಲೀಸ್‌ ಠಾಣೆಯಲ್ಲಿ ಇವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಾಗಿದೆ. ಎಫ್‌ಐಆರ್‌ ನಂ–380 ಮತ್ತು ಸಿಸಿ769/10 ಸಂಖ್ಯೆಯ ದೋಷಾರೋಪ ಪಟ್ಟಿ ಕೂಡ ದಾಖಲಾಗಿತ್ತು.

ಇದಲ್ಲದೆ ಗುರುಕುಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಿಂಗಪ್ಪ ರು.ಮುಗಳಿ ಅವರು ಪಾಗೋಜಿ ವಿರುದ್ಧ 2012ರ ಜ.10ರಂದು ಧಾರವಾಡ ಉಪನಗರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಅಲ್ಲದೆ ಪಾಗೋಜಿ ಅವರು ತಮ್ಮ ಸೇವಾ ಅವಧಿ­ಯಲ್ಲಿ ಈ ಹಿಂದೆ ಎರಡು ಬಾರಿ ಅಮಾನತ್ತಾಗಿ­ದ್ದರು. ಈ ಎಲ್ಲ ಅಂಶವನ್ನೂ ಅವರು ಮರೆಮಾಚಿ­ದ್ದಾರೆ ಎಂದೂ ಆರೋಪಿಸಲಾಗಿದೆ.

ಪಾಗೋಜಿ ಅವರ ವಿರುದ್ಧ ಗಂಗಾಧರಪ್ಪ ಎಂಬು­ವವರು ಲೋಕಾ­ಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.  ಹೈಕೋರ್ಟ್‌ನಲ್ಲಿಯೂ ದಾವೆ ಹೂಡಿ­ದ್ದಾರೆ. ಗುರುಕುಲ ಶಿಕ್ಷಣ ಟ್ರಸ್ಟ್‌ನ ಸಿ.ಎಲ್‌.ವೈ. ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ವೈ.ಡಿ.ನವಲಗುಂದ ಅವರೂ ಪಾಗೋಜಿ ಅವರ ವಿರುದ್ಧ ಧಾರವಾಡ ಜೆಎಂಎಫ್‌ಸಿ ನ್ಯಾಯಾಲ­ಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಪಾಗೋಜಿ ಅವರ ಮೇಲೆ ಒಟ್ಟಾರೆ 7 ಪ್ರಕರಣಗಳು ನ್ಯಾಯಾಲಯಗಳಲ್ಲಿ ದಾಖಲಾಗಿವೆ.

ಇಂತಹ ಹಿನ್ನೆಲೆಯ ವ್ಯಕ್ತಿ ಕುಲಸಚಿವರಾಗಿ ಆಯ್ಕೆಯಾಗಿದ್ದೇ ಅಲ್ಲದೆ ವಿಶ್ವವಿದ್ಯಾಲಯದ ಹಣ­ಕಾಸು ಅಧಿಕಾರಿಯಾಗಿಯೂ ಕಾರ್ಯ­ನಿರ್ವ­ಹಿಸಿ­ದ್ದಾರೆ. ಪಾಗೋಜಿ ಅವರ ನೇಮಕಾತಿಯನ್ನು ರದ್ದು ಪಡಿಸುವಂತೆ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು 2014ರ ಆ.16ರಂದು ವಿಶ್ವ­ವಿದ್ಯಾಲ­ಯಕ್ಕೆ ಪತ್ರ ಬರೆದಿದ್ದಾರೆ. ವಿಶ್ವವಿದ್ಯಾಲ­ಯದ ಹಿಂದಿನ ಕುಲಸಚಿವರು ಪಾಗೋಜಿ ಅವರನ್ನು ಅಮಾನತು ಮಾಡಿ ಇಲಾಖಾ ತನಿಖೆಗೆ ಆದೇಶಿಸಿ­ದ್ದರು. ಪಾಗೋಜಿ ಅವರ ನೇಮಕಾತಿ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಉನ್ನತ ಶಿಕ್ಷಣ ಇಲಾಖೆ ಕೋರಿದೆ. ಪಾಗೋಜಿ ಅವರ ನೇಮಕದ ಬಗ್ಗೆ ಸಿಂಡಿಕೇಟ್‌ ಸಭೆಯಲ್ಲಿಯೂ ಚರ್ಚೆಯಾಗಿದ್ದು ಈಗಿನ ಕುಲಸಚಿವರು ತನಿಖಾ ವರದಿಯನ್ನು ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದಾರೆ ಎಂದು ಇಲಾಖೆಯ ಮೂಲಗಳು ಹೇಳಿವೆ.

ತಮ್ಮನ್ನು ಅಮಾನತು ಮಾಡ­ಬಾರದು ಎಂದು ಪಾಗೋಜಿ ಅವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅದನ್ನು ಕೋರ್ಟ್ ತಿರಸ್ಕರಿಸಿದೆ. ಪಾಗೋಜಿ ಅವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನಿಜ. ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಣ್ಣಪುಟ್ಟ ಹೊಡೆದಾಟದ ಪ್ರಕರಣಗಳು ಅವು. ಅವುಗಳನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಲಾಗಿದೆ. ಈಗ ಅವರ ಮೇಲೆ ಯಾವುದೇ ಕ್ರಿಮಿನಲ್‌ ಪ್ರಕರಣಗಳಿಲ್ಲ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಶ್ರೀನಿವಾಸ ವರಖೇಡಿ ತಿಳಿಸಿದ್ದಾರೆ.

ವಿಶ್ವವಿದ್ಯಾಲಯದ ಪ್ರಸಾರಾಂಗದ ಉಪ ನಿರ್ದೇಶಕ ಡಾ.ಸಂತೋಷ ಹಾನಗಲ್‌ ಅವರ ನೇಮಕದ ಬಗ್ಗೆಯೂ ಸಾಕಷ್ಟು ಆರೋಪಗಳು ಇವೆ. ಅಧಿಸೂಚನೆಯಲ್ಲಿ ಈ ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಪಿಎಚ್‌.ಡಿ ಕಡ್ಡಾಯ ಎಂದು ಇದೆ. ಆದರೆ ಡಾ.ಸಂತೋಷ್‌ ಅವರು ಇತಿಹಾಸ ವಿಷಯ­ದಲ್ಲಿ ಪದವಿ ಪಡೆದಿದ್ದಾರೆ. ಈ ಹುದ್ದೆಯನ್ನು ಪರಿಶಿಷ್ಟ ಜಾತಿಗೆ ಮೀಸಲಿಡಲಾಗಿದೆ. ಆದರೆ ಸಂತೋಷ್‌ ಅವರು ಸಲ್ಲಿಸಿದ ಜಾತಿ ಪ್ರಮಾಣ ಪತ್ರದಲ್ಲಿ ತಹಶೀಲ್ದಾರರ ಸಹಿಯೇ ಇಲ್ಲ ಎಂದೂ ಆರೋಪಿಸಲಾಗಿದೆ. ಈ ಹುದ್ದೆಗೆ ಅಗತ್ಯವಾದ ಎಪಿಐ ಅಂಕಗಳೂ ಸಂತೋಷ್‌ ಬಳಿ ಇರಲಿಲ್ಲ. ಸಂತೋಷ್‌ ಅವರನ್ನು ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ವಿರುದ್ಧವಾಗಿ ನೇಮಿಸಲಾಗಿದೆ ಎಂದೂ ದೂರಲಾಗಿದೆ.

ತಾಂತ್ರಿಕ ಕಾರಣ ಅಷ್ಟೆ: ಪ್ರೊ.ವರಖೇಡಿ
ವಿಶ್ವವಿದ್ಯಾಲಯ ಪ್ರಾರಂಭವಾದಾಗ ಕುಲಪತಿ ಮತ್ತು ಕುಲಸಚಿವರನ್ನು ಬಿಟ್ಟರೆ ಇತರ ಅಧಿಕಾರಿ­ಗಳ ನಿಯೋಜನೆಯಾ­ಗಿರಲಿಲ್ಲ. ಇದರಿಂದಾಗಿ ಕುಲಪತಿ ಅವರೇ ಹಣಕಾಸು ಅಧಿಕಾರಿಯಾಗಿ­ದ್ದರು. ಇದೊಂದು ತಾಂತ್ರಿಕ ಕಾರಣ ಅಷ್ಟೆ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಶ್ರೀನಿವಾಸ ವರಖೇಡಿ ತಿಳಿಸಿದ್ದಾರೆ. ವಿಶ್ವವಿದ್ಯಾಲಯದ ಆರ್ಥಿಕ ಕ್ರಿಯಾ ಯೋಜನೆಗೆ ಹಣಕಾಸು ಸಮಿತಿ ಒಪ್ಪಿಗೆ ಪಡೆದು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದರಲ್ಲಿ ಯಾವುದೇ ಲೋಪದೋಷ­ಗಳಿಲ್ಲ ಎಂದೂ ಅವರು ಹೇಳಿದ್ದಾರೆ.

ಪ್ರತಿಷ್ಠಾನವೇ ಇರಲಿಲ್ಲ: ಡಾ.ಕತ್ತಿ
ಪ್ರೊ.ಮಲ್ಲೇಪುರಂ ಪ್ರತಿಷ್ಠಾನ 2013ರ ಜೂನ್‌ 5ರಂದು ಉದ್ಘಾಟನೆಯಾಗಿದೆ. 2010–11 ಅಥವಾ 2011–12ನೇ ಸಾಲಿನಲ್ಲಿ ಪ್ರತಿಷ್ಠಾನವೇ ಅಸ್ತಿತ್ವದಲ್ಲಿ ಇರಲಿಲ್ಲ. ಆದ್ದರಿಂದ ಸಂಸ್ಕೃತ ವಿಶ್ವವಿದ್ಯಾಲಯ ಮಲ್ಲೇಪುರಂ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಂಸ್ಕೃತ ವಿ.ವಿ.ಯಿಂದ ಹಣ ಪಡೆಯುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಎಂ.ಬಿ.ಕತ್ತಿ ತಿಳಿಸಿದ್ದಾರೆ.
‘ಸಂಸ್ಕೃತ ವಿವಿಯಲ್ಲೂ ಅಪರಾ ತಪರಾ’ ವರದಿಗೆ ಸ್ಪಷ್ಟನೆ ನೀಡಿದ ಅವರು, ಸಂಸ್ಕೃತ ವಿಶ್ವವಿದ್ಯಾಲಯಕ್ಕೂ ಪ್ರತಿಷ್ಠಾನಕ್ಕೂ ಯಾವುದೇ ಸಂಬಂಧವಿಲ್ಲ. ವಿಶ್ವವಿದ್ಯಾಲಯ ಸಹಿತ ಯಾರ ಬಳಿಯೂ ಪ್ರತಿಷ್ಠಾನ ಹಣಕಾಸು ನೆರವು ಪಡೆದಿಲ್ಲ ಎಂದು ಹೇಳಿದ್ದಾರೆ.

(ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT