ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಶಹರದ ನಮ್ಮ ಹುಡುಗಿಯರು

Last Updated 18 ಜುಲೈ 2015, 19:30 IST
ಅಕ್ಷರ ಗಾತ್ರ

ದೀಪಿಕಾ, ಕಂಗನಾ ಇಬ್ಬರೂ ಸಣ್ಣ ಶಹರಗಳ ಹುಡುಗಿಯರು. ದೀಪಿಕಾ ಬೆಂಗಳೂರಿನಲ್ಲಿ ಕಾಲೇಜು ಮೆಟ್ಟಿಲು ಹತ್ತಿದ್ದರೂ ಮನೆಯಲ್ಲಿ ಇದ್ದುದು ಮಧ್ಯಮವರ್ಗದ ವಾತಾವರಣ. ಅವರ ತಂದೆ ಬಹುಕಾಲ ಬೆಳಗಾವಿಯಲ್ಲಿ ಇದ್ದವರು.

ಇನ್ನು ಕಂಗನಾ. ಹಿಮಾಚಲ ಪ್ರದೇಶದ ಭಾಂಬ್ಲಾ ಎಂಬ ಸಣ್ಣ ಶಹರದಲ್ಲಿ ಹುಟ್ಟಿದವಳು. ಮಾಡೆಲ್‌ ಕನವರಿಕೆಯನ್ನು ಕಂಡು ದೆಹಲಿಗೆ ಕಾಲಿಟ್ಟು, ಆಮೇಲೆ ಮುಂಬೈನತ್ತ ನಡೆದವಳು.

ನಟಿಯಾಗಿ ದೀಪಿಕಾ ಬೆಳೆದ ಬಗೆ ನನಗೆ ನಿಜಕ್ಕೂ ಆಸಕ್ತಿಕರವಾಗಿ ಕಾಣುತ್ತದೆ. ಅವಳ ಪಾತ್ರಗಳ ಆಯ್ಕೆಯಲ್ಲೇ ವೈವಿಧ್ಯವಿದೆ. ಬಾರ್‌ ಹುಡುಗಿಯಾಗಿ ಸೊಂಟ ಬಳುಕಿಸಬಲ್ಲ ಅವಳು ‘ಪೀಕು’ ಸಿನಿಮಾದ ಜವಾಬ್ದಾರಿಯುತ ಹೆಣ್ಣುಮಗಳೂ ಆಗಬಲ್ಲಳು. ಅವಳಲ್ಲಿ ಒಂದು ಸ್ನಿಗ್ಧ ಸೌಂದರ್ಯವಿದೆ. ದೊಡ್ಡ ಮಟ್ಟದ ಮುಗ್ಧತೆ ಇದೆ. ಜೀವನಾನುಭವದಲ್ಲಿಯೂ ಅವಳು ಈ ಪಾತ್ರಗಳನ್ನು ಹೋಲುವ ಹೆಣ್ಣುಮಕ್ಕಳನ್ನು ಕಂಡಿರಲಿಕ್ಕೂ ಸಾಕು. ಬಹುಶಃ ದೀಪಿಕಾಗೆ ಮೊದಲು ನಟಿಯಾಗಬೇಕೆಂಬ ಬಯಕೆ ಇರಲಿಲ್ಲ.

ಮಾಡೆಲ್‌ ಆಗಿ, ಆಮೇಲೆ ಅಭಿನಯದತ್ತ ಅವಳು ಹೊರಳಿದ್ದು. ಕನ್ನಡದ ಸಿನಿಮಾದಲ್ಲಿ ನಟಿಸಿದ ಮೇಲೆ ಅಲ್ಲಿಂದ ಮುಂಬೈಗೆ ಜಿಗಿಯುವುದು ತಮಾಷೆಯಲ್ಲ. ದೀಪಿಕಾ ನಟಿಯಾಗಿ ಬೆಳೆದ ಬಗೆ ಅಚ್ಚರಿಯ ಸಂಗತಿ. ಈಗ ಅವಳು ಬಹುಬೇಡಿಕೆಯ ಬಾಲಿವುಡ್‌ ನಟಿ. ಎದುರಲ್ಲಿ ಯಾವ ಸ್ಟಾರ್‌ ಇದ್ದಾರೆ ಎಂದು ಅವಳು ತಲೆಕೆಡಿಸಿಕೊಳ್ಳುವುದೇ ಇಲ್ಲ. ‘ಚೆನ್ನೈ ಎಕ್ಸ್‌ಪ್ರೆಸ್‌’, ‘ಹ್ಯಾಪಿ ನ್ಯೂ ಇಯರ್‌’ ತರಹದ ಸಿನಿಮಾಗಳಲ್ಲಿ ದೀಪಿಕಾಗೆ ಅಭಿನಯದಲ್ಲಿ ಶಾರುಖ್‌ಗಿಂತ ಹೆಚ್ಚು ಅಂಕಗಳು ಸಲ್ಲುತ್ತವೆ. ಅವಳ ಎದುರು ಶಾರುಖ್‌ ಏನೇನೂ ಅಲ್ಲ ಎನ್ನಿಸುವಂತೆ ನಟಿಸಿದ್ದಾಳೆ.

ಮಾಡೆಲ್‌ಗಳು ಹೀಗೆ ನಟಿಯರಾಗಿ ಬೆಳೆಯುವುದು, ಕಲಾತ್ಮಕ ಸಿನಿಮಾ ಮಾಡಲು ಹೋಗಿ ಕಮರ್ಷಿಯಲ್‌ ಚಿತ್ರ ನಿರ್ದೇಶಕರಾಗಿ ಜನಪ್ರಿಯರಾದ ರಾಂಗೋಪಾಲ್‌ ವರ್ಮ ತರಹದವರ ಸಾಧನೆಗೆ ಮಿಗಿಲಾದದ್ದು ಎನ್ನುವುದು ನನ್ನ ಭಾವನೆ. ದೀಪಿಕಾ ಅಷ್ಟು ‘ರೇಂಜ್‌’ ಇಲ್ಲದ ನಟಿ ಕಂಗನಾ. ಒಂದು ವಿಧದಲ್ಲಿ ಅಷ್ಟೇನೂ ಜನಪ್ರಿಯವಲ್ಲದ ಪಾತ್ರಗಳಲ್ಲಿಯೇ ಅಭಿನಯಿಸುತ್ತಾ ಬಂದವಳು. ‘ಫ್ಯಾಷನ್‌’ ಸಿನಿಮಾದ ಕಥಾವಸ್ತು ಬಹುಶಃ ಅವಳ ಬದುಕಿನ ಒಂದಿಷ್ಟು ಆಯಾಮಗಳನ್ನಾದರೂ ಹುದುಗಿಸಿಕೊಂಡಿದೆ.

ಅವಳು ಕೂಡ ಎದುರಲ್ಲಿ ಯಾವ ನಟ ಇದ್ದಾನೆ ಎಂದು ಚಿಂತಿಸುವುದಿಲ್ಲ. ಜನಪ್ರಿಯನಾಗಲೀ, ಹೊಸಬನಾಗಲೀ ಯಾವ ಫರಕೂ ಇಲ್ಲ. ‘ಕ್ವೀನ್‌’ ಸಿನಿಮಾದಲ್ಲಿ ಹೊಸ ಹುಡುಗ ರಾಜ್‌ಕುಮಾರ್‌ ಜೊತೆ ಅವಳು ನಟಿಸಿದ್ದು ಇದಕ್ಕೆ ಉದಾಹರಣೆ. ಸಣ್ಣ ಶಹರದ ಹುಡುಗಿಯರು ದೊಡ್ಡ ಕನಸುಗಳಿಗೆ ನೀರೆರೆಯುತ್ತಾ ಬೆಳೆದ ಬಗೆಯ ಕಾಣ್ಕೆ ಈ ಇಬ್ಬರೂ ನಟಿಯರು ಎನಿಸುತ್ತದೆ.

ಇವರಿಬ್ಬರಿಗಿಂತ ತುಂಬಾ ಭಿನ್ನ ಎನ್ನಿಸುವ ನಟಿ ಅನುಷ್ಕಾ ಶರ್ಮ. ಅವಳು ಸುಂದರಿಯಲ್ಲ. ಆಗೀಗ ಅಭಿನಯದಲ್ಲಿ ಕೂಡ ಬೋರ್‌ ಹೊಡೆಸುತ್ತಾಳೆ. ಆಧುನಿಕ ಕಾಲದ ಹೆಣ್ಣುಮಕ್ಕಳ ಎಲ್ಲಾ ‘ಎಕ್ಸೆಂಟ್ರಿಕ್’ (ಅತಿಯಾದ) ಗುಣಗಳು ಅವಳಲ್ಲಿವೆ. ಅವನ್ನೆಲ್ಲಾ ಮೀರಿದ ಸಹಜ ಆತ್ಮವಿಶ್ವಾಸ ಇದೆಯಲ್ಲ; ಅದು ಇದುವರೆಗಿನ ಆಕೆಯ ಗೆಲುವಿನ ಪಥಕ್ಕೆ ಕಾರಣ. ಅನುಷ್ಕಾ ಕೂಡ ಬಾರ್‌ ಹುಡುಗಿಯಾಗಬಲ್ಲಳು. ‘ಬಾಂಬೆ ವೆಲ್ವೆಟ್‌’ ಇದಕ್ಕೆ ಉದಾಹರಣೆ.

ತನ್ನದೇ ಆತ್ಮವಿಶ್ವಾಸದ ಹದದಲ್ಲಿ ಅಭಿನಯಿಸುವ ಅವಳು ‘ಎನ್‌ಎಚ್‌ 10’ ಸಿನಿಮಾದಲ್ಲಿ ಜಿಗಿತ ಕಂಡಿದ್ದನ್ನು ಗುರುತಿಸಬಹುದು. ಅವಳಿಗೆ ಯುವಜನತೆಗೆ ಇರಬೇಕಾದ ಐಕಾನಿಕ್‌ ಲಕ್ಷಣವಿದೆ. ಇದೊಂದು ಇದ್ದರೆ ಸೌಂದರ್ಯ ಮುಖ್ಯವಾಗುವುದೇ ಇಲ್ಲ. ಈ ಮೂವರೂ ನಟಿಯರಿಗಿಂತ ಬೇರೆಯಾಗಿ ಕಾಣುವ ಪ್ರಿಯಾಂಕಾ ಚೋಪ್ರಾ ನಾನು ಮೆಚ್ಚಿಕೊಳ್ಳುವ ಇನ್ನೊಬ್ಬ ನಟಿ. ಅವಳೂ ಪಡಿಪಾಟಲು ಪಟ್ಟೇ ಚಿತ್ರರಂಗದಲ್ಲಿ ಈ ಮಟ್ಟಕ್ಕೆ ಬೆಳೆದಿರುವುದು.

ಇಪ್ಪತ್ತನೇ ಶತಮಾನ ದಾಟಿ, ಇಪ್ಪತ್ತೊಂದನೇ ಶತಮಾನದಲ್ಲಿ ಬಾಲಿವುಡ್‌ ಸಿನಿಮಾಗಳನ್ನು ನೋಡಬೇಕಾದ ಬಗೆಯನ್ನೇ ಬದಲಿಸಿದ ನಟಿಯರು ಇವರು. ಇಂಥ ಬದಲಾವಣೆ ತರುವುದು ಸಣ್ಣ ಸಂಗತಿಯಲ್ಲ. ಈಗ ಬಾಲಿವುಡ್‌ ಸಿನಿಮಾಗಳನ್ನು ಲಿಂಗಭೇದ ಮರೆತೇ ನೋಡಬೇಕು. ಶೀರ್ಷಿಕೆ ಪಟ್ಟಿಯಲ್ಲಿ ಎಷ್ಟೋ ನಟರಿಗಿಂತ ಮೊದಲು ತಮ್ಮ ಹೆಸರು ಮೂಡುವಷ್ಟು ಎತ್ತರಕ್ಕೆ ಇವರೆಲ್ಲಾ ಬೆಳೆದಿದ್ದಾರೆ.

ಇನ್ನು ಹತ್ತು ವರ್ಷ ಇದೇ ಫಾರ್ಮ್‌ ಉಳಿಸಿಕೊಂಡರೆ ದೀಪಿಕಾ ಪಡುಕೋಣೆ ಇನ್ನೊಬ್ಬ ವಹೀದಾ ರೆಹಮಾನ್‌ನಂತೆಯೋ, ಮೀನಾಕುಮಾರಿಯಂತೆಯೋ, ಮಧುಬಾಲ ರೀತಿಯೋ ಆಗಬಹುದೇನೋ?

ಕಂಗನಾಗೆ ದೀಪಿಕಾಳಷ್ಟು ಬೇಡಿಕೆ ಇಲ್ಲದೇ ಇದ್ದರೂ ಅವಳು ತನ್ನ ಮಿತಿಯಲ್ಲೇ ಹೆಸರು ಸಂಪಾದಿಸುವ ನಟಿಯಾಗಿ ಬೆಳೆದಿದ್ದಾಳೆ. ವೈವಿಧ್ಯದ ವಿಷಯದಲ್ಲಿ ಅವಳು ಕೂಡ ಕಡಿಮೆಯಿಲ್ಲ. ‘ಫ್ಯಾಷನ್‌’, ‘ರಿವಾಲ್ವರ್‌ ರಾಣಿ’, ‘ಕ್ವೀನ್‌’, ‘ತನು ವೆಡ್ಸ್‌ ಮನು ರಿಟರ್ನ್ಸ್‌’ ಇವೆಲ್ಲವೂ ವೈವಿಧ್ಯಕ್ಕೆ ಉದಾಹರಣೆಗಳು.

ದಕ್ಷಿಣ ಭಾರತದಲ್ಲಿ ಮಲಯಾಳಿ ಹಾಗೂ ತಮಿಳಿನಲ್ಲಿ ನಟಿಯರಿಗೆ ಇಷ್ಟು ಮನ್ನಣೆ ಆಗಾಗ ಸಿಗುತ್ತದೆಯಷ್ಟೆ. ಉಳಿದ ಚಿತ್ರರಂಗಗಳಲ್ಲಿ ನಟಿಯರು ಈ ಮಟ್ಟಕ್ಕೆ ಬೆಳೆದಿಲ್ಲ. ಹಾಗೆ ಬೆಳೆಯುವಂತೆ ಆಗಬೇಕು ಎನ್ನುವುದು ಆಶಯ. ಈಗಲೂ ಈ ಚಿತ್ರರಂಗದಲ್ಲಿ ನಾಯಕಿ ನೋಡಲು ಇರುವ ಬೊಂಬೆಯಷ್ಟೆ ಎಂದೇ ಅನೇಕರು ಭಾವಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT