ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭ್ಯತೆ ಮರೆತ ಗಣ್ಯರು

Last Updated 23 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಮ್ಮ ರಾಜ್ಯದ ಸಾರ್ವಜನಿಕ ವೇದಿಕೆಗಳಲ್ಲಿ ಮೂರು ನಾಲ್ಕು ದಿನಗಳಿಂದ ಬೈಗಳು, ಅಸಭ್ಯ ಮಾತುಗಳು ಕೇಳಿಬರುತ್ತಿವೆ. ಸಮಾಜಕ್ಕೆ ಮಾದರಿಯಾಗಿ ನಿಲ್ಲಬೇಕಾದ ಜನನಾಯಕರು, ಶಿಕ್ಷಣ ತಜ್ಞರು ಕೆಟ್ಟ ಪರಿಪಾಠ ಹಾಕಿಕೊಡುತ್ತಿದ್ದಾರೆ. ರಾಜಕಾರಣಿಗಳಿಗಿಂತ ‘ನಾವೇನೂ ಕಮ್ಮಿ ಇಲ್ಲ’ ಎಂದು ಶೈಕ್ಷಣಿಕ ಆಡಳಿತಗಾರರು ಬಹಿರಂಗವಾಗಿ  ವೇದಿಕೆಯಲ್ಲಿ  ಬಾಯಿಗೆ ಬಂದಂತೆ ಬೈದಾಡಿಕೊಂಡಿದ್ದಾರೆ.

ಸಭ್ಯತೆಯ ಎಲ್ಲೆ ಮೀರಿದ್ದಾರೆ. ತಮ್ಮ ಬೈಗುಳ ಮಾತುಗಳಿಂದ ನಾಡಿನ ಜನರೆಲ್ಲ ನಾಚಿಕೊಳ್ಳುವಂತೆ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಂದಿಸಲು ಬಳಸಿದ ಭಾಷೆ ಮತ್ತು ಏಕವಚನ ಪ್ರಯೋಗವನ್ನು ವಿಚಾರ ವಂತರು ಯಾರೂ ಒಪ್ಪಲಾರರು.

ಇನ್ನು, ಮೈಸೂರಿನ ಡಾ. ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಕುಲಪತಿ ಹನುಮಣ್ಣ ನಾಯಕ ದೊರೆ ಮತ್ತು ಕುಲಸಚಿವ ಡಾ. ಎಂ. ಬಸವಣ್ಣ ಅವರ ಮಧ್ಯೆ ನಡೆದ ಕಚ್ಚಾಟವಂತೂ ಖಂಡನೆಗೆ ಅರ್ಹವಾದದ್ದು. ಇವರಿಬ್ಬರೂ  ಶಿಕ್ಷಣ ಕ್ಷೇತ್ರದಿಂದ ಬಂದವರು. ವಿದ್ಯಾರ್ಥಿಗಳಿಗೆ ಕಲಿಸಿದವರು. ವಿಶ್ವವಿದ್ಯಾಲಯದಂಥ ಪವಿತ್ರ ಕ್ಷೇತ್ರದ ಆಡಳಿತ ಸೂತ್ರ ಹಿಡಿದು ಸೂಕ್ಷ್ಮ ಸಂವೇದನೆಯಿಂದ ವರ್ತಿಸಬೇಕಾದವರು.

ಆದರೆ ಸಮಾರಂಭವೊಂದರಲ್ಲಿ   ಗಣ್ಯ ಅತಿಥಿಗಳು, ವಿದ್ಯಾರ್ಥಿಗಳ ಮುಂದೆ ಜಗಳವಾಡಿದ್ದು ಇಬ್ಬರಿಗೂ ಶೋಭಿಸುವುದಿಲ್ಲ. ಮಹಾಕವಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಜಗಜ್ಯೋತಿ ಬಸವಣ್ಣನನ್ನು ೆಪ ಮಾಡಿಕೊಂಡು ಅನಾಗರಿಕವಾಗಿ ಬೈದಾಡಿಕೊಂಡವರು ಮಕ್ಕಳಿಗೆ ಏನು ಪಾಠ ಹೇಳಬಲ್ಲರು? ಇದು ಓದು ಬರಹ ಬಲ್ಲವರು ಆ ಮಹಾಪುರುಷರಿಬ್ಬರಿಗೂ ಮಾಡಿದ ಅಪಚಾರ.

ಸಾರ್ವಜನಿಕ ಬದುಕಿನಲ್ಲಿ ಶಿಷ್ಟಾಚಾರ ಎಂಬುದೊಂದಿದೆ. ಅದನ್ನು ಮರೆತಾಗ ಇಂಥ ಅವಾಂತರಗಳು ನಡೆಯುತ್ತವೆ. ರಾಜಕಾರಣಿಗಳ ಬೈದಾಟವನ್ನು ಜನ ಗಂಭೀರವಾಗಿ ಪರಿಗಣಿಸುವ ಕಾಲ ಹೊರಟು ಹೋಗಿದೆ. ಆದರೆ ಶೈಕ್ಷಣಿಕ ಸಂಸ್ಥೆಗಳ ಸೂತ್ರ ಹಿಡಿದವರು ಕಿತ್ತಾಡುವುದು ಇವರ ಬಗ್ಗೆ ಜನಕ್ಕಿರುವ ಗೌರವವನ್ನೇ ಕಡಿಮೆ ಮಾಡುತ್ತದೆ. ವಿವಿಧ ವಿಶ್ವವಿದ್ಯಾಲಯ ಗಳಲ್ಲಿ ಉನ್ನತ ಸ್ಥಾನದಲ್ಲಿರುವವರು ವಾಚಾಮಗೋಚರ ವಾಗಿ ಬೈದಾಡಿ ಹಾದಿಬೀದಿ ರಂಪ ಮಾಡಿಕೊಂಡ ಪ್ರಸಂಗಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿವೆ.

ಯಾರೋ ಕೆಲವರ ಕ್ಷುಲ್ಲಕ, ಮತಿಹೀನ ಮಾತುಗಳಿಗೆ ಜಾತಿ ಬಣ್ಣ ಬರುವ ಅಪಾಯವನ್ನೂ ಕಂಡಿದ್ದೇವೆ. ಆದ್ದರಿಂದಲೇ ಇದು ಆತಂಕಕಾರಿ ಬೆಳವಣಿಗೆ. ಸಭ್ಯ ನಡವಳಿಕೆಗೆ ಹೆಸರಾದ ನಮ್ಮ ನಾಡಿಗೆ ಕಳಂಕ.  ಈ ಸಂದರ್ಭದಲ್ಲಿ ‘ಮಾತು ಮನೆ ಕೆಡಿಸ್ತು’ ಎಂಬ ಆಡು ಮಾತು,  ‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ’ ಎಂದು ಅನೇಕ ಶತಮಾನಗಳ ಹಿಂದೆಯೇ ದಾಸರು ಹೇಳಿದ ಹಿತವಚನ ನೆನಪಿಗೆ ಬರುತ್ತವೆ.  ಆ ಬುದ್ಧಿವಾದಗಳನ್ನೆಲ್ಲ ಬದಿಗೊತ್ತಿ ನಾಲಿಗೆ ಮೇಲೆ ನಿಯಂತ್ರಣ ಕಳೆದುಕೊಂಡವರಿಗೆ ಸಮಾಜವೇ ಛೀಮಾರಿ ಹಾಕಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT