ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲ್ಲೇಖನ ಮರಣವು ಅಮಾನವೀಯ ಆಚರಣೆಯೇ?

ಆಧುನಿಕ ಸಂವಿಧಾನದೊಡನೆ ಅನಾದಿ ಧಾರ್ಮಿಕ ಸಂಪ್ರದಾಯದ ಘರ್ಷಣೆ
Last Updated 22 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಮರಣ ಸಂಹಿತೆ
ಜೈನಸಿದ್ಧಾಂತದಲ್ಲಿ ‘ಆತ್ಮಹತ್ಯೆ’ಯನ್ನು ಸಂಕೇತಿಸುವ ಪದವಿಲ್ಲ, ಆದರೆ ದೇಹತ್ಯಾಗವನ್ನು ಗುರುತಿಸುವ ಸುಮಾರು 48 ಪದಗಳಿವೆ. ದೇಹದಲ್ಲಿ ಬಂಧಿಸಲ್ಪಟ್ಟಿರುವ ‘ಆತ್ಮ’ವನ್ನು ಬಿಡುಗಡೆಮಾಡಿ, ಅದನ್ನು ‘ಪರಮಾತ್ಮ’ ಸ್ಥಾನಕ್ಕೇರಿಸುವುದು, ಆ ಮೂಲಕ ಜನನ–ಮರಣ ಚಕ್ರದಿಂದ ಮುಕ್ತಿ ಪಡೆದು­ಕೊಳ್ಳುವುದು, ಈ ಸಿದ್ಧಾಂತದ ಗುರಿ.

ಇದು ಪ್ರಾರಂಭವಾ­ಗುವುದು ದೇಹದ ಮೇಲಿನ ಮಮತ್ವವನ್ನು ಕಡಿತಗೊಳಿಸಿ­ಕೊಳ್ಳು­ವು­ದರಿಂದ; ಕೊನೆಗೊಳ್ಳುವುದು, ಯಾರೂ ತಪ್ಪಿಸಿಕೊಳ್ಳಲಾಗದ ಸಾವನ್ನು ಧೈರ್ಯದಿಂದ ಸ್ವಾಗತಿಸುವುದರಿಂದ. ಜೈನ ಸಿದ್ಧಾಂತದಲ್ಲಿ ನಿತ್ಯಮರಣದ ಕಲ್ಪನೆ ಇದೆ. ಉರುಳುವ ಒಂದೊಂದು ಕ್ಷಣವೂ ಸಾವಿನ ಸಮೀಪಕ್ಕೆ ಕೊಂಡೊಯ್ಯು­ವುದನ್ನು ಮತ್ತು ಹುಟ್ಟಿದ ಪ್ರತಿಯೊಂದು ಜೀವಿಯೂ ಸಾಯುತ್ತಲೇ ಬದುಕುತ್ತಿರುವುದನ್ನು ಇದು ಸೂಚಿಸುವುದು.

ಈ ಸಿದ್ಧಾಂತವು ಉಲ್ಲೇಖಿಸುವ 48 ಪದಗಳೂ ಜೀವಿಯು ಮರಣದೆಡೆಗೆ ಹಾಕುವ  ಹೆಜ್ಜೆಗಳನ್ನು ಗುರುತಿಸುತ್ತದೆ. ಆದರೆ ಈ ಮರಣ ಪ್ರಭೇದಗಳೆಲ್ಲವನ್ನೂ ಅದು ಅನುಮೋದಿಸುವುದಿಲ್ಲ. ಉದಾಹರಣೆಗೆ, ‘ಅನಿಚ್ಛಾಪ್ರವೃತ್ತಿ’, ಮತ್ತು ‘ಇಚ್ಛಾಪ್ರವೃತ್ತಿ’ ಎಂಬ ಪ್ರಕ್ರಿಯೆಗಳನ್ನು ಹೆಸರಿಸುತ್ತಾ ಇದರಲ್ಲಿ ಅಕಾಲಮರಣವನ್ನು ತಿರಸ್ಕರಿಸಿ, ಸಕಾಲಮರಣವನ್ನು ಅದು ಅನುಮೋದಿಸುವುದು. ಇದೇ ಬಗೆಯಲ್ಲಿ ಇನ್ನೊಂದು ಪ್ರಭೇದದಡಿ ಬರುವ ಶಸ್ತ್ರ, ವಿಷ, ಅಗ್ನಿ ಮತ್ತು ಜಲದ ಮೂಲಕ ಸಾಧಿಸುವ ಸಾವುಗಳನ್ನು ಸಾರಾಸಗಟಾಗಿ ತಿರಸ್ಕರಿಸುವುದು. ಇದೇ ಜೈನ ಮರಣಸಂಹಿತೆ.

ಬಾಲ ಮತ್ತು ಪಂಡಿತ ಮರಣಗಳು
ಅತ್ಯಂತ ತೀಕ್ಷ್ಣತರದ ತರ್ಕ–ಮೂಸೆಯಿಂದ ಹೊರತೆಗೆದ ಜೈನ ಮರಣಸಂಹಿತೆಯಲ್ಲಿ, ಬಾಲಮರಣ ಮತ್ತು ಪಂಡಿತಮರಣಗಳೆಂಬ ಎರಡು ಪ್ರಧಾನ ಘಟಕಗಳಿವೆ. ದೇಹ ಮತ್ತು ಮನಸ್ಸು ವಿಕಸನಗೊಳ್ಳುವ ಮುಂಚೆ, ಅಲ್ಪ ಜ್ಞಾನಿಯೊಬ್ಬ ಆತುರದಲ್ಲಿ ಪೂರೈಸಿಕೊಳ್ಳುವ ದೇಹಾಂತ್ಯವೇ ಬಾಲಮರಣ. ಇದನ್ನು ಮೂರ್ಖರ ಮರಣವೆನ್ನುವುದುಂಟು.

ಶ್ರಾವಕ(ಗೃಹಸ್ಥ)ನು, ಅಥವಾ ಶ್ರಮಣ(ಸನ್ಯಾಸಿ)ನು ಸಾಮಾಜಿಕ ಅಥವಾ ಸಾಂಘಿಕ ಹೊಣೆಗಾರಿಕೆಯಿಂದ ವಿಮುಖನಾಗಿ, ಸಮಾಜ ಮತ್ತು ಸಂಘದಿಂದ ದೂರಸರಿದು, ವ್ಯಕ್ತಿಗತ ಹಿತಕ್ಕಾಗಿ ಸಾವಿನ ಮೊರೆ ಹೋಗುವುದನ್ನು ಪಲಾಯನ ಪ್ರವೃತಿ ಎಂದೇ ಪರಿಗಣಿಸಲಾಗಿದೆ. ಪರೀಷಹ, ಭೋಗಾಸಕ್ತಿ (ವೇಸಟ್ಟ) ಮತ್ತು ಪ್ರತಿಷ್ಠೆ (ನಿಯಮ) ಮುಂತಾದವಕ್ಕೆ ಒಳಗಾದವನು ಆತುರದಲ್ಲಿ ಆಯ್ಕೆಮಾಡಿಕೊಳ್ಳುವ ಮರಣ ವಿಧಾನವು ಬಾಲಿಶವಾದದ್ದು. ಬೆಟ್ಟ ಅಥವಾ ವೃಕ್ಷದ ಮೇಲಿಂದ ಜಿಗಿದು, ಜಲ ಮತ್ತು ಜ್ವಾಲೆಯನ್ನು ಪ್ರವೇಶಿಸಿ, ವಿಷಪ್ರಾಷನಮಾಡಿ, ನೇಣುಬಿಗಿದುಕೊಂಡು, ಹದ್ದು ಮುಂತಾದ ಪಕ್ಷಿಗಳಿಗೆ ಮೈಯೊಡ್ಡಿ, ಕ್ರೂರ ಬಗೆಯಲ್ಲಿ ಇವನು ಸಾವನ್ನಪ್ಪುವನು. ಈ ಬಗೆಯ ಸಾವನ್ನು ‘ಸೂಯಿಸೈಡ್’ ಎಂಬ ಇಂಗಿಷ್ ಪದವನ್ನು ‘ಆತ್ಮಹತ್ಯೆ’ ಎಂದು ಅಸಂಬದ್ಧವಾಗಿ ಭಾಷಾಂತರಿಸಿ ನಾವಿಂದು ಗುರುತಿಸುತ್ತಿರುವೆವು.

ಬಾಲಮರಣದ ವಿರುದ್ಧ ದಿಕ್ಕಿನಲ್ಲಿರುವುದು ಪಂಡಿತಮರಣ. ಪುನರ್‌ಜನ್ಮದಿಂದ ಮುಕ್ತಿಯನ್ನು ಸಂಪಾದಿಸಿಕೊಡುವ, ಅಯೋಗಕೇವಲಿ ಎಂಬ ಉನ್ನತೋನ್ನತ ಸ್ಥಾನಕ್ಕೆ ಕರೆದೊಯ್ಯುವ, ಈ ಮರಣ ಮಾರ್ಗವು ದೇಹದಂಡನೆಗೆ ಮಾತ್ರ ಸೀಮಿತವಾದುದಲ್ಲ. ಕೋಪ, ಗರ್ವ, ಮೋಹ, ಮತ್ತು ಮೋಸಗಳೆಂಬ ಚತುರ್ವಿಧ ಕಷಾಯಗಳಿಂದ ಮುಕ್ತನಾದವನು ಮಾತ್ರ ಈ ಮಾರ್ಗದ ಮೂಲಕ ಆತ್ಮವನ್ನು ಪರಮಾತ್ಮನಲ್ಲಿ ಲೀನಗೊಳಿಸಬಲ್ಲನು.

ಅಲ್ಪಜ್ಞಾನಿಯು ಹಿಂಸಾಮಾರ್ಗವನ್ನ­ನುಸರಿಸಿ ಆತುರದಲ್ಲಿ ಪೂರೈಸಿಕೊಳ್ಳುವುದು ಬಾಲಮರಣ­ವಾದರೆ, ಪರಿಪೂರ್ಣಜ್ಞಾನಿಯು ದೇಹವನ್ನು ಕ್ರಮೇಣ ನಿಗ್ರಹಿಸುತ್ತಾ ತಾಳ್ಮೆಯಿಂದ ಸಾಧಿಸಿಕೊಳ್ಳುವುದು ಪಂಡಿತಮರಣ­ವಾಗಿದೆ. ಅಂದರೆ ಪಂಡಿತಮರಣದಲ್ಲಿ ದೇಹದಂಡನೆಗಿಂತ ಹೆಚ್ಚಿನ ಮಹತ್ವವನ್ನು ಮನಸಿನ ವಿಕಾಸಕ್ಕೆ ಕೊಡಲಾಗುವುದೆಂದು ಅರ್ಥ. ಚಂಚಲ ಚಿತ್ತವನ್ನು ಬಯಕೆಗಳಿಂದ ಮುಕ್ತಗೊಳಿಸಿ, ಪರಮಸಮಾಧಿಯ ಮೂಲಕ ಘಾತಿಕರ್ಮಗಳನ್ನೆಲ್ಲಾ ಜಯಿಸಿ, ಅನಂತ ದೃಷ್ಟಿ, ಅರಿವು, ಆನಂದ ಹಾಗೂ ವೀರ್ಯವನ್ನು ಸಂಪಾದಿ­ಸಿ­ಕೊಂಡವನು ಸಿದ್ಧಸ್ಥಾನಕ್ಕೇರುವನು. ಇದು ವ್ರತಮರಣದ ಫಲ.

ವ್ರತಮರಣ
ಜೈನಸಿದ್ಧಾಂತವು ವ್ರತಮರಣವನ್ನು ಕೆಲವು ನಿಶ್ಚಿತ ಪದಗಳಿಂದ ಗುರುತಿಸುತ್ತದೆ. ಇವುಗಳಲ್ಲಿ ಸಲ್ಲೇಖನ ಒಂದು; ಆರಾಧನಾ, ಸನ್ಯಸನ, ಇಂಗಿಣೀ, ಸಮಾಧಿ, ಪಂಚಪದ, ಪಾವುಗ್ಗಮಣ ಎಂಬುವು ಇನ್ನು ಕೆಲವು. (ಕರ್ನಾಟಕದ ಹೊರಗೆ, ವಿಶೇಷವಾಗಿ ಶ್ವೇತಾಂಬರರಲ್ಲಿ ಪ್ರಚಾರದಲ್ಲಿರುವ ಸಂಥರ ಎಂಬ ಪದವು ಇಲ್ಲಿ ಪ್ರಚಾರದಲ್ಲಿಲ್ಲ). ಸ್ಥೂಲವಾಗಿ ಪಂಡಿತಮರಣದಡಿ ಬರುವ ಈ ಎಲ್ಲಾ ವ್ರತಗಳ ಗುರಿ ಒಂದೇ ಆದರೂ ಸಾಧನಾ ವಿಧಾನದಲ್ಲಿ ಸೂಕ್ಷ್ಮ ವ್ಯತ್ಯಾಸಗಳಿವೆ. ವ್ರತಮರಣವನ್ನು ಯಶಸ್ವಿಯಾಗಿ ಪೂರೈಸಿದ ಮೊದಲ ಮಹಾಪುರುಷ (ಕ್ರಿ.ಪೂ. 6ನೆಯ ಶತಮಾನದ) ವರ್ಧಮಾನ ಮಹಾವೀರನೆಂದು ಐತಿಹ್ಯವಿದೆ. ಚರಿತ್ರೆಗೆ ಸಮೀಪವಾದವರಲ್ಲಿ ಮೊದಲಿಗರೆಂದರೆ (ಕ್ರಿ.ಪೂ. 3ನೆಯ ಶತಮಾನದ) ಭದ್ರಬಾಹುಮುನಿ ಮತ್ತು ಆತನ ಶಿಷ್ಯ ಚಂದ್ರಗುಪ್ತಮೌರ್ಯ. ಕಾಲಾನಂತರದ ಶಾಸನಗಳು ಇದನ್ನು ಬೆಂಬಲಿಸುವವು.

ವಿಶ್ವದಲ್ಲಿ ಅತಿ ಹೆಚ್ಚು ಸಂಖ್ಯೆಯ ದಾಖಲಿತ ಮರಣಗಳು ಸಂಭವಿಸಿದ್ದು ಕರ್ನಾಟಕದ ಶ್ರವಣಬೆಳಗೊಳದಲ್ಲಿ. ಇಲ್ಲಿರುವ ಎರಡು ಬೆಟ್ಟಗಳಲ್ಲೊಂದರ ಚರಿತ್ರೆಯನ್ನು ರೂಪಿಸಿದ್ದೇ ವ್ರತಮರಣವು. ಈ ಕಾರಣ, ಸಮಾಧಿಬೆಟ್ಟವೆಂದೇ ಅದು ಒಂದು ಹಂತದಲ್ಲಿ ಪ್ರಸಿದ್ಧಿಗೊಂಡಿತ್ತು. ಕ್ರಿ.ಶ. 6ರಿಂದ 15ನೆಯ ಶತಮಾನದ ಅವಧಿಯಲ್ಲಿ ಇಲ್ಲಿ ಸಂಭವಿಸಿದ ಸುಮಾರು 110 ಮರಣ ದಾಖಲೆಗಳು ಕಲ್ಲುಬರಹದ ಮೇಲಿವೆ. ಇವನ್ನು ನಿಷಿಧಿಗಳೆಂದು ಶತಶತಮಾನಗಳಿಂದ ಗೌರವಿಸಿಕೊಂಡು ಬರಲಾಗಿದೆ. 15ನೆಯ ಶತಮಾನದ ನಂತರ ಘಟಿಸಿದ ವ್ರತಮರಣಗಳಿಗೆ ಇಷ್ಟೊಂದು ಸುವ್ಯವಸ್ಥಿತ ದಾಖಲೆ ಇಲ್ಲ. ಆದರೆ ಇದೊಂದು ಜೀವಂತ ಆಚರಣೆಯಾಗಿ ಇನ್ನೂ ಮುಂದುವರೆಯುತ್ತಿರುವುದರಲ್ಲಿ ಅನುಮಾನವಿಲ್ಲ್ಲ.

ದೇಹವಿಸರ್ಜನೆಯ ಪ್ರಕ್ರಿಯೆ
ದೇಹದಂಡನೆಯನ್ನು ಪ್ರತಿಪಾದಿಸುವ ಜೈನಸಿದ್ಧಾಂತವು ದೇಹವನ್ನು ತುಚ್ಛೀಕರಿಸುವುದಿಲ್ಲ. ‘ದೇಹವಿನ್ನೂ ಗಟ್ಟಿಮುಟ್ಟಾಗಿದ್ದರೆ, ಅದರ ಪ್ರಗತಿಗೆ ಹಾದಿಮಾಡಿಕೊಡು; ರೋಗಗ್ರಸ್ತವಾದರೆ ಔಷಧೋಪಚಾರದಿಂದ ಪುನಶ್ಚೇತನಗೊಳಿಸು; ಧಾರ್ಮಿಕ ಕ್ರಿಯೆಗಳನ್ನು ಪೂರೈಸಿಕೊಳ್ಳದಷ್ಟು ಶಿಥಿಲಗೊಂಡರೆ, ಕಠೋರ ಖಳನಾಯಕನ ಸಹವಾಸವನ್ನು ತೊರೆಯುವಂತೆ ಅದನ್ನು ತೊರೆ, ಎಂಬುದು ಆಶಾಧರಮುನಿಯ ಆದೇಶ. 

ಅರ್ಹ ಕಾರಣಗಳಿಲ್ಲದೆ, ಧಾರ್ಮಿಕ ನಿಯಮಗಳನ್ನು ಉಲ್ಲಂಘಿಸಿ ಇಲ್ಲವೇ ಸಂಕ್ಷಿಪ್ತಗೊಳಿಸಿ, ಜ್ಞಾನಿಗಳ ಮಾರ್ಗದರ್ಶನವನ್ನು ಉಪೇಕ್ಷಿಸಿ, ಕುಟುಂಬ, ಸಮಾಜ ಮತ್ತು ಸಂಘಗಳೊಡನೆ ಅನುಸಂಧಾನಕ್ಕಿಳಿಯದೆ, ಮರಣದ ಕಾಲ, ವಿಧಾನ ಮತ್ತು ಗುರಿಯನ್ನು ಲೆಕ್ಕಿಸದೆ, ಯಾರು ಬೇಕಾದರೂ ಯಾವುದೇ ಗಳಿಗೆಯಲ್ಲಿ, ಯಾವುದೇ ಬಗೆಯಲ್ಲಿ, ದೇಹಾಂತ್ಯಕ್ಕೆ ಯತ್ನಿಸುವುದನ್ನು ಇದು ಮಾನ್ಯಮಾಡುವುದಿಲ್ಲ. ಈ ಕಾರಣದಿಂದಾಗಿ ವ್ರತಮರಣವು ಹತ್ಯಾಮರಣಕ್ಕಿಂತ ಭಿನ್ನವೆನಿಸಿದೆ.

ಮೂರು ಪ್ರಮುಖ ಹೇತುಗಳು (‘ಆತ್ಮ’)ಹತ್ಯಾ ಮರಣವನ್ನು (suicide) ವ್ರತಮರಣದಿಂದ ಪ್ರತ್ಯೇಕಿಸುವುವು. ಅವು: ಆವೇಶ, (impulsiveness), ಆಘಾತ (violence), ಗೋಪ್ಯತೆ (secrecy). ‘ಸೂಯಿಸೈಡ್‌’ನಲ್ಲಿ ಈ ಮೂರೂ ದುಶ್ಶಕ್ತಿಗಳ ಪಾತ್ರ ಪ್ರಮುಖ; ವ್ರತಮರಣದಲ್ಲಿ ಇವಾವಕ್ಕೂ ಸ್ಥಾನವಿಲ್ಲ.

ಆವೇಶದಲ್ಲಿ ಕೈಕೊಳ್ಳುವ ನಿರ್ಧಾರಕ್ಕೆ ಸಮರ್ಥನೆಯ ಅವಶ್ಯಕತೆ ಇರುವುದಿಲ್ಲ, ಸಮಾಲೋಚನೆಗೂ ಅವಕಾಶವಿರುವುದಿಲ್ಲ – ಕಾರಣ, ಇದೊಂದು ಏಕಾಂಗಿಯ ತೀರ್ಮಾನವಾಗಿಬಿಡುವುದು. ಇಂತಹ ತಾಳ್ಮೆರಹಿತ ಸಾವು ಬಹುತೇಕ ಘಟಿಸುವುದು ಕ್ಷಣಮಾತ್ರದಲ್ಲಿ, ರಹಸ್ಯಸ್ಥಳದಲ್ಲಿ, ದೇಹವನ್ನು ಹಿಂಸಿಸಿ. ಹತಾಶೆ, ದ್ವಂದ್ವ, ಆತುರ, ಹೇಡಿತನ, ಮೌಢ್ಯ, ಆತ್ಮಸ್ಥೈರ್ಯದ ಅಭಾವ, ಪಲಾಯನ ಪ್ರವೃತ್ತಿ, ಮುಂತಾದವು ಇದನ್ನು ರೂಪಿಸುವವು. ಬಾಲಮರಣದಡಿ ಜೈನಸಿದ್ಧಾಂತವು ಖಂಡಿಸುವ ವಿಧಾನಗಳಾದ ವಿಷ, ಜಲ, ಜ್ವಾಲೆ, ಶಸ್ತ್ರ, ನೇಣು, ಗಿರಿ ಮತ್ತು ವೃಕ್ಷಗಳನ್ನು ಬಳಸಿಕೊಂಡೇ ಇದು ಸಂಭವಿಸುವುದು. ಈ ಬಗೆಯ ಸಾವಿಗೆ ಮೊರೆಹೋಗುವವನು ಕುಟುಂಬ, ಸಮಾಜ, ಸಂಘ, ಸಮುದಾಯಕ್ಕೆ ತನಗಿರುವ ಹೊಣೆಗಾರಿಕೆಯ ಬಗ್ಗೆ ಎಳ್ಳಷ್ಟೂ ಅರಿವಿಲ್ಲದವನಾಗಿರುತ್ತಾನೆ.

ಇವಾವನ್ನೂ ಒಳಗೊಂಡಿರದ ಸಾವೇ ಸಲ್ಲೇಖನ ಮರಣ.
‘ಸತ್’ (ಶ್ಲಾಘನೀಯ), ‘ಲೇಖನಾ’ (ಕಾರ್ಯಕ್ಲೇಷ), ಎಂಬ ಎರಡು ಪದಗಳನ್ನು ಬೆಸೆದು ರೂಪಿಸಿದ ಸಲ್ಲೇಖನವನ್ನು ವಿಧಿ, ವಿಧಾನ, ಸಾಧನೆ, ತಪಸ್ಸು, ಯೋಗ, ಎಂದೆಲ್ಲ ಗುರುತಿಸಲಾಗಿದೆ. ಇಂದ್ರಿಯನಿಗ್ರಹ, ಮಲವಿನಾಶ, ಕರ್ಮಕಳಂಕದಿಂದ ಮುಕ್ತಿಪಡೆದುಕೊಂಡು, ಆತ್ಮನಲ್ಲಿ ಏಕತ್ರವನ್ನು ಗಳಿಸಿಕೊಳ್ಳುವುದು, ಇದರ ಗುರಿ. ಕನ್ನಡ ಕವಿ ಬಂಧುವರ್ಮನು (ಸು. 1200) ತನ್ನ ‘ಹರಿವಂಶೋಭ್ಯುದಯ’ದಲ್ಲಿ ಈ ಮರಣವಿಧಾನವನ್ನು ಸುದೀರ್ಘವಾಗಿ ಚರ್ಚಿಸಿರುವನು.

ಸಲ್ಲೇಖನ ವ್ರತಾಚರಣೆಯ ಯಾವೊಂದು ಕ್ರಿಯೆಯೂ ರಹಸ್ಯವಾಗಿ, ಆತುರಾತುರವಾಗಿ, ಅನುಸಂಧಾನರಹಿತವಾಗಿ, ಸಂಭವಿಸುವುದಿಲ್ಲ. ಇದು ಪ್ರಾರಂಭವಾಗುವುದೇ ಕುಟುಂಬ, ಸಮಾಜ, ಸಂಘ ಮತ್ತು ಸಮುದಾಯಗಳ ಅನುಮತಿಯನ್ನು ಬಹಿರಂಗವಾಗಿ ಪಡೆದುಕೊಂಡು; ಸಂಘದ ಸಮ್ಮುಖದಲ್ಲಿ ದೀಕ್ಷಾಗುರುವಿನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಮತ್ತು ಮುನಿ ಸಮುದಾಯದ ನಿಖರ ಹಾಗೂ ನಿಯಮಬದ್ಧ ಮಾರ್ಗದರ್ಶನದಲ್ಲಿ ಮುನ್ನಡೆಯಲು ಒಪ್ಪಿಕೊಂಡು.

ಸಲ್ಲೇಖನಾರ್ಥಿಯು ಮೊದಲು ಬಹಿರಂಗಪಡಿಸಬೇಕಾದದ್ದು ಸಂಸಾರದಿಂದ ನಿವೃತ್ತಿಗೊಳ್ಳಲು ಅವನಿಗಿರುವ ಕಾರಣಗಳನ್ನು. ಜೈನಸಂಹಿತೆಯು ಅಂಗೀಕರಿಸಿದ, ಸಹಜ-ಶಾಂತ-ಜೀವನ, ವಾಸಿಪಡಿಸಲಾರದಂತಹ ರೋಗ, ನೈಸರ್ಗಿಕ ಆಕ್ರೋಶ ಮತ್ತು ಆಘಾತ, ಸಾವಿನ ಸಾಮೀಪ್ಯ, ಬದುಕಿನ ನಿರರ್ಥಕತೆ, ಸಹಿಸಲಾಗದ ಮಾನಸಿಕ ಕ್ಲೇಶ, ಈ ಮುಂತಾದವುಗಳಿಗೆ ಅವನು ಕೊಡುವ ಕಾರಣಗಳು ಹೊಂದಿಕೆಯಾಗಬೇಕು.

ವ್ರತದೀಕ್ಷೆ ಕೊಡುವವನೂ ಅದನ್ನು ಪಡೆದುಕೊಳ್ಳುವವನೂ ಇದೆಲ್ಲವನ್ನೂ ಸಂಘ ಸದಸ್ಯರ ಸಮ್ಮುಖದಲ್ಲಿ ಚರ್ಚಿಸಬೇಕು. ದೀಕ್ಷೆಗೆ ಅವನು ಅರ್ಹನೋ ಅನರ್ಹನೋ ಎಂಬುದನ್ನು ಮತ್ತು ಅವನ ಮನಃಸ್ಥೈರ್ಯವು ದೃಢವೋ ಚಂಚಲವೋ ಎಂಬುದನ್ನು ಪರೀಕ್ಷಿಸಿ ಸಂಘಸದಸ್ಯರು ಮುಂದಿನ ಹೆಜ್ಜೆಯನ್ನು ನಿರ್ಧರಿಸಬೇಕು. ಆನಂತರ ಎದುರಿಸಬೇಕಾದ ಕಠಿಣತಪಸ್ಸು, ಕಾಯಕ್ಲೇಶ, ಆರಾಧನಾ ನಿಯಮಗಳನ್ನು ಅವನು ಯಶಸ್ವಿಯಾಗಿ ಪೂರೈಸಬಲ್ಲನೋ ಇಲ್ಲವೋ ಎಂಬುದನ್ನು ಮನವರಿಕೆ ಮಾಡಿಕೊಂಡು, ಅವನ ದೀಕ್ಷೆಯ ಬಗ್ಗೆ ಅಂತಿಮ ನಿರ್ಣಯಕ್ಕೆ ಬರಬೇಕು. ಎಲ್ಲಾ ಮೋಹಗಳಿಂದ ಮುಕ್ತನಾದರೂ ಸಾವಿಗಾಗಿ ಮರಣಾರ್ಥಿಯು ಆತುರ ಪಟ್ಟರೆ ಅದೂ ಒಂದು ಬಗೆಯ ಮೋಹವೆಂದೇ ಜಿನಸಂಹಿತೆ ಬಗೆಯುವುದು, ಏಕೆಂದರೆ, ಸಾವಿನ ಬಗ್ಗೆ ಅವನಿಗಿರುವ ಆಸೆ ಮತ್ತು ಆತುರವನ್ನು ಅದು ಸೂಚಿಸುವುದಲ್ಲವೇ? ಬಾಗಿಲು ಬಡಿಯುತ್ತಿರುವ ಸಾವಿನಿಂದ ತಪ್ಪಿಸಿಕೊಳ್ಳಲೆತ್ನಿಸುವುದು ಎಷ್ಟು ವ್ಯರ್ಥ ಪ್ರಯತ್ನವೋ ಅಷ್ಟೇ ವ್ಯರ್ಥವಾದದ್ದು ಸಾವನ್ನು ಆಹ್ವಾನಿಸಲು ಆತುರಪಡುವುದು!

ಸಲ್ಲೇಖನದಲ್ಲಿ ಎರಡು ಘಟಕಗಳಿವೆ: ಒಂದು ಬಾಹ್ಯ ಸಲ್ಲೇಖನ, ಇನ್ನೊಂದು ಆಂತರಿಕ ಸಲ್ಲೇಖನ. ಮೊದಲನೆಯದು ಕಾಯವನ್ನು ಶಿಸ್ತುಗೊಳಿಸಿದರೆ, ಎರಡನೆಯದು ಮನಸ್ಸನ್ನು (ಆತ್ಮವನ್ನು) ತಿಳಿಗೊಳಿಸುವುದು. ಅನಶನ ಅಥವಾ ಆಹಾರತ್ಯಾಗಕ್ಕೆ ಮೊದಲನೆಯದರಲ್ಲಿ ಪ್ರಮುಖ ಪಾತ್ರವಿದೆ; ಸಮಾಧಿ (ಧ್ಯಾನ, ಯೋಗ, ಜ್ಞಾನಾರ್ಜನೆ, ಮುಂ.) ಎರಡನೆಯದರಲ್ಲಿ ಪ್ರಮುಖ ಪಾತ್ರವಿದೆ. ಅವಶ್ಯಕ್ಕಿಂತ ಹೆಚ್ಚು ಗಮನವನ್ನು ದೇಹಕ್ಕೆ ಕೊಟ್ಟು, ಅದನ್ನು ಅನ್ನಪಾನಾದಿಗಳಿಂದ ಕೊಬ್ಬಿಸಿ, ವಸ್ತ್ರಒಡವೆಗಳಿಂದ ಅಲಂಕರಿಸಿ, ಗಂಧಧೂಪಾದಿಗಳಿಂದ ಪೂಸಿಸುತ್ತಿರುವಾಗ, ಆತ್ಮವನ್ನು ತಾತ್ಸಾರಕ್ಕೊಳಪಡಿಸಿ, ದೇಹದಲ್ಲಿ ಅದರ ಬಂಧನವನ್ನು ಇನ್ನಷ್ಟೂ ಬಿಗಿಪಡಿಸುವುದರಿಂದ, ದೇಹದ ಮೇಲಿನ ಗಮನವನ್ನು ತಗ್ಗಿಸಿ, ಒಂದು ಹಂತದಲ್ಲಿ ಅದನ್ನು ಆತ್ಮದ ತಾತ್ಕಾಲಿಕ ವಾಹನವನ್ನಾಗಿ ಪರಿವರ್ತಿಸಿಕೊಳಬೇಕಾದ ಅವಶ್ಯಕತೆಯನ್ನು ಮರಣಾರ್ಥಿಯು ಅರಿತುಕೊಳ್ಳಬೇಕು.

ಇವೆರಡೂ –ಕಾಯಕ್ಲೇಶ ಮತ್ತು ಆತ್ಮವಿಕಾಸ– ನಿಧಾನ ಗತಿಯಲ್ಲಿ ಒಟ್ಟೊಟ್ಟಿಗೆ ಮುನ್ನಡೆಯಬೇಕಾದುದರಿಂದ, ಇಲ್ಲಿ ಆತುರಕ್ಕೆ ಎಳ್ಳಷ್ಟೂ ಎಡೆ ಇರುವುದಿಲ್ಲ. ಈ ನಡೆಯು ಸುಮಾರು ಹನ್ನೆರಡು ವರ್ಷಗಳಷ್ಟು ದೀರ್ಘ ಅವಧಿಗೆ ವಿಸ್ತರಿಸಿಕೊಳ್ಳಬಹುದಾದ ಸಾಧ್ಯತೆ ಇದೆ. ಈ ಕಾಲದಲ್ಲಿ ಆಹಾರಸೇವನೆ ಮತ್ತು ನಿರಶನದ ಮೆಟ್ಟಿಲುಗಳನ್ನು ಹೇಗೆ ನಿಯಂತ್ರಿಸಿಕೊಳ್ಳಬೇಕು, ಮತ್ತು ಇದರಲ್ಲಿ ಘನ ಆಹಾರ, ಪೌಷ್ಟಿಕ ಪಾನೀಯ, ನೀರು, ಮತ್ತು ಗಾಳಿಯ ಪಾತ್ರವೇನು ಎಂಬುದನ್ನು ಮನನ ಮಾಡಿಕೊಡುವ ಹೊಣೆಗಾರಿಕೆ ಗುರುವೃಂದದ್ದಾಗಿರುವುದು.

ದೇಹವು ಕ್ರಮೇಣ ಕೃಶಗೊಳ್ಳುತ್ತಿರುವ ಈ ಅವಧಿಯಲ್ಲಿ, ಆರಾಧನಾ, ತಪಸ್ಸು, ಯೋಗ, ಪಂಚಾಕ್ಷರಮಂತ್ರ, ದೇವತಾಸ್ತುತಿ, ಧಾರ್ಮಿಕ ಚರ್ಚೆ ಮುಂತಾದವನ್ನು ನಿರ್ವಹಿಸಿ, ಮನಸ್ಸನ್ನು ವಿಕಸನಗೊಳಿಸಿಕೊಳ್ಳಬೇಕು. ಸರ್ವಬಾಧೆಯಿಂದ ಮುಕ್ತನಾಗುತ್ತಾ ಜ್ಞಾನವನ್ನು ವೃದ್ಧಿಪಡಿಸಿಕೊಳ್ಳುತ್ತಾ, ಅನಂತಾನಂದವನ್ನು ಅನುಭವಿಸುತ್ತಾ, ಪಂಚಪದ ನಿನಾದದಲ್ಲಿ ತೇಲಾಡುತ್ತಾ, ಸಾವನ್ನು ಸ್ವಾಗತಿಸುವುದೇ ಸಲ್ಲೇಖನ ಕ್ರಿಯೆ. ಆಗ ಕಳಚಿಕೊಂಡ ದೇಹದ ಬಗ್ಗೆ ದುಃಖವಾಗಲಿ, ಸಾಧಿಸಿಕೊಂಡ ಸಾವಿನ ಬಗ್ಗೆ ಹೆಮ್ಮೆಯಾಗಲಿ, ಸಾಧಕನಲ್ಲಿ ಇರುವುದಿಲ್ಲ.
***
ಸಲ್ಲೇಖನ ಮರಣಕ್ಕೆ ಕನಿಷ್ಠ 2,000 ವರ್ಷಗಳ ಇತಿಹಾಸವಿದೆ. ಈ ವ್ರತವನ್ನು ಅನುಸರಿಸಿ ಸಾವನ್ನು ಸ್ವಾಗತಿಸಿದವರ ನೂರಾರು ದಾಖಲೆಗಳಿವೆ. ಈ ಮರಣ ಪ್ರಕ್ರಿಯೆಯ ಮೂಲಕವೇ ಜೀವನದ ಮೌಲ್ಯವನ್ನು ಕಂಡುಕೊಂಡಿರುವ ಒಂದು ಬೃಹತ್ ಮತ್ತು ಪ್ರಭಾವೀ ಸಮಾಜ ನಮ್ಮ ಮಧ್ಯದಲ್ಲಿದೆ. 2,000 ವರ್ಷಗಳ ಉದ್ದಕ್ಕೂ ಇದನ್ನು ಗುರುತಿಸಿ, ಗೌರವಿಸಿದ, ಹಿಂದೂ, ಮುಸ್ಲಿಂ, ಕ್ರೈಸ್ತ ರಾಜ್ಯಾಂಗಗಳ ಸಾಕ್ಷಿ ಇದೆ. ಸತಿ ಆಚರಣೆಯೊಡನೆ ಇದನ್ನು ಹೋಲಿಸಿ ನೋಡಿದ ಬ್ರಿಟಿಷರು, ಅದರಲ್ಲಿರುವ ಅವಗುಣಗಳನ್ನು ಇದರಲ್ಲಿ ಕಾಣದ ಕಾರಣ, ಒಂದನ್ನು ಕಾನೂನಿನ ಮೂಲಕ ನಿಷೇಧಿಸಿ ಇನ್ನೊಂದನ್ನು ಪ್ರಶ್ನಿಸಬೇಕಾದ ಅವಶ್ಯಕತೆಯನ್ನು ಕಾಣದಿದ್ದ ನಿದರ್ಶನವೂ ನಮ್ಮೆದುರಿನಲ್ಲಿದೆ.

ನಿಜ. ಈಗ ಸಂವಿಧಾನ ಬದಲಾಗಿದೆ; ಮಾನವೀಯತೆಯನ್ನು ನಿರ್ಧರಿಸುವ ಅಳತೆಗೋಲೂ ಬದಲಾಗಿದೆ. ಸ್ವತಂತ್ರಭಾರತದ ಸಂವಿಧಾನದಲ್ಲಿ ಈ ಮರಣ ಪ್ರಕ್ರಿಯೆಯನ್ನು ಪ್ರಶ್ನಿಸಲು ಬೇಕಾದ ಆಧಾರವನ್ನು ಕಾನೂನಿನಲ್ಲಿ ಕಂಡುಕೊಳ್ಳಬಹುದಾಗಿದೆ. ಆದರೆ ಇದನ್ನು ಸಂವಿಧಾನದ ಕೆಲವು ಕಲಮುಗಳಡಿ ಮಾತ್ರ ನೋಡಿದರೆ ಸಾಲದು. ವ್ರತಮರಣ ಬಯಸುವವರ ದೈಹಿಕ, ಮಾನಸಿಕ, ಸಾಮಾಜಿಕ, ಧಾರ್ಮಿಕ, ಆತಂಕಗಳನ್ನು ಅರ್ಥಮಾಡಿಕೊಳ್ಳಬಲ್ಲ ಮತ್ತು ಅವನ್ನು ನಿವಾರಿಸಿಕೊಡಬಲ್ಲ, ಕಲ್ಯಾಣರಾಜ್ಯ(welfare state)ವನ್ನು ಮೊದಲು ಗಟ್ಟಿಗೊಳಿಸದೆ, ನೆಮ್ಮದಿಯ ಬಾಳಿಗೆ ಎಡೆಮಾಡಿಕೊಡದೆ, ಸಂವಿಧಾನವನ್ನು ಮಾತ್ರ ಗಮನದಲ್ಲಿರಿಸಿಕೊಂಡು ಕೊಡುವ ನಿರ್ಣಯಕ್ಕೆ ಗೌರವವಾಗಲೀ ಮನ್ನಣೆಯಾಗಲೀ ದೊರೆಯಲು ಸಾಧ್ಯವೇ?

ನನ್ನ ಅನಿಸಿಕೆ: ಇಂದಿನ ಸಂವಿಧಾನದ ಓದಿನಡಿ ಸಲ್ಲೇಖನ ಮರಣವು ಒಂದು ವರ್ಗದ ನ್ಯಾಯಾಧೀಶರಿಗೆ ಅಮಾನವೀಯ ಅಪರಾಧವೆನಿಸಬಹುದು, ಆತ್ಮಹತ್ಯೆಗೂ ಸಮಾನವೆನಿಸಬಹುದು. ಆದರೆ, ಇವು ಕೊನೆಯ ಮಾತಾಗಲಾರವು. ಈಗ ವಿಶ್ವದ ಒಲವು ಹೆಚ್ಚುತ್ತಿರುವುದು ಇಚ್ಛಾಮರಣಿಗಳ ಪರವಾಗಿ. ಇದರಲ್ಲಿ ದಯಾಮರಣ ಒಂದಾದರೆ ವ್ರತಮರಣವು ಇನ್ನೊಂದು. ಮೃತದೇಹವನ್ನು ಹದ್ದಿಗೆ ಆಹಾರವಾಗಿಸುವುದು, ಅರೆಬೆಂದ ದೇಹವನ್ನು ಗಂಗೆಯಲ್ಲಿ ತೇಲಿಬಿಡುವುದು, ಮಾನವೀಯತೆಯ ಶ್ರೇಷ್ಟ ಲಕ್ಷಣಗಳೇ ಎಂಬುದನ್ನು ಮೊದಲು ನಿರ್ಧರಿಸಿ ನ್ಯಾಯಾಂಗವು ಈ ಕಡೆ ನೋಡಬೇಕು. ಮಾನವೀಯತೆಯ ಕಲ್ಪನೆಯು ವಿಸ್ತಾರಗೊಂಡಂತೆಲ್ಲಾ ಅದನ್ನು ಗೌರವಿಸುವ ಸಂವಿಧಾನಗಳು ಬೇಕಾಗುವವು. ವಿಶ್ವದ ಇಂದಿನ ಸಂವಿಧಾನಗಳು ಮರಣಸ್ವಾತಂತ್ರ್ಯಕ್ಕೆ ಅಡ್ಡಿಯಾಗುವುದಾದರೆ, ಅವನ್ನು ಬದಲಿಸಲೇಬೇಕಾದ ಅನಿವಾರ್ಯತೆ ಉದ್ಭವಿಸುವುದು. ಆ ಅನಿವಾರ್ಯತೆಯನ್ನು ಕಾಣಲು ಹೆಚ್ಚು ಶ್ರಮಪಡಬೇಕಿಲ್ಲವೆನಿಸುವುದು.
***
ಶ್ರವಣಬೆಳಗೊಳದಲ್ಲಿ ವ್ರತಮರಣ ಆಚರಿಸಿದವರಲ್ಲಿ ಪ್ರಪ್ರಥಮರು
ಶ್ರವಣಬೆಳಗೊಳದಲ್ಲಿ ಸಂಭವಿಸಿದ ವ್ರತಮರಣಗಳು ದಾಖಲೆಗೊಳ್ಳಲಾರಂಭಿಸಿದ್ದು ಕ್ರಿ.ಶ. 600ರ ನಂತರ. ಆ ಪೂರ್ವದಲ್ಲಿ ಮಡಿದವರ ದಾಖಲೆಗಳು ಇಲ್ಲಿ ಲಭ್ಯವಿಲ್ಲ. ಸುಮಾರು ಕ್ರಿ.ಶ. 600ರಲ್ಲಿ ವ್ರತವನ್ನು ಸ್ವೀಕರಿಸಿ ಸಾವನ್ನಪ್ಪಿದ ಮೊದಲ ಮುನಿ, ಪ್ರಭಾಚಂದ್ರ; ಮೊದಲ ಸನ್ಯಾಸಿನಿ, ನಾಗಮತೀಗಂತಿ; ಮೊದಲ ಅರಸ, ರಾಷ್ಟ್ರಕೂಟ ಇಂದ್ರರಾಜ; ಮೊದಲ ದಂಡನಾಯಕ, ಗಂಗಮಾರಸಿಂಹ. ಇವರಲ್ಲಿ ಕೊನೆಯ ಇಬ್ಬರು  ಮಡಿದದ್ದು 10ನೆಯ ಶತಮಾನದಲ್ಲಿ.

ಅತಿ ಹೆಚ್ಚು ಸಂಖ್ಯೆಯಲ್ಲಿ ಗೃಹಸ್ಥರು ಮತ್ತು ಗೃಹಿಣಿಯರು ಇಲ್ಲಿ ಸಾವನ್ನು ಸ್ವಾಗತಿಸಿದ್ದು 12ನೆಯ ಶತಮಾನದಲ್ಲಿ. ಈ ಶತಮಾನದಲ್ಲಿ ಸನ್ಯಾಸ-ಸನ್ಯಾಸಿನಿಯರಿಗಿಂತ ಶ್ರಾವಕ-ಶ್ರಾವಕಿಯರೇ ಹೆಚ್ಚುಸಂಖ್ಯೆಯಲ್ಲಿ ವ್ರತಮರಣವನ್ನಪ್ಪಿದ ದಾಖಲಾತಿ ಇದೆ. ಇದರಲ್ಲಿ ಹೊಯ್ಸಳ ರಾಜ್ಯದಲ್ಲಿ ಮಂತ್ರಿಯಾಗಿದ್ದ ಗಂಗರಾಜನ ತಾಯಿ ಪೋಚಿಕಬ್ಬೆ, ಮಡದಿ ಲಕ್ಷ್ಮೀಮತಿ, ಲಕ್ಷ್ಮೀಮತಿಯ ಸೋದರಸೋದರಿಯರಾದ ಬೂಚಣ ಮತ್ತು ದೇವತಿಯರು, ವಿಷ್ಣುವರ್ಧನನ ಪಟ್ಟದರಸಿಯಾದ ಶಂತಲೆಯ ತಾಯಿ ಮಾಚಿಕಬ್ಬೆ, ಅವಳ ಸೋದರರಾದ ಸಿಂಗಿಮಯ್ಯ ಮತ್ತು ಬಲದೇವ, ಪ್ರಮುಖರಾಗಿದ್ದರು. ದಾಖಲೆಗೆ ಸಿಲುಕುವ ಕೊನೆಯ ಮರಣಾರ್ಥಿಗಳೆಂದರೆ 19ನೇ ಶತಮಾನದ ಮುನಿ ಅಜಿತಕೇರ್ತಿ ಮತ್ತು ಗೃಹಸ್ಥ ದೇವರಾಜ ಅರಸ.
***
ಸಲ್ಲೇಖನ ಪದದ ಬಳಕೆ
ಸಲ್ಲೇಖನ ವ್ರತವನ್ನು ಉಲ್ಲೇಖಿಸುವ ಅತಿ ಪೂರ್ವಕಾಲದ ಕನ್ನಡ ಶಾಸನವು ಹರಪನಹಳ್ಳಿ ಜಿಲ್ಲೆಯ ಯರಂಬಳ್ಳಿಯಲ್ಲಿ ದೊರಕಿದೆ. 8ನೆಯ ಶತಮಾನದಲ್ಲಿ ಬಾದಾಮಿಯಿಂದ ಚಾಲುಕ್ಯ ಸತ್ಯಾಶ್ರಯನು ಆಳುತ್ತಿದ್ದಾಗ, ಸಿದ್ಧಣಂದಿ, ಶಿವಣಂದಿ ಮತ್ತು ಜಯಣಂದಿ ಎಂಬ ಮೂವರು ಮುನಿಗಳು ಥಾಣಿ ಆಚಾರ್ಯನ ಸನ್ನಿಧಿಯಲ್ಲಿ ಸಲ್ಲೇಖನಗೆಯ್ದು, ಮಡಿದು ಸತ್ತ ವಿವರ ಇದರಲ್ಲಿದೆ.

12ನೆಯ ಶತಮಾನಕ್ಕಿಂತ ಮುಂಚೆ ಈ ಪದವು ಶ್ರವಣಬೆಳಗೊಳದ ಶಾಸನಗಳಲ್ಲಿ ಬಳಕೆಯಾಗಿಲ್ಲ. ಆವರೆಗೂ ಪ್ರಚಾರದಲ್ಲಿದ್ದ ವ್ರತಮರಣಗಳನ್ನು ಇಲ್ಲಿಯ ಶಾಸನಗಳು ‘ಆರಾಧನಾ’, ‘ಸನ್ಯಸನ’, ‘ಸಮಾಧಿ’, ಪದಗಳಿಂದ, ಒಂದುಬಾರಿ ಮಾತ್ರ ‘ಪಾಉಗ್ಗಮಣ’ ಪದದಿಂದ ಗುರುತಿಸಿರುವುವು. 13ನೆಯ ಶತಮಾನದಲ್ಲಿ ಒಮ್ಮೆ, 15ನೆಯ ಶತಮಾನದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡು, ಸಲ್ಲೇಖನ ಪದವು ದಾಖಲೆಗಳಿಂದ ಕಣ್ಮರೆಯಾಗಿಬಿಡುವುದು. ಶಾಸನಗಳಲ್ಲಿ ವ್ರತಮರಣವನ್ನು ಹೆಚ್ಚುಬಾರಿ ಗುರುತಿಸಿರುವುದು ‘ಸನ್ಯಸನ’ ಮತ್ತು ‘ಸಮಾಧಿ’ ಎಂಬ ಪದಗಳಿಂದ. ಇತಿಹಾಸದಲ್ಲಿ ಪಂಡಿತಮರಣವನ್ನು ಬರಮಾಡಿಕೊಂಡ ಏಕೈಕ ವ್ಯಕ್ತಿಯಂದರೆ, ಶಾಂತಲೆಯ ತಾಯಿ ಮಾಚಿಕಬ್ಬೆ. ಕ್ರಿ. ಶ. 1131ರಲ್ಲಿ, ತನ್ನ ಮಗಳ ಮರಣವಾರ್ತೆಯನ್ನು ಕೇಳಿ ವೈರಾಗ್ಯಕ್ಕೊಳಗಾಗಿ, ಸಲ್ಲೇಖನ ವ್ರತವನ್ನು ಸ್ವೀಕರಿಸಿ, ಅವಳು ಪಂಡಿತಮರಣ ಪಡೆದ ಕಲ್ಬರಹವಿದೆ.
***
1976ರಲ್ಲಿ ‘Sallekhana is not Suicide’ ಎಂಬ ಪುಸ್ತಿಕೆಯನ್ನು ಜೈನರೂ ಮತ್ತು ನ್ಯಾಯಮೂರ್ತಿಗಳೂ ಆಗಿದ್ದ ಟಿ.ಕೆ. ತುಕೋಳ್ ಅವರು ಪ್ರಕಟಿಸಿದರು. ಇದಾದ ಹತ್ತು ವರ್ಷಗಳ ನಂತರ, ವ್ರತಮರಣವನ್ನು ಕುರಿತು ಸಮಗ್ರ ಅಧ್ಯಯನ ಮಾಡಿದ್ದು, ಪ್ರೊ. ಷ. ಶೆಟ್ಟರ್. Inviting Death (1986) ಮತ್ತು Pursuing Death (1990) ಎಂಬ ಶೀರ್ಷಿಕೆಯಡಿ ಇವರು ಪ್ರಕಟಿಸಿದ ಎರಡು ಇಂಗ್ಲಿಷ್ ಭಾಷಾ ಸಂಪುಟಗಳು, ಈ ವ್ರತಾಚರಣೆಯ ಸಿದ್ಧಾಂತ ಮತ್ತು ಚರಿತ್ರೆಯನ್ನು ಮೊತ್ತಮೊದಲ ಬಾರಿಗೆ ಪ್ರಪಂಚಕ್ಕೆ ಪರಿಚಯಿಸಿಕೊಟ್ಟವು. ಮೂವತ್ತು ವರ್ಷಗಳ ನಂತರ ‘ಸಾವನ್ನು ಸ್ವಾಗತಿಸಿ’ ಮತ್ತು ‘ಸಾವನ್ನು ಅರಸಿ’ (2015) ಎಂಬ ಶೀರ್ಷಿಕೆಯಡಿ, ಅವನ್ನು ಕನ್ನಡಿಗರಿಗೆ ಒದಗಿಸಿಕೊಡಲಾಗಿದೆ. ವ್ರತಮರಣದ ವಿಧಿವಿಧಾನ, ಪ್ರಭೇದ, ಚರಿತ್ರೆಯನ್ನು ಸಮಗ್ರವಾಗಿ ಪರಿಚಯಿಸುವ ಈ ಗ್ರಂಥಗಳು ಆಂತರರಾಷ್ಟ್ರೀಯ ಮಟ್ಟದ ವಿಮರ್ಶಕರಿಂದ ಅಭೂತಪೂರ್ವ ಮಾನ್ಯತೆಯನ್ನೂ ಹತ್ತಾರು ಪ್ರಶಸ್ತಿ ಪುರಸ್ಕಾರಗಳನ್ನೂ ಲೇಖಕರಿಗೆ ತಂದುಕೊಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT