ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ, ವೈಚಾರಿಕ ಸ್ಪಷ್ಟತೆ ಕೊರತೆಯ ಉತ್ಸವ

ಇಂದು ಕೆಳದಿ ಗ್ರಾಮದಲ್ಲಿ ಕೆಳದಿ ಉತ್ಸವ
Last Updated 7 ಮಾರ್ಚ್ 2015, 5:29 IST
ಅಕ್ಷರ ಗಾತ್ರ

ಸಾಗರ: ಜನರ ಒಳಗೊಳ್ಳುವಿಕೆ ಇಲ್ಲದೆ ಕೇವಲ ಅಧಿಕಾರಿಗಳೇ ಒಂದು ಕಾರ್ಯಕ್ರಮವನ್ನು ರೂಪಿಸಿದರೆ ಎಂತಹ ಅಧ್ವಾನ ನಡೆಯಬಹುದು ಎನ್ನುವುದಕ್ಕೆ ಮಾ. 7ರಂದು ತಾಲ್ಲೂಕಿನ ಕೆಳದಿ ಗ್ರಾಮದಲ್ಲಿ ನಡೆಯಲಿರುವ ಕೆಳದಿ ಉತ್ಸವ ಜೀವಂತ ಉದಾಹರಣೆಯಂತೆ ಕಾಣುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. 

ಒಂದು ದಿನದ ಕೆಳದಿ ಉತ್ಸವಕ್ಕೆ ಸರ್ಕಾರ₹37ಲಕ್ಷ ವೆಚ್ಚ ಮಾಡುತ್ತಿದೆ. ಈ ಪೈಕಿ ₹17ಲಕ್ಷ ವೆಚ್ಚದಲ್ಲಿ ಉದ್ಯಾನ ನಿರ್ಮಾಣ ಮತ್ತು ಕೆಳದಿ ರಾಣಿ ಚನ್ನಮ್ಮನ ಪುತ್ಥಳಿ ಅನಾವರಣ ಕೆಲಸ ಹೊರತುಪಡಿಸಿದರೆ ಯಾವುದೇ ಅರ್ಥಪೂರ್ಣ ಕಾರ್ಯಕ್ರಮವನ್ನು ಉತ್ಸವ ಒಳಗೊಂಡಿಲ್ಲ ಎನ್ನುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಹಿಂದಿನ ವರ್ಷಗಳಲ್ಲಿ ಕೆಳದಿ ಉತ್ಸವ ಆಚರಿಸುವ ಸಂದರ್ಭದಲ್ಲಿ ಹಲವು ಬಾರಿ ಸ್ಥಳೀಯ ಗ್ರಾಮಸ್ಥರನ್ನು ಕರೆದು ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಈ ಬಾರಿ ಅಂತಹ ಸಭೆ ನಡೆದಿದ್ದರೂ ಅದು ಕೇವಲ ಔಪಚಾರಕ್ಕೆ ನಡೆದಿದ್ದು ಉಪವಿಭಾಗಾಧಿಕಾರಿಗೆ ಎಲ್ಲಾ ವಿಷಯದಲ್ಲೂ ಅಂತಿಮ ತೀರ್ಮಾನ ಎನ್ನುವುದು ಎದ್ದು ಕಾಣುತ್ತಿದೆ.

ಯಾವುದೆ ಒಂದು ಊರಿನ ಉತ್ಸವ ಇತಿಹಾಸವನ್ನು ಮೆಲುಕು ಹಾಕುವ ಜತೆಗೆ ವರ್ತಮಾನದ ಸಮಸ್ಯೆಗಳಿಗೆ ಮುಖಾಮುಖಿ ಆಗುವ ರೀತಿಯಲ್ಲಿ ಇರಬೇಕು ಎಂಬ ಸಾಮಾನ್ಯ ಪ್ರಜ್ಞೆಯ ಕೊರತೆ ಉತ್ಸವದ ಸಂಘಟಕರಲ್ಲಿ ಎದ್ದು ಕಾಣುತ್ತಿದೆ.

ನೆಪ ಮಾತ್ರಕ್ಕೆ ಎನ್ನುವಂತೆ ಉತ್ಸವದಲ್ಲಿ ಕೇವಲ ಒಂದು ವಿಚಾರಗೋಷ್ಠಿಯನ್ನು ಆಯೋಜಿಸ ಲಾಗಿದೆ. ಅದು ಕೂಡ ಮಧ್ಯಾಹ್ನ 2ಗಂಟೆಗೆ ಜನರು ಊಟಕ್ಕೆ ಹೋಗುವ ಹೊತ್ತಿನಲ್ಲಿ ಈ ಗೋಷ್ಠಿಯನ್ನು ನಿಗದಿಪಡಿಸಲಾಗಿದೆ ಎಂದು ಜನರು ದೂರುತ್ತಾರೆ.

ಕೆಳದಿ ಗ್ರಾಮದಲ್ಲಿ ಐತಿಹಾಸಿಕ ದೇವಸ್ಥಾನ ಇರುವ ಪ್ರದೇಶದ 100ಮೀಟರ್‌ನಿಂದ 300ಮೀ. ವ್ಯಾಪ್ತಿಯೊಳಗೆ ಬರುವ ಮನೆಯವರು ತಮ್ಮ ಮನೆಗೆ ಸಂಬಂಧಿಸಿದ ಯಾವುದೇ ಕಾಮಗಾರಿ ಮಾಡಬೇಕು ಎಂದರೆ ಅದಕ್ಕೆ ಪುರಾತತ್ವ ಇಲಾಖೆ ತಕರಾರು ಎತ್ತುತ್ತದೆ.

ಈ ಪ್ರದೇಶದಲ್ಲಿ ಒಂದು ಗುಂಡಿಯನ್ನು ತೋಡುವುದು ಕೂಡ ಕಷ್ಟಸಾಧ್ಯ. ಅಂತಹ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಉತ್ಸವದಲ್ಲಿ ಚರ್ಚೆಯಾಗಬೇಕಿತ್ತು ಎನ್ನುವುದು ಗ್ರಾಮಸ್ಥರ ಆಶಯ.

ಕೆಳದಿ ಇತಿಹಾಸ ಎಂದರೆ ಕೇವಲ ಅದು ಸಾಗರ ತಾಲ್ಲೂಕಿಗೆ ಸಂಬಂಧಪಟ್ಟಿದ್ದಲ್ಲ. ಕೆಳದಿ ಅರಸ ಶಿವಪ್ಪನಾಯಕನ ಅರಮನೆ ಶಿವಮೊಗ್ಗದಲ್ಲಿದೆ. ಕರಾವಳಿಯಿಂದ ಕವಲೆದುರ್ಗದವರೆಗೆ ಹಬ್ಬಿದ್ದ ಕೆಳದಿ ಸಾಮ್ರಾಜ್ಯದ ಇತಿಹಾಸದ ನೆನಪು ಈಗ ದಾವಣಗೆರೆ ಜಿಲ್ಲೆಗೆ ಸೇರಿರುವ ಚನ್ನಗಿರಿ ತಾಲ್ಲೂಕಿನವರೆಗೂ ವಿಸ್ತರಿಸಿದೆ. ಈ ಬಗ್ಗೆ ಅರಿವಿಲ್ಲದ ಅಧಿಕಾರಿಗಳು ಉತ್ಸವವನ್ನು ಕೇವಲ ಸಾಗರಕ್ಕೆ ಅದರಲ್ಲೂ ಒಂದು ಹೋಬಳಿಗೆ ಸೀಮಿತಗೊಳಿಸಿರುವ ಔಚಿತ್ಯ ಆಕ್ಷೇಪಕ್ಕೆ ಕಾರಣವಾಗಿದೆ.

ಉತ್ಸವದ ಆಹ್ವಾನ ಪತ್ರಿಕೆಯನ್ನು ಗಮನಿಸಿದರೆ ಸಾಂಸ್ಕೃತಿಕ ಕಾರ್ಯಕ್ರಮ ಗಳ ಪಟ್ಟಿಯಲ್ಲಿ ಹಿನ್ನೆಲೆ ಗಾಯಕ ರಾಜೇಶ್‌ ಕೃಷ್ಣನ್ ಮತ್ತು ತಂಡದವರ ಗಾನ ಸಂಭ್ರಮ ಹಾಗೂ ಮುಂಬೈನ ರಮೀಂದರ್ ಖುರಾನ ಅವರ ಒಡಿಸ್ಸಿ ನೃತ್ಯಕ್ಕೆ ಮಾತ್ರ ಪ್ರಾಮುಖ್ಯತೆ ನೀಡಿರುವುದು ಎದ್ದು ಕಾಣುತ್ತಿದೆ.

ಈ ಎರಡು ಕಾರ್ಯಕ್ರಮಗಳಿಗೆ ಸುಮಾರು₹4.75ಲಕ್ಷ ಖರ್ಚು ಮಾಡಲು ಉತ್ಸವ ಸಮಿತಿ ಮುಂದಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳೆಂದು ಮೀಸಲಿಟ್ಟಿರುವ ಬಜೆಟ್‌ನ ಸಿಂಹಪಾಲು ಈ ಕಾರ್ಯಕ್ರಮಗಳಿಗೆ ಹೋಗುತ್ತಿವೆ.

ಸಾಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ಸಾಂಸ್ಕೃತಿಕ ಸಂಘಟನೆಗಳಿವೆ. ಜಾನಪದ ಕಲೆ, ರಂಗಭೂಮಿ, ನೃತ್ಯ, ಸಂಗೀತ ಹೀಗೆ ಹಲವು ಕ್ಷೇತ್ರಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಅನೇಕ ಕಲಾವಿದರಿದ್ದಾರೆ.

ಅವರನ್ನು ಮೂಲೆಗುಂಪು ಮಾಡಿರುವುದು ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಬೇಸರ ಮೂಡಿಸಿದೆ. ಹೆಸರಿಗೆ ಎಂದು ಕೆಲವು ಸ್ಥಳೀಯ ಕಲಾವಿದರಿಗೆ ಅವಕಾಶ ಕೊಟ್ಟಿದ್ದರೂ ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕುವ ಸೌಜನ್ಯ ಸಂಘಟಕರಿಗೆ ಇಲ್ಲವಾಗಿದೆ ಎಂದು ಜನರು ಆರೋಪಿಸುತ್ತಾರೆ.

ಅಧಿಕಾರಿಗಳು ಏಕಪಕ್ಷೀಯವಾಗಿ ಉತ್ಸವಕ್ಕೆ ಸಂಬಂಧಪಟ್ಟಂತೆ ತೀರ್ಮಾನ ತೆಗೆದುಕೊಳ್ಳುತ್ತಿದ್ದರೂ ಜನಪ್ರತಿನಿಧಿ ಗಳು ಮೌನವಾಗಿ ಇದನ್ನು ಸಹಿಸಿಕೊಳ್ಳುತ್ತಿದ್ದಾರೆ. ಉತ್ಸವ ನಡೆಯುವ ಆರಂಭದಲ್ಲಿ ಸಾಗರ, ಜೋಗ ಮೊದಲಾದ ಪ್ರವಾಸಿ ಮಂದಿರಗಳು ಅಧಿಕಾರಿಗಳ ವಾಸ್ತವ್ಯಕ್ಕಾಗಿ ಮೀಸಲಿಡಲಾಗಿದ್ದು, ಕೆಳದಿ ಉತ್ಸವ ಅಧಿಕಾರಿಗಳ ಉತ್ಸವವೋ, ಜನರ ಉತ್ಸವವೋ ಎಂದು ಪಟ್ಟಣದ ಜನತೆ ಕೇಳುತ್ತಿದ್ದಾರೆ.
ಎಂ.ರಾಘವೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT