ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಲ್ಲೂ ರಾಜಕೀಯ; ನೀಡುವವರಾರು ಅಭಯ?

Last Updated 6 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಮನುಕುಲದ ನಿಜವಾದ ಆರೋಪಿ ‘ಆಧುನಿಕ ನಾಗರಿ­ಕತೆ’ ಎಂದು ಗಾಂಧಿ ಒಮ್ಮೆ ಹೇಳಿದ್ದರು. ಯಾಕೋ ಇಂದು ಆ ಮಾತು ಮತ್ತೆ ಮತ್ತೆ ನೆನಪಾಗುತ್ತಿದೆ. ನಾವು ಮತ್ತು ನಮ್ಮನ್ನು ಆಳುತ್ತಿರುವ ಪ್ರಭುತ್ವವು ಗಾಂಧಿಯವರ ಈ ಮಾತನ್ನು ಗಂಭೀರವಾಗಿ ಪರಿಗಣಿಸದೇ ಇರುವುದಕ್ಕೋ ಏನೋ ಇಂದು ನಮ್ಮ ಮಕ್ಕಳು ಬೆಲೆ ತೆರುತ್ತಿದ್ದಾರೆ ಅನಿಸುತ್ತದೆ.

ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಸಾಕಷ್ಟು ಅಹಿತಕರವಾದ ಘಟನೆಗಳು ನಡೆಯುತ್ತಿವೆ. ಅದರಲ್ಲೂ ಬಾಲಕಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳು ನಾಗರಿಕರನ್ನು ಬೆಚ್ಚಿ ಬೀಳಿಸಿವೆ. ಕರಾವಳಿಯ ಸೌಜನ್ಯ, ರತ್ನ ಕೊಠಾರಿ, ಮಲೆನಾಡಿನ ನಂದಿತಾ, ಬೆಂಗಳೂರಿನ ಶಾಲೆಗಳಲ್ಲಿ ಪುಟ್ಟ ಮಕ್ಕಳ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಗಳು ಮಾನವೀಯ ಸಮಾಜ ತಲೆ­ತಗ್ಗಿಸುವಂತಿವೆ ಎಂಬುದರಲ್ಲಿ ಎರಡು ಮಾತಿಲ್ಲ.  ಇಂತಹ ಘಟನೆಗಳು ನಡೆದ ನಂತರ ನಮ್ಮ ರಾಜಕಾರಣಿಗಳು ಮತ್ತು ಕೆಲವು ಮಾಧ್ಯಮಗಳು ಅವುಗಳನ್ನು ಚರ್ಚಿಸುತ್ತಿರುವ ರೀತಿ ನಿಜಕ್ಕೂ ನಾವು 21ನೇ ಶತಮಾನದಲ್ಲಿ ಇದ್ದೇವೆಯೇ ಎಂಬ ಸಂಶಯವನ್ನು ಹುಟ್ಟು ಹಾಕುವಂತಿವೆ.

ತೀರ್ಥಹಳ್ಳಿಯ ಬಾಲಕಿ ನಂದಿತಾ ಸಾವಿನ ಪ್ರಕರಣ ಪಡೆದುಕೊಳ್ಳುತ್ತಿರುವ ರಾಜಕೀಯ ತಿರುವುಗಳು ಖಂಡಿತಾ ನಾಗರಿಕ ಸಮಾಜ ಒಪ್ಪಲು ಸಾಧ್ಯವೇ ಇಲ್ಲದಿರುವಂತಹ ಹಂತವನ್ನು ತಲುಪಿವೆ. ಪ್ರತಿ ಘಟನೆ ನಡೆದಾಗಲೂ ಅದಕ್ಕೆ ಕಾರಣವಾದ ಕೀಡಿಗೇಡಿಯ ಧರ್ಮ ಮತ್ತು ಜಾತಿಯನ್ನು ನೋಡಿ ಹೋರಾಟಗಳನ್ನು ರೂಪಿಸುವ ಹಂತಕ್ಕೆ ಸಮಾಜದ ಒಂದು ವರ್ಗ ತಲುಪಿರುವುದು ನಿಜಕ್ಕೂ ಆತಂಕದ ವಿಷಯ. ಅಪರಾಧ ಕೃತ್ಯಗಳನ್ನು ಸಮುದಾಯಗಳ ಹಿನ್ನೆಲೆಯಲ್ಲಿ ಸಮರ್ಥಿಸಲೂಬಾರದು ಮತ್ತು ವಿರೋಧಿಸಲೂ ಬಾರದು. ಇಂತಹ ಕಾನೂನು ಸೂಕ್ಷ್ಮವನ್ನು ಸಮಕಾಲೀನ ರಾಜಕಾರಣ ಮತ್ತು ಹೋರಾಟಗಳು ಪ್ರಜ್ಞಾಪೂರ್ವಕವಾಗಿ ಕಳೆದುಕೊಳ್ಳು­ತ್ತಿರು­ವುದು ನಿಜಕ್ಕೂ ಆತಂಕಕಾರಿ.

ಬೆಂಗಳೂರಿನ ಶಾಲೆಯಲ್ಲಿ ಯಾರೋ ಒಬ್ಬ ಕೀಡಿಗೇಡಿ ಮಾಡಿದ ಕೃತ್ಯಕ್ಕೆ ಇಡೀ ಬೆಂಗಳೂರಿಗರನ್ನೇ ಆರೋಪಿಗಳನ್ನಾ­ಗಿಸು­ವುದು ಎಷ್ಟು ಅಸಂಬದ್ಧವೋ ಅಂತೆಯೇ, ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದಾತ  ಮಾಡಿದ ಕೃತ್ಯಕ್ಕೆ ಇಡೀ ಸಮುದಾಯವನ್ನೇ ಗುರಿಯಾಗಿಸಿ ದ್ವೇಷಿಸುವುದು, ಆಸ್ತಿ-ಪಾಸ್ತಿ ನಷ್ಟ ಉಂಟು ಮಾಡುವುದು ಅಷ್ಟೇ  ಅಸಂಬದ್ಧ. ಸಮಾಜ­ದಲ್ಲಿ ತಲೆ ಎತ್ತುತ್ತಿರುವ ಈ ಮಾದರಿಯ ನಿಲುವುಗಳು ಎರಡು ರೀತಿಯ ಅಪಾಯವನ್ನು ಹುಟ್ಟುಹಾಕಿವೆ. ಅದರಲ್ಲಿ ಮೊದಲನೆಯದು, ಗಂಭೀರ ಅಪರಾಧವೊಂದನ್ನು ಸಮು­ದಾಯ­ಗಳ ಹಿನ್ನೆಲೆಯಲ್ಲಿ ನೋಡುವ ಮೂಲಕ ಅದರ ಗಾಂಭೀರ್ಯವನ್ನು  ತೆಳುವಾಗಿಸಲಾಗುತ್ತಿದೆ. ಇನ್ನೊಂದು ಬಹಳ ಮುಖ್ಯವಾದದ್ದು, ಪದೇ ಪದೇ ಘಟಿಸುತ್ತಿರುವ ಇಂತಹ ಘಟನೆಗಳಿಗೆ ಕಾರಣಗಳನ್ನು ಹುಡುಕುವ ಪ್ರಯತ್ನ­ಕ್ಕಿಂತ, ಅದಕ್ಕೆ ಕಾರಣರಾದವರನ್ನು  ಘೋರವಾಗಿ ಶಿಕ್ಷಿಸುವ ಚರ್ಚೆಗಳೇ ಮತ್ತೆ ಮತ್ತೆ ಕೇಳಿಬರುತ್ತಿವೆ.

ಹಾಗಾದರೆ ಘಟನೆಗೆ ಕಾರಣರಾದವರನ್ನು ಶಿಕ್ಷಿಸಬಾರದೇ ಎಂಬ ಪ್ರಶ್ನೆಯನ್ನು ಕೇಳಿದರೆ, ಖಂಡಿತಾ ಶಿಕ್ಷಿಸಬೇಕು, ಆದರೆ ಅದರ ಜೊತೆಗೆ ಇತ್ತೀಚೆಗೆ ಹೆಚ್ಚುತ್ತಿರುವ ಇಂತಹ ಮಾದರಿಯ ಕೃತ್ಯಗಳಿಗೆ ಕಾರಣಗಳನ್ನು ಗುರುತಿಸಿಕೊಳ್ಳುವ ಹೊಣೆಗಾರಿಕೆ­ಯನ್ನೂ ನಮ್ಮ ಸರ್ಕಾರ ಹೊರಲೇಬೇಕಿದೆ ಮತ್ತು ಅದು ಈ ಕಾಲದ ಅನಿವಾರ್ಯತೆಯೂ ಹೌದು ಎಂದೇ ಹೇಳ­ಬೇಕಾಗುತ್ತದೆ.

ಇತ್ತೀಚಿನ ದಿನಗಳಲ್ಲಿ 11ರಿಂದ 14 ವರ್ಷದ ಮಕ್ಕಳು ಏಕೆ ಈ ಮಾದರಿಯ ದಾರುಣ ಅಂತ್ಯ ಕಾಣುತ್ತಿದ್ದಾರೆ? ಪುಟ್ಟ ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಮಟ್ಟಕ್ಕೆ ವ್ಯಕ್ತಿ ಏಕೆ ಹೋಗುತ್ತಿದ್ದಾನೆ ಎಂಬುದರ ಬಗ್ಗೆ ಒಂದು ಸಮಗ್ರ ಸಾಮಾ­ಜಿಕ ಮತ್ತು ಮನಃಶಾಸ್ತ್ರೀಯ ಅಧ್ಯಯನವನ್ನು ಪರಿಣತರ ಸಹಾಯದಿಂದ ಸರ್ಕಾರ ನಡೆಸಬೇಕಿದೆ.  ಏಕೆಂದರೆ 21ನೇ ಶತಮಾನದ ಆಧುನಿಕ ನಾಗರಿಕತೆ ಸೃಷ್ಟಿಸಿರುವ ತಂತ್ರಜ್ಞಾನ ಇಂದು ಮಕ್ಕಳ ಬಾಲ್ಯವನ್ನೇ ಮೊಟಕುಗೊಳಿಸುತ್ತಿದೆ. 15_ -16 ವರ್ಷಕ್ಕೆ ಹರೆಯ ತಲುಪಬೇಕಾದ ಯುವಜನ ಇಂದು 8_ -10ನೇ ವಯಸ್ಸಿನಲ್ಲೇ ಎಲ್ಲವನ್ನೂ ತಿಳಿದುಕೊಳ್ಳುತ್ತಿದ್ದಾರೆ.

ಒಂದು ಕಡೆ ಹದಿಹರೆಯದ ಮಕ್ಕಳು ಬಳಸುತ್ತಿರುವ ಆಧುನಿಕ ಸಂವಹನ ಸಲಕರಣೆಗಳು ಅವರಿಗೆ ವಯಸ್ಸಿಗೆ ಮೀರಿದ ವಿಷಯಗಳನ್ನು ತಲುಪಿಸುತ್ತಿದ್ದರೆ, ಇನ್ನೊಂದು ಕಡೆ ಉದ್ಯಮವಾಗಿರುವ ದೃಶ್ಯ ಮಾಧ್ಯಮ ತಾನು ಹೇಗಿರಬೇಕು ಎಂಬ ಸಾಮಾಜಿಕ ಜವಾಬ್ದಾರಿಯನ್ನು ಮರೆತು ಅಪರಾಧ ಮತ್ತು ಲೈಂಗಿಕ ಪ್ರಚೋದಕ ವಸ್ತು, ವಿಷಯಗಳನ್ನು ಪ್ರಸಾರ ಮಾಡುತ್ತಿದೆ.

12 ವರ್ಷದ ಮಗು ಇಂದು ಮೊಬೈಲ್ ಅಂತರ್ಜಾಲದ  ಸಹಾಯದಿಂದ ತನ್ನ ವಯಸ್ಸಿಗೆ ಮೀರಿದ ವಿಷಯಗಳನ್ನು, ಚಿತ್ರಗಳನ್ನು ನೋಡುವ ಮುಕ್ತ ಅವಕಾಶವನ್ನು ನಮ್ಮ ಆಧುನಿಕ ತಂತ್ರಜ್ಞಾನ ಮಾಡಿಕೊಟ್ಟಿದೆ. ಮಕ್ಕಳ ವಿಷಯದಲ್ಲಿ ಇದಕ್ಕಿಂತ ಅಪಾಯಕಾರಿ ಅಂಶ ಮತ್ತೊಂದು ಇರಲು ಸಾಧ್ಯವೇ ಇಲ್ಲ.  ಒಟ್ಟಾರೆ ಆಧುನಿಕ ನಾಗರಿಕತೆಯ ಹೆಸರಿನಲ್ಲಿ ಮುಕ್ತ ಜ್ಞಾನದ ಮುಖವಾಡ ಹೊತ್ತಿರುವ ಈ ಉದ್ಯಮಗಳು ಇಂದು ಮಕ್ಕಳ ಮನಃಸ್ಥಿತಿಯನ್ನು ಹಾಳು ಮಾಡುತ್ತಿವೆ.

ಈ ಕುರಿತು ಒಂದು ಗಂಭೀರವಾದ ಚರ್ಚೆಯನ್ನು ಶಾಸನ ಸಭೆಗಳಲ್ಲಿ ಮಾಡಬೇಕಾದ, ತಂತ್ರಜ್ಞಾನದ ನಕಾರಾತ್ಮಕ ಬಳಕೆಯನ್ನು ನಿಯಂತ್ರಿಸಲು ಕಾಯ್ದೆಗಳನ್ನು ರೂಪಿಸಬೇಕಾದ, ಶಾಲೆಯ ಪಠ್ಯಗಳಲ್ಲಿ ಹದಿಹರೆಯದ ವಿಷಯಗಳನ್ನು ಹೇಗೆ ರಚನಾತ್ಮಕ ವಿಷಯವಾಗಿಸಬೇಕು ಎಂಬುದರ ಬಗ್ಗೆ ಸಮಾ­ಲೋಚನೆ ನಡೆಸಬೇಕಾದ, ಶಾಲೆಗಳಲ್ಲಿ ಪುಟ್ಟ ಮಕ್ಕಳ ಕಾಳಜಿ ವಹಿಸುವುದಕ್ಕೆ  ಯೋಜನೆಗಳನ್ನು ರೂಪಿಸಬೇಕಾದ ನಮ್ಮ ಜನ­ಪ್ರತಿನಿಧಿಗಳು ಪರಸ್ಪರ ಕೆಸರೆರಚಾಟದ ಮೂಲಕ ಮುಂದಿನ ಚುನಾವಣೆಗೆ ವೇದಿಕೆ ಸಜ್ಜುಗೊಳಿಸಿಕೊಳ್ಳುತ್ತಿದ್ದಾರೆ. ಶಾಸನ ಸಭೆಗಳಲ್ಲಿ ಈ ವಿಷಯಗಳ ಬಗ್ಗೆ ಧ್ವನಿ ಎತ್ತಲಾರದ ಇವರು, ರಸ್ತೆಯಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಇವರ ವಿರೋಧಿಗಳು, ನೀವು ಅಧಿಕಾರದಲ್ಲಿ ಇದ್ದಾಗಲೂ ಈ ರೀತಿಯ ಪ್ರಕರಣಗಳು ನಡೆದಿದ್ದವು ಎಂದು ಹೇಳುತ್ತಾ  ಅಂಕಿ-ಸಂಖ್ಯೆಗಳನ್ನು ಕೊಡಲು ಮುಂದೆ ಬರುತ್ತಾರೆ.

‘ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಲು ಹೋದರಂತೆ’ ಎಂಬ ಗಾದೆ ಮಾತೊಂದಿದೆ. ಈ ಮಾತು ಇಂದು ನಮ್ಮನ್ನು ಆಳುತ್ತಿರುವ ನಾಯಕರಿಗೆ ಅಕ್ಷರಶಃ ಒಪ್ಪುತ್ತದೆ. ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಈ ಮಾದರಿಯ ದೌರ್ಜನ್ಯ­ಗಳು ವರದಿಯಾಗುತ್ತಿದ್ದರೂ ಅವುಗಳನ್ನು ಗಂಭೀರವಾಗಿ ಪರಿಗಣಿ­ಸದ ಆಳುವ ವರ್ಗ, ಘಟನೆ ನಡೆದ ನಂತರ, ಕಾರಣ­ಕರ್ತರನ್ನು ಹಿಡಿದು ಹೇಗೆ ಶಿಕ್ಷಿಸುತ್ತೇವೆ ನೋಡಿ ಎಂಬಂತೆ ಮಾತನಾಡು­ತ್ತದೆ. ನಮ್ಮ ಹೋರಾಟಗಾರರು ಸಾಮಾಜಿಕ ಜಾಲತಾಣ­ಗಳಲ್ಲಿ  ಆಕ್ರೋಶಭರಿತ ಸಾಲುಗಳನ್ನು ಬರೆಯು­ತ್ತಾರೆ. ನಮ್ಮ ನಡುವಿನ ಮಾನವೀಯ ಸಂವೇದನೆಯೇ ಇಲ್ಲದ ಒಂದು ವರ್ಗ, ಘಟನೆಗೆ ಕಾರಣವಾದ ವ್ಯಕ್ತಿಯ ಧರ್ಮ ಮತ್ತು ಜಾತಿಯನ್ನು ನೋಡಿ ಹೇಗೆ ಹೋರಾಟದ ಹಾದಿ­ಗಳನ್ನು ರೂಪಿಸಬೇಕು ಎಂದು ಯೋಚಿಸುತ್ತದೆ. ನಮ್ಮ ಮಾಧ್ಯಮ­ಗಳು ಚರ್ಚೆಗಳ ಮೇಲೆ ಚರ್ಚೆಗಳನ್ನು ನಡೆಸುತ್ತವೆ. ಇವೆಲ್ಲದರ ಮಧ್ಯೆ, ಭವ್ಯ ಭವಿಷ್ಯವನ್ನು ಹೊಂದಬೇಕಾದ ಹುಡುಗಿಯೊಬ್ಬಳ ಬದುಕು ಹಲವರ ಭಾವಕ್ಕೆ ತಕ್ಕಂತೆ ಚರ್ಚೆಯಾಗಿ, ತಂದೆ ತಾಯಿಯ ಪಾಲಿಗೆ ನೋವನ್ನು ಮಾತ್ರವೇ ಉಳಿಸಿ ಮುಗಿದು ಹೋಗುತ್ತದೆ.

21ನೇ ಶತಮಾನದ ಈ ದಿನಗಳಲ್ಲಿ ನಾವು ಸಂವೇದನೆ­ಯನ್ನು ಇಟ್ಟುಕೊಂಡು ಯೋಚಿಸಬೇಕಾಗಿದೆ. ಘಟನೆಯಲ್ಲಿ ಬಾಧಿತಳಾದ ಹುಡುಗಿಯ ನೆಲೆಯಿಂದ ಯೋಚಿಸುವುದು ಎಷ್ಟು ಮುಖ್ಯವೋ ಅದಕ್ಕೆ ಕಾರಣವಾಗುತ್ತಿರುವ ಮನಸ್ಸು ಮತ್ತು ಅಂತಹ ವಿಕೃತಿಗೆ ಆಧುನಿಕತೆ ಸೃಷ್ಟಿಸಿರುವ ವಾತಾವರ­ಣದ ನೆಲೆಯಿಂದ ಯೋಚಿಸುವುದು ಸಹ ಅಷ್ಟೇ ಮುಖ್ಯವಾಗ­ಬೇಕಿದೆ. ಏಕೆಂದರೆ ನಮ್ಮ ನಡುವೆ ಇನ್ನೂ ಸಾವಿರಾರು ಮಕ್ಕಳಿ­ದ್ದಾರೆ. ಸೌಜನ್ಯ, ರತ್ನ,  ನಂದಿತಾ ಎಂಬಿತ್ಯಾದಿ ಮಕ್ಕಳ ದುರಂತ ಅಂತ್ಯ, ಮಕ್ಕಳ ಮೇಲೆ ಆಧುನಿಕ ಸಂವಹನ ಮಾಧ್ಯಮಗಳ ಪರಿಣಾಮಗಳ ಕುರಿತು ಒಂದು ಸಕಾರಾತ್ಮಕ ಚರ್ಚೆಯನ್ನಾ­ದರೂ ಹುಟ್ಟುಹಾಕಬೇಕಿದೆ. ಆದರೆ ಆ ಲಕ್ಷಣ ಕಾಣುತ್ತಿಲ್ಲ. ಒಂದು ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ಮನಸ್ಸುಗಳು ಬೇಡವಾದದ್ದನ್ನೆಲ್ಲಾ ಮಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT