ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ತಿಳಿವಳಿಕೆ ಕಲಿಸುವ ಮಾರ್ಗ: ರಹಮತ್‌ ತರಿಕೆರೆ

Last Updated 22 ಅಕ್ಟೋಬರ್ 2013, 5:30 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಪಾಶ್ಚಿಮಾತ್ಯ ಸಾಹಿತ್ಯದ ಪ್ರಭಾವ ಬೀರಿದರೂ ಕನ್ನಡ ಲೇಖಕರು ವಿವಿಧ ದೃಷ್ಟಿಕೋನಗಳಲ್ಲಿ ಹೊಸ ಸಾಹಿತ್ಯ ಪರಂಪರೆಯನ್ನು ನೀಡುತ್ತಿದ್ದಾರೆ’ ಎಂದು ವಿಮರ್ಶಕ ರಹಮತ್ ತರಿಕೆರೆ ಹೇಳಿದರು.

ನಗರದ ಕಮಲಾ ನೆಹರೂ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸೋಮವಾರ ಪಲ್ಲವ ಪ್ರಕಾಶನ ಹಮ್ಮಿಕೊಂಡಿದ್ದ ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಅವರ ವಿಮರ್ಶಾ ಕೃತಿ ‘ಸದ್ಯದ ಹಂಗು’ ಬಿಡುಗಡೆಗೊಳಿಸಿ ಅವರು, ಮಾತನಾಡಿದರು.

ಕನ್ನಡ ಲೇಖಕರು ಪಾಶ್ಚಿಮಾತ್ಯ ಪರಂಪರೆಯ ಪ್ರಭಾವವನ್ನು ಅಂತರ್ಗತ ಮಾಡಿಕೊಂಡು, ಹೊಸ ಹೊಸ ಸಾಹಿತ್ಯದ ಪ್ರಯೋಗಗಳಿಗೆ ನಾಂದಿಯಾಡಿದ್ದಾರೆ ಎಂದರು.

ಸಾಹಿತ್ಯ ಎನ್ನುವುದು ತಿಳಿವಳಿಕೆ ಕಲಿಸುವ ಒಂದು ಮಾರ್ಗ. ಇಂದು ಕನ್ನಡ ಸಾಹಿತ್ಯವು ಸ್ವಂತಿಕೆ ಮತ್ತು ಆಸ್ಮಿತೆಯನ್ನು ಶೋಧಿಸುತ್ತಿದೆ. ಇಂದಿನ ಕನ್ನಡ ವಿಮರ್ಶಕರು ಪಂಕ್ತಿಯತೆಯ ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ ಎಂದು ಹೇಳಿದರು.

ಇಂದು ಪ್ರಜಾಪ್ರಭುತ್ವ ವಿರೋಧಿಶಕ್ತಿಗಳ ಬಲ ಹಾಗೂ ಜಾಗತೀಕರಣದ ಶಕ್ತಿಗಳು ಜೀವನದಲ್ಲಿ ತಲ್ಲಣಗಳನ್ನು ಸೃಷ್ಟಿಸುತ್ತಿವೆ. ಇದರಲ್ಲಿ ಕನ್ನಡ ಸಾಹಿತ್ಯದ ಹೊಣೆಗಾರಿಕೆ ಏನು? ಎಂದು ಪ್ರಶ್ನಿಸಿದರು.

ರಾಜೇಂದ್ರ ಚೆನ್ನಿ ಅವರ ವಿಮರ್ಶಾ ಕೃತಿಯಲ್ಲಿ ಸೈದ್ಧಾಂತಿಕ ಬರಹಗಾರರ ಬಗ್ಗೆ ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡಿ, ಎಲ್ಲಾ ಸೈದ್ಧಾಂತಿಕ ಹಿನ್ನೆಲೆಯ ಬರಹಗಾರರಿಗೆ ಪ್ರಾತಿನಿಧ್ಯ ನೀಡಿದ್ದಾರೆ ಎಂದು ತಿಳಿಸಿದರು.

ಸಾಹಿತ್ಯದ ಹೊಣೆಗಾರಿಕೆ ಹಾಗೂ ಕ್ರಿಯಾಶೀಲತೆಯ ಬಗ್ಗೆ ಅಪಾರವಾದ ಭರವಸೆಯನ್ನು ಕೃತಿಕಾರ ಇಟ್ಟುಕೊಂಡಿದ್ದಾರೆ. ಕನ್ನಡ ಬರಹಗಾರರು ಸೃಜನಶೀಲ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಹೋರಾಟಗಾರನ ಪಾತ್ರ ನಿರ್ವಹಿಸುವುದರ ಜೊತೆಗೆ, ಸಾಮಾಜಿಕ ಚಳವಳಿಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ ಎಂದರು.

ರಾಣಿ ಚೆನ್ನಮ್ಮ ವಿವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಎಂ.ಜಿ.ಹೆಗಡೆ, ಕೃತಿಕಾರ ಪ್ರೊ.ರಾಜೇಂದ್ರ ಚೆನ್ನಿ, ವಿಮರ್ಶಕ ಡಾ.ಕುಂಸಿ ಉಮೇಶ, ಪ್ರೊ.ನಾಗರಾಜರಾವ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT