ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧ ಪ್ರಶ್ನೆಗೆ ಸಿ.ಎಂ ಸಿದ್ಧ ಉತ್ತರ!

ಮಕ್ಕಳ ಹಕ್ಕುಗಳ ಸಂಸತ್‌
Last Updated 13 ನವೆಂಬರ್ 2014, 20:14 IST
ಅಕ್ಷರ ಗಾತ್ರ

ಬೆಂಗಳೂರು: ಮಕ್ಕಳ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ವಿಧಾನ­ಸೌಧದಲ್ಲಿ ನಡೆಸಿದ ‘ಮಕ್ಕಳ ಹಕ್ಕುಗಳ ಸಂಸತ್‌’ ಸಂವಾದ ಕಾರ್ಯ­ಕ್ರಮ, ಮಕ್ಕಳ ಸಿದ್ಧ ಪ್ರಶ್ನೆ ಮತ್ತು ಮುಖ್ಯಮಂತ್ರಿಗಳ ಸಿದ್ಧ ಉತ್ತರಕ್ಕೆ ಸೀಮಿತ­ವಾಗಿತ್ತು.

‘ಮಕ್ಕಳು ದೇವರಂತೆ. ಆದರೆ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಕಳವಳ­ಕಾರಿ. ಸರ್ಕಾರ ಇಂಥ ಪ್ರಕರಣ­ಗಳನ್ನು ಗಂಭೀರವಾಗಿ ಪರಿಗಣಿಸು­ತ್ತದೆ. ಅಪರಾಧಿಗಳನ್ನು ಪೋಕ್ಸೋ ಕಾಯ್ದೆ­ಯಡಿ ಬಂಧಿಸಿ ಕಠಿಣ ಕ್ರಮ ಜರುಗಿಸ­ಲಾ­ಗುತ್ತಿದೆ’ ಇದು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳಿಗೆ ಸಂಬಂ­ಧಿ­ಸಿದ  ಮಕ್ಕಳ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಉತ್ತರ.

ಮಕ್ಕಳ ದಿನಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳಿಗಾಗಿ ಶಾಸಕರ ವೇದಿಕೆ, ಕರ್ನಾಟಕ  ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಯುನೆಸೆಫ್‌ ಆಯೋಜಿಸಿದ್ದ ಮಕ್ಕಳ ಸಂಸತ್‌ನಲ್ಲಿ 30 ಜಿಲ್ಲೆಗಳಿಂದ ಬಂದಿದ್ದ 70 ಮಕ್ಕಳು ಸಂವಾದ ನಡೆಸಿದರು.

ಆದರೆ,  ಮುಖ್ಯಮಂತ್ರಿ, ಸಚಿವರಾದ ಉಮಾಶ್ರೀ, ಯು.ಟಿ. ಖಾದರ್‌, ಟಿ.ಬಿ. ಜಯಚಂದ್ರ ಅವರು ಮಕ್ಕಳ ಹೆಚ್ಚಿನ ಪ್ರಶ್ನೆಗಳಿಗೆ ಸರ್ಕಾರದ ಯೋಜನೆ, ಕಾಯ್ದೆ, ಸಮಿತಿ ರಚನೆ ಮುಂತಾದ ಅರ್ಥವಾಗದ ಉತ್ತರ ನೀಡಿದರು. 

ಎಚ್‌ಐವಿ ಬಾಧಿತ ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಸೌಲಭ್ಯ ಸಿಗುತ್ತಿಲ್ಲ. ಎಲ್ಲ ಹಂತದ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಸಿಗುವಂತೆ ಮಾಡಬೇಕು ಎಂಬ ಅಪೂರ್ವ ಮತ್ತು ಅರ್ಚಿತ ಅವರ ಅಹವಾಲಿಗೆ, ‘ಎಚ್‌ಐವಿ  ಬಾಧಿತ ಮಕ್ಕಳನ್ನು ಗುರುತಿ­ಸುತ್ತಿ­ದ್ದೇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯ ಜೊತೆಗೆ ಆರ್ಥಿಕ ಸಹಾಯ, ಪುನರ್‌ವಸತಿ­ಯನ್ನೂ ಕಲ್ಪಿ­ಸುತ್ತಿ­ದ್ದೇವೆ’ ಎಂದು ಮುಖ್ಯ­ಮಂತ್ರಿ­ಗಳು ಹೇಳಿದರೆ, ಆರೋಗ್ಯಶ್ರೀ ವಿಮೆ, ಸ್ವರ್ಣ ಆರೋಗ್ಯ ಸ್ಕೀಂಗಳ ಬಗ್ಗೆ ಯು.ಟಿ.­ಖಾದರ್‌ ವಿವರಣೆ ನೀಡಿದರು. ಆದರೆ ಮಕ್ಕಳ ಪ್ರಶ್ನೆಯ ಆಶಯ, ಎಲ್ಲ ಯೋಜನೆ­­ಗಳಿದ್ದೂ ಯಾಕೆ ಫಲಾನು­ಭವಿ­ಗಳಿಗೆ ತಲುಪುತ್ತಿಲ್ಲ ಎಂಬುದಾ­ಗಿತ್ತು.

ಅಂಗವಿಕಲರ ಶಾಲೆಗಳಿಗೆ ಕ್ಷೀರಭಾಗ್ಯ ಸೌಲಭ್ಯ ಸಿಗುತ್ತಿಲ್ಲ. ಮಾಸಿಕ ಭತ್ಯೆ ಕೇವಲ ₨600 ಸಾಲುತ್ತಿಲ್ಲ ಎಂಬ ಅಂಧ ವಿದ್ಯಾರ್ಥಿ ನೂತನ್‌ಕುಮಾರ್‌  ಅಹ­ವಾ­ಲಿಗೆ, ಸ್ವಯಂಸೇವಾ ಸಂಸ್ಥೆಗಳು ನಡೆ­ಸು­ತ್ತಿರುವ ಅಂಗವಿಕಲ ಶಾಲೆ­ಗಳಿಗೂ ಕ್ಷೀರ­ಭಾಗ್ಯ­ವನ್ನು ತಕ್ಷಣ ವಿಸ್ತರಿಸಲಾ­ಗು­ವುದು, ಮಾಸಿಕ ಭತ್ಯೆ­ಯನ್ನು ಹೆಚ್ಚಿಸ­ಲಾ­ಗು­ವುದು ಎಂದು ಭರವಸೆ ನೀಡಿದರು.

ಆರ್‌ಟಿಐ ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವ ಮಕ್ಕಳ ಶುಲ್ಕವನ್ನು ಖಾಸಗಿ ಶಾಲೆಗಳಿಗೆ ಸರ್ಕಾರ ಪಾವತಿಸುವ ಬದಲು ಅದೇ ಹಣವನ್ನು ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿ­ಸಲು ಬಳಸಬಹು­ದಲ್ಲವೇ ಎಂಬ ಉಡುಪಿಯ ವೈಷ್ಣವಿಯ ಪ್ರಶ್ನೆಗೆ ‘ಗುಣಮಟ್ಟ ಹೆಚ್ಚಿಸಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ. ಶಿಕ್ಷಕರ ಕೊರತೆ­ಯನ್ನು ನೀಗಿಸಲಾಗುತ್ತದೆ’ ಎಂದಷ್ಟೇ ಉತ್ತರಿಸಿದರು.

ಅಂಗನವಾಡಿಗಳಲ್ಲಿ ಮಕ್ಕಳನ್ನು ನಿದ್ರೆ ಮಾಡಿಸಲು ಯಾವುದೋ ಮಾತ್ರೆ, ಪುಡಿಗಳನ್ನು ಬಳಸುತ್ತಿರುವ ಬಗ್ಗೆ ಗಮನ­ಸೆಳೆದವಳು ದಾವಣಗೆರೆಯ ಸುಮಾ. ‘ಅಂಥ ಅಂಗನವಾಡಿ ಕಾರ್ಯ­ಕರ್ತರ ಮೇಲೆ ಕಠಿಣ ಕ್ರಮ ಜರುಗಿಸ­ಲಾ­ಗುತ್ತಿದೆ’ ಎಂದು ಉಮಾಶ್ರೀ ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ಆಟದ ಮೈದಾನ ಬೇಕು, ಗುಡ್ಡಗಾಡುಗಳ ಶಾಲೆಗಳಿಗೆ ಸಾರಿಗೆ ಸೌಲಭ್ಯ ಹೆಚ್ಚಿಸ­ಬೇಕು, ಕ್ರೀಡೆಗೆ ಪ್ರೋತ್ಸಾಹ ನೀಡಬೇಕು ಮುಂತಾದ ಬೇಡಿಕೆಗಳು ಮಕ್ಕಳಿಂದ ಬಂದವು.

ಬಾಲ್ಯದಲ್ಲಿ ಬೀಡಿ ಸೇದಿದ್ದೆ: ಕೆಲವು ಪೋಷಕರು ಮತ್ತು ಶಿಕ್ಷಕರು  ಬೀಡಿ ಸಿಗರೇಟು ತರಲು ಮಕ್ಕಳನ್ನು ಬಳಸಿ­ಕೊಳ್ಳು­ತ್ತಿದ್ದಾರೆ. ಇದರಿಂದ ಮಕ್ಕಳು ಧೂಮಪಾನಿಗಳಾಗುತ್ತಿದ್ದಾರೆ. ಸರ್ಕಾರ ಸಿಗರೇಟು ಮಾರಾಟ ನಿಷೇಧಿ­ಸಬೇಕು ಎಂಬ ಮಕ್ಕಳ ಅಹವಾಲಿಗೆ, ‘ಇದು ಅಕ್ಷಮ್ಯ. ನಿಜಕ್ಕೂ ಇದರಿಂದ ಮಕ್ಕಳು ಬೇಗನೇ ದುಶ್ಚಟಗಳ ದಾಸರಾಗುತ್ತಾರೆ’ ಎಂದ ಸಿದ್ದ­ರಾಮಯ್ಯ,   ‘ನಾನು ಚಿಕ್ಕವ­ನಿದ್ದಾಗ ನಮ್ಮ ಮನೆಯಲ್ಲಿ ಹಿರಿಯರು ಬೀಡಿಗೆ ಕಿಡಿ ಹಚ್ಚಿ ತರಲು ಕಳಿಸುತ್ತಿದ್ದರು. ನಾನು ಬೀಡಿಗೆ ಕಿಡಿ ಹಚ್ಚಿ ಎರಡು ದಂ ಎಳೆದು ನಂತರ ಕೊಡು­ತ್ತಿದ್ದೆ’ ಎಂದು  ಹೇಳಿ ಮಕ್ಕಳನ್ನು ರಂಜಿಸಿದರು.

ಬಾಲ್ಯ ನೆನೆದ ಮುಖ್ಯಮಂತ್ರಿ
ಮಕ್ಕಳು ಮುಖ್ಯಮಂತ್ರಿಗಳ ಬಾಲ್ಯದ ಬಗ್ಗೆ ಕೇಳಿದಾಗ, ‘ನನಗೆ ನಿಮ್ಮಂಥ ಬಾಲ್ಯವೇ ಸಿಕ್ಕಿಲ್ಲ. ನನ್ನಪ್ಪ ನನಗೆ ಹತ್ತು ವರ್ಷವಾಗುವವರೆಗೂ ಶಾಲೆಗೆ ಸೇರಿಸಿ­ರಲಿಲ್ಲ. ಪೂಜಾ ಕುಣಿತ, ನಂದಿಕೋಲು ಕುಣಿತ ಕಲಿಯಲು ಸೇರಿಸಿದ್ದರು. ಅಲ್ಲಿ ಕುಣಿತ ಕಲಿಸುವ ಮೇಷ್ಟ್ರು ಕಾಗುಣಿ­ತವನ್ನೂ ಕಲಿಸಿದ್ದರು. ನಂತರ ನೇರವಾಗಿ ಐದನೇ ತರಗತಿಗೆ ಸೇರಿದ್ದೆ. ಅಲ್ಲಿ ಹೆಡ್‌ ಮಾಸ್ಟರ್‌ ರಾಚಪ್ಪ ಬೆಂಬಲ ನೀಡಿದ್ದರು. ರಜಾ ದಿನಗಳಲ್ಲಿ ಎಮ್ಮೆ ಕಾಯಲು ಕಳುಹಿಸುತ್ತಿದ್ದರು. ನದಿಯಲ್ಲಿ  ಈಜಿ, ಗೆಳೆಯರೊಂದಿಗೆ ಕುಸ್ತಿ, ಜಗಳ ಮಾಡಿ ಮನೆಗೆ ಬರುತ್ತಿದ್ದೆ. ನಾನು ಚಪ್ಪಲಿ ಹಾಕಿದ್ದು ಎಂಟನೇ ತರಗತಿಗೆ ಹೋಗು­ವಾಗ. ಎರಡು ಕಿಲೋಮೀಟರ್‌ ನಡೆದು ಶಾಲೆಗೆ ಹೋಗುತ್ತಿದ್ದೆ’ ಎಂದು ಬಾಲ್ಯ, ಶಿಕ್ಷಣದ ಬಗ್ಗೆ ಮಕ್ಕಳೊಂದಿಗೆ ಹಂಚಿ­ಕೊಂಡರು.

ಇಂದಿನ ಮಕ್ಕಳೇ ಇಂದಿನ ಪ್ರಜೆಗಳು
ಸಂವಾದದ ನಡುವೆ ‘ಇಂದಿನ ಮಕ್ಕಳೇ ಇಂದಿನ ಪ್ರಜೆಗಳು’ ಎಂದು ಮಕ್ಕಳು ಘೋಷಣೆ ಕೂಗುತ್ತಿದ್ದರೆ, ‘ಮುಂದಿನ ಪ್ರಜೆಗಳು’ ಎಂದು ಮುಖ್ಯಮಂತ್ರಿ ಸರಿಪಡಿಸಲು ಯತ್ನಿಸಿ­ದರು. ಅದಕ್ಕೆ ಮಕ್ಕಳು, ಇಲ್ಲ ಸಾರ್‌...ಇಂದಿನ ಪ್ರಜೆಗಳು ಎಂದು  ಹೇಳಿದಾಗ, ಸರಿ ಸರಿ ಒಪ್ಪಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT