ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮೋತ್ಸವದಲ್ಲಿ ಇಂದು ನನ್ನ ಆಯ್ಕೆ

Last Updated 31 ಜನವರಿ 2016, 19:30 IST
ಅಕ್ಷರ ಗಾತ್ರ

ನನಗೆ ಹೋಗಿ ನೋಡಿಬಿಡಲೇ ಬೇಕು ಎನ್ನುವಂಥ ಯಾವ ಸಿನಿಮಾಗಳೂ ಕಾಣಿಸಲಿಲ್ಲ. ಹೊಸ ಸಿನಿಮಾಗಳು ಎನ್ನುವ ಕಾರಣಕ್ಕೆ ಕುತೂಹಲವಿದೆಯಷ್ಟೇ. ಅದೂ ಅಲ್ಲದೆ ಅಂತರರಾಷ್ಟ್ರೀಯ ಚಿತ್ರಗಳನ್ನು ನೋಡಲಿಕ್ಕೆ ಸಿನಿಮೋತ್ಸವಗಳು ಉತ್ತಮ ಅವಕಾಶವನ್ನು ನೀಡುತ್ತವೆ.

ಅಂದಹಾಗೆ ಈ ಮೊದಲೇ ಈ ಯಾವ ಸಿನಿಮಾಗಳನ್ನೂ ನಾನು ನೋಡಿಲ್ಲ. ನಿರ್ದೇಶಕರ ಬಗ್ಗೆ ಗೊತ್ತಿರುವುದರಿಂದ, ಕಥೆಯ ಎಳೆ ವಿಶೇಷ ಎನಿಸುವಂಥದ್ದಾಗಿರುವ ಕಾರಣ ಯಾವ ಚಿತ್ರ ಚೆನ್ನಾಗಿರಬಹುದು ಎಂದು ಊಹೆ ಮಾಡಿ ಮೂರು ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ.
***
ವಿದಾಯ
ನಿರ್ದೇಶನ ಪಿ. ಶೇಷಾದ್ರಿ  ವರ್ಷ 2015
ದೇಶ ಭಾರತ (ಕನ್ನಡ) ಸಮಯ ಸಂಜೆ 6.00
ಪರದೆ 4  ಅವಧಿ 101 ನಿಮಿಷ  

ನಿರಂತರವಾಗಿ ಶ್ರದ್ಧೆಯಿಂದ, ಪ್ರೀತಿಯಿಂದ ಕೆಲಸಮಾಡುತ್ತಾ, ನಿರಂತರವಾಗಿ ಪ್ರಶಸ್ತಿಗಳನ್ನು ಗೆದ್ದುಕೊಳ್ಳುತ್ತಾ ಬಂದವರು ಪಿ.ಶೇಷಾದ್ರಿ. ಅದೂ ಅಲ್ಲದೆ ಕನ್ನಡ ಸಿನಿಮಾವನ್ನು ನೋಡಿ ಪ್ರೋತ್ಸಾಹಿಸುವುದು ನಮ್ಮ ಧರ್ಮ, ಕರ್ತವ್ಯ. ಹೀಗಾಗಿ ವಿದಾಯ ಸಿನಿಮಾವನ್ನು ನೋಡುವ ಆಸೆ ಇದೆ.

ಕಥಾಸಾರ: ತನ್ನ ರೋಗಪೀಡಿತ ಗಂಡನ ಭಾವಗಳನ್ನು ಮತ್ತೆ ಬದುಕಿಸಿ ಅವನನ್ನು ಜೀವಂತವಾಗಿರಿಸುವ ಯತ್ನ ಮಾಡುವ ಹೆಣ್ಣೊಬ್ಬಳ ಭಾವ–ಸಂಘರ್ಷಗಳ ಕಥೆಯಿದು. ಆತನಿಗೋ, ಸಹಿಸಲಸಾಧ್ಯವಾದ ನೋವು ತುಂಬಿ ಬದುಕಿನಿಂದ ಮುಕ್ತವಾಗುವ, ಗೌರವಯುತ ಮರಣವನ್ನಪ್ಪುವ ತವಕ.
***
ವೋಲ್ಕೆನೊ
ನಿರ್ದೇಶನ ಜಯ್ರೊ ಬುಸ್ತಾಮಂಟೆ ವರ್ಷ 2015
ದೇಶ ಫ್ರಾನ್ಸ್‌ ಸಮಯ ಸಂಜೆ 6.20
ಪರದೆ 7  ಅವಧಿ 93 ನಿಮಿಷ  

2ನೇ ಮಹಾಯುದ್ಧಕ್ಕೆ ಸಂಬಂಧಿಸಿದ ಇದುವರೆಗಿನ ಸಿನಿಮಾಗಳಲ್ಲಿ ಯಹೂದಿಗಳನ್ನು ಪಾಪದ, ಹೋರಾಡಿ ಮಡಿಯುವ ಮನುಷ್ಯರನ್ನಾಗಿ ಮಾತ್ರ ಕಾಣಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಯಹೂದಿಗಳ ಇನ್ನೊಂದು ಶೇಡ್‌ (ಮುಖವನ್ನು) ಅನ್ನು ಅನಾವರಣ ಮಾಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಗಂಡ ಹೆಂಡತಿ ಎನ್ನುವ ಎರಡು ಜೀವಗಳನ್ನು ಮುಖ್ಯವಾಗಿರಿಸಿಕೊಂಡು ಹೆಣೆಯಲಾದ ಕಥೆ ಇದು. ಹೆಂಡತಿ ಇಷ್ಟ ಇಲ್ಲ ಎನ್ನುವ ಕಾರಣಕ್ಕೆ ಅವಳನ್ನು ಕ್ಯಾಂಪ್‌ಗೆ ದೂಡುವ ಕಥಾನಕ ಇದರಲ್ಲಿದೆ. ಯಹೂದಿಗಳಿಗೆ ಸಂಬಂಧಿಸಿದ ಇಂಥ ವಿಷಯವನ್ನು ಇದೇ ಮೊದಲಬಾರಿಗೆ ನಾನು ಕೇಳುತ್ತಿದ್ದೇನೆ. ಹೀಗಾಗಿ ಆ ಚಿತ್ರವನ್ನು ನೋಡಬೇಕು ಅನ್ನಿಸುತ್ತಿದೆ.
***
ಜಿಯಾ ಜಾಂಗ್‌ಕೆ: ಎ ಗೈ ಫ್ರಂ ಫಿನ್ಯಾಂಗ್‌
ನಿರ್ದೇಶನ ವಾಲ್ಟರ್‌ ಸೆಲ್ಲೆಸ್‌ ವರ್ಷ 2014
ದೇಶ ಬ್ರೆಜಿಲ್‌ ಸಮಯ ರಾತ್ರಿ 8.30
ಪರದೆ 9  ಅವಧಿ 103 ನಿಮಿಷ  

ಬ್ರೆಜಿಲ್‌ನ ವಾಲ್ಟರ್‌ ಸೆಲ್ಲೆಸ್‌ ನಾನು ಅತ್ಯಂತ ಇಷ್ಟ ಪಡುವ ನಿರ್ದೇಶಕ ಎನ್ನುವ ಕಾರಣಕ್ಕೆ ಈ ಚಿತ್ರ ನೋಡುವ ಹಂಬಲ.  ಆತ ‘ಬಿಹೈಂಡ್‌ ದಿ ಸನ್‌’ ಹಾಗೂ ‘ಸೆಂಟ್ರಲ್‌ ಸ್ಟೇಶನ್‌’ ಎನ್ನುವ ಸುಂದರವಾದ ಸಿನಿಮಾ ಮಾಡಿದ್ದಾನೆ. ಆಸ್ಕರ್ ಪ್ರಶಸ್ತಿ ಕೂಡ ಸಿಕ್ಕಿದೆ. ಅವನು ಮಾಡುವ ಸಿನಿಮಾಗಳು ನನಗೆ ಭಾರಿ ಇಷ್ಟ. ಆತ ಒಬ್ಬ ಭರವಸೆಯ ನಿರ್ದೇಶಕ. ಅವನು ಏನೇ ಮಾಡಿದರು ನನಗಿಷ್ಟವಾಗುತ್ತದೆ. ಕಥೆ, ಯಾವ ರೀತಿಯ ಪಾತ್ರಗಳಿವೆ ಗೊತ್ತಿಲ್ಲ. ಆದರೆ ಅವನು ಮಾಡಿದ ಸಿನಿಮಾ ನೋಡುವ ಆಸೆ ನನಗೆ.

ಕಥಾಸಾರ: ಚೀನಾದ ಯುವ ನಿರ್ದೇಶನರೊಬ್ಬರ ವ್ಯಕ್ತಿ ಚಿತ್ರವನ್ನು ಹೊಂದಿದ ಸಾಕ್ಷ್ಯಚಿತ್ರ ಇದಾಗಿದೆ. ವಾಲ್ಟರ್‌ ಸೆಲ್ಲೆಸ್‌ ಅವರ ಈ ಸಾಕ್ಷ್ಯಚಿತ್ರ ನೆನಪು ಮತ್ತು ಸಿನಿಮಾದ ಪ್ರಶ್ನೆಯನ್ನು ಉತ್ತರಿಸಲು ಯತ್ನಿಸುತ್ತದೆ. ಉತ್ತರ ಚೀನಾದ ಷಾನ್‌ ಕ್ಸೀ ಪ್ರಾಂತ್ಯದಿಂದ ತನ್ನ ಚಿತ್ರದ ಹೊರಾಂಗಣ ಸ್ಥಳಗಳವರೆಗೆ ಜಾಂಗ್‌ಕೆ ನಡೆಸಿದ ಯಾತ್ರೆಯನ್ನು ಅನಾವರಣಗೊಳಿಸುತ್ತಾ ನಡೆಯುವುದು ಈ ಚಿತ್ರ. ಕಲಾವಿದರು ಮತ್ತು ಸಹಾಯಕರ ನೆರವಿನಿಂದ ತನ್ನ ಚಿತ್ರಗಳ ಹಿಂದಿರುವ ಸ್ಫೂರ್ತಿ ಮೂಲಗಳನ್ನು ಮರು ಅರಸುತ್ತಾ ಹೊರಡುವ ಜಾಂಗ್‌ಕೆ ಸಂಕ್ರಮಣ ಸ್ಥಿತಿಯೊಂದರಲ್ಲಿ ಇರುವ ಸಂಸ್ಕೃತಿಯ ಆಶಯಗಳನ್ನು ಅನಾವರಣಗೊಳಿಸುತ್ತಾ ಸಾಗುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT