ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಸಿಬಿ ತನಿಖೆ ವ್ಯರ್ಥ ಸಿಬಿಐಯೇ ಸೂಕ್ತ

ಉಪ ಲೋಕಾಯುಕ್ತ ಅಡಿ, ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ವಾದ
Last Updated 27 ಜೂನ್ 2015, 19:30 IST
ಅಕ್ಷರ ಗಾತ್ರ

ಉಡುಪಿ/ಮಂಡ್ಯ: ಉನ್ನತ ಅಧಿಕಾರಿಯೊಬ್ಬರನ್ನು ಲೋಕಾಯುಕ್ತರ ಮನೆಗೆ ಕರೆಸಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ತನಿಖೆಯನ್ನು ರಾಜ್ಯ ಪೊಲೀಸ್‌ ಇಲಾಖೆ ಕೇಂದ್ರ ಅಪರಾಧ ವಿಭಾಗಕ್ಕೆ (ಸಿಸಿಬಿ) ವಹಿಸಿರುವ ಬಗ್ಗೆ ಲೋಕಾಯುಕ್ತದಲ್ಲಿಯೇ ಅಪಸ್ವರ ವ್ಯಕ್ತವಾಗಿದೆ.
ಇದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

‘ಸರ್ಕಾರದ ಹಿರಿಯ ಅಧಿಕಾರಿಯೊಬ್ಬರನ್ನು ಲೋಕಾಯುಕ್ತರ ನಿವಾಸಕ್ಕೆ ಕರೆದು ₨ 1 ಕೋಟಿ ಲಂಚ ಕೇಳಿದ ಪ್ರಕರಣದ ತನಿಖೆ ಹೊಣೆಯನ್ನು ಸಿಸಿಬಿಗೆ ವಹಿಸಿರುವುದು ಸಮಂಜಸವಲ್ಲ’ ಎಂದು ಉಪ ಲೋಕಾಯುಕ್ತ ಸುಭಾಷ್‌. ಬಿ ಅಡಿ ಉಡುಪಿಯಲ್ಲಿ ಹೇಳಿದ್ದಾರೆ.

‘ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ನಿವೃತ್ತ ಲೋಕಾಯುಕ್ತ ಸಂತೋಷ ಹೆಗ್ಡೆ ಮಂಡ್ಯದಲ್ಲಿ ಒತ್ತಾಯಿಸಿದ್ದಾರೆ.

‘ಉಡುಪಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅಡಿ, ‘ಲೋಕಾಯುಕ್ತರು ಏಕೆ ಇಷ್ಟು ಆತುರದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿಯುತ್ತಿಲ್ಲ’ ಎಂದರು.

‘ಶುಕ್ರವಾರ ಮಧ್ಯಾಹ್ನ ನಾನು ಸಭೆಯೊಂದರಲ್ಲಿ ಭಾಗವಹಿಸಿದ್ದ ವೇಳೆ ಲೋಕಾಯುಕ್ತರು ದೂರವಾಣಿ ಕರೆ ಮಾಡಿದರು. ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ತಮ್ಮ ಮಗನ ಹೆಸರು ಕೇಳಿಬಂದಿರುವುದರಿಂದ ತನಿಖೆಯನ್ನು ಬೇರೊಂದು ಸಂಸ್ಥೆಗೆ  ನೀಡುತ್ತೇನೆ ಎಂದರು. ಆದರೆ ಸಿಸಿಬಿಗೆ ವಹಿಸುತ್ತೇನೆ ಎಂದು ತಿಳಿಸಲಿಲ್ಲ. ಸಿಸಿಬಿ ಎಂದು ಹೇಳಿದ್ದರೆ ನಾನು ಒಪ್ಪುತ್ತಿರಲಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಸಿಸಿಬಿ ರಾಜ್ಯ ಪೊಲೀಸ್‌ನ  ಒಂದು ಭಾಗ. ಅದರ ಅಧಿಕಾರಿಗಳು ಲೋಕಾಯುಕ್ತ ವ್ಯವಸ್ಥೆಯ ವ್ಯಾಪ್ತಿಯೊಳಗೆ  ಬರುತ್ತಾರೆ. ಆದ್ದರಿಂದ ಅವರಿಗೇ ತನಿಖೆ ವಹಿಸುವುದು ಎಷ್ಟು ಸರಿ?’ ಎಂದು  ಪ್ರಶ್ನಿಸಿದರು.

‘ತನಿಖೆ ನಡೆಸುವಂತೆ ಈಗಾಗಲೇ ಎಸ್ಪಿ ಅವರಿಗೆ ಆದೇಶ ನೀಡಿದ್ದೇನೆ. ಈಗ ನಡೆಯುತ್ತಿರುವ ತನಿಖೆಯಲ್ಲಿ ಮಧ್ಯಪ್ರವೇಶಿಸುವುದು ಬೇಡ ಎಂದು ಹೇಳಿದ್ದೆ. ಎರಡು ತನಿಖೆ ಮಾಡಿಸಬಹುದು ಎಂಬ ಸಲಹೆಯನ್ನೂ ನೀಡಿದ್ದೆ. ಅಲ್ಲದೆ ತನಿಖಾಧಿಕಾರಿ ಅವರೊಂದಿಗೆ ಈಗಾಗಲೇ ಈ ವಿಷಯದ ಸಂಬಂಧ ಎರಡು ಬಾರಿ ಮಾತನಾಡಿದ್ದೇನೆ’ ಎಂದರು.

ಆರೋಪಿಗೇ ತನಿಖೆ ಜವಾಬ್ದಾರಿ ಬೇಡ- ಸಂತೋಷ್‌ ಹೆಗ್ಡೆ: ಸಿಸಿಬಿ ಜಂಟಿ ಆಯುಕ್ತ ಚಂದ್ರಶೇಖರ್ ಮೇಲೂ ಆರೋಪಗಳಿವೆ. ಅವರ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದ್ದು, ವಿಚಾರಣೆ ಪ್ರಗತಿಯಲ್ಲಿದೆ. ಅಂತಹ ಅಧಿಕಾರಿಯಿಂದ ವಿಚಾರಣೆ ನಡೆಸುವುದು ಸೂಕ್ತವಲ್ಲ ಎಂದು ನಿವೃತ್ತ ಲೋಕಾಯುಕ್ತ ಎನ್‌. ಸಂತೋಷ್‌ ಹೆಗ್ಡೆ ಮಂಡ್ಯದಲ್ಲಿ ಹೇಳಿದರು.

ಲೋಕಾಯುಕ್ತರ ಮೇಲೆಯೇ ಆರೋಪ ಬಂದಿರುವುದರಿಂದ ಅವರೇ ವಿಚಾರಣೆಗೆ ಒಪ್ಪಿಸುವುದು ಸರಿಯಲ್ಲ. ಪ್ರಕರಣವನ್ನು ಸರ್ಕಾರಕ್ಕೆ ಹಸ್ತಾಂತರಿಸಿ, ಸಿಬಿಐಗೆ ವಹಿಸಬೇಕಿತ್ತು ಎಂದರು.


ನನ್ನಿಂದ ತನಿಖೆ ಸರಿಯಲ್ಲ
ತನಿಖೆಯನ್ನು ಸಿಸಿಬಿಗೆ ವಹಿಸಿರುವ ಆದೇಶ ಮರು ಪರಿಶೀಲಿಸುವಂತೆ ಸಿಸಿಬಿ ಜಂಟಿ ಪೊಲೀಸ್ ಕಮಿಷನರ್ ಚಂದ್ರಶೇಖರ್ ಅವರು ಲೋಕಾಯುಕ್ತ ವೈ.ಭಾಸ್ಕರರಾವ್‌ ಅವರಿಗೆ ಪತ್ರ ಬರೆದಿದ್ದಾರೆ.

‘ಮಾವ ರಾಮಾಂಜನೇಯ ಅವರು ಬೆಂಗಳೂರು ವಿಶೇಷ ಜಿಲ್ಲಾಧಿಕಾರಿಯಾಗಿದ್ದಾಗ ಲೋಕಾಯುಕ್ತ ದಾಳಿ ನಡೆದಿತ್ತು. ಈ ಬಗ್ಗೆ ಇಲಾಖಾ ತನಿಖೆ ನಡೆಯುತ್ತಿದೆ. ಹೀಗಿರುವಾಗ ಭ್ರಷ್ಟಾಚಾರ ಪ್ರಕರಣದ ತನಿಖೆ ಹೊಣೆ ನನಗೆ ವಹಿಸಿದರೆ, ಅನುಮಾನ ವ್ಯಕ್ತವಾಗುವ ಸಾಧ್ಯತೆ ಇದೆ. ಹೀಗಾಗಿ ಆದೇಶಮರುಪರಿಶೀಲಿಸಬೇಕು’ ಎಂದು ಅವರು ಕೋರಿದ್ದಾರೆ.
***************************
ಲೋಕಾಯುಕ್ತರ ಮನೆಯ ಹೆಸರೂ ಕೇಳಿಬಂದಿರುವುದರಿಂದ ನಿಷ್ಪಕ್ಷಪಾತ ತನಿಖೆಯಾಗಬೇಕು. ತನಿಖೆಯ ವಿಧಾನ ಸರಿ ಎಂದು ಜನಕ್ಕೆ ಅನಿಸಬೇಕು.
-ಸುಭಾಷ್‌ ಅಡಿ, ಉಪ ಲೋಕಾಯುಕ್ತ

ಲೋಕಾಯುಕ್ತ ಸಂಸ್ಥೆಯಲ್ಲಿಯೇ ಭ್ರಷ್ಟಾಚಾರ ಇದೆ ಎಂಬ ಸಂಶಯ ಬಂದರೆ, ಜನಕ್ಕೆ ಅದರ ಮೇಲಿನ ನಂಬಿಕೆ ಮಣ್ಣು ಪಾಲಾಗುತ್ತದೆ
-ಸಂತೋಷ್‌ ಹೆಗ್ಡೆ, ನಿವೃತ್ತ ಲೋಕಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT