ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಜನಶೀಲ ವಾಗ್ವಾದ ಅಗತ್ಯ

ಸಾಹಿತ್ಯ ಸಂಭ್ರಮದ ಸಮಾರೋಪದಲ್ಲಿ ಮೊಯಿಲಿ ಪ್ರತಿಪಾದನೆ
Last Updated 18 ಜನವರಿ 2015, 19:30 IST
ಅಕ್ಷರ ಗಾತ್ರ

ಧಾರವಾಡ: ‘ಸೃಜನಶೀಲ ವಾಗ್ವಾದಗಳು ನಡೆ­ಯದೇ ಹೋದಲ್ಲಿ ನಾಗರಿಕತೆಗೆ ಜಡ್ಡು ಹಿಡಿಯುತ್ತದೆ. ಹೀಗಾಗಿ ಯುವ ಜನತೆಯನ್ನೂ ಒಳಗೊಳ್ಳುವಂತಹ ಚಿಂತನೆಗಳು ನಡೆಯಬೇಕು’ ಎಂದು ಸಂಸದ ಹಾಗೂ ಸಾಹಿತಿ ಎಂ.ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟರು.

ಭಾನುವಾರ ನಡೆದ ಸಾಹಿತ್ಯ ಸಂಭ್ರಮದ ಸಮಾರೋಪ ಸಮಾರಂಭ­ದಲ್ಲಿ ಮಾತನಾಡಿದ ಅವರು, ‘ಹೊಸ ಚಿಂತನೆಗಳು ಹಳೆ ಚಿಂತನೆಗಳಿಗೆ ಪೂರಕ­ವಲ್ಲದಿ­ರಬಹುದು. ಆದರೆ, ಅವು ಪರ್ಯಾಯ ಸ್ಥಾನ ಪಡೆಯಬೇಕು. ಆಗ ಮಾತ್ರ ಯುವ ಜನಾಂಗ ಅದರಲ್ಲಿ ಸೇರುತ್ತದೆ’ ಎಂದು ಹೇಳಿದರು.

‘ಸಾಹಿತ್ಯ ವಿಷಯಗಳ ಪ್ರಸ್ತುತತೆ­ಯನ್ನು ಹೇಗೆ ನವೀಕರಿಸಬಹುದು ಎಂಬು­ದನ್ನು ನಾವು ಪುನರ್‌ ವ್ಯಾಖ್ಯಾನ ಮಾಡುವ ಕುರಿತು ಹೆಚ್ಚು ಚಿಂತನೆ ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯದ ಹಲವೆಡೆ ನಡೆಯುವ ಸಾಹಿತ್ಯ ಸಮ್ಮೇಳನ­ಗಳ ಉತ್ಪತ್ತಿ ಏನು ಎಂಬುದು ಸ್ಪಷ್ಟವಾಗಬೇಕು’ ಎಂದರು.

‘ಸಾಹಿತ್ಯ ಮತ್ತು ಸಂಸ್ಕೃತಿ ಮಾತ್ರ ಮನುಷ್ಯನನ್ನು ಮಾನವೀಯತೆಯತ್ತ ಹೊರಳುವಂತೆ ಮಾಡುತ್ತದೆ. ಹೀಗಾಗಿ ಅದರಿಂದ ಹೊರಗುಳಿಯುವ ಬದಲು, ಅದನ್ನು ನಮ್ಮದಾಗಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಯುವ ಜನತೆಯನ್ನು ತನ್ನ ಸತ್ವಗಳಿಂದ ಸೆಳೆಯುವ ಸಾಮರ್ಥ್ಯ ಆಧುನಿಕ ಕನ್ನಡಕ್ಕೆ ಇದೆ ಎಂಬುದು ನನ್ನ ಪೂರ್ಣ ವಿಶ್ವಾಸ’ ಎಂದರು.

‘ಯಾವುದೇ ನಾಗರಿಕ ಸಮುದಾಯ ಆತ್ಮರತಿಯಲ್ಲಿ ತೊಡಗಿದರೆ ಅಲ್ಲಿ ಹೊಸತನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಎಲ್ಲವೂ ಎಲ್ಲಾ ಧರ್ಮ, ನಾಗರಿಕತೆ, ಸಾಹಿತ್ಯದಲ್ಲಿ ಇದೆ ಎಂದಾದರೆ ಹೊಸ­ತನ್ನು ಅನ್ವೇಷಣೆ ಮಾಡುವ ಅವಶ್ಯಕತೆ­ಯಾದರೂ ಏನು ಎಂಬ ಪ್ರಶ್ನೆ ಎದುರಾ­ಗುತ್ತದೆ. ಹೊಸ ಆವಿಷ್ಕಾರದ ಜಗತ್ತು ನೋಡುವ ಅಗತ್ಯ ಹಾಗೂ ಅನಿವಾ­ರ್ಯತೆ ಹಿಂದಿಗಿಂತಲೂ ಇಂದು ಅಧಿಕ­ವಾ­ಗಿದೆ.
ಜನರಲ್ಲಿ ಕುತೂಹಲ ಕೆರಳಿ­ಸುವ ಕುರಿತು ಆಲೋಚನೆ ಮಾಡಬೇಕಾದ ಅವಶ್ಯಕತೆ ಇದೆ’ ಎಂದು ಮೊಯಿಲಿ ಹೇಳಿದರು.

‘ಸೃಜನಶೀಲ ಪ್ರತಿಭೆಗಳು ಮುರುಟಿ ಹೋದರೆ ಉತ್ತಮವಾದ ಸಾಹಿತ್ಯ ಕೃತಿ ಎಂದೂ ಬರಲು ಸಾಧ್ಯವಿಲ್ಲ. ಯಾವುದೇ ಸಾಹಿತ್ಯ ಸಂತೃಪ್ತಿಯನ್ನು ಹೊಂದಿದರೆ ಅದರ ಅವಸಾನದಂತೆ; ಆತ್ಮಾವಲೋ­ಕನದ ಪ್ರವೃತ್ತಿಗೆ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ಪರಂಪರೆಯ ತಳಹದಿಯ ಮೇಲೆ ಹೊಸತನ್ನು ಸಾಧಿ­ಸುವ ಮನೋಭೂಮಿಕೆ ಇರಬೇಕು’ ಎಂದರು.

ಇದಕ್ಕೂ ಮೊದಲು ಸಂಭ್ರಮದ ಅವಲೋಕನ ನಡೆಸಿದ ಎಂ. ರಾಮಚಂದ್ರ, ‘ಸಂಭ್ರಮದಲ್ಲಿ ವಾಚಕರ ಸಂಖ್ಯೆ ಕಡಿತಗೊಳಿಸಿ ಗಾಯಕರ ಸಂಖ್ಯೆ ಹೆಚ್ಚಿಸುವ ಅಗತ್ಯವಿದೆ. ಕಾರ್ಯಕ್ರಮ ಒತ್ತೊತ್ತಾಗಿದ್ದವು. ಹೀಗಾಗಿ ವಿಷಯ ವಿಸ್ತರಣೆಗೆ ಹೆಚ್ಚು ಅವಕಾಶ ಸಿಗಲಿಲ್ಲ. ಒಟ್ಟಾರೆಯಾಗಿ ಮೂರು ದಿನಗಳ ಸಮಾರಂಭ ವಿಪುಲತೆ, ವಿವಿಧತೆ ಹಾಗೂ ನವೀನತೆಯಿಂದ ಇದ್ದವು ಎಂಬುದು ವಿಶೇಷ. ಆಡಂಬರ ಹಾಗೂ ಔಪಚಾರಿಕತೆಗೆ ಹೆಚ್ಚು ಅವಕಾಶ ಇರಲಿಲ್ಲ ಹಾಗೂ ಆಯೋಜಕರಿಗೆ ಸ್ಪಷ್ಟವಾದ ಉದ್ದೇಶವಿದ್ದ ಕಾರಣದಿಂದ ಸಂಭ್ರಮ ಯಶಸ್ವಿಯಾಗಿದೆ’ ಎಂದರು.

ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಸಾಹಿತ್ಯ  ಸಂಭ್ರಮ ಟ್ರಸ್ಟ್‌ ಅಧ್ಯಕ್ಷ ಗಿರಡ್ಡಿ ಗೋವಿಂದರಾಜ, ‘ಬರುವ ವರ್ಷ ಮತ್ತಷ್ಟು ಹೊಸ ಪ್ರಯೋಗಗಳೊಂದಿಗೆ ಮತ್ತೆ ಹಾಜರಾ­ಗಲಿದ್ದೇವೆ. ಆದರೆ ಸಾಹಿತ್ಯಾಸಕ್ತರು ಸಮಯ ಪರಿಪಾಲನೆಯೊಂದಿಗೆ ಹೆಚ್ಚು ಶಿಸ್ತುಬದ್ಧವಾಗಿದ್ದಲ್ಲಿ ಕಾರ್ಯಕ್ರಮ ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ನಡೆಸಲು ಸಾಧ್ಯ’ ಎಂದರು. ಸಮಾರಂಭದಲ್ಲಿ ಚೆನ್ನವೀರ ಕಣವಿ, ಎಂ.ಎಂ.ಕಲಬುರ್ಗಿ, ಗಿರೀಶ ಕಾರ್ನಾಡ, ಲೋಹಿತ್‌ ನಾಯ್ಕರ್‌  ಉಪಸ್ಥಿತರಿದ್ದರು.

ಅಧರ್ಮದ ‘ಘರ್‌ ವಾಪಸಿ’
ಕಾರ್ಯಕ್ರಮದ ನಂತರ ಸುದ್ದಿಗಾರ­ರೊಂದಿಗೆ ಮಾತನಾಡಿದ ವೀರಪ್ಪ ಮೊಯಿಲಿ ‘ಸಂಘ ಪರಿವಾರ ನಡೆಸುತ್ತಿರುವ ‘ಘರ್‌ ವಾಪಸಿ’ ಕಾರ್ಯಕ್ರಮ ಅಧರ್ಮ­ವಾದದ್ದು. ಹಾಗೆಯೇ, ಗೋಡ್ಸೆಯ ವೈಭವೀಕರಣ ಅನೈತಿಕವಾದದ್ದು. ಮುಂದಿನ ಪೀಳಿಗೆಗೆ ಕೆಟ್ಟ ಮಾದರಿ ಆಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT