ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಜನಶೀಲ ವಿದ್ವಾಂಸ ನಾಮವರ ಸಿಂಗ್

ವ್ಯಕ್ತಿ
Last Updated 27 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಥಟ್ಟನೆ ನೋಡಿದರೆ, ಒಂದು ಕೋನದಿಂದ ಕಲಾವಿದ ಕೆ.ಕೆ. ಹೆಬ್ಬಾರರನ್ನು, ಇನ್ನೊಂದು ಕೋನದಿಂದ ಜ್ಯೋತಿ ಬಸು ಅವರನ್ನು ಹೋಲುವ ಈ ಮಹನೀಯ ಹೆಸರಿಗೆ ತಕ್ಕಂತೆ ‘ಹೆಸರಾಂತ ವ್ಯಕ್ತಿ’.  ಇವರು ಪ್ರೊ. ನಾಮವರ ಸಿಂಗ್. ಹಿಂದಿ ಭಾಷಿಕ ಸಾಹಿತ್ಯ ವಲಯದ ಶ್ರೇಷ್ಠ ಆಲೋಚಕ. ಸಾಂಪ್ರದಾಯಿಕತೆಯ ವಿರುದ್ಧ ನಿರಂತರ ಸಂಘರ್ಷದಲ್ಲಿ ತೊಡಗಿರುವ ಸೃಜನಶೀಲ. ಸಮಾಜಮುಖಿ ಚಿಂತಕ. ಮತ್ತು ಪ್ರಖರ ಮಾರ್ಕ್ಸ್ ವಾದಿ. 

ಅವರಿಗೆ ಚರ್ಚೆ ಎಂದರೆ ಹಸಿವು ಮರೆಯುವಷ್ಟು ಆಸಕ್ತಿ. ವಿಮರ್ಶೆ ಎಂದರೆ ಎಲ್ಲಿಲ್ಲದ ಹುಕಿ. ಮಾತು ಎಂದರೆ ಪ್ರೀತಿ. ಅದು ಕಾಡು ಹರಟೆಯಲ್ಲ, ಅರ್ಥಪೂರ್ಣ ಸಂವಾದ. ತಾವು ನಂಬಿದ ದಾರಿಯನ್ನು ಮೌಲ್ಯಗಳನ್ನು ಬಲವಾಗಿ ಪ್ರತಿಪಾದಿಸುವ ಅವರ ಪರಿಯೇ ಅನನ್ಯ. ಆದರೆ, ಎಂದಿಗೂ ಅವರು ತಮ್ಮ ಅಭಿಪ್ರಾಯವನ್ನು ಇತರರ ಮೇಲೆ ‘ಹೇರು’ವುದಿಲ್ಲ. ಎದುರಿಗಿರುವವರು ಒಪ್ಪುವ ರೀತಿಯಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾರೆ ಈ ಪ್ರೊಫೆಸರ್ ಸಾಹೇಬರು. ಅವರ ಮಾತೆಂದರೇ ಹಾಗೆ. ಅದು ಸ್ಫಟಿಕದ ಶಲಾಕೆ. 

ಅಂತೆಯೇ ಅವರು ಹಿಂದೀ ಸಾಹಿತ್ಯದ ಸುಪ್ರಸಿದ್ಧ ಕತೆಗಾರರು, ಕವಿಗಳು, ಕಾದಂಬರಿಕಾರರು ಇತ್ಯಾದಿ ಎಲ್ಲರೊಂದಿಗೆ ಆಗಾಗ ‘ಸಂವಾದ’ ಏರ್ಪಡಿಸುವುದುಂಟು. ಇದು ನಾಲ್ಕು ದಶಕಗಳಿಂದಲೂ ನಡೆದುಬಂದ ಪರಿಪಾಠ. ಅವರು ಭಾಗವಹಿಸುವ ‘ಸಂವಾದ’ಗಳು ಬಲು ವಿಶೇಷದವು. ಆ ‘ಮಾತುಕತೆ’ಯನ್ನು ಪುಸ್ತಕರೂಪದಲ್ಲಿ ಆಸಕ್ತರಿಗೆ ಒದಗಿಸುತ್ತ ಬಂದಿರುವುದು ಓದುಗರಿಗೆ ಅವರು ಮಾಡಿದ ದೊಡ್ಡ ಉಪಕಾರ.    
                      
ಹೀಗೆ ಕಳೆದ ಆರು ದಶಕಗಳಿಂದ ಹಿಂದಿ ಸಾಹಿತ್ಯ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಪ್ರೊ. ನಾಮವರ ಸಿಂಗ್ ಸಾಹಿತ್ಯಕ್ಕೆ ಸಂಬಂಧಪಟ್ಟ ಹಾಗೆ ‘ಹೊಸ ಪರಂಪರೆಯ ಶೋಧ’ದಲ್ಲಿ ಸಾಗಿರುವವರು. ‘ಆಲೋಚನಾ’ ಎಂಬ ಸಾಹಿತ್ಯ ತ್ರೈಮಾಸಿಕದ ಸಂಪಾದಕರೂ ಆಗಿರುವ ಇವರು ತಮ್ಮ ಆಲೋಚನೆಯನ್ನು ಸ್ಪಷ್ಟವಾಗಿ ಓದುಗರಿಗೆ ತಲಪಿಸುವವರು. 

ಅವರ ಜೀವನೋತ್ಸಾಹ ದೊಡ್ಡದು. ತಮ್ಮ ಸಂಪರ್ಕಕ್ಕೆ ಬರುವವರನ್ನು ‘ಅಮಿತ ಜೀವನೋತ್ಸಾಹಿ’ಯನ್ನಾಗಿ ಪರಿವರ್ತಿಸುವಂಥ ಅಪೂರ್ವ ಜೀವನೋತ್ಸಾಹ ಅದು. ಅವರು ಹುಟ್ಟಿದ ಊರೇ ಜೀವನೋತ್ಸಾಹದ ತಾಣ (ಜನನ: 28 ಜುಲೈ 1927). ಅದು ‘ಜೀವನಪುರ’. ಉತ್ತರಪ್ರದೇಶದ ವಾರಾಣಸಿ ಜಿಲ್ಲೆಯ ಒಂದು ಹಳ್ಳಿ. ಅಲ್ಲಿಯ ಜೀವದಾಯಿ ರೈತಾಪಿ ಕುಟುಂಬಕ್ಕೆ ಸೇರಿದ ಈ ಜೀವಪರ ಚಿಂತಕ ಹುಟ್ಟೂರಲ್ಲೇ ಓದು ಆರಂಭಿಸಿ, ಹೈಸ್ಕೂಲು ಕಾಲೇಜು ಶಿಕ್ಷಣವನ್ನು ವಾರಾಣಸಿಯಲ್ಲಿ ಪೂರೈಸಿದರು.

ಮುಂದೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಂ.ಎ. (ಹಿಂದಿ) ಪದವಿ ಮತ್ತು 1953ರಲ್ಲಿ ಅದೇ ವಿಶ್ವವಿದ್ಯಾಲಯದಿಂದ ಹಿಂದಿ ಸಾಹಿತ್ಯದಲ್ಲಿ ಪಿಎಚ್‌.ಡಿ ಪಡೆದರು. ಡಾಕ್ಟರೇಟ್ ಪಡೆದರೂ ಅವರಿಗೆ ‘ಪ್ರೊಫೆಸರ್’ ಎಂದು ಕರೆಸಿಕೊಳ್ಳುವುದರಲ್ಲೇ ಖುಷಿ. ಅಷ್ಟೇ ಅಲ್ಲ, ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಆರಂಭಿಸಿ, ಮುಂದೆ ಸಾಗರ್ ವಿಶ್ವವಿದ್ಯಾಲಯದಲ್ಲೂ ಕೆಲಸ ಮಾಡಿದರು. ಆ ನಂತರ ಜೋಧಪುರ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥನಾಗಿ ದುಡಿದ ಅವರು ಕೊನೆಯಲ್ಲಿ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥನಾಗಿ ನಿವೃತ್ತರಾದರು.

ನಂತರದಲ್ಲಿ ಗುಜರಾತಿನ ವಾರ್ಧಾದಲ್ಲಿ ‘ಮಹಾತ್ಮಾ ಗಾಂಧೀ ಅಂತರರಾಷ್ಟ್ರೀಯ ಹಿಂದಿ ವಿಶ್ವವಿದ್ಯಾಲಯ’ದ ಕುಲಪತಿ ಸ್ಥಾನ ಅಲಂಕರಿಸಿದರು. ಈ ವಿಶ್ವವಿದ್ಯಾಲಯದ ಬೋಧನಾ ಕ್ರಮದ ಸುಧಾರಣಾ ಕಾರ್ಯ, ಚಟುವಟಿಕೆಗಳ ವ್ಯಾಪಕತೆ ನಿರ್ಧಾರ ಮತ್ತು ತನ್ನ ವೈಶಿಷ್ಟ್ಯವನ್ನು ಸಾರುವಂಥ ಸಾಧನೆಗಳು ನಡೆದದ್ದು ಪ್ರೊ. ನಾಮವರ ಸಿಂಗ್ ಅವರ ಕಾಲದಲ್ಲಿಯೇ. ಅವರು ಮೂಲತಃ ಒಬ್ಬ ಕವಿ. ತಮ್ಮೊಳಗಿನ ಕವಿಯನ್ನು ಅವರು ಗುರುತಿಸಿಕೊಂಡದ್ದು ವಿದ್ಯಾರ್ಥಿ ದೆಸೆಯಲ್ಲಿಯೇ.

ಅಲ್ಪಾವಧಿಯಲ್ಲೇ ಅವರು ಪ್ರಗತಿಶೀಲ ಲೇಖಕರ ಜತೆ ಕೈಗೂಡಿಸಿ ಆ ಆಂದೋಲನದಲ್ಲಿ ಒಂದಾದರು. ಮಾರ್ಕ್ಸ್ ವಾದದತ್ತ ಒಲವು ಮೂಡಿಸಿಕೊಂಡದ್ದು ಆ ಸಂದರ್ಭದಲ್ಲಿಯೇ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಂ.ಎ. ಓದುತ್ತಿರುವ ಕಾಲದಲ್ಲಿಯೇ ಅವರು ತಮ್ಮ ಮೊದಲ ಪ್ರಬಂಧಗಳ ಸಂಕಲನ ‘ಬಕಲಂ ಖುದ್’ ಪ್ರಕಟಿಸಿದರು (1951). ಆ ನಂತರವೇ ಪ್ರೊ. ನಾಮವರ್ ಸಿಂಗ್ ಸಾಹಿತ್ಯ ವಿಮರ್ಶಾ ಕ್ಷೇತ್ರದತ್ತ ಕಣ್ಣು ಹಾಕಿದ್ದು, ಸಾಧನೆಗೈದದ್ದು, ಅನೇಕ ವಿಮರ್ಶಾ ಗ್ರಂಥಗಳನ್ನು ಪ್ರಕಟಿಸಿದ್ದು. 

‘ಕವಿತಾ ಕೆ ನಯೇ ಪ್ರತಿಮಾನ್’ ಎಂಬ ಕೃತಿಯಲ್ಲಿ ಹಿಂದಿ ಕಾವ್ಯ ವಿಮರ್ಶೆಗೆ ಅವಶ್ಯಕವಿರುವ ಹೊಸ ಮಾನದಂಡಗಳ ಕುರಿತ ತಮ್ಮ ಸ್ಪಷ್ಟ ಮತ್ತು ನಿಖರ ದೃಷ್ಟಿಕೋನವನ್ನು ಬಿಂಬಿಸಿದ್ದಾರೆ ಪ್ರೊ. ನಾಮವರ ಸಿಂಗ್. ಅದು ಅವರ ನಿರಂತರ ನಿರೀಕ್ಷಣೆ, ಅಧ್ಯಯನ ಮತ್ತು ಅನುಭವಗಳ ಲೇಖನ ಸಂಕಲನ. ಅದರಲ್ಲಿ ಅವರು ವ್ಯಕ್ತಪಡಿಸಿರುವ ಸ್ಪಷ್ಟ ಮತ್ತು ಪಾರದರ್ಶಕ ನಿಲುವು ಮತ್ತು ವಿಮರ್ಶಾತ್ಮಕ ದೃಷ್ಟಿಕೋನಗಳ ಕಾರಣದಿಂದ ‘ಸಮಕಾಲೀನ ಹಿಂದಿ ಸಾಹಿತ್ಯ ಕ್ಷೇತ್ರಕ್ಕೆ ಸಂದ ಮಹತ್ವಪೂರ್ಣ ಕೃತಿ’ ಎಂಬ ಹೆಗ್ಗಳಿಕೆಗೆ ಅದು ಪಾತ್ರವಾಯಿತು. ಈ ಕೃತಿಗೆ 1971ನೆಯ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತು. 

ಹಿಂದಿಯ ಕವಿಗಳು, ಕಾದಂಬರಿಕಾರರು ಮತ್ತು ನಾಟಕಕಾರರನ್ನು ಹೊರತುಪಡಿಸಿದರೆ, ವಿಮರ್ಶಾ ಕ್ಷೇತ್ರದಿಂದ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾದವರಲ್ಲಿ ಪ್ರೊ. ನಾಮವರ ಸಿಂಗ್ ಮೊದಲಿಗರು. ಅಷ್ಟೇ ಅಲ್ಲ, 1991ರ ಅಕಾಡೆಮಿಯ ‘ಸಾಹಿತ್ಯೋತ್ಸವ’ದಲ್ಲಿ ಆಶಯ ಭಾಷಣ ಮಾಡಲು ಆಹ್ವಾನಿತರಾದ ಮೊದಲ ಹಿಂದಿ ಸಾಹಿತ್ಯ ವಿಮರ್ಶಕ ಅವರು. ಇದು ಶ್ರೇಷ್ಠ ಸೃಜನಶೀಲ ಲೇಖಕರಿಗೆ ಸಲ್ಲುವ ಗೌರವ ಎಂಬುದು ಇಲ್ಲಿ ಗಮನಾರ್ಹ.

‘ಆಧುನಿಕ್ ಸಾಹಿತ್ಯ ಕಿ ಪ್ರವೃತ್ತಿಯಾಂ’, ‘ಆಧುನಿಕ್ ಹಿಂದಿ ಉಪನ್ಯಾಸ್’, ‘ಆಲೋಚಕ್ ಕೆ ಸುಖ ಮೇಂ’, ‘ಆಲೋಚನಾ ಔರ್ ವಿಚಾರಧಾರಾ’ ‘ಛಾಯಾವಾದ್’, ‘ದೂಸರೇ ಪರಂಪರಾ ಕಿ ಖೋಜ್’, ‘ಬಾತ್ ಬಾತ್ ಮೇಂ ಬಾತ್’, ‘ಸಾಥ್ ಸಾಥ್’, ‘ಸಾಹಿತ್ಯ ಕಿ ಪೆಹಚಾನ್’ ಮತ್ತು ‘ಪ್ರಾರಂಭಿಕ್ ರಚನಾಯೇಂ’ ಮುಂತಾದವು ಅವರ ಕೃತಿಗಳಲ್ಲಿ ಕೆಲವು. ಸಮಕಾಲೀನ ಹಿಂದಿ ಸಾಹಿತ್ಯ ಕ್ಷೇತ್ರದ ಬಹು ಮಹತ್ವದ ವಿಮರ್ಶಕ ಎಂದು ಖ್ಯಾತಿ ಗಳಿಸಿರುವವರು ಪ್ರೊ. ನಾಮವರ ಸಿಂಗ್.

ಅಷ್ಟೇ ಅಲ್ಲ, ಹಿಂದಿ ಕಥಾ ಸಾಹಿತ್ಯಕ್ಕೆ ಆಧುನಿಕತೆಯ ಹೊಳಹನ್ನು ತಂದುಕೊಟ್ಟ ಶ್ರೇಷ್ಠರಲ್ಲಿ ಮೊದಲಿಗರೆನಿಸಿದ ನಿರ್ಮಲ್ ವರ್ಮಾ ಅವರ ಹಾಗೆ, ಪ್ರೊ. ನಾಮವರ ಸಿಂಗ್ ಎಲ್ಲರೊಂದಿಗೆ ಸಂಪರ್ಕವಿಟ್ಟು ಕೊಂಡ ನಿಗರ್ವಿ. ತಾವೊಬ್ಬ ಚಿಂತಕ ಎಂಬ ಅಹಮ್ಮನ್ನು ತಲೆಗೆ ಏರಿಸಿಕೊಳ್ಳದೇ ಸರಳ ಬದುಕನ್ನು ನಡೆಸುತ್ತಿರುವವರು. ಒಂದೆರಡು ದಶಕಗಳಿಂದ ಅವರು ಅಂತರರಾಷ್ಟ್ರೀಯ ಖ್ಯಾತಿಗೂ ಭಾಜನರಾದ ಭಾರತೀಯ ಸಾಹಿತಿ.              

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT