ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀ ಬಹುಮುಖಿ ನೆಲೆಗಳನ್ನು ಗುರುತಿಸಬೇಕು: ಬಾಲಸುಬ್ರಹ್ಮಣ್ಯ

ಮಹಿಳಾ ಅಭಿವ್ಯಕ್ತಿ ವಿಚಾರ ಗೋಷ್ಠಿ
Last Updated 19 ಜನವರಿ 2016, 19:40 IST
ಅಕ್ಷರ ಗಾತ್ರ

ಬೆಂಗಳೂರು: ‘ಹೆಣ್ಣಿನ ಬಹುಮುಖಿ ವ್ಯಕ್ತಿತ್ವದ ನೆಲೆಗಳನ್ನು ಗುರುತಿಸಬೇಕಿದೆ’ ಎಂದು ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಮಂಡಳಿ ಸಂಚಾಲಕ ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.

ಸಾಹಿತ್ಯ ಅಕಾಡೆಮಿ, ಕರ್ನಾಟಕ ಲೇಖಕಿಯರ ಸಂಘ, ಭಾರತೀಯ ವಿದ್ಯಾಭವನ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ‘ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಮಹಿಳಾ ಅಭಿವ್ಯಕ್ತಿ’ ಕುರಿತ ವಿಚಾರಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಸ್ತ್ರೀ ಬದುಕಿನಲ್ಲಿ ಬಹುಮುಖಿ ಪಾತ್ರನಿರ್ವಹಿಸುತ್ತಾಳೆ. ತಾಯಿ, ಹೆಂಡತಿ, ಅಕ್ಕ, ಅಜ್ಜಿ ಹೀಗೆ ಅನೇಕ ನೆಲೆಗಳಲ್ಲಿ ಗುರುತಿಸಿಕೊಳ್ಳುವ ಜತೆಗೆ ಹೊರಗಡೆ ದುಡಿಯುತ್ತಿದ್ದಾಳೆ’ ಎಂದು ಹೇಳಿದರು.

‘ಸ್ತ್ರೀ ಪುರುಷನಂತೆ ಸಮಾನ ಅಲ್ಲ. ಭಿನ್ನವಾದ ಅನನ್ಯತೆ ಹೊಂದಿದ್ದಾಳೆ. ಆಕೆ ಪುರುಷನಿಗಿಂತ ವಿಭಿನ್ನ ಮಾತ್ರವಲ್ಲ ವಿಶಿಷ್ಟ, ಶ್ರೇಷ್ಠಳೂ ಆಗಿದ್ದಾಳೆ’ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ‘ಪುರುಷ ಪ್ರಧಾನ ಸಮಾಜ ಹೆಣ್ಣಿನ ಮೇಲೆ ನಿರಂತರ ಶೋಷಣೆ, ದೌರ್ಜನ್ಯ ಎಸಗುತ್ತಿದೆ. ಹೆಣ್ಣಿನ ಜನ್ಮ ಶ್ರೇಷ್ಠ, ಮೌಲಿಕವಾದದ್ದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಸ್ತ್ರೀಯರು ಎಲ್ಲ ಕಟ್ಟಳೆಗಳನ್ನು ಕಿತ್ತೊಗೆದು ಸ್ವಾಭಿಮಾನದಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿರುವುದನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕಾಣಬಹುದು. 12ನೇ ಶತಮಾನದ ವಚನಕಾರ್ತಿಯರು, ಸಂಚಿ ಹೊನ್ನಮ್ಮ ಸೇರಿದಂತೆ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಮಹಿಳೆಯರು ತಮ್ಮ ಛಾಪು ಮೂಡಿಸಿದ್ದಾರೆ’ ಎಂದು ಹೇಳಿದರು.

‘ಮಹಿಳೆಯರು ವಿಮೋಚನೆಗಾಗಿ ಹೋರಾಟ ಮುಂದುವರೆಸಬೇಕಿದೆ. ತನಗೆ ಬೇಕಾದ ವಾತಾವರಣವನ್ನು ಕಟ್ಟಿಕೊಳ್ಳುವ ಕಡೆಗೆ ಸಾಗಬೇಕು’ ಎಂದರು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ‘ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯಕ್ಕೆ ತಡೆಬಿದ್ದಿಲ್ಲ.ಮಹಿಳೆಯರ ಪರ ಕಾನೂನುಗಳು ಪರಿಣಾಮಕಾರಿಯಾಗಿ ಜಾರಿ ಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT