ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸ್ತಲಾಘವ ಕೇಳಿದರೆ ಕೆನ್ನೆ ಸವರಿದರು

Last Updated 26 ಸೆಪ್ಟೆಂಬರ್ 2014, 19:33 IST
ಅಕ್ಷರ ಗಾತ್ರ

ಬೆಂಗಳೂರು: ‘ಏಯ್‌ ಕ್ಯಾರೆ.. ಅಂತ ಕಾಮಣ್ಣರತ್ತ ಕೆಂಗಣ್ಣು ಬೀರಲಾದರೂ ಹುಡುಗಿಯರೆಲ್ಲ ಸಮರ ಕಲೆ ತರಬೇತಿಯನ್ನು ಪಡೆಯಲೇಬೇಕು’ ಎಂದು ಬಾಲಿವುಡ್‌ ನಟಿ ರಾಣಿ ಮುಖರ್ಜಿ ಅಭಿಪ್ರಾಯಪಟ್ಟರು.

ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಶುಕ್ರವಾರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಈ ‘ಹೃದಯಗಳ ರಾಣಿ’, ಯುವತಿಯರಲ್ಲಿ ಸ್ವರಕ್ಷಣೆ ಕೆಚ್ಚು ಮೂಡಿಸಿದರೆ, ಯುವಕರತ್ತ ಕುಡಿ­ನೋಟ ಬೀರಿ ಅವರ ಹೃದಯಗಳನ್ನೂ ಕದ್ದರು. ನಡುನಡುವೆ ‘ಮರ್ದಾನಿ’ ಚಿತ್ರದ ಶಿವಾನಿ ಶಿವಾಜಿ ರಾಯ್‌ ತರಹ ‘ಡೈಲಾಗ್‌’ ಹೊಡೆದರು.

‘ಅಬ್ಬಬ್ಬಾ, ಬೆಂಗಳೂರಿನಲ್ಲಿ ಎಷ್ಟೊಂದು ಸುಂದರ ಮುಖಗಳಿವೆ’ ಎಂದು ರಾಣಿ ಉದ್ಗಾರ ತೆಗೆದಾಗ, ಹಸಿರು ಹುಲ್ಲಿನ ಅಂಗಳದಲ್ಲಿ ನೆರೆದಿದ್ದ ಪಡ್ಡೆಗಳ ಹೃದಯ ಕಳಚಿ ಅಂಗೈಗೆ ಬಂದಿತ್ತು.

‘ಮದುವೆಯಾದ ಬಳಿಕ ಜೀವನದಲ್ಲಿ ಆಗಿರುವ ಬದಲಾವಣೆ ಏನು’ ಎಂಬ ಪ್ರಶ್ನೆ ಕೇಳಿಬಂತು. ‘ಪ್ರೀತಿ ಮಾಡುವ ವ್ಯಕ್ತಿ ಸಿಕ್ಕ. ಬದುಕು ಮತ್ತಷ್ಟು ಸಂತೋ­ಷ­ಮಯ ಆಗಿದೆ’ ಎಂದು ಉತ್ತರ ಕೊಟ್ಟರು ರಾಣಿ. ‘ಸಿನಿಮಾದಲ್ಲಿ ನೀವು ಕಲಿತ ಪಾಠವೇನು’ ಎಂಬ ಪ್ರಶ್ನೆಯನ್ನು ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಾಯಕಿಯತ್ತ ತೂರಿಬಿಟ್ಟರು. ‘ವಯಸ್ಸಿನ ವಿರುದ್ಧ ಈಜುವುದನ್ನು’ ಅಂತ ತಟ್ಟನೆ ಉತ್ತರಿಸಿದರು ಆ ತಾರೆ.

ಒಬ್ಬ ಅಭಿಮಾನಿ ಕೈಕುಲುಕುವ ಬೇಡಿಕೆ ಇಟ್ಟ. ಆತನಿಗೆ ಹಸ್ತಲಾಘವ ನೀಡಿದ ರಾಣಿ, ಆತನ ಎರಡೂ ಕೆನ್ನೆಗ­ಳನ್ನು ಸವರಿದರು. ‘ಇದು ಬೋನಸ್‌ ಕಣಪ್ಪ’ ಎಂದೂ ಹೇಳಿದರು. ಆ ಅಭಿ­ಮಾನಿಗೆ ಸ್ವರ್ಗಕ್ಕೆ ಮೂರೇ ಗೇಣು.

ಟೋಪಿ ಹಾಕಿದ್ದ ಇನ್ನೊಬ್ಬ ಯುವಕ ಪ್ರಶ್ನೆ ಕೇಳಲು ಎದ್ದುನಿಂತ. ‘ನಿನ್ನ ಉಡುಪು ಸುಂದರವಾಗಿದೆ’ ಎಂದು ರಾಣಿ ಅಭಿನಂದಿಸಿದರು. ಆ ಯುವಕ ‘ಥ್ಯಾಂಕ್ಸ್‌’ ಎಂದು ಪ್ರತಿಯಾಗಿ ಹೇಳಿದ. ‘ಹೌದು, ಟೋಪಿ ಹಾಕಿರುವೆಯಲ್ಲ, ಪೂರ್ತಿ ಬೋಳಾ, ಅರ್ಧಂಬರ್ಧವೇ’ ಎಂದು ಆಕೆ ಪ್ರಶ್ನಿಸಿದರು. ಟೋಪಿ ತೆಗೆದ ಆ ಯುವಕ, ತನ್ನ ತಲೆ ತುಂಬಾ ಕೂದಲು ಇರುವುದನ್ನು ಪ್ರದರ್ಶಿಸಿದ. ಸಭಾಂಗಣದಲ್ಲಿ ನಗೆ ಅಲೆ ಎದ್ದಿತು.

‘ಸಿನಿಮಾದಲ್ಲೇ ನನ್ನ ಜೀವನ ಬೇರೂರಿದೆ. ರಾಜಕೀಯ ಸೇರುವ ಯಾವ ಇಚ್ಛೆಯೂ ನನಗಿಲ್ಲ’ ಎಂದ ರಾಣಿ, ‘ಅಮ್ಮನ ಒತ್ತಾಸೆಯಿಂದ ನಾನು ಸಿನಿಮಾ ಜಗತ್ತಿಗೆ ಬರಬೇಕಾಯಿತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT