ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎತ್ತಿನಹೊಳೆ: ತರಾತುರಿ ಬೇಡ’

ವಿಧಾನಸಭೆಯಲ್ಲಿ ಬಯಲುಸೀಮೆ ಶಾಸಕರ ಆಗ್ರಹ
Last Updated 28 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಯಲುಸೀಮೆಯ ಜಿಲ್ಲೆ­ಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶ ಹೊಂದಿರುವ ಎತ್ತಿನಹೊಳೆ ಯೋಜನೆಯ ಕಾಮಗಾರಿಗೆ ತರಾತುರಿ­ಯಲ್ಲಿ ಚಾಲನೆ ನೀಡಬಾರದು ಎಂದು ಆ ಭಾಗದ ಶಾಸಕರು ಮಂಗಳವಾರ ಸರ್ಕಾರವನ್ನು ಒತ್ತಾಯಿಸಿದರು.

ನಿಯಮ 69ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ನ ಕೆ.ಎಂ.­ಶಿವಲಿಂಗೇಗೌಡ, ‘ರಾಜ್ಯದ ಬಯಲು ಸೀಮೆಗೆ ಸರ್ಕಾರದಿಂದ ನಿರಂತರ­ವಾಗಿ ಅನ್ಯಾಯವಾಗುತ್ತಿದೆ. ಈಗ ಎತ್ತಿನಹೊಳೆ ಯೋಜನೆ ಅನುಷ್ಠಾನ­ದಿಂದ ಕುಡಿಯುವ ನೀರು ದೊರೆಯಬಹುದು ಎಂಬ ಆಸೆ ಮೂಡಿತ್ತು. ಆದರೆ, ಲೋಕಸಭಾ ಚುನಾ­­ವಣೆ­ಯನ್ನು ಗುರಿಯಾಗಿ ಇರಿಸಿ­ಕೊಂಡು ತರಾತುರಿಯಲ್ಲಿ ಕಾಮಗಾರಿಗೆ ಚಾಲನೆ ನೀಡುವ ಪ್ರಯತ್ನ ನಡೆದಿದೆ. ಇದು ಸರಿಯಲ್ಲ’ ಎಂದರು.

ಅವರ ಮಾತಿಗೆ ದನಿಗೂಡಿಸಿದ ಜೆಡಿಎಸ್‌ನ ಮಂಜುನಾಥಗೌಡ, ಜೆ.ಕೆ.­ಕೃಷ್ಣಾರೆಡ್ಡಿ, ಕಾಂಗ್ರೆಸ್‌ನ ರುದ್ರೇಶಗೌಡ ಮತ್ತಿತರರು, ‘ಟೆಂಡರ್‌ ಅಂತಿಮಗೊಂಡ ಬಳಿಕವೇ ಕಾಮಗಾರಿಗೆ ಚಾಲನೆ ನೀಡ­ಬೇಕು’ ಎಂ-ದರು. ಬುಧ­ವಾರ ಉತ್ತರ ನೀಡುವು­ದಾಗಿ ಜಲ ಸಂಪ­ನ್ಮೂಲ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ವಿರೋಧಿಸಿ ಪತ್ರ
ಎತ್ತಿನಹೊಳೆ ತಿರುವು ಯೋಜನೆಗೆ ಜ. 31ರಂದು ಶಿಲಾನ್ಯಾಸ ನೆರವೇರಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಮಲೆನಾಡು ಜನಪರ ಹೋರಾಟ ಸಮಿತಿಯು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಪತ್ರ ಬರೆದಿದೆ.

‘ಈ ಯೋಜನೆಯಿಂದ ಪಶ್ಚಿಮ ಘಟ್ಟದ ನಿತ್ಯ ಹರಿದ್ವರ್ಣದ ಕಾಡುಗಳಿಗೆ ಮತ್ತು ಅಲ್ಲಿನ ಜೀವ ಸಂಕುಲಕ್ಕೆ ಅಪಾಯ ಇದೆ. ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಒಪ್ಪಿಗೆ ಪಡೆದಿಲ್ಲ’ ಎಂದು ಸಮಿತಿ ಬರೆದಿರುವ ಎರಡು ಪುಟಗಳ ಪತ್ರದಲ್ಲಿ ಆರೋಪಿಸಲಾಗಿದೆ.

ಅಗತ್ಯ ಅನುಮತಿ ಪಡೆಯದೆ ಯೋಜನೆ ಆರಂಭಿಸಲು ಮುಂದಾಗುವ ಮೂಲಕ ರಾಜ್ಯ ಸರ್ಕಾರ ಮತ್ತು ಕರ್ನಾಟಕ ನೀರಾವರಿ ನಿಗಮ ಕಾನೂನು ಉಲ್ಲಂಘಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರವೇಶ ಮಾಡಿ, ರಾಜ್ಯ ಸರ್ಕಾರ ಮತ್ತು ನೀರಾವರಿ ನಿಗಮ ಕಾನೂನು ಉಲ್ಲಂಘಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಸಚಿವಾಲಯಕ್ಕೆ ಮನವಿ ಸಲ್ಲಿಸಿದೆ.

ಸಮಿತಿಯ ಅಧ್ಯಕ್ಷ, ವಕೀಲ ಎಚ್‌.ಎ. ಕಿಶೋರ್‌ ಕುಮಾರ್‌, ಸಾಹಿತಿ ರೂಪ ಹಾಸನ, ಸಿಪಿಐ ಪಕ್ಷದ ಹಾಸನ ಜಿಲ್ಲಾ ಕಾರ್ಯದರ್ಶಿ ಎಂ.ಸಿ. ಡೋಂಗ್ರೆ ಮತ್ತು ಪರಿಸರ ಕಾರ್ಯಕರ್ತೆ ಪರಿಣೀತಾ ದಾಂಡೇಕರ್‌ ಅವರು ಪತ್ರಕ್ಕೆ ಸಹಿ ಮಾಡಿದ್ದಾರೆ.

ಪತ್ರದ ಪ್ರತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯ ಸಚಿವ ಬಿ. ರಮಾನಾಥ ರೈ ಅವರಿಗೂ ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT