ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಳಪೆ ಬರೆದವರೇ ಪ್ರಸಿದ್ಧರಾಗುತ್ತಿದ್ದಾರೆ’

Last Updated 15 ಫೆಬ್ರುವರಿ 2016, 19:52 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಸಾಂಸ್ಕೃತಿಕ ರಾಜಕಾರಣ ದೈನಂದಿನ ರಾಜಕಾರಣಕ್ಕಿಂತಲೂ ಹೆಚ್ಚು ಕೆಟ್ಟಿದೆ. ಹೀಗಾಗಿ, ಕಳಪೆ ಬರೆದವರೇ ಹೆಚ್ಚು ಪ್ರಸಿದ್ಧರಾಗುತ್ತಿದ್ದಾರೆ’ ಎಂದು ವಿಮರ್ಶಕ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ವಿಶ್ಲೇಷಿಸಿದರು.

ಸಾಹಿತಿ ಪ್ರೊ.ಜಿ.ಎಚ್‌.ಹನ್ನೆರಡುಮಠ ಅವರಿಗೆ 75 ವಸಂತಗಳು ತುಂಬಿದ ಪ್ರಯುಕ್ತ ಅವರನ್ನು ಅಭಿನಂದಿಸಲು ನಗರದಲ್ಲಿ ಸೋಮವಾರ ನೆಲಮಂಗಲದ ರಂಗಶಿಕ್ಷಣ ಕೇಂದ್ರ ಮತ್ತು ಸ್ಪರ್ಶ ಮಕ್ಕಳ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬಹಳ ಕಳಪೆ ಬರೆದವರ ಹೆಸರುಗಳೇ ಇವತ್ತು ಹೆಚ್ಚು ಪ್ರಚಲಿತದಲ್ಲಿವೆ. ಗುಂಪು ಕಟ್ಟದೇ ಇರುವವರನ್ನು ನಮ್ಮ ಸಾಂಸ್ಕೃತಿಕ ಲೋಕದೊಳಗೆ ಕಡೆಗಣಿಸಲಾಗುತ್ತಿದೆ. ಗುಂಪು ಕಟ್ಟದ ಕಾರಣಕ್ಕೆ ನಮ್ಮ ನಡುವಿರುವ ಸು.ರುದ್ರಮೂರ್ತಿ ಶಾಸ್ತ್ರಿ, ಹನ್ನೆರಡುಮಠ ಅವರಂತಹ ಅನೇಕ ಶ್ರೇಷ್ಠ ಬರಹಗಾರರು ಖ್ಯಾತಿ ಗಳಿಸಲಿಲ್ಲ’ ಎಂದು ಹೇಳಿದರು.

‘ಇಂದಲ್ಲ ನಾಳೆ ನನಗೂ ಒಬ್ಬ ಸಹೃದಯ ಹುಟ್ಟೇ ಹುಟ್ಟುತ್ತಾನೆ ಎನ್ನುವ ನಿರೀಕ್ಷೆಯೊಳಗೆ ಒಬ್ಬ ಕವಿ, ಒಂದು ಕಾವ್ಯದ ಬೆಳವಣಿಗೆ ಇರುತ್ತದೆ. ಇದರಿಂದ ಬರಹದ ಶಕ್ತಿ ಇನ್ನು ಹೆಚ್ಚು ಗಟ್ಟಿಯಾಗುತ್ತದೆ. ಅಂತಹ ನಿರೀಕ್ಷೆ ಇದ್ದಿದ್ದರಿಂದಲೇ ಹನ್ನೆರಡುಮಠ ಅವರಿಗೆ 99 ಪುಸ್ತಕಗಳನ್ನು ರಚಿಸಲು ಸಾಧ್ಯವಾಯಿತು’ ಎಂದರು.

ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ‘ಪಂಡಿತ ಪರಂಪರೆಯ ಮನೆತನಕ್ಕೆ ಸೇರಿದ ಹನ್ನೆರಡುಮಠ ಅವರು ಯಾವುದೋ ಒಂದು ಮಠದ ಸಿಂಹಾಸನ ಅಲಂಕರಿಸಿ, ಸುಖವಾಗಿ ಬಾಳ ಬಹುದಾಗಿತ್ತು. ಆದರೆ, ಅವರು ಹಾಗೇ ಮಾಡಲಿಲ್ಲ. ತಮ್ಮ ವಿಪುಲ ಬರವಣಿಗೆ ಮೂಲಕ ನಮ್ಮ ಹೃದಯದ ಮೇಲೆ ಸ್ವಾಮಿಯಾಗಿ ಕುಳಿತಿದ್ದಾರೆ. ಇದು ನಮ್ಮ ಸಾಹಿತ್ಯ ಲೋಕದ ಭಾಗ್ಯ’ ಎಂದು ಶ್ಲಾಘಿಸಿದರು.

‘ಇದೇ ಲೇಖಕ ಬೆಂಗಳೂರಿನಲ್ಲಿ ಇದ್ದಿದ್ದರೆ ಇನ್ನು ಅನೇಕ ಪ್ರಶಸ್ತಿ, ಸನ್ಮಾನಗಳನ್ನು ಪಡೆಯುತ್ತಿದ್ದರು. ಉತ್ತರ ಕರ್ನಾಟಕದ ಜನರ ಹಿಂಜರಿಕೆಯ ಗುಣ, ಪ್ರಶಸ್ತಿಗಳ ಹಿಂದೆ ಬೆನ್ನು ಹತ್ತದೆ ಸುಮ್ಮನೆ ಬರೆದುಕೊಂಡಿರುವ ಸ್ವಭಾವದಿಂದಾಗಿ ಅವರು ಅನೇಕ ಗೌರವಗಳಿಂದ ವಂಚಿತರಾಗಿದ್ದಾರೆ’ ಎಂದು ತಿಳಿಸಿದರು.

ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಮಾತನಾಡಿ, ‘ಬೆಂಗಳೂರಿನಿಂದ ಹೊರಗೆ ಇರುವ ಕಾರಣ ಹನ್ನೆರಡುಮಠ ಅವರು ಆರೋಗ್ಯವಂತರಾಗಿದ್ದಾರೆ. ಆದರೆ ಪ್ರಖ್ಯಾತರಾಗಿಲ್ಲ. ನಮ್ಮಂತಹವರು ವ್ಯವಸ್ಥೆ, ರಾಜಕಾರಣಿಗಳನ್ನು ಹೊಗಳುತ್ತ, ಹೊಂದಾಣಿಕೆ ಮಾಡಿಕೊಳ್ಳುತ್ತ ಸುದ್ದಿಯಲ್ಲಿ ಇರುತ್ತೇವೆ. ಆದರೆ ಕೇವಲ ಬರೆಯಬಲ್ಲ, ಹೊಗಳಲು ಬಾರದ ಹನ್ನೆರಡುಮಠ ಅವರು ಇದಕ್ಕೆಲ್ಲ ಹೊರತಾದವರು’ ಎಂದು ಅಭಿಪ್ರಾಯಪಟ್ಟರು.

‘ಬೆಂಗಳೂರಿಗರಲ್ಲಿ ಒಂದು ವಿಚಿತ್ರ ವರ್ತನೆ ಇದೆ. ಯಾರು ಕಣ್ಮುಂದೆ ಇರುತ್ತಾರೋ ಅವರನ್ನು ನಾವು ನಾಯಕರೆಂದು ಒಪ್ಪಿಕೊಳ್ಳುತ್ತೇವೆ. ನಮ್ಮೊಂದಿಗೆ ಚೆಲುವಯ್ಯ ಚೆಲುವೋ ಹಾಡು ಹಾಡುತ್ತಾರೋ ಅವರೇ ಶ್ರೇಷ್ಠ ಗಾಯಕರೆಂದು ಹೇಳುತ್ತೇವೆ. ಟಿ.ವಿಯಲ್ಲಿ ಕಾಣಿಸಿಕೊಳ್ಳುವವರನ್ನು ಜಗತ್ತಿನ ಶ್ರೇಷ್ಠ ಕಲಾವಿದರು, ಸಾಹಿತಿಗಳೆಂದು ಹೊಗಳುತ್ತೇವೆ. ನಮ್ಮಲ್ಲಿ ನಿಜವಾದ ಕಲಾವಿದರು, ಸಾಹಿತಿಗಳನ್ನು ಗುರುತಿಸುವ ಪ್ರಯತ್ನಗಳೇ ನಡೆಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ವಿವಿಧ ಅಕಾಡೆಮಿಗಳ ಸಮಿತಿ ರಚಿಸುವಾಗ ಇದುವರೆಗೆ ಹನ್ನೆರಡುಮಠ ಅವರ ಹೆಸರನ್ನು ನಾವು ಜ್ಞಾಪಿಸಿಕೊಂಡಿಲ್ಲ. ಇನ್ನಾದರೂ ಸಾಹಿತ್ಯ ವಲಯದಲ್ಲಿ ಅವರಿಗೆ ಒಂದು ಸನ್ಮಾನ ನಡೆಯಬೇಕು’ ಎಂದು ಒತ್ತಾಯಿಸಿದರು. ಪ್ರೊ.ಜಿ.ಎಚ್‌.ಹನ್ನೆರಡುಮಠ ಅವರು ರಚಿಸಿದ ‘ಗೋಧಿಹುಗ್ಗಿ ಗಂಗಯ್ಯ’ ಎಂಬ ನಾಟಕವನ್ನು ಚಿದಾನಂದ ಕುಲಕರ್ಣಿ ಅವರ ನಿರ್ದೇಶನದಲ್ಲಿ ‘ರಂಗ ಶಿಕ್ಷಣ ಕೇಂದ್ರ’ದ ಕಲಾವಿದರು ಕಾರ್ಯಕ್ರಮದಲ್ಲಿ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT