ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಂದ್ರವಳ್ಳಿ ಕಣಿವೆ ಕನ್ನಡಿಗರ ಗಂಗೋತ್ರಿ’

ಹಿರಿಯ ಸಂಶೋಧಕ ಎಂ. ಚಿದಾನಂದಮೂರ್ತಿ ಅನಿಸಿಕೆ
Last Updated 22 ಏಪ್ರಿಲ್ 2016, 20:21 IST
ಅಕ್ಷರ ಗಾತ್ರ

ಬೆಂಗಳೂರು: ‘ಆಡು ಭಾಷೆ ಕನ್ನಡವನ್ನು ರಾಜರ ಆಸ್ಥಾನ ಹಾಗೂ ಪತ್ರ ವ್ಯವಹಾರ ಭಾಷೆಯನ್ನಾಗಿ ಮಾಡಿದ ಮಯೂರಶರ್ಮ ಅವರು ಸಾಮ್ರಾಜ್ಯ ಕಟ್ಟುವ ನಿರ್ಧಾರ ಕೈಗೊಂಡ ಸ್ಥಳವೇ ಚಂದ್ರವಳ್ಳಿ ಕಣಿವೆ. ಅದು ಕನ್ನಡದ ಅಸ್ಮಿತೆಯ ಕೇಂದ್ರವಾಗಿದ್ದು, ಕನ್ನಡಿಗರ ಗಂಗೋತ್ರಿ ಹಾಗೂ ತಲಕಾವೇರಿಯಾಗಿದೆ’ ಎಂದು ಹಿರಿಯ ಸಂಶೋಧಕ ಎಂ. ಚಿದಾನಂದಮೂರ್ತಿ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್‌್  ವತಿಯಿಂದ ಶ್ರೀಕೃಷ್ಣರಾಜ ಪರಿಷ್ಮನಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಕನ್ನಡಿಗರ ಅಸ್ಮಿತೆಯ ತಲಕಾವೇರಿ ಚಂದ್ರವಳ್ಳಿ ಕಣಿವೆ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪಲ್ಲವರ ರಾಜಧಾನಿ ಕಂಚಿಗೆ ಹೋಗಿದ್ದ ಮಯೂರಶರ್ಮರನ್ನು ಕ್ಷತ್ರಿಯರೊಬ್ಬರು ಅವಮಾನಿಸಿದ್ದರು. ಆಗ ಚಂದ್ರವಳ್ಳಿ ಕಣಿವೆಗೆ ಬಂದಿದ್ದ ಮಯೂರಶರ್ಮ ಅವರು ಹೊಸ ಸೈನ್ಯ ಕಟ್ಟಿ ಸಾಮ್ರಾಜ್ಯ ಸ್ಥಾಪಿಸಿದರು’ ಎಂದರು.

‘ಕರ್ನಾಟಕವನ್ನು ಪೂರ್ತಿಯಾಗಿ ಆಳಿದ ಮೊದಲ ದೊರೆಗಳು ಕದಂಬರು. ಅವರಿಗಿಂತ ಮೊದಲು ಮೌರ್ಯರು, ಶಾತವಾಹನರು ಇದ್ದರೂ ಕನ್ನಡ ಭಾಷೆಯು ಕೇವಲ ಆಡು ಭಾಷೆಯಾಗಿತ್ತು. ಆದರೆ ಮಯೂರಶರ್ಮ ಅವರ ಆಡಳಿತದಲ್ಲಿ ಕನ್ನಡವು ಸಾಂಸ್ಕೃತಿಕ ಭಾಷೆಯಾಯಿತು. ನಂತರದಲ್ಲಿ  ಪಂಪ, ರನ್ನರ ಮೂಲಕ ಸಾಹಿತ್ಯಿಕ ಹಾಗೂ ಕಾವ್ಯಾತ್ಮಕವಾಗಿ ಕನ್ನಡವು ಬೆಳೆಯಿತು.’ ಎಂದು ಹೇಳಿದರು.

ಚಂದ್ರವಳ್ಳಿ ಕಣಿವೆ ಅತಿಕ್ರಮಣ?: ಉಪನ್ಯಾಸ ಬಳಿಕ ನಡೆದ ಸಂವಾದದಲ್ಲಿ ಸಭಿಕ ಸಣ್ಣೆಲ್ಲಪ್ಪ ಎಂಬುವವರು ಮಾತನಾಡಿ, ‘ಚಿತ್ರದುರ್ಗದ ಚಂದ್ರವಳ್ಳಿ ಕಣಿವೆ ಜಾಗವನ್ನು ಪ್ರಭಾವಿ ಮಠದ ಆಡಳಿತ ಮಂಡಳಿಯು ಅತಿಕ್ರಮಣ ಮಾಡುತ್ತಿದೆ. ಅದಕ್ಕೆ ಪ್ರತಿಕ್ರಿಯೆ ಏನು’ ಎಂದು ಚಿದಾನಂದಮೂರ್ತಿ ಅವರನ್ನು ಪ್ರಶ್ನಿಸಿದರು.

ಪ್ರತಿಕ್ರಿಯಿಸಿದ ಚಿದಾನಂದಮೂರ್ತಿ ಅವರು, ‘ಚಂದ್ರವಳ್ಳಿ ಕಣಿವೆಯನ್ನು ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಸೇರಿಸಿ  ಹೊಸದಾಗಿ ಸರ್ವೇ ಮಾಡುವ ಅಗತ್ಯವಿದೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ ಮಾತನಾಡಿ, ‘ಚಂದ್ರವಳ್ಳಿ ಕಣಿವೆ ಅತಿಕ್ರಮಣ ಬಗ್ಗೆ ಮಾಹಿತಿ ಸಂಗ್ರಹಿಸಲು ಪರಿಣಿತರ ತಂಡವನ್ನು ಪರಿಷತ್‌ನ ಖರ್ಚಿನಲ್ಲಿ ಕಳುಹಿಸಲಾಗುವುದು. ಆ ತಂಡವು ನೀಡಿದ ವರದಿ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಹೇಳಿದರು. 
*
ಶಾಸನಗಳ ಗ್ರಹಣ ತರಬೇತಿಗೆ ನಿರ್ಧಾರ
‘ಶಾಸನ ಕುರಿತು ಜ್ಞಾನ ಒದಗಿಸುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಸದ್ಯದಲ್ಲೇ ಐದು ದಿನಗಳ ಉಚಿತ ವಸತಿಯುತ ತರಬೇತಿ  ಶಿಬಿರ ಹಮ್ಮಿಕೊಳ್ಳಲಾಗುವುದು’ ಎಂದು ಪರಿಷತ್‌ ಅಧ್ಯಕ್ಷ ಮನು ಬಳಿಗಾರ ತಿಳಿಸಿದರು.
‘ರಾಜ್ಯದ ನಾಲ್ಕು ಕಂದಾಯ ಕೇಂದ್ರಗಳ ತಲಾ ಒಂದು ಜಿಲ್ಲೆಯಲ್ಲಿ ಈ ತರಬೇತಿ ಏರ್ಪಡಿಸಲಾಗುವುದು. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಆಸಕ್ತರು ತರಬೇತಿಯಲ್ಲಿ ಭಾಗವಹಿಸಬಹುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT