ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನನ್ನದು ಅಕಾಡೆಮಿಕ್‌ ಮನೋಧರ್ಮ’

Last Updated 16 ಮೇ 2015, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ದೊಡ್ಡ ಸಾಧಕನಲ್ಲ. ಒಬ್ಬ ಸಾಮಾನ್ಯ ಮನುಷ್ಯ. ಅಧ್ಯಾಪನ ವೃತ್ತಿ ನನಗೆ ತುಂಬಾ ಇಷ್ಟವಾದ್ದದ್ದು. ಅದರಲ್ಲಿ ನಾನು ತೃಪ್ತಿ, ಸಾರ್ಥಕತೆ ಕಂಡಿರುವೆ’

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ಯಲ್ಲಿ ವಿಮರ್ಶಕ ಎಂ.ಎಚ್‌.ಕೃಷ್ಣಯ್ಯ ಅವರು ಹಂಚಿಕೊಂಡ ಮನದಾಳದ ಮಾತುಗಳಿವು..

‘ನನ್ನದು ಅಕಾಡೆಮಿಕ್‌ ಮನೋಧರ್ಮ. ನನ್ನ ಕೆಲಸ ಕಾರ್ಯಗಳು ಅಧ್ಯಾಪನ ಕೇಂದ್ರಿತವಾದದ್ದು. ಶಿವರಾಮ ಕಾರಂತ, ಕುವೆಂಪು, ತೀನಂಶ್ರೀ ನನ್ನ ಮೇಲೆ ಪ್ರಭಾವ ಬೀರಿದ ಮಹಾನ್‌ ಚೇತನಗಳು. ಪಾಶ್ಚಾತ್ಯ ಸಂಗೀತ ಬಹಳ ಪ್ರಿಯ. ಹೊಸತು  ಎನ್ನುವುದು ಇನ್ನೂ ಇಷ್ಟ. ಏಕೆಂದರೆ, ಅದರ ಹೊಸ ಚಿಂತನೆ ಅಡಗಿರುತ್ತದೆ’ ಎಂದು ಹೇಳಿದರು.

‘ಮೈಸೂರಿನಂತಹ ನಗರದಲ್ಲಿ ಹುಟ್ಟಿದರೂ ನನ್ನ ಮನಸಿನಾಳದಲ್ಲಿ ಎಲೋ ಒಂದೇಡೆ ಇಂದಿಗೂ ಹಳ್ಳಿ ವ್ಯಕ್ತಿ ಇದ್ದಾನೆ. ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ಅಣ್ಣ, ಅಕ್ಕಂದಿರ ಪಾಲನೆಯಲ್ಲಿ ಬೆಳೆದೆ. ಬಾಲ್ಯದಿಂದಲೂ ನನ್ನದು ಸಂಕೋಚದ ಸ್ವಭಾವ. ಒಂದು ಕಾಲದಲ್ಲಿ ರಾತ್ರಿ ವೇಳೆ ಬೀದಿದೀಪದ ಕೆಳಗೆ ಓದುತ್ತಿದ್ದೆ. ಎಂ.ಎ ವರೆಗೆ ಬುಡ್ಡಿ ದೀಪದ ಬೆಳಕಿನಲ್ಲಿಯೇ ನನ್ನ ಅಭ್ಯಾಸ ಸಾಗಿತ್ತು’ ಎಂದು ಕೃಷ್ಣಯ್ಯ ತಮ್ಮ ಬಾಲ್ಯವನ್ನು ಸ್ಮರಿಸಿಕೊಂಡರು.

‘ಹೈಸ್ಕೂಲ್‌ ವೇಳೆಗೆ ಆರ್ಯ ಸಮಾಜದತ್ತ ಆಕರ್ಷಿತನಾಗಿ ದಯಾನಂದ ಸರಸ್ವತಿ ಅವರ ‘ಸತ್ಯಾರ್ಥ ಪ್ರಕಾಶ’ ಓದಿಕೊಂಡೆ. ಇದೇ ವೇಳೆ ಕೆಲ ಗೆಳೆಯರ ಜತೆಗೂಡಿ ಆರ್ಯ ಯುವಜನ ಸಂಘ ಕಟ್ಟಿ, ಮೂಢನಂಬಿಕೆಗಳ ವಿರುದ್ಧ ಆಂದೋಲನ ಮಾಡಿದೆ. ಕಾರಂತ ‘ಬಾಲಪ್ರಪಂಚ’ ಓದಿದ ತರುವಾಯ ಆರ್ಯ ಸಮಾಜದಿಂದ ವಿಮುಖನಾದೆ’ ಎಂದು ಹೇಳಿದರು.

‘ಭಯದಲ್ಲಿ ಧರ್ಮ ಹುಟ್ಟುತ್ತದೆ. ನೋವಿನಲ್ಲಿ ಧರ್ಮ ಕಾಣಿಸಿಕೊಳ್ಳುತ್ತದೆ. ಅದು ಅನಂತರ ಎಲ್ಲ ಬಗೆಯ ನಂಬಿಕೆಗೆ ಕಾರಣವಾಗುತ್ತದೆ. ಬದುಕಿಗಿಂತ ದೊಡ್ಡದು ಯಾವುದೂ ಇಲ್ಲ. ಬದುಕಿನಾಚೆಗೆ ಏನೂ ಇಲ್ಲ. ಸ್ವರ್ಗ, ನರಕ, ಕೈಲಾಸ ಎಲ್ಲ ಬರೀ ಸುಳ್ಳು. ಇದು ಈವರೆಗಿನ ನನ್ನ ಓದು, ಅನುಭವ ಕಲಿಸಿದ್ದು. ರಾಕೆಟ್‌ ಹಾರಿಸುವಾಗ ಕೆಲವರು ದೇವರ ಮೋರೆ ಹೋಗುವುದು ಕಂಡಾಗ ನಗೆ ಬರುತ್ತದೆ’ ಎಂದರು.

‘ಸಂಕೋಚ ಸ್ವಭಾವದ ನಾನು ಅನೇಕರ ಒತ್ತಾಯದಿಂದಲೇ ಅಲ್ಪಸ್ವಲ್ಪ ಬರೆದಿದ್ದೆನೆ. ಆದರೆ, ಕ್ರೀಡಾ ಪದಕೋಶ ಮತ್ತು ಕಲಾಕೋಶ ಎಂಬ ಎರಡು ಯೋಜನೆಗಳು ಕಾರಣಾಂತರಗಳಿಂದ ಪೂರ್ಣಗೊಳ್ಳದೆ ನಿಂತುಹೋದವು. ಆ ಬೇಸರ ಹಾಗೇ ಉಳಿದಿದೆ’ ಎಂದರು.

ಕೊರಳಲ್ಲಿ ಫೋಟೊ...
‘ನಾನಾಗಿನ್ನು ತುಂಬಾ ಚಿಕ್ಕವನು.  ಪರಮ ಆಸ್ತಿಕರಾಗಿದ್ದ ತಂದೆ ಮನೆ ಸಮೀಪದ ದೇವಸ್ಥಾನಕ್ಕೆ ಸ್ವಲ್ಪ ಜಮೀನು ದಾನ ಮಾಡಿ, ಭಯಭಕ್ತಿಯಿಂದ ದೇವರಿಗೆ ನಡೆದುಕೊಳ್ಳುತ್ತಿದ್ದರು. ಧನುರ್ಮಾಸ ಬಂತೆಂದರೆ ನಿತ್ಯ ಬೆಳಿಗ್ಗೆ ಊರಲ್ಲಿ ಭಜನೆ ಮೆರವ

ಣಿಗೆ ಹೊರಡುತ್ತಿತ್ತು’ ‘ಆಗೆಲ್ಲ ತಂದೆ ನನ್ನ ಕೊರಳಿನಲ್ಲಿ ದೇವರ ಪಟ ಹಾಕಿ ಮೆರವಣಿಗೆ ಮುಂದೆ ಸಾಗುವಂತೆ ಹೇಳುತ್ತಿದ್ದರು. ಹಾಗೆ ಸಾಗುತ್ತಿದ್ದಾಗಲೆಲ್ಲ  ದಾರಿಯುದ್ದಕ್ಕೂ ಮಹಿಳೆಯರು ಕಾಲಿಗೆ ನೀರು ಹಾಕಿ ನಮಸ್ಕರಿಸುತ್ತಿದ್ದರು. ಅದು ನನ್ನನ್ನು ಗಾಢವಾಗಿ ಕಾಡಿತು. ಅವರಿಗಿಂತ ನಾನು ಹೇಗೆ ಭಿನ್ನ ಎಂದು ತುಂಬಾ ಯೋಚಿಸಲು ಆರಂಭಿಸಿದೆ. ಜತೆಗೆ ಪ್ರಾರ್ಥನಾ ಮಂದಿರವೊಂದರಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳು ನನ್ನ ಮನಸಿನ ಮೇಲೆ ತುಂಬಾ ಪರಿಣಾಮ ಬೀರಿದವು’ ಎಂದು ಕೃಷ್ಣಯ್ಯ ತಿಳಿಸಿದರು.
*****
ವಿಮರ್ಶೆ ಎಂದರೆ ಬರೀ ಟೀಕೆಯಲ್ಲ. ವಿಮರ್ಶಕ ಒಬ್ಬ ಕಲಾವಿದನನ್ನು ಮೇಲೆತ್ತಲು ಅಥವಾ ಕೆಳಗಿಳಿಸಲು ಸಾಧ್ಯವಿಲ್ಲ. ನಾವು ಕಂಡು ಅನುಭವಿಸಿದ್ದರ ಅಕ್ಷರ ರೂಪವೇ ವಿಮರ್ಶೆಯಾಗಬೇಕು.

-ಎಂ.ಎಚ್‌.ಕೃಷ್ಣಯ್ಯ, ವಿಮರ್ಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT