ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನು ಬೆಳೆದ ಕಾಲಘಟ್ಟ ಅದ್ಭುತವಾಗಿತ್ತು’

Last Updated 28 ಸೆಪ್ಟೆಂಬರ್ 2014, 19:51 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ಬೆಳೆದ ಕಾಲಘಟ್ಟ ಅದ್ಭುತ­ವಾಗಿತ್ತು. ಆಗಷ್ಟೇ ಹೊಸ ಭಾರತ ತೆರೆದುಕೊಂಡಿತ್ತು. ಹೊಸ ಅವಕಾಶಗಳು ಹಾಗೂ ಹೊಸ ದಿಕ್ಕುಗಳು ತೆರೆದುಕೊಂಡಿ­ದ್ದವು. ಈ ವಾತಾವರಣ­ದಲ್ಲಿ ನನ್ನ ನಾಟಕ ಕೃಷಿಗೆ ಬೇಕಾದ ಎಲ್ಲ ಸಂಪನ್ಮೂಲಗಳು ಇದ್ದವು. ಈ ಕಾರಣಗ­ಳಿಂದಾಗಿ ನಾನೊಬ್ಬ ನಾಟಕಕಾರನಾಗಿ ಬೆಳೆಯಲು ಸಾಧ್ಯವಾಯಿತು’ 
–ಸಾಹಿತ್ಯಾಸಕ್ತರಿಂದ ತುಂಬಿದ್ದ ‘ಸಂಸ್ಕಾರ’ ಸಭಾಂಗಣ­ದಲ್ಲಿ ಭಾನು­ವಾರ ನೆನಪು ಗಳ ಮೆರವಣಿಗೆ ಮಾಡಿದ್ದು ಸಾಹಿತಿ ಗಿರೀಶ ಕಾರ್ನಾಡ.

‘ಬೆಂಗಳೂರು ಸಾಹಿತ್ಯ ಉತ್ಸವ’ದ ಸಂವಾದ ಗೋಷ್ಠಿ­ಯಲ್ಲಿ ಮಾತನಾಡಿದ ಅವರು, ‘ಕವಿತೆ ಬರೆಯ­ಬೇಕು ಎಂದು ಕಂಡಿದ್ದ ಕನಸು, ನಂತರ ನಾಟಕಕಾರ­ನಾಗಿ ಬೆಳೆಯಲು ಕಾರಣ­ವಾದ ಅಂಶಗಳು, ಲಂಡನ್‌­ನಿಂದ ಬೆಂಗಳೂರಿಗೆ ಬಂದು ನೆಲೆ­ಸಿದ್ದು ಸೇರಿದಂತೆ ಹಲವು ವಿಷಯಗಳತ್ತ ಬೆಳಕು ಚೆಲ್ಲಿದರು.

‘60, 70, 80ರ ದಶಕದಲ್ಲಿ ಹೊಸ ಅವಕಾಶಗಳ ಬಾಗಿಲು ತೆರೆದು­ಕೊಂಡಿತ್ತು. ಕನ್ನಡದಲ್ಲಿ ನವ್ಯ ಚಳವಳಿ ಶುರುವಾಗಿತ್ತು. ಸಿನಿಮಾ ಕ್ಷೇತ್ರದಲ್ಲಿ ಸತ್ಯಜಿತ್‌ ರೇ ಅವರ ಕೈಚಳಕ ಜೋರಾ­ಗಿತ್ತು. ಥಿಯೇಟರ್‌ ಕ್ಷೇತ್ರ ಗಟ್ಟಿಯಾಗಿ ನೆಲೆಯೂರಿತ್ತು. ದಕ್ಷಿಣ ಹಾಗೂ ಉತ್ತರ ಭಾರತದ ನಡುವೆ ಕೊಡುಕೊಳ್ಳುವಿಕೆಯ ಸಂಬಂಧ ಚೆನ್ನಾಗಿತ್ತು’ ಎಂದರು.

‘ನಂತರದ ದಶಕಗಳಲ್ಲಿ ಹೊಸ ಅವ­ಕಾಶಗಳು ಸೃಷ್ಟಿಯಾಗಲಿಲ್ಲ. ‘ಈಗ ಯಾವ ಬಾಗಿಲು ತೆರೆದಿಲ್ಲ. ತೆರೆಯಲು ಪ್ರಯತ್ನಿಸಬೇಡಿ. ಏಕೆಂದರೆ ನಿಮಗೆ ವಯ­­­­ಸ್ಸಾಗಿದೆ’ ಎಂದು ನನ್ನ ಪುತ್ರ ತಮಾಷೆ ಮಾಡುತ್ತಿದ್ದ’ ಎಂದಾಗ ಸಭೆಯಲ್ಲಿ ನಗುವಿನ ಅಲೆ.

‘ಇಂಗ್ಲಿಷ್‌ ಕವಿಯಾಗಬೇಕು ಎಂಬುದು ನನ್ನ ಕನಸಾಗಿತ್ತು. ಅದಕ್ಕಾಗಿ ಬಹಳಷ್ಟು ಕಸರತ್ತು ನಡೆಸಿದ್ದೆ. ಜಾರ್ಜ್‌ ಎಲಿಯಟ್‌ ಆಗಬೇಕು, ನೊಬೆಲ್‌ ಗೌರ­ವಕ್ಕೆ ಪಾತ್ರನಾಗಬೇಕು ಎಂಬ ಆಲೋ­ಚನೆ ಹೊಂದಿದ್ದೆ. ಒಂದು ಕವಿತೆ ಬರೆ­ಯಲು ಪ್ರಯತ್ನಿಸಿದ್ದೆ. ಆದರೆ, ಮೊದಲು ನಾನು ಬರೆದಿದ್ದು ಕನ್ನಡದ ಕವಿತೆ. ಆಮೇಲೆ ಗೆಳತಿಯನ್ನು ಒಲಿಸಿಕೊಳ್ಳಲು ಕೆಲವೊಂದಿಷ್ಟು ಹಾಡು ಬರೆದೆ. ನಿಜ ಹೇಳಬೇಕೆಂದರೆ ಆ ಹಾಡುಗಳನ್ನು ಹಯ­­­ವದನ ನಾಟಕಕ್ಕೆ ಬಳಸಿಕೊಂಡೆ’ ಎಂದರು.

‘ಕವಿಯಾಗುವ ಆಸೆ ಈಡೇರಲಿಲ್ಲ. ಆ ನಂತರ ಇಂಗ್ಲೆಂಡ್‌ಗೆ ಹೋದೆ. ಅಲ್ಲಿನ ನಾಟಕ ಸಂಸ್ಕೃತಿಯಿಂದ ಪ್ರಭಾವಿತನಾದೆ. ಅಲ್ಲಿಯೇ ಯಯಾತಿ ನಾಟಕ ಬರೆದೆ. ಅದಕ್ಕೆ ಕೀರ್ತಿನಾಥ ಕುರ್ತಕೋಟಿ ಉತ್ತಮ ವಿಮರ್ಶೆ ಬರೆದಿದ್ದರು. ಆದರೆ, ಅದನ್ನು ಶ್ರೀರಂಗ ಅವರು ಟೀಕಿಸಿದ್ದರು. ಅದು ನನಗೆ ವರದಾನವಾಯಿತು. ನನ್ನ ನೆಲೆಯನ್ನು ಬೆಂಗಳೂರಿನಲ್ಲಿ ಕಂಡು­ಕೊಳ್ಳಲು ಸಾಧ್ಯವಾಯಿತು’ ಎಂದು ಕಾರ್ನಾಡ ಹೇಳಿದರು.

‘ತಲೆದಂಡ’ಕ್ಕೆ 11ನೇ ಶತಮಾನ ಸ್ಫೂರ್ತಿ: ‘ಮಂಡಲ್‌ ಆಯೋಗ, ಬಾಬರಿ ಮಸೀದಿ ಪ್ರಕರಣದ ಬಳಿಕ ತಲೆದಂಡ ನಾಟಕ ಬರೆದೆ. ಆದರೆ, ಮಂಡಲ್‌ ಹಾಗೂ ಬಾಬರಿ ಮಸೀದಿ ಸಮಸ್ಯೆಗಳು 11ನೇ ಶತಮಾನದ ಸಮ­ಸ್ಯೆ­­ಗಳ ಮುಂದುವರಿದ ಭಾಗ­ದಂತಿವೆ. 900 ವರ್ಷಗಳು ಕಳೆದರೂ ಕೆಲ ಸಮ­ಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ ಎನ್ನುವುದೇ ಅಚ್ಚರಿ. ಇದೇ ನನಗೆ ಸ್ಫೂರ್ತಿ­ಯಾಯಿತು’ ಎಂದರು.

ನೆಚ್ಚಿನ ನಾಟಕ ಯಾವುದು?: ‘ನೀವು ಬರೆದ ನಾಟಕಗಳಲ್ಲಿ ನೆಚ್ಚಿನ ನಾಟಕ ಯಾವುದು’ ಎಂದು ಸಂವಾದ ನಡೆಸಿಕೊಟ್ಟ ಲೇಖಕಿ ಅರ್ಶಿಯಾ ಸತ್ತಾರ್‌ ಅವರು ಪ್ರಶ್ನಿಸಿದರು. ಅದಕ್ಕೆ ಕಾರ್ನಾಡ ಅವರು, ‘ಮುಂದಿನ ನಾಟಕ’ ಎಂದು ಪ್ರತಿಕ್ರಿಯಿಸಿದರು.

‘ನನ್ನ ಹಿಂದಿನ ನಾಟಕದ ಹೆಸರು ಹೇಳುವುದರಿಂದ ಪ್ರಯೋಜನವಿಲ್ಲ. ಮುಂದಿನ ನಾಟಕದ ಬಗ್ಗೆ ಯೋಚಿಸ­ಬೇಕು. ಅದೇ ನನ್ನ ನೆಚ್ಚಿನ ನಾಟಕ­ವಾಗಲಿದೆ’ ಎಂದು ಹೇಳಿದರು.

ಮತ್ತೆ ಅನಂತಮೂರ್ತಿ ಟೀಕಿಸಿದ ಕಾರ್ನಾಡ
‘ಅನಂತಮೂರ್ತಿ ಅವರು ಮುಂದಾ­ಳತ್ವ ವಹಿಸಲು ಪ್ರಯತ್ನಿಸಿದರು. ವಿವಿಧ ಪದವಿ­ಗಳಿಗೆ ಆಸೆಪಟ್ಟರು. ಅಕಾಡೆಮಿ­ಗಳು ಸೇರಿ ವಿವಿಧ ಪದವಿಗಳನ್ನು ಅಲಂಕ­ರಿಸಿದರು. ಇದ­ರಿಂದ ಅವರ ಸಾಹಿತ್ಯದ ಗುಣಮಟ್ಟ ಕುಸಿದು ಹೋಯಿತು. ಅವ­ರೊಳಗಿನ ಪ್ರತಿ­ಭಾವಂತನ ಕೊಲೆಯಾ­ಯಿತು. ಇದೊಂದು ದುರದೃಷ್ಟಕರ ಬೆಳ­ವಣಿಗೆ. ಜವಾಬ್ದಾರಿ ವಹಿಸಿಕೊಂಡಾಗ ಅವರು ಬರವಣಿಗೆ ನಿಲ್ಲಿ­ಸ­ಬೇಕಿತ್ತು’ ಎಂದು ಸಾಹಿತಿ ಗಿರೀಶ ಕಾರ್ನಾಡ ನುಡಿದರು. ‘ಬೆಂಗಳೂರು ಸಾಹಿತ್ಯ ಉತ್ಸವ’ದ ಸಂವಾದ ಗೋಷ್ಠಿ­ಯಲ್ಲಿ ಅವರು ಈ ರೀತಿ ಮತ್ತೆ ಅನಂತಮೂರ್ತಿ ಅವರನ್ನು ಟೀಕಿಸಿದರು.

‘ಸಂಸ್ಕಾರ’ದ ಬಗ್ಗೆ ಹೊಟ್ಟೆಕಿಚ್ಚು: ‘ಸಂಸ್ಕಾರ ಕಾದಂಬರಿ ಓದಿದಾಗ ಆ ಕೃತಿಯ ಲೇಖಕನ ಬಗ್ಗೆ ನನಗೆ ಹೊಟ್ಟೆಕಿಚ್ಚು ಶುರುವಾಗಿತ್ತು. ಯಾರೀ ಅನಂತಮೂರ್ತಿ, ಇಷ್ಟೊಂದು ಸೊಗಸಾಗಿ ಬರೆದಿದ್ದನಲ್ಲ. ಈ ಕೃತಿಯನ್ನು ನಾನು ಬರೆಯಬೇಕಿತ್ತು ಎನಿಸಿದ್ದು ನಿಜ. ಲೇಖಕನಿಗೆ ಈ ರೀತಿಯ ಹೊಟ್ಟೆಕಿಚ್ಚು ಇರಬೇಕು. ಆಗ ಅದ್ಭುತ ಕೆಲಸ ಹೊರಹೊಮ್ಮುತ್ತದೆ’ ಎಂದೂ ಅವರು ನುಡಿದರು.

ಅನಂತಮೂರ್ತಿ ಬೆಂಬಲಿಸಿದ್ದೆ: ‘ಲೋಕಸಭೆ ಚುನಾವಣೆಗೆ ಮುನ್ನ ಅನಂತ­ಮೂರ್ತಿ ಅವರು ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಾಗ ಅದನ್ನು ನಾನು ಕೂಡ ಬೆಂಬಲಿಸಿದ್ದೆ. ಯಾವುದೇ ವಿಷಯ ಬಂದಾಗ ಲೇಖಕರು ಅದಕ್ಕೆ ಪ್ರತಿಕ್ರಿಯಿ­ಸಬೇಕು. ಗೋದ್ರಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಟಕಕಾರ ವಿಜಯ್‌ ತೆಂಡೂ­ಲ್ಕರ್‌ ಅವರು ಮೋದಿ ಅವರನ್ನು ಕಟುವಾಗಿ ಟೀಕಿಸಿದ್ದರು’ ಎಂಬುದನ್ನು ಅವರು ನೆನಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT