ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀರು ನೀರು..’ ಎನ್ನುತ್ತಿತ್ತು ದೇಹ

ಆಂಬುಲೆನ್ಸ್ ಚಾಲಕನ ದುಃಖತಪ್ತ ಮಾತುಗಳು
Last Updated 17 ಫೆಬ್ರುವರಿ 2016, 19:31 IST
ಅಕ್ಷರ ಗಾತ್ರ

ಬೆಂಗಳೂರು: ಅಪಘಾತದಲ್ಲಿ ಯುವಕನ ದೇಹ ಎರಡು ತುಂಡುಗಳಾಗಿ ಬಿದ್ದಿದ್ದವು. ಬದುಕುವ ಆಸೆಯಿಂದ ಆತ ಕೈ ಮೇಲೆತ್ತಿ ‘ನೀರು ನೀರು...’ ಎಂದು ಅಂಗಲಾಚುತ್ತಿದ್ದ. ಆದರೆ, ಜನ ರಕ್ಷಣೆಗೆ ಧಾವಿಸುವ ಬದಲು ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಳ್ಳುತ್ತ ನಿಂತಿದ್ದರು. ರಾಷ್ಟ್ರೀಯ ಹೆದ್ದಾರಿ –4ರ ತಿಪ್ಪಗೊಂಡನಹಳ್ಳಿ  ಬಳಿ ಮಂಗಳವಾರ ಎನ್‌.ಹರೀಶ್ (26) ಅವರ ಮೇಲೆ ಲಾರಿ ಚಕ್ರ ಹರಿದಾಗ, ಐದು ನಿಮಿಷಗಳಲ್ಲೇ ಸ್ಥಳಕ್ಕೆ  ಹೋದ ಆಂಬುಲೆನ್ಸ್‌ ಚಾಲಕ ಮಂಜುನಾಥ್ ಅವರು ಬೇಸರ ವ್ಯಕ್ತಪಡಿಸಿದ ರೀತಿ ಇದು.

‘ಜಾಸ್ ಟೋಲ್‌ ಪ್ರೈವೇಟ್ ಲಿಮಿಟೆಡ್‌’ಗೆ ಸೇರಿದ ಆಂಬುಲೆನ್ಸ್‌ನ ಚಾಲಕರಾಗಿರುವ ಮಂಜುನಾಥ್, ಘಟನೆ ಸಂಭವಿಸಿದಾಗ ಎಂಟು ಕಿ.ಮೀ ದೂರವಿರುವ ಟೋಲ್‌ ಬಳಿ ಇದ್ದರು. ಸ್ಥಳೀಯರೊಬ್ಬರು ಕರೆ ಮಾಡುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ಅವರು, ಆ ಸಂದರ್ಭದ ಪರಿಸ್ಥಿತಿಯನ್ನು ‘ಪ್ರಜಾವಾಣಿ’ಗೆ ವಿವರಿಸಿದರು.

‘ನೆಲಮಂಗಲ ಟೋಲ್ ಸುತ್ತಮುತ್ತ ಅಪಘಾತ ಸಂಭವಿಸಿದರೆ ಗಾಯಾಳುಗಳನ್ನು ನನ್ನ ಆಂಬುಲೆನ್ಸ್‌ನಲ್ಲೇ ಆಸ್ಪತ್ರೆಗಳಿಗೆ ಸಾಗಿಸುತ್ತೇನೆ. ಮೂರೂವರೆ ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇನೆ. ತಿಂಗಳಲ್ಲಿ 15 ರಿಂದ 20 ಪ್ರಕರಣಗಳನ್ನು ನೋಡುತ್ತೇನೆ. ಆದರೆ, ಇಂಥ ಭೀಕರ ಘಟನೆಯನ್ನು ಹಿಂದೆಂದೂ ಕಂಡಿರಲಿಲ್ಲ.

ದೇಹ ತುಂಡಾಗಿ ಐದು ನಿಮಿಷಗಳಾದರೂ ಹರೀಶ್ ಜೀವಂತವಾಗಿದ್ದರು. ಅವರು ನೆರವಿಗಾಗಿ ಕೂಗುತ್ತಿದ್ದರು. ಕುಡಿಯಲು ನೀರು ಕೊಡುವಂತೆ ಬೇಡಿಕೊಳ್ಳುತ್ತಿದ್ದರು. ಆದರೆ, ಜನ ಮೊಬೈಲ್‌ನಲ್ಲಿ ವಿಡಿಯೊ ಮಾಡುವುದರಲ್ಲಿ ತಲ್ಲೀನರಾಗಿದ್ದರು. ತುಂಡಾದ ದೇಹಗಳನ್ನು ಆಂಬುಲೆನ್ಸ್‌ಗೆ ಎತ್ತಿಡಲು ನೆರವಾಗುವಂತೆ ಅಲ್ಲಿದ್ದವರನ್ನು ನಾನೂ ಅಂಗಲಾಚಿದೆ. ಆದರೆ, ದೇಹ ಮುಟ್ಟಲು ಎಲ್ಲರೂ ಅಸಹ್ಯ ಪಟ್ಟರು.|

ಮೂರು ನಿಮಿಷಗಳಲ್ಲೇ 108 ಆಂಬುಲೆನ್ಸ್ ಕೂಡ ಸ್ಥಳಕ್ಕೆ ಬಂತು. ಅದರಲ್ಲಿ ಶುಶ್ರೂಷಕಿ ಸೇರಿ ಮೂವರು ಸಿಬ್ಬಂದಿ ಇದ್ದರು. ಅವರ ನೆರವಿನಿಂದ ತುಂಡಾದ ದೇಹಗಳನ್ನು ನನ್ನ ವಾಹನದಲ್ಲಿ ಇಟ್ಟುಕೊಂಡು ನೆಲಮಂಗಲ ಸರ್ಕಾರಿ ಆಸ್ಪತ್ರೆಯತ್ತ ಹೊರಟೆ. ‘ಹರೀಶ್ ಏನೇನೋ ಮಾತನಾಡುತ್ತಲೇ ಇದ್ದರು. ಆದರೆ, ಸೈರನ್ ಶಬ್ದಕ್ಕೆ ಅವರ ಮಾತುಗಳು ಕೇಳಿಸಲಿಲ್ಲ. ಹೇಗಾದರೂ ಮಾಡಿ ಉಳಿಸಬೇಕೆಂದು ಅವರ ಮಾತಿನ ಕಡೆ ಲಕ್ಷ್ಯ ಕೊಡದೆ ವೇಗವಾಗಿ ಚಾಲನೆ ಮಾಡುತ್ತಿದ್ದೆ’ ಎಂದು ಮಂಜುನಾಥ್ ದುಃಖತಪ್ತರಾದರು.

ಆ ಮಾತು ಮರೆಯಲಾರೆ: ‘ಎರಡು ನಿಮಿಷಗಳಲ್ಲಿ ಆಸ್ಪತ್ರೆ ತಲುಪಿದೆ. ದೇಹ ಕೆಳಗಿಳಿಸುವಾಗ, ‘ಅಣ್ಣ ನನ್ನ ಹೆಸರು ಹರೀಶ. ಗುಬ್ಬಿಯ ಕರಿಗೌಡನಹಳ್ಳಿಯವನು. ಇನ್ನೇನು ಸತ್ತು ಹೋಗುತ್ತೇನೆ. ದಯವಿಟ್ಟು ಕಣ್ಣುಗಳನ್ನು ದಾನ ಮಾಡಿ. ನನ್ನ ಮೊಬೈಲ್ ಸಂಖ್ಯೆ 944’ ಎನ್ನುತ್ತಲೇ ನಿತ್ರಾಣರಾದರು. ಈ ವೇಳೆ ವೈದ್ಯರು ಸ್ಥಳಕ್ಕೆ ಬಂದಿದ್ದರಿಂದ ನಾನು ದೂರ ಸರಿದೆ. ಸ್ವಲ್ಪ ಹೊತ್ತಿನಲ್ಲೇ ಅವರ ಉಸಿರು ನಿಂತು ಹೋಯಿತು. ಹರೀಶ್ ಆಡಿದ ಕಡೆಯ ಮಾತುಗಳನ್ನು ನನ್ನ ಜೀವನದಲ್ಲಿ ಮರೆಯಲಾರೆ’ ಎಂದು ಮಂಜುನಾಥ್ ಹೇಳಿದರು.

ಜನ ಮಾಡುವುದೇನು: ‘ಎನ್‌ಎಚ್‌–4ರಲ್ಲಿ ನಾಲ್ಕು ಪಥದ ರಸ್ತೆಗಳಿವೆ. ಭಾರಿ ಸರಕು ವಾಹನಗಳ ಓಡಾಟವೇ ಹೆಚ್ಚಿರುವ ಕಾರಣ ನೆಲಮಂಗಲ ಸುತ್ತಮುತ್ತ ದಟ್ಟಣೆ ಹೆಚ್ಚಿರುತ್ತದೆ. ಆದರೂ, ಅಪಘಾತ ಸ್ಥಳವನ್ನು ಶೀಘ್ರವಾಗಿ ತಲುಪಲು ಗಂಟೆಗೆ 100 ರಿಂದ 120 ಕಿ.ಮೀ ವೇಗದಲ್ಲಿ ವಾಹನ ಚಾಲನೆ ಮಾಡುತ್ತೇವೆ. ಹೋಗುವುದು ಸ್ವಲ್ಪ ತಡವಾದರೂ ಜನ ನಮ್ಮ ಮೇಲೆಯೇ ಹಲ್ಲೆ ನಡೆಸುತ್ತಾರೆ. ವಾಹನದ ಗಾಜುಗಳನ್ನು ಒಡೆದು ಹಾಕುತ್ತಾರೆ. ಆದರೆ, ಇವರು ಮಾಡುವುದೇನು. ಗಾಯಾಳು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೂ ವಿಡಿಯೊ ಮಾಡುತ್ತಾ ನಿಲ್ಲುವುದು ಮಾನವೀಯತೆಯೇ’ ಎಂದು ಅವರು ಪ್ರಶ್ನಿಸಿದರು.

ಎರಡನೇ ಪ್ರಕರಣ: ಫೆ.13ರ ಬೆಳಿಗ್ಗೆ ಚಿಕ್ಕಜಾಲ ಸಮೀಪದ ಮೀನುಕುಂಟೆ ರೈಲ್ವೆ ಮೇಲ್ಸೇತುವೆಯಲ್ಲಿ ರಸ್ತೆ ಅಪಘಾತವಾಗಿ ಸಾಫ್ಟ್‌ವೇರ್ ಎಂಜಿನಿಯರ್‌ ಎಸ್‌.ಕಿರೀಟಿ ಎಂಬುವರು ಗಾಯಗೊಂಡಿದ್ದರು. ರಸ್ತೆಯಲ್ಲೇ ಮುಕ್ಕಾಲು ಗಂಟೆಯಿಂದ ಒದ್ದಾಡುತ್ತಿದ್ದರೂ ಆಸ್ಪತ್ರೆಗೆ ಕರೆದೊಯ್ಯುವ ಬದಲು ಜನ ವಿಡಿಯೊ ಮಾಡುವುದರಲ್ಲೇ ಕಾಲಹರಣ ಮಾಡಿದ್ದರು.

ಗ್ರಾಮದಲ್ಲಿ ಅಂತ್ಯಕ್ರಿಯೆ
ಹರೀಶ್ ಅವರ ಆಸೆಯಂತೆ ಕುಟುಂಬ ಸದಸ್ಯರು ಅವರ ಎರಡು ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ. ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಮೃತರ ಅಣ್ಣ ಶ್ರೀಧರ್ ಅವರಿಗೆ ಹಸ್ತಾಂತರಿಸಲಾಗಿದೆ. ಸ್ವಗ್ರಾಮ ಕರೇಗೌಡನಹಳ್ಳಿಯಲ್ಲಿ ಬುಧವಾರ ಅಂತ್ಯಕ್ರಿಯೆ ನಡೆಯಿತು.

ಜೀವ ರಕ್ಷಣೆಗೆ ಮೊದಲ ಆದ್ಯತೆ
‘ಅಪಘಾತದ ಸಂತ್ರಸ್ತರನ್ನು ಯಾರು ಬೇಕಾದರೂ ಆಸ್ಪತ್ರೆಗೆ ಕರೆದೊಯ್ಯಬಹುದು. ಅವರು ವೈದ್ಯರಿಗಾಗಲೀ,  ಪೊಲೀಸರಿಗಾಗಲೀ ತಮ್ಮ ವಿವರಗಳನ್ನು ನೀಡುವ ಅಗತ್ಯವಿಲ್ಲ. ತನಿಖೆಗೆ ಸಹಕರಿಸುವ ಇಚ್ಛೆ ಇದ್ದರೆ ಮಾತ್ರ ಹೆಸರು–ವಿವರ ನೀಡಬಹುದು. ನ್ಯಾಯಾಲಯಕ್ಕೆ ಬಂದು ಸಾಕ್ಷಿ ನುಡಿಯುವಂತೆ ಪೊಲೀಸರೂ ಅವರನ್ನು ಬಲವಂತ ಮಾಡುವುದಿಲ್ಲ. ಪ್ರಾಣ ರಕ್ಷಣೆಗೆ ಆದ್ಯತೆ ನೀಡಬೇಕು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT