ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಾದೇಶಿಕ–ಮಾತೃಭಾಷೆಗಳಿಗೆ ಇಂಗ್ಲಿಷ್‌ ಕುತ್ತು’

Last Updated 28 ನವೆಂಬರ್ 2013, 6:45 IST
ಅಕ್ಷರ ಗಾತ್ರ

ಮೈಸೂರು: ಆಂಗ್ಲ ಭಾಷೆ ಪ್ರಭಾವದಿಂದ ದೇಶದ ಪ್ರಾದೇಶಿಕ ಮತ್ತು ಮಾತೃಭಾಷೆಗಳು ತೀವ್ರ ಅಪಾಯ ಎದರಿಸುತ್ತಿವೆ ಎಂದು ಸ್ಟೋನಿ ಬ್ರೂಕ್‌ ವಿಶ್ವವಿದ್ಯಾನಿಲಯದ ಪ್ರೊ.ಎಸ್‌.ಎನ್‌. ಶ್ರೀಧರ್‌ ಹೇಳಿದರು.

ಭಾರತೀಯ ಭಾಷಾವಿಜ್ಞಾನ ಸಂಸ್ಥೆ ವತಿಯಿಂದ ನಗರದ ಭಾರತೀಯ ಭಾಷಾ ಸಂಸ್ಥಾನದಲ್ಲಿ ಬುಧವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ‘ಬಹುಭಾಷಾ ಪ್ರಪಂಚ: ಭಾರತೀಯ ಪರಿಭಾಷೆ’ ಕುರಿತು ಅವರು ಮಾತನಾಡಿದರು.

ಅನಗತ್ಯವಾಗಿ ಮತ್ತು ಅತಿಯಾಗಿ ಇಂಗ್ಲಿಷ್‌ ಪದಗಳನ್ನು ಬಳಸುವ ಪರಿಪಾಠ ಬೆಳೆದಿರುವುದಿರಂದ ದೇಸಿ ಭಾಷೆಗಳಲ್ಲಿನ ಅದೆಷ್ಟೋ ಪದಗಳು ಅಸ್ತಿತ್ವ ಕಳೆದುಕೊಂಡಿವೆ. ಪ್ರಾದೇಶಿಕ ಭಾಷೆಯೊಂದಿಗೆ ಇಂಗ್ಲಿಷ್‌ ಮೇಳೈಸಿ ಮಾತನಾಡುವ ರೂಢಿ ಬೆಳೆದು ಈ ಭಾಷೆಗಳ ಮೂಲ ಸೊಗಡಿಗೆ ಧಕ್ಕೆ ಉಂಟಾಗಿದೆ. ಅಲೋಚನೆ, ಗ್ರಹಿಕೆ, ಸಂಭಾಷಣೆಯಲ್ಲಿ ಅನ್ಯಭಾಷೆಯ ಪ್ರಭಾವದಿಂದಾಗ ಮಾತೃಭಾಷೆಗಳು ಅಪಾಯ ಎದುರಿಸುತ್ತಿವೆ ಎಂದು ವಿವರಿಸಿದರು.  

ಸಹಸ್ರಾರು ಸಂಸ್ಕೃತ ಮತ್ತು ಇಂಗ್ಲಿಷ್‌ ಪದಗಳು ಕನ್ನಡ ಪದಕೋಶ ಸೇರಿವೆ. ಸಂಸ್ಕೃತ, ಇಂಗ್ಲಿಷ್‌ ಅಷ್ಟೇ ಅಲ್ಲದೇ ಪ್ರಾಕೃತ, ಮರಾಠಿ, ಹಿಂದಿ, ಉರ್ದು ಪದಗಳೂ ಕನ್ನಡ ನಿಘಂಟನ್ನು ಸೇರಿವೆ. ಕನ್ನಡ ವ್ಯಾಕರಣ, ಪದ ಸಂಪತ್ತಿನಲ್ಲಿ ಸಂಸ್ಕೃತದ ಪ್ರಭಾವವನ್ನು ತಗ್ಗಿಸಿ ಕನ್ನಡ ಸೊಬಗು ಸೃಜಿಸುವ ಅಗತ್ಯ ಇದೆ ಎಂದು ಹೇಳಿದರು.

ನಗರದ ಪ್ರದೇಶಗಳಲ್ಲಿ ಬಹಳಷ್ಟು ಪೋಷಕರು ಮನೆಯಲ್ಲಿ ಇಂಗ್ಲಿಷ್‌ ಮಾತನಾಡುವಂತೆ ಮಕ್ಕಳನ್ನು ಪ್ರೇರೇಪಿಸುತ್ತಾರೆ. ಬಹಳಷ್ಟು ಮಕ್ಕಳು ಶಾಲೆಯಲ್ಲಿಯೂ ಮಾತೃಭಾಷೆ ಓದುವುದಿಲ್ಲ, ಹೀಗಾಗಿ ಅವರಿಗೆ ಆ ಭಾಷೆಯ ಮೇಲೆ ಹಿಡಿತ ಇರುವುದಿಲ್ಲ. ಆಂಗ್ಲ ಭಾಷೆಯು ಅಧಿಪತ್ಯ–ಪಾರುಪತ್ಯ ಮೆರೆಯುತ್ತಿದೆ ಎಂದರು.

ಭಾರತ ಬಹುಭಾಷೆಗಳ ದೇಶವಾಗಿದೆ. ಭಾಷೆಗೆ ಸಂಬಂಧಿಸಿದಂತೆಯೇ ದೇಶದಲ್ಲಿ ಬಹಳಷ್ಟು ಚಳವಳಿ ನಡೆದಿವೆ. ವಿವಿಧ ಚಳವಳಿಗಳು, ಧರ್ಮಗಳು, ಸಂಸ್ಕೃತಿ ಗುರುತಿಸುವಲ್ಲಿ ಭಾಷೆಯ ಕೊಡುಗೆ ಮಹತ್ತರವಾದುದು ಎಂದರು.
ದೇಶ–ವಿದೇಶಗಳ 200 ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT