ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಂಗಭೂಮಿ ವರ್ತಮಾನಕ್ಕೆ ಸ್ಪಂದಿಸಬೇಕು’

Last Updated 21 ಜನವರಿ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಂಗಭೂಮಿಯು ವರ್ತ­ಮಾನಕ್ಕೆ ಸ್ಪಂದಿಸದಿದ್ದರೆ, ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಹೀಗಾಗಿ, ರಂಗ­ಭೂಮಿ ವರ್ತಮಾನಕ್ಕೆ ತಕ್ಕಂತೆ ಸ್ಪಂದಿಸಬೇಕು’ ಎಂದು ರಾಷ್ಟ್ರೀಯ ನಾಟಕ ಶಾಲೆ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಸಿ.ಬಸವಲಿಂಗಯ್ಯ ಹೇಳಿದರು.

ಸಾಹಿತ್ಯ ಅಕಾಡೆಮಿಯು ನಗರದ ಗುರುನಾನಕ್‌ ಭವನದಲ್ಲಿ ಬುಧವಾರ ಆಯೋಜಿಸಿದ್ದ ರಂಗಭಾರತಿ ರಾಷ್ಟ್ರೀಯ ನಾಟಕೋತ್ಸವ ಹಾಗೂ ಸಮಕಾಲೀನ ಭಾರತೀಯ ನಾಟಕ ವಿಚಾರ ಸಂಕಿ­ರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಇಷ್ಟು ದಿನ ಸಾಹಿತ್ಯ ಅಕಾಡೆ­ಮಿಯು ಸಾಹಿತ್ಯ ಕಾರ್ಯಕ್ರಮಗಳನ್ನು ಮಾತ್ರ ಮಾಡಿ ಕೈ ತೊಳೆದು­ಕೊಳ್ಳು­ತ್ತಿತ್ತು. ಆದರೆ, ಈಗ ನಾಟಕೋತ್ಸವ­ವನ್ನು ನಿಯೋಜಿಸಿ­ರುವುದು ಒಳ್ಳೆಯ ಬೆಳವಣಿಗೆ. ಇದಕ್ಕೆ ಚಂದ್ರಶೇಖರ ಕಂಬಾರ ಅವರೇ ಕಾರಣ’ ಎಂದು ಹರ್ಷ ವ್ಯಕ್ತಪಡಿಸಿದರು.

‘ರಾಷ್ಟ್ರೀಯ ನಾಟಕೋತ್ಸವವೆಂದರೆ ಕೇವಲ ಹಿಂದಿ ಭಾಷೆಯ ನಾಟಕಗಳೇ ಇರಬೇಕೆ ಎಂಬುದು ಒಂದು ಪ್ರಶ್ನೆ. ಆದರೆ, ಹಿಂದಿ ಭಾಷೆಗೆ ಒಂದು ಜನಪದ­ವಿಲ್ಲ, ಒಂದು ಸ್ಮೃತಿಯಿಲ್ಲ. ಹೀಗಾಗಿ, ಸಂಸ್ಕೃತಿಯನ್ನು ಕಟ್ಟಲು ಈ ಭಾಷೆಗೆ ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ, ‘ಸಾಹಿತಿ ಮತ್ತು ಕಲಾವಿದರು ಎಂದಿಗೂ ಜೊತೆಯಾಗಿರಬೇಕು. ಅವರಿಬ್ಬರ ಸಂಬಂಧ ತಾಯಿ ಮಗನ ಅಥವಾ ಮೈ ಮನಗಳ ಸಮ್ಮಿಲನದಂತೆ ಇರಬೇಕು’ ಎಂದರು. ಸಾಹಿತಿ ಚಂದ್ರಶೇಖರ ಕಂಬಾರ, ‘ಕವಿ ನಾಟಕವನ್ನು ಒಂದು ಕಾವ್ಯದಂತೆ ಭಾವಿಸುತ್ತಾನೆ. ನಾಟಕಕ್ಕೆ ಎರಡು ರೂಪ­ಗಳಿವೆ. ಲಿಪಿಯ ರೂಪದಲ್ಲಿ, ಇನ್ನೊಂದು ಪ್ರದರ್ಶನ ರೂಪದಲ್ಲಿರು­ತ್ತದೆ. ನಟ ಮತ್ತು ಪ್ರೇಕ್ಷಕ ಮಾತ್ರ ನಾಟಕವನ್ನು ಯಶಸ್ವಿಗೊಳಿಸಲು ಸಾಧ್ಯ. ನಾಟಕ ವರ್ತಮಾನವಾದಾಗ ಮಾತ್ರ ಹೆಚ್ಚುದಿನ ಬದುಕುತ್ತದೆ’ ಎಂದು ಹೇಳಿದರು.

‘ನಾಟಕೋತ್ಸವದ ವಿಚಾರ ಸಂಕಿರಣ­ದಲ್ಲಿ ಕನ್ನಡ ರಂಗಭೂಮಿ ನಿನ್ನೆ, ಇಂದು, ನಾಳೆ ಎಂಬ ವಿಷಯದ ಕುರಿತು ಚರ್ಚೆಗೆ ಆಹ್ವಾನ ನೀಡಿದ್ದೆವು. ಆದರೆ, ಆಹ್ವಾನ ಪಡೆದವರು ಯಾರೂ ಬಂದಿ­ರಲಿಲ್ಲ. ಹೀಗಾಗಿ, ರದ್ದುಮಾಡ­ಬೇಕಾ­ಯಿತು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೋವು ತಂದಿದೆ: ಬಿ. ಜಯಶ್ರೀ ಬೇಸರ
‘ಕಂಬಾರ ಅವರು ರಚಿಸಿದ ‘ಕರಿಮಾಯಿ ಕಾದಂಬರಿ’ಯನ್ನು ಕಷ್ಟದಿಂದ ರಂಗರೂಪಕ್ಕೆ ತಂದಿದ್ದೆ. ಇಲ್ಲಿ ಅದರ ಹಿಂದಿ ರೂಪಾಂತರ ಪ್ರದರ್ಶನವಾಗಿದೆ. ಆದರೆ, ಆಹ್ವಾನ ಪತ್ರ­ದಲ್ಲಿ ಅನುವಾದಕ ಮತ್ತು ನಾಟಕಕಾ­ರರ ಹೆಸರು ನಮೂದಿಸದೆ ಇರುವುದು ನೋವು ತಂದಿದೆ’ ಎಂದು ಬಿ.ಜಯಶ್ರೀ ನುಡಿದರು.

‘ನಿರ್ದೇಶಕನಿಗೆ ನಾಟಕಕಾರನ ಮಾಹಿತಿಯೇ ಇಲ್ಲ­ವೆಂದಾದರೆ, ಅವನಿಗೆ ನಾಟಕ ನಿರ್ದೇಶನ ಮಾಡಲು ಹೇಗೆ ಸಾಧ್ಯ. ನಾಟಕಕಾರರನ್ನು ಗುರುತಿಸದೆ ಇರುವುದು ತಪ್ಪು’ ಎಂದರು. ಆಗ ವೇದಿಕೆಯಲ್ಲಿದ್ದ ಸಾಹಿತ್ಯ ಅಕಾಡೆಮಿ ಕಾರ್ಯ­ದರ್ಶಿ ಮಹಾಲಿಂಗೇಶ ಅವರು ಕ್ಷಮೆಯಾಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಂಬಾರ, ‘ಈ ರೀತಿ ಆಗಿದ್ದಕ್ಕೆ ವಿಷಾದವಿದೆ. ಈ ಕುರಿತು ತಂಡದವರನ್ನು ಪ್ರಶ್ನಿಸಿದಾಗ, ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಈ ತರಹದ ಒಂದು ಲಿಪಿಯಿತ್ತು. ಅದನ್ನು ಬಳಸಿಕೊಂಡಿದ್ದೇವೆ ಎಂದು ಹೇಳಿದ್ದರು’ ಎಂದರು.

‘ಹೀಗಾಗಿಯೇ ನಾಟಕವನ್ನು ನಾನು ಪೂರ್ಣವಾಗಿ ನೋಡಿದೆ. ಕರಿಮಾಯಿಯನ್ನು ಇಲ್ಲಿ ಸಂಪೂರ್ಣವಾಗಿ ಬದಲಾಯಿಸಿ ರೂಪಿಸಿದ್ದಾರೆ. ಒಂದು ಕೃತಿಯನ್ನು ಅಳವಡಿಸಿಕೊಂಡು, ಬೇರೆ ಬೇರೆ ರೀತಿಯಲ್ಲಿ ಪ್ರಸ್ತುತಪಡಿಸುತ್ತಾರೆ. ಆದರೆ, ಒಬ್ಬರ ಕೃತಿಯನ್ನು ಈ ರೀತಿ ಕದಿಯುವುದು ಸರಿಯಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT