ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಾಲ್ಮೀಕಿ ಯಾರು?’ ಕೃತಿ ನಿಷೇಧ ರದ್ದು

ಲೇಖಕ ನಾರಾಯಣಾಚಾರ್ಯ ವಿರುದ್ಧದ ಎಫ್ಐಆರ್‌ ವಜಾ
Last Updated 16 ಜುಲೈ 2015, 19:30 IST
ಅಕ್ಷರ ಗಾತ್ರ

ಧಾರವಾಡ: ಡಾ.ಕೆ.ಎಸ್‌. ನಾರಾಯಣಾಚಾರ್ಯ ಅವರ ‘ವಾಲ್ಮೀಕಿ ಯಾರು?’ ಕೃತಿ ನಿಷೇಧಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ಸರ್ಕಾರ ಹಿಂಪಡೆದಿದೆ.

ಹೀಗಾಗಿ ಕೃತಿಯ ನಿಷೇಧ ಪ್ರಶ್ನಿಸಿ  ದಾಖಲಾಗಿದ್ದ  ಕ್ರಿಮಿನಲ್ ಅರ್ಜಿಯನ್ನು ಹೈಕೋರ್ಟ್‌ನ ಧಾರವಾಡ ಪೀಠ ಗುರುವಾರ ಇತ್ಯರ್ಥಗೊಳಿಸಿದೆ.

ವಿವಾದಿತ ಅಂಶಗಳನ್ನು ಒಳಗೊಂಡಿದೆ ಎನ್ನುವ ಅಭಿಪ್ರಾಯದ ಹಿನ್ನೆಲೆಯಲ್ಲಿ ‘ವಾಲ್ಮೀಕಿ ಯಾರು?’ ಕೃತಿ  ನಿಷೇಧಿಸಿ 2014ರ ಆಗಸ್ಟ್‌ 28ರಂದು ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅಲ್ಲದೇ ಲೇಖಕ ಮತ್ತು ಪ್ರಕಾಶಕರ ವಿರುದ್ಧ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಅಧಿಸೂಚನೆ ಮತ್ತು ಎಫ್‌ಐಆರ್‌ ರದ್ದು ಕೋರಿ ಪ್ರಕಾಶಕ ಹುಬ್ಬಳ್ಳಿಯ ಸಾಹಿತ್ಯ ಭಂಡಾರದ ಎಂ.ಎ.ಸುಬ್ರಮಣ್ಯ ಮತ್ತು ನಾರಾಯಣಾಚಾರ್ಯ  ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ಗುರುವಾರ ನ್ಯಾಯಮೂರ್ತಿ ರವಿ ಮಳಿಮಠ, ಪಿ.ಎಸ್‌.ದಿನೇಶಕುಮಾರ ಮತ್ತು ಬಿ.ವೀರಪ್ಪ ಅವರಿದ್ದ ತ್ರಿಸದಸ್ಯ ಪೀಠದ ಮುಂದೆ ನಡೆಯಿತು.

ಆಗ ಸರ್ಕಾರದ ವಕೀಲರು, ಡಾ. ‘ವಾಲ್ಮೀಕಿ ಯಾರು?’ ಕೃತಿ ಮುಟ್ಟುಗೋಲಿಗೆ ಹೊರಡಿಸಿದ್ದ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ  ಹೊರಡಿಸಿದ ಅಧಿಸೂಚನೆಯ ಪ್ರತಿಯನ್ನು ಹಾಜರುಪಡಿಸಿದರು.

ಇದನ್ನು ಒಪ್ಪಿಕೊಂಡ ನ್ಯಾಯಪೀಠ, ಅಧಿಸೂಚನೆ ಹಿಂಪಡೆದದ್ದರಿಂದ ಕೃತಿಕಾರ ಮತ್ತು ಪ್ರಕಾಶಕರ ವಿರುದ್ಧ ಸಲ್ಲಿಕೆಯಾಗಿರುವ ಎಫ್‌ಐಆರ್‌ ಕೂಡಾ ರದ್ದುಗೊಳ್ಳುತ್ತದೆ ಎಂದು ಆದೇಶಿಸಿತು. ಅರ್ಜಿದಾರರ ಪರ ಮಧುಕರ ದೇಶಪಾಂಡೆ ವಕಾಲತ್ತು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT