ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ತ್ರೀಯರಿಂದ ಸಮರ್ಥ ಬರವಣಿಗೆ’

ಡಾ. ಎಸ್‌.ಎಲ್‌. ಭೈರಪ್ಪ ತುಳುನಾಡ ಪೌರಸನ್ಮಾನ ಸ್ವೀಕಾರ
Last Updated 23 ಮಾರ್ಚ್ 2015, 9:30 IST
ಅಕ್ಷರ ಗಾತ್ರ

ಮಂಗಳೂರು: ಸಾಹಿತ್ಯದಲ್ಲಿ ಸ್ತ್ರೀ ಸಾಹಿತಿ, ಪುರುಷ ಸಾಹಿತಿ ಎಂಬ ಪ್ರತ್ಯೇಕತೆ ಇರಬಾರದು. ಪುರುಷ ಸಾಹಿತಿಗಳಷ್ಟೇ ಸಮರ್ಥವಾಗಿ ಸ್ತ್ರೀಯರೂ ಬರೆಯ­ಬಲ್ಲರು ಎಂದು ಹಿರಿಯ ಸಾಹಿತಿ ಎಸ್‌. ಎಲ್‌. ಭೈರಪ್ಪ ಹೇಳಿದರು.

ಶನಿವಾರ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ವತಿಯಿಂದ ‘ತುಳುನಾಡ ಪೌರಸನ್ಮಾನ’ವನ್ನು ಸ್ವೀಕರಿಸಿ ಮಾತ­ನಾಡಿದ ಅವರು, ಸಾಹಿತಿಗಳ ನಡುವೆ ಯಾವುದೇ ಭೇದ ಇರಬಾರದು. ಪ್ರತಿ­ಯೊಬ್ಬ ಸಾಹಿತಿಯೂ ಜೀವನವನ್ನು ಅನುಭವಿಸಿ ಬರೆಯುವ ಶಕ್ತಿ ಹೊಂದಿ­ರುತ್ತಾರೆ. ಬರಹದಲ್ಲಿ ಮೇಲು, ಕೀಳು, ಅಸಮಾನ ಎಂಬ ಭೇದ ಇರುವುದಿಲ್ಲ ಎಂದರು. 

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ತಮಗೆ ಸರ್ಕಾರದ ಕಡೆಯಿಂದ ಸವಲತ್ತುಗಳು ಸಿಗಲಿಲ್ಲ ಎಂದು ದೂರುತ್ತಾ ಕೂರದೇ ಸ್ವತಂತ್ರವಾಗಿ ಮುನ್ನಡೆದವರು.  ಜಿಲ್ಲೆಯಲ್ಲಿ ಕಷ್ಟಗಳು ಬಂದಾಗ ಮುಂಬೈ ಕಡೆಗೆ ಹೋಗಿ ಶ್ರಮದಿಂದ ದುಡಿಮೆ ಮಾಡಿ ಯಶಸ್ಸನ್ನು ಗಳಿಸಿದವರು. ಆದ್ದರಿಂದಲೇ ಇಂದು ದಕ್ಷಿಣ ಕನ್ನಡ ಜಿಲ್ಲೆ  ಶಿಕ್ಷಣ, ಆರೋಗ್ಯ ಮತ್ತು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿ ಜಿಲ್ಲೆಯಾಗಿ ಮೂಡಿ ಬಂದಿದೆ ಎಂದು ಅವರು ಹೇಳಿದರು.

ಇಲ್ಲಿನ ಸಾಹಿತಿಗಳೂ ತಮ್ಮ ಕೃತಿಗಳು ಪ್ರಕಟವಾಗಲಿಲ್ಲ ಎಂದು ದೂರುತ್ತ ಕುಳಿತವರಲ್ಲ. ಶಿವರಾಮ ಕಾರಂತರು ಕೂಡ ಸ್ವಂತ ಪ್ರಕಾಶನ ಸಂಸ್ಥೆಯನ್ನು ಕಟ್ಟಿ ಸಾಹಿತ್ಯ ಕೃಷಿಯನ್ನು ಮುಂದುವ­ರೆಸಿಕೊಂಡು ಹೋಗಿರುವುದನ್ನು ಗಮನಿ­ಸ­­ಬಹುದು ಎಂದು ಹೇಳಿದ ಅವರು, ತಮ್ಮ ಕೃತಿಗಳನ್ನು ವಿರೋಧಿಸಿ ಬಂದ ಪ್ರತಿಕ್ರಿಯೆಗಳು, ಟೀಕೆಗಳ ಬಗ್ಗೆ ಮಾತನಾಡುತ್ತ, ‘ಅವೆಲ್ಲ ನನಗೆ ಸಂಬಂಧಿ­ಸಿದ್ದಲ್ಲ. ಒಂದು ಕಾರ್ಯಕ್ರಮ ಸಂಯೋಜಿಸಿದಾಗ ಅಲ್ಲಿ ಅಂತಹ ಘಟನೆಗಳು ನಡೆದರೆ ಅದರ ಬಗ್ಗೆ ಸಂಘಟಕರು ತಲೆಕೆಡಿಸಿಕೊಳ್ಳಬೇಕಷ್ಟೆ..’ ಎಂದು ಹೇಳಿದರು.

ಎಸ್‌. ಎಲ್‌. ಭೈರಪ್ಪ ಅವರ ಪುಸ್ತಕಗಳ ಮಾರಾಟ ಮತ್ತು ಪ್ರದರ್ಶನ­ವನ್ನು ಡಾ. ಲೀಲಾ ಉಪಾಧ್ಯಾಯ, ಕವಿ ಮಹಮ್ಮದ್‌ ಬಡ್ಡೂರು, ಪ್ರೊ.ಎಂ.ಬಿ. ಪುರಾಣಿಕ್‌ ಉದ್ಘಾಟಿಸಿದರು. ಭೈರಪ್ಪ ಅವರನ್ನು ಮೆರವಣಿಗೆಯಲ್ಲಿ ಗೌರವ­ದಿಂದ ವೇದಿಕೆಗೆ ಕರೆತರಕಲಾಯಿತು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಸ್ವಾಗತಿಸಿದರು. ಶಾಸಕ ಗಣೇಶ್‌ ಕಾರ್ಣಿಕ್‌, ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಡಾ. ಕೆ. ಪಿ.ರಾವ್‌, ಕಾಸರಗೋಡು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಸ್‌. ವಿ. ಭಟ್‌, ಮುಂಬೈ ಘಟಕದ ಅಧ್ಯಕ್ಷ ಎಚ್‌.ಬಿ. ಎಲ್‌. ರಾವ್‌ ಮತ್ತು ಶ್ರೀನಾಥ್‌ , ಮೋಹನ್‌ ರಾವ್‌, ಐತಪ್ಪ ನಾಯಕ್‌, ವಿಜಯಲಕ್ಷ್ಮಿ ಶೆಟ್ಟಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT