ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯಲ್ಲಿ ಓಡುತ್ತೆ, ಆಗಸದಲ್ಲೂ ಹಾರುತ್ತೆ!

ಇದು ಟೂ ಇನ್‌ ಒನ್ ವಾಹನ
Last Updated 19 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ನೆಲ, ಜಲದ ಮೇಲೆ ಸಾಗುವ ‘ಹೋವರ್‌ ಕ್ರಾಫ್ಟ್’ ಬಗ್ಗೆ ನಾವು ಕೇಳಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ರಸ್ತೆಯಲ್ಲಿ ಸಾಗುವ ಮತ್ತು ಆಕಾಶದಲ್ಲೂ ಹಾರುವ ವಾಹನಗಳು ಕಾಣಲಿಸವೆ. ಈ ಸಂಬಂಧ ತಂತ್ರಜ್ಞರು ಸಾಕಷ್ಟು ವರ್ಷಗಳಿಂದ ಮಾಡಿದ್ದ ಸಂಶೋಧನೆ ಫಲಕೊಟ್ಟಿದೆ. ಹಲವು ದೇಶಗಳಲ್ಲಿ ‘ಹಾರುವ ಕಾರು’ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಜಾಗತಿಕ ಮಟ್ಟದ ಆಟೊಮೊಬೈಲ್ ಕಂಪನಿಗಳು ಸ್ಪರ್ಧೆಗಿಳಿದಿವೆ. ಆದರೆ ಇದಕ್ಕಿಂತ ಭಿನ್ನವಾಗಿ ಆಲೋಚಿಸುವ ಕಂಪನಿಗಳು ‘ಟೂ– ಇನ್‌ ಒನ್‌’ ಎನ್ನುವಂತೆ ಎರಡು ರೀತಿಯಲ್ಲಿ ಪ್ರಯೋಜನಕ್ಕೆ ಬರುವ ವಾಹನಗಳನ್ನು ತಯಾರು ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ, ಟ್ರಾಫಿಕ್ ಜಾಮ್ ಆದಾಗ ರಸ್ತೆಯಲ್ಲೇ ರೆಕ್ಕೆ ಬಿಚ್ಚಿಕೊಂಡು ಗಗನದತ್ತ ಹಾರಿ, ನಿಗದಿತ ಸ್ಥಳ ತಲುಪುವಂತಹ ವಾಹನದಲ್ಲಿ ಓಡಾಡುವ ಅವಕಾಶ ಸಿಗಲಿದೆ! ಈ ’ಟೂ ಇನ್‌ ಒನ್’ ವಾಹನಗಳಲ್ಲಿ ಹಲವು ವಿಧಗಳಿವೆ. ಅವುಗಳ ಪರಿಚಯ ಇಲ್ಲಿದೆ.

ಬಾಕ್ಸ್

ಪಿಎಎಲ್‌– ವಿ

ಪೈಲಟ್ ಜಾನ್‌ ಬಕ್ಕರ್‌ ಎಂಬುವವರು 2007 ರಲ್ಲಿ ಸ್ಥಾಪಿಸಿದ ಡಚ್‌ ಕಂಪನಿಯ Personal Air and Land Vehicle ಹೆಸರಿನ ಈ ವಾಹನ ಸಹ ರಸ್ತೆಯಲ್ಲಿ ಓಡುತ್ತೆ, ಆಕಾಶದಲ್ಲಿ ಹಾರುತ್ತೆ. ಮುಂದಿನ ವರ್ಷದಲ್ಲಿ 50 ರಿಂದ 100 ವಾಹನಗಳನ್ನು ಕಂಪನಿ ತಯಾರು ಮಾಡಲಿದೆ. ಈ ವರ್ಷಾಂತ್ಯದಲ್ಲಿ ಮೊದಲ ವಾಹನಗಳು ರಸ್ತೆ ಮತ್ತು ಆಕಾಶಕ್ಕೆ ಲಗ್ಗೆ ಇಡಲಿವೆ.

ಏರೊಮೊಬಿಲ್‌

ಸ್ಲೋವಾಕಿಯಾದ ಏರೊಮೊಬಿಲ್‌ ಕಂಪನಿಯ ಈ ವಾಹನ ಕೂಡ ಗೈರೊ ಡ್ರೈವ್‌ನಂತೆ ಆಕಾಶದಲ್ಲೂ ಹಾರುತ್ತೆ, ರಸ್ತೆಯಲ್ಲೂ ಓಡುತ್ತೆ. ಈಗಾಗಲೇ ಈ ಕಂಪನಿಗೆ ಈ ರೀತಿಯ ವಾಹನ ಬೇಕು ಎಂದು ಹಲವರು ಬೇಡಿಕೆ ಇಟ್ಟಿದ್ದಾರೆ. 2020 ರ ಹೊತ್ತಿಗೆ ಇವುಗಳು ಮಾರುಕಟ್ಟೆಗೆ ಇಳಿಯಲಿವೆ. ವಾಹನ ಸವಾರರಿಗೆ ಲಭಭ್ಯವಾಗಲಿವೆ.

‘ನಾವು ವಿಶಿಷ್ಟ ವಾಹನವೊಂದನ್ನು ಮಾಡುವ ಯೋಚನೆಯಲ್ಲಿದ್ದೆವು. ಅದು ಹಾರುವ ಮತ್ತು ರಸ್ತೆ ಮೇಲೆ ಚಲಿಸುವಂಥ ವಾಹನವನ್ನೇ ತಯಾರಿಸುವ ಗುರಿ ಇತ್ತು. ಈಗ ಆ ಗುರಿ ತಲುಪಿದ್ದೇವೆ’ ಎನ್ನುತ್ತಾರೆ ಏರೊ ಮೊಬಿಲ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜುರಾಜ್‌ ವಾಕುಲಿಕ್‌. ಸದ್ಯಕ್ಕೆ ಈ ಕಂಪನಿ 500 ವಾಹನಗಳನ್ನು ತಯಾರು ಮಾಡಲಿದೆ.

ಏರೊಮೊಬಿಲ್ ತನ್ನ ವಿಶಿಷ್ಟ ರೂಪದಿಂದಲೇ ಎಲ್ಲರನ್ನು ಸೆಳೆಯುತ್ತದೆ. ಇದರ ಮೂತಿ ಹಾರಾಟಕ್ಕೆ ಸಹಾಯ ಮಾಡಿದರೆ, ಹಾರಿದ ನಂತರ ರೆಕ್ಕೆಗಳನ್ನು ಮಡಿಸಿಕೊಂಡು ರಸ್ತೆ ಮೇಲೆ ಚಲಿಸಲು ಸೂಕ್ತವಾಗುವಂತಹ ವ್ಯವಸ್ಥೆ ಅಳವಡಿಸಲಾಗಿದೆ.

‘ನೀವು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆದ ನಂತರ ಅದನ್ನು ಕಾರ್‌ ಆಗಿ ಮಾಡಿಕೊಂಡು ರಸ್ತೆ ಮೇಲೆ ಸಾಗಬಹುದು. ಆಗ ಇದು ಹಾರಿದ ವಿಮಾನ ಎಂದು ತಿಳಿಯವುದೇ ಇಲ್ಲ’ ಎನ್ನುತ್ತಾರೆ ಏರೊಮೊಬಿಲ್‌ನ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಸೈಮನ್‌ ಬೆಂಡ್ರೆ.

‘ಗೈರೊ ಡ್ರೈವ್‌’

ಜೆಕ್‌ ಗಣರಾಜ್ಯದ ಪೈಲಟ್‌ ಪಾವೆಲ್ ಬ್ರೆಜಿನಾ ಅವರ ಕನಸಿನ ಕೂಸು ಇದು. ಕೇವಲ ಹಾರುವ ಕಾರನ್ನು ಮಾತ್ರ ಆವಿಷ್ಕರಿಸುವ ಬದಲು ಇವರು ರಸ್ತೆಯಲ್ಲಿ ಓಡುವ; ಆಗಸದಲ್ಲೂ ಚಲಿಸುವ ವಾಹನವೊಂದನ್ನು ಪರಿಚಯಿಸಿದ್ದಾರೆ. ‘ಗೈರೊ ಡ್ರೈವ್‌’ ಎಂಬ ಹೆಸರಿನ ಈ ವಾಹನ ನೆಲ–ಆಗಸದಲ್ಲಿ ಸಂಚರಿಸುತ್ತದೆ.

ಸಣ್ಣ ವಿಮಾನಗಳಿಗೆ ಮೋಟಾರ್‌ಗಳನ್ನು ತಯಾರು ಮಾಡುವ ನಿರವಾನ ಸಿಸ್ಟಮ್ಸ್‌ ಕಂಪನಿಯ ಎಂಜಿನಿಯರ್‌ ಮತ್ತು ಮಾಲೀಕರೂ ಆಗಿರುವ ಪಾವೆಲ್‌ ಅವರಿಗೆ ರಸ್ತೆ ಹಾಗೂ ಆಗಸದಲ್ಲಿ ಹಾರಾಡುವ ವಾಹನವನ್ನು ತಯಾರಿಸಬೇಕು. ಅದು ವಿಶ್ವದ ಮೊದಲ ಅಧಿಕೃತ ವಾಹನವಾಗಿರಬೇಕೆಂಬ ಕನಸಿತ್ತು. ಅದು ಈಗ ಈಡೇರಿದೆ.

‘ಎಲ್ಲರೂ ಹೈಸ್ಪೀಡ್‌ ಕಾರುಗಳನ್ನು ತಯಾರಿಸಲು ಮುಂದಾಗುತ್ತಾರೆ. ಆದರೆ ಇದಕ್ಕಿಂತ ಭಿನ್ನವಾದದ್ದನ್ನು ಆಟೊಮೊಬೈಲ್ ಕ್ಷೇತ್ರಕ್ಕೆ ಪರಿಚಯಿಸಬೇಕು ಎಂಬ ಆಸೆಯಿತ್ತು’ ಎನ್ನುತ್ತಾರೆ 51ರ ಹರೆಯದ ಪಾವೆಲ್‌. 30 ವರ್ಷ ಪೈಲಟ್‌ ಆಗಿ ಕಾರ್ಯನಿರ್ವಹಿಸಿದ ಅನುಭವವಿರುವ ಪಾವೆಲ್‌ ಅವರಿಗೆ ಆಕಾಶ ಮಾರ್ಗದ ತಾಂತ್ರಿಕ ಸಮಸ್ಯೆ ಮತ್ತು ಅನುಕೂಲಗಳ ಬಗ್ಗೆ ಅರಿವಿದೆ.

ಒಮ್ಮೆ ಹಾರಾಟ ಆರಂಭಿಸಿ ಮುಗಿದ ನಂತರ ಇದನ್ನು ರಸ್ತೆಯ ಸಂಚಾರಕ್ಕೆ ಅಣಿಗೊಳಿಸಲು ಕೆಲವು ಸಿದ್ಧತೆಗಳನ್ನು ಮಾಡಬೇಕು. ಅವುಗಳಲ್ಲಿ ರೋಟರ್ ಬ್ಲೇಡ್‌ ಕೂರಿಸುವುದು ಮುಖ್ಯವಾದುದು . ಮೇಲೆ ಮತ್ತು ಕೆಳಗೆ ಸಾಗಲು ರೋಟರ್‌ ಅನ್ನು ಬಳಸುವ ಇದು ‘ಪುಷರ್‌ ಪ್ರೊಪೆಲ್ಲರ್‌’ ಅನ್ನು ಮುಂದಕ್ಕೆ ಸಾಗಲು ಬಳಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT