ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಲ್ವೊ ಚಾಲಕರಹಿತ ಎಲೆಕ್ಟ್ರಿಕ್‌ ಬಸ್

Last Updated 20 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ವಾಹನ ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ವೋಲ್ವೊ, ಇತ್ತೀಚೆಗೆ ಚಾಲಕರಹಿತ ಎಲೆಕ್ಟ್ರಿಕ್‌ ಬಸ್ ಅನ್ನು ಸಿಂಗಪುರದಲ್ಲಿ ಪರಿಚಯಿಸಿದೆ. ವೋಲ್ವೊ ಮತ್ತು ಸಿಂಗಪುರ ವಿಶ್ವವಿದ್ಯಾಲಯ ಜಂಟಿಯಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದವು. ಹಲವು ಸ್ಥಳಗಳಲ್ಲಿ ಪರೀಕ್ಷೆ ನಡೆಸಿ ಆನಂತರವೇ ಸಾರ್ವಜನಿಕ ಸಾರಿಗೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಸ್ವಯಂಚಾಲಿತ ತಂತ್ರಜ್ಞಾನದ ವಾಹನಗಳ ಪರೀಕ್ಷೆಗಳಿಗೆ ಸಿಂಗಪುರ ಸಾಕಷ್ಟು ಅವಕಾಶಗಳನ್ನು ನೀಡುತ್ತಾ ಬಂದಿದೆ. 2016ರಲ್ಲಿ ವಿಶ್ವದ ಮೊದಲ ಚಾಲಕರಹಿತ ಟ್ಯಾಕ್ಸಿ ಇಲ್ಲೇ ಕಾರ್ಯಾಚರಣೆ ಆರಂಭಿಸಿತ್ತು.

ಸ್ವೀಡನ್‌ನ ಆಟೋಮೇಕರ್ ವೋಲ್ವೊ (ಬಸ್‌ ವಿಭಾಗ) ಮತ್ತು ನಾನ್ ಯಾಂಗ್‌ ತಾಂತ್ರಿಕ ವಿಶ್ವವಿದ್ಯಾಲಯಗಳು (ಎನ್‌ಟಿಯು) ಸೇರಿ ಪೂರ್ಣ ಪ್ರಮಾಣದ ದೊಡ್ಡದಾದ ಎಲೆಕ್ಟ್ರಿಕ್‌ ಬಸ್‌ ತಯಾರಿಸಿವೆ. ವಿವಿಯ ಕ್ಯಾಂಪಸ್‌ನಲ್ಲಿ ಒಂದು ಬಸ್‌ ಅನ್ನು ಪರೀಕ್ಷೆ ಮಾಡಲಾಗುತ್ತಿದ್ದರೆ ಮತ್ತೊಂದನ್ನು ಸಿಂಗಪುರ ಸಾರ್ವಜನಿಕ ಸಾರಿಗೆ ಡಿಪೊದಲ್ಲಿ ಪರೀಕ್ಷಿಸಲಾಗುತ್ತಿದೆ.

ಪರೀಕ್ಷಾರ್ಥ ಚಾಲನೆಯಲ್ಲಿ ಕಂಡುಕೊಳ್ಳಲಾಗುವ ಅಂಶಗಳನ್ನೇ ಈ ತಂತ್ರಜ್ಞಾನದ ಸುಧಾರಣೆಗೆ ಬಳಸಿಕೊಳ್ಳಲಾಗುತ್ತದೆ ಎಂದು ವೋಲ್ವೊ ಮತ್ತು ಎನ್‌ಟಿಯು ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.

‘ವಿಶ್ವದಲ್ಲೇ ಪೂರ್ಣ ಪ್ರಮಾಣದ ಸ್ವಯಂಚಾಲಿತ ಎಲೆಕ್ಟ್ರಿಕ್‌ ಬಸ್‌ ತಯಾರು ಮಾಡಿದ್ದೇವೆ ಎಂಬ ಹೆಮ್ಮೆ ನಮಗಿದೆ’ ಎಂದು ವೋಲ್ವೊ ಬಸ್‌ ಅಧ್ಯಕ್ಷ ಹಕನ್‌ ಅಗ್ನೆವಾಲ್‌ ಹೇಳಿದ್ದಾರೆ.

‘ಸ್ವಯಂಚಾಲಿತ ವಾಹನಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೊಸದಿಕ್ಕು ನೀಡಬಲ್ಲವು ಎಂಬುದು ಇನ್ನೂ ಸಾಬೀತಾಗಬೇಕಾಗಿದೆ. ಇಲ್ಲಿ ಸಾರ್ವಜನಿಕರ ಸುರಕ್ಷತೆ, ಕಾರ್ಯಾಚರಣಾ ದಕ್ಷತೆ ಬಗ್ಗೆಯೂ ಆದ್ಯತೆ ನೀಡಬೇಕಿದೆ. ಬೆಳೆಯುತ್ತಿರುವ ನಗರಗಳಲ್ಲಿ ಹೊಸ ಅವಕಾಶಗಳನ್ನು ಇವು ಸೃಷ್ಟಿಸಲಿವೆ’ ಎನ್ನುತ್ತಾರೆ ಹಕನ್‌.

‘ಏಷ್ಯಾದಲ್ಲಿ ಪ್ರತಿ ವರ್ಷ 40 ಲಕ್ಷ ಮಂದಿ ವಾಯುಮಾಲಿನ್ಯದಿಂದ ಮೃತಪಡುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಿದ ವರದಿಯೊಂದು ತಿಳಿಸಿದೆ. ನಗರಗಳಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದ ವಾಯುಮಾಲಿನ್ಯದ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಮಹತ್ವ ಹೆಚ್ಚಿರುತ್ತದೆ.

‘ವಿದ್ಯುತ್‌ಚಾಲಿತ ವಾಹನಗಳು ಪರಿಸರ ಸ್ನೇಹಿ ಎಂದು ಯಾವುದೇ ಅನುಮಾನ ಇಲ್ಲದೆ ಹೇಳಬಹುದು. ಏಕೆಂದರೆ ಇವುಗಳು ಹೆಚ್ಚು ಇಂಧನದಕ್ಷತೆ ಹೊಂದಿರುತ್ತವೆ’ ಎನ್ನುತ್ತಾರೆ ಇವರು.

ಸ್ವಯಂಚಾಲಿತ ವಾಹನ ಎಂದಾಕ್ಷಣ ಮೊದಲಿಗೆ ಎದುರಾಗುವುದು ಸುರಕ್ಷತೆಯ ಪ್ರಶ್ನೆ. ಇದು ವೋಲ್ವೊ ಬಸ್‌ಗಳಿಗೂ ಹೊರತಲ್ಲ. ಆದರೆ ಇದನ್ನೇ ಪ್ರಮುಖವಾಗಿ ಗಣನೆಗೆ ತೆಗೆದುಕೊಂಡಿರುವ ಕಂಪನಿಯು ಸಿಂಗಪುರ ಭೂಸಾರಿಗೆ ಪ್ರಾಧಿಕಾರದ ಸಹಾಯ ಪಡೆದು ಸುರಕ್ಷತೆಗೆ ಮೊದಲ ಆದ್ಯತೆ ನೀಡಲು ಗಮನಹರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT