ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಷನ್ | ಸೀರೆಗಳ ಅಂದ ಹೆಚ್ಚಿಸುವ ‘ಆರಿ ವರ್ಕ್’

Last Updated 7 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ಮನಸೂರೆಗೊಳಿಸುವಂಥ, ವ್ಹಾ! ಎಂದು ಉದ್ಗರಿಸುವ, ಸೀರೆಗಳ ಅಂದ ಹೆಚ್ಚಿಸುವ ‘ಆರಿ ವರ್ಕ್’ ಬಗ್ಗೆ ಒಂದಿಷ್ಟು ತಿಳಿಯೋಣ.

***

ಬೇಸಿಗೆ ರಜೆಯ ಜೊತೆಗೆ, ಸಾಲು ಮದುವೆ, ಮುಂಜಿಯಂಥ ಶುಭ ಸಮಾರಂಭಗಳೂ ಶುರುವಾಗುತ್ತವೆ. ಮದುವೆಗೆ ತಕ್ಕನಾದ ರೇಷ್ಮೆ ಸೀರೆ, ಅದಕ್ಕೆ ತಕ್ಕನಾದ ಗ್ರ್ಯಾಂಡ್ ಎನಿಸುವ ರವಿಕೆ ಇಲ್ಲದಿದ್ದರೆ ಹೇಗೆ?

ಮನಸೂರೆಗೊಳಿಸುವಂಥ, ವ್ಹಾ! ಎಂದು ಉದ್ಗರಿಸುವ, ಸೀರೆಗಳ ಅಂದ ಹೆಚ್ಚಿಸುವ ‘ಆರಿ ವರ್ಕ್’ ಬಗ್ಗೆ ಒಂದಿಷ್ಟು ತಿಳಿಯೋಣ.

ಹಬ್ಬ ಮಾತ್ರವಲ್ಲ, ಎಲ್ಲ ಶುಭ ಸಮಾರಂಭಗಳಲ್ಲೂ ಉಡುವ ಸೀರೆಗಳ ಜೊತೆಗೆ ಹುಬ್ಬೇರಿಸಿ ನೋಡುವಂಥ ಡಿಸೈನರಿ ಬ್ಲೌಸ್‌ಗಳನ್ನು ತೊಡುವುದು ಇತ್ತೀಚೆಗೆ ಫ್ಯಾಷನ್ ಆಗಿದೆ.

ಕನಿಷ್ಠ ನಾಲ್ಕರಿಂದ ಐದು ಸಾವಿರ ರೂಪಾಯಿ ಕೊಟ್ಟು ತರುವ ಸೀರೆಗೂ ಆರಿ ವರ್ಕ್ ಇರುವ ರವಿಕೆ ತೊಟ್ಟಾಗಲೇ ಅದರ ಅಂದ ದುಪ್ಪಾಟ್ಟಾಗೋದು ಎನ್ನುವ ಅಭಿಪ್ರಾಯ ಹೆಣ್ಮಕ್ಕಳದ್ದು. ಹೀಗಿರುವಾಗ ಮದುಮಗಳ ಸೀರೆ, ಬ್ಲೌಸೆ ಕತೆ ನೀವೆ ಊಹಿಸಿ.

ಬಗೆ ಬಗೆಯ ವಿನ್ಯಾಸಗಳು
ಆರಿ ವರ್ಕ್‌ಗೆ ಇತ್ತೀಚೆಗೆ ಬಹು ಬೇಡಿಕೆ ಬಂದಿದೆ. ಬಗೆಬಗೆಯ ವಿನ್ಯಾಸಗಳನ್ನು ಹೊಂದಿರುವುದೇ ಇದರ ವಿಶೇಷ. ಇದರಲ್ಲಿ ಚೈನ್ ಸ್ಟಿಚ್, ಜರದೋಶಿ, ಕುಂದನ್ ವರ್ಕ್, ಥ್ರೆಡ್ ವರ್ಕ್, ಗಂಟನ್ ವರ್ಕ್, ಬೀಟ್ಸ್, ಕವರಿಂಗ್, ಕಟಿಂಗ್ ವರ್ಕ್, ನೆಟ್‌ ಕ್ಲಾಥ್‌ ವರ್ಕ್‌, ಲಕ್ಷ್ಮಿ ಪೆಂಡೆಂಟ್, ಕಾಯಿನ್ಸ್ ವರ್ಕ್... ಹೀಗೆ ಹಲವು ವಿಧಗಳನ್ನು ಕಾಣಬಹುದು.

ಅಲ್ಲದೇ, ಯಂತ್ರದ ಮೂಲಕ ಮತ್ತು ಕೈಯಿಂದಲೇ ವಿನ್ಯಾಸ ಮಾಡುವ ‘ಆರಿ ವರ್ಕ್’ ಸಹ ಇದೆ. ಕೈಯಿಂದ ಮಾಡುವ ವಿನ್ಯಾಸಗಳು ಹೆಚ್ಚು ಬಾಳಿಕೆ, ತಾಳಿಕೆ ಬರುವಂಥವು. ಹಾಗಾಗಿ ಇದಕ್ಕೆ ‌ಹೆಚ್ಚು ಬೇಡಿಕೆ. ಈ ಕಲಾತ್ಮಕ ವಿನ್ಯಾಸ ಮಾಡಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಕಡಿಮೆ ಅವಧಿ ಇರುವವರು ಯಂತ್ರದ ಮೂಲಕ ಮಾಡುವ ವಿನ್ಯಾಸಗಳನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ.

ಸರಳ ಸಮಾರಂಭಗಳಿಗೆ ಬಾರ್ಡರ್, ಥ್ರೆಡ್ ವರ್ಕ್ ಇರುವ, ಅದ್ಧೂರಿ ಸಮಾರಂಭಗಳಿಗೆ ಹೆವಿ ವರ್ಕ್ ಡಿಸೈನರಿ ಬ್ಲೌಜ್‌ಗಳನ್ನು ಧರಿಸಬಹುದು.

ವಧುವಿಗಾಗೆ ವಿಶೇಷ ವಿನ್ಯಾಸಗಳು: ಮದುವೆಯಲ್ಲಿ ವಧುವಿನ ಅಲಂಕಾರ ಎಲ್ಲರ ಗಮನವನ್ನೂ ಸೆಳೆಯುವಂಥದ್ದು. ಹಾಗಾಗಿ, ವಧುವಿಗಾಗಿಯೇ ವಿಶಿಷ್ಟವಾದ ಆರಿ ವರ್ಕ್ ‌ ಬ್ಲೌಸ್ ವಿನ್ಯಾಸ ಮಾಡಲಾಗುತ್ತದೆ. ಈ ರೀತಿ ವಿಶೇಷ ವಿನ್ಯಾಸಕ್ಕೆ ಬಹು ಬೇಡಿಕೆಯೂ ಇದೆ. ಅಷ್ಟೇ ಅಲ್ಲ, ಬ್ಲೌಸ್‌– ಸೀರೆ ಮೆಲೆ ವಧುವರರ ಚಿತ್ರವಿರುವ, ಧಾರೆ ಎರೆಯುವ, ಅಂಬಾರಿ, ಪಲ್ಲಕ್ಕಿಯಲ್ಲಿ ವಧು, ವರರು ಬರುವಂತಹ ದೃಶ್ಯಗಳ ವಿನ್ಯಾಸವನ್ನೂ ಮಾಡಿಸಬಹುದು.

ಸಾಧಾರಣ ವಿನ್ಯಾಸಗಳಿಗೆ ಕನಿಷ್ಟ ₹1,000 ದಿಂದ ₹ 4,000, ಅತ್ಯಧಿಕ ಅಲಂಕಾರಯುತ ವಿನ್ಯಾಸಗಳಿಗೆ ಗರಿಷ್ಟ ₹20,000 - ₹30,000 ವರೆಗೂ ದರವಿದೆ. ವಿನ್ಯಾಸದ ಆಯ್ಕೆ, ಬಳಸುವ ಸಾಮಗ್ರಿ, ಬೇಕಾಗುವ ಸಮಯದ ಮೇಲೆ ದರ ನಿರ್ಧಾರವಾಗುತ್ತದೆ ಎನ್ನುತ್ತಾರೆ ವಿಜಯಪುರದ ಆರಿ ವರ್ಕ್ ಡಿಸೈನರ್ ರಾಣಿ ಬಿ.

ಮದುವೆ, ಹಬ್ಬದ ಸೀಸನ್‌ಗಳಲ್ಲಿ ಆರ್ಡರ್‌ಗಳು ಹೆಚ್ಚಾಗಿರುತ್ತವೆ. ಬಹುತೇಕರು ಕೈಯಿಂದ ಮಾಡುವ ವಿನ್ಯಾಸಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದು ಅವರ ಅಭಿಪ್ರಾಯ.

ಹೆಚ್ಚು ತಾಳ್ಮೆ, ಸಮಯ ಬೇಡುವ ಕಲೆ: ‘ಇದು ಹೆಚ್ಚು ತಾಳ್ಮೆ, ಸಮಯ ಬೇಡುವ ಕಲೆ. ಇತ್ತೀಚೆಗೆ ಬಹುತೇಕ ಹೆಣ್ಣುಮಕ್ಕಳು ಈ ಕಲೆ ಕಲಿಯುವತ್ತ ಆಸಕ್ತಿ ತೋರುತ್ತಿದ್ದಾರೆ. ನಾವು ಉದ್ಯೋಗ ಮಾಡುತ್ತಲೇ, ಈ ಕಲೆಯನ್ನು ಬೇರೆಯವರಿಗೂ ಕಲಿಸುತ್ತಿದ್ದೇವೆ. ಮೂರು, ಆರು ತಿಂಗಳ ತರಬೇತಿ ಪಡೆದು ಉದ್ಯೋಗಿಗಳಾಗುತ್ತ, ಸ್ವಾವಲಂಬಿಗಳಾಗುತ್ತಿದ್ದಾರೆ’ ಎನ್ನುವುದು ಅವರ ಮಾತು.

ಸಿದ್ಧ ಬ್ಲೌಸ್‌ಗಳು ಲಭ್ಯ: ಈಗೀಗ ಅಂಗಡಿಗಳಲ್ಲೂ ರೆಡೆಮೇಡ್‌ ಆರಿ ವರ್ಕ್‌ ವಿನ್ಯಾಸದ ಸೀರೆ, ಬ್ಲೌಸ್‌ಗಳು ಸಿಗುತ್ತಿವೆ. ವೈವಿಧ್ಯಮಯ ವಿನ್ಯಾಸಗಳ ಬ್ಲೌಸ್‌ಗಳೂ ಸಿಗುತ್ತವೆ. ಅವುಗಳ ಗುಣಮಟ್ಟ ಆಧರಿಸಿ ಖರೀದಿಸುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT