ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget 2024 | ಹೂಡಿಕೆಯ ಭರವಸೆ: ಉದ್ಯೋಗದ ಆಸೆ

ಮಂಡ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆ: 2025ರಲ್ಲಿ ಹೂಡಿಕೆದಾರರ ಸಮಾವೇಶ
Published 17 ಫೆಬ್ರುವರಿ 2024, 0:30 IST
Last Updated 17 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಕೈಗಾರಿಕೆ ವಲಯದಲ್ಲಿ ‌ಉದ್ಯೋಗ ಸೃಷ್ಟಿ ಭರವಸೆ ಮೂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಂಪನ್ಮೂಲ ಕ್ರೋಡೀಕರಣಕ್ಕೆ ಆಸ್ತಿಗಳ ನಗದೀಕರಣದ ನೀತಿಗೆ ಮೊರೆಹೋಗಿದ್ದಾರೆ.

ಕೈಗಾರಿಕಾ ಅಭಿವೃದ್ಧಿಯಲ್ಲಿ ಕರ್ನಾಟಕದ ಉನ್ನತ ಸ್ಥಾನವನ್ನು ಉಳಿಸಿಕೊಳ್ಳಲು ಹಾಗೂ ಇನ್ನೂ ಹೆಚ್ಚು ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಹೊಸ ಕೈಗಾರಿಕಾ ನೀತಿ ರೂಪಿಸುವುದಾಗಿ ಪ್ರಕಟಿಸಿದ್ದಾರೆ. ಇದಕ್ಕೆ ಪೂರಕವಾಗಿ 2025ರ ಫೆಬ್ರುವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜಿಸುವುದಾಗಿಯೂ ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ.

ಹೊಸ ಜವಳಿ ನೀತಿ, ಸುಲಭವಾಗಿ ಮರಳು ಒದಗಿಸುವುದೂ ಸೇರಿ ಹಲವು ಹೊಸ ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಕಟಿಸಿದ್ದರೂ ನಿರ್ದಿಷ್ಟ ಮೊತ್ತ ನಿಗದಿಪಡಿಸಿಲ್ಲ. ಬಹುತೇಕ ಯೋಜನೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳುವುದಾಗಿ ಪ್ರಕಟಿಸಿದ್ದಾರೆ.

ಮೈ ಶುಗರ್: ಸಂಪನ್ಮೂಲ ಕ್ರೋಡೀಕರಣ

ಮಂಡ್ಯದ ಮೈಶುಗರ್‌ ಕಾರ್ಖಾನೆಯ ಆವರಣದಲ್ಲಿ ಹೊಸ ಸಕ್ಕರೆ ಕಾರ್ಖಾನೆ ನಿರ್ಮಿಸುವುದಾಗಿ ಘೋಷಿಸಲಾಗಿದೆ. ಸರ್ಕಾರದ ಅನುದಾನ, ಇತರೆ ಮೂಲಗಳು ಹಾಗೂ ಕಾರ್ಖಾನೆಯ ಆಸ್ತಿ ನಗದೀಕರಣಗೊಳಿಸುವ ಮೂಲಕ ಸಂಪನ್ಮೂಲ ಕ್ರೋಡೀಕರಿಸಲು ಉದ್ದೇಶಿಸಲಾಗಿದೆ.

ಬೆಂಗಳೂರು ಸಮೀಪ ಸುಮಾರು ಎರಡು ಸಾವಿರ ಎಕರೆ ಪ್ರದೇಶದಲ್ಲಿ ವಿಶ್ವ ದರ್ಜೆಯ ಜ್ಞಾನ, ಆರೋಗ್ಯ ರಕ್ಷಣೆ‌, ನಾವೀನ್ಯ ಮತ್ತು ಸಂಶೋಧನಾ ನಗರ (ಕೆಚ್‌ಐಆರ್ ಸಿಟಿ) ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯಿಂದ ಅಂದಾಜು ₹40 ಸಾವಿರ ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 80 ಸಾವಿರ ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆಯಿದೆ ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಸಹಭಾಗಿತ್ವದಲ್ಲಿ ಬೆಂಗಳೂರು-ಮುಂಬೈ ಆರ್ಥಿಕ ಕಾರಿಡಾರ್‌ ಯೋಜನೆಯಡಿ ಧಾರವಾಡ ಸಮೀಪ ಸುಮಾರು 6,000 ಎಕರೆ ಜಮೀನಿನಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಒತ್ತು ನೀಡುವ ಸಂಬಂಧ ‘ಕೈಗಾರಿಕಾ ನೋಡ್‘ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈ ಮೂಲಕ ಉತ್ತರ ಕರ್ನಾಟಕದ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಾಗೂ ಆರ್ಥಿಕ ಬೆಳವಣಿಗೆಗಳಿಗೆ ಉತ್ತೇಜನ ನೀಡಲು ತೀರ್ಮಾನಿಸಲಾಗಿದೆ.

ಜವಳಿ ಉದ್ಯಮ: ಉದ್ಯೋಗ ಸೃಷ್ಟಿಯ ಮಂತ್ರ

ರಾಜ್ಯದಲ್ಲಿ ಜವಳಿ ಹಾಗೂ ನೇಕಾರಿಕೆ ಅಭಿವೃದ್ಧಿ, ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಸಲು 2024-29ರ ಅವಧಿಗೆ ₹10 ಸಾವಿರ ಕೋಟಿ ಬಂಡವಾಳ ಹೂಡಿಕೆ ಹಾಗೂ 2 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ಹೊಸ ಜವಳಿ ನೀತಿಯನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಲಾಗಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಲಬುರಗಿ ಜಿಲ್ಲೆಯ 1,000 ಎಕರೆ ಪ್ರದೇಶದಲ್ಲಿ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಮಾದರಿಯಲ್ಲಿ ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪಿಸಲಾಗುತ್ತಿದೆ. ಇದರಿಂದ 1 ಲಕ್ಷ ಜನರಿಗೆ ನೇರ ಉದ್ಯೋಗ ಹಾಗೂ 2 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ. ಈ ಯೋಜನೆಗೆ ಪೂರಕವಾದ ಮೂಲಸೌಕರ್ಯಕ್ಕಾಗಿ ₹50 ಕೋಟಿ ಅನುದಾನವನ್ನು ಒದಗಿಸಲು ಉದ್ದೇಶಿಸಲಾಗಿದೆ.

ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ (ರಾಯಚೂರು) ಮತ್ತು ಮೈಸೂರು ವಿಭಾಗಗಳಲ್ಲಿ ನೂತನ ಜವಳಿ ಪಾರ್ಕ್‌ಗಳನ್ನು ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಗುವುದು. ಇದರಿಂದ ಸುಮಾರು 10 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಪ್ರತಿಪಾದಿಸಲಾಗಿದೆ.

ಬಳ್ಳಾರಿಯಲ್ಲಿ ಅಸಂಘಟಿತವಾಗಿರುವ ಜೀನ್ಸ್ ಉದ್ದಿಮೆಗಳನ್ನು ಸಂಘಟಿಸಿ, ವಿಶ್ವದರ್ಜೆಗೆ ಉನ್ನತೀಕರಿಸಲು ಮೂಲಸೌಕರ್ಯಗಳನ್ನು ಒಳಗೊಂಡಂತೆ ಜೀನ್ಸ್ ಅಪಾರೆಲ್ ಪಾರ್ಕ್ ಹಾಗೂ ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಪ್ರಕಟಿಸಲಾಗಿದೆ.

ಜವಳಿ ಪಾರ್ಕ್‌ಗಳು ಇಲ್ಲದಿರುವ ರಾಜ್ಯದ 25 ಜಿಲ್ಲೆಗಳಲ್ಲಿ ಮಿನಿ ಜವಳಿ ಪಾರ್ಕ್‌ಗಳನ್ನು ಸ್ಥಾಪಿಸುವ ಉದ್ದಿಮೆದಾರರಿಗೆ ಮೂಲಸೌಕರ್ಯಕ್ಕಾಗಿ ಜವಳಿ ನೀತಿ ಅನ್ವಯ ಸಹಾಯಧನ ನೀಡಲಾಗುವುದು ಎಂದೂ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಗ್ರಾಮೀಣ ಜನರಲ್ಲಿ ಆರ್ಥಿಕ ಶಿಸ್ತು ಮತ್ತು ಉಳಿತಾಯ ಮನೋಭಾವ ಉತ್ತೇಜಿಸಲು ಎಂ‌ಎಸ್‌ಐ‌ಎಲ್ ವತಿಯಿಂದ ಚಿಟ್‌ಫಂಡ್‌ ಅನ್ನು ಗ್ರಾಮಾಂತರ ಪ್ರದೇಶಗಳಿಗೆ ವಿಸ್ತರಿಸುವ ಪ್ರಸ್ತಾವವಿದೆ.

ಯಶವಂತಪುರದಲ್ಲಿ ಕೆ‌ಎಸ್‌ಡಿ‌ಎಲ್ ವತಿಯಿಂದ ಜಮೀನಿನಲ್ಲಿ ವಿವಿಧ ಸರ್ಕಾರಿ ಇಲಾಖೆಗಳನ್ನು ನಿರ್ವಹಿಸಲು ಸುಸಜ್ಜಿತ ಕಚೇರಿ ಸಂಕೀರ್ಣ ನಿರ್ಮಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಕೈಗಾರಿಕಾ ವಸಾಹತುಗಳು ಮೇಲ್ದರ್ಜೆಗೆ

ವಿವಿಧ ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿರುವ ಕೈಗಾರಿಕಾ ವಸಾಹತುಗಳನ್ನು ಕೇಂದ್ರ ಸರ್ಕಾರದ ಸಹಯೋಗದಲ್ಲಿ ₹39 ಕೋಟಿ ಅಂದಾಜು ವೆಚ್ಚದಲ್ಲಿ ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆಗಳ ನಿಗಮದ (ಕೆಎಸ್‌ಎಸ್‌ಐಡಿಸಿ) ಮೂಲಕ ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಷೇರು ವಿನಿಮಯ ಕೇಂದ್ರಗಳಲ್ಲಿ ಷೇರುಗಳನ್ನು ಸಾರ್ವಜನಿಕರು ಖರೀದಿ‌ಸುವಂತೆ ಮುಕ್ತಗೊಳಿಸಲು (ಐಪಿಒ) ತಗಲುವ ವೆಚ್ಚದಲ್ಲಿ ಗರಿಷ್ಠ ಮಿತಿ ₹25 ಲಕ್ಷಗಳಿಗೆ ಒಳಪಟ್ಟು ಶೇ 50ರಷ್ಟು ಸಹಾಯಧನ ನೀಡಲು ಉದ್ದೇಶಿಸಲಾಗಿದೆ.

ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ವಿಶೇಷ ಘಟಕ ಯೋಜನೆಯಡಿ ಕರ್ನಾಟಕ ಚರ್ಮ ಮತ್ತು ಫ್ಯಾಷನ್ ತಂತ್ರಜ್ಞಾನ ಸಂಸ್ಥೆಯಲ್ಲಿ (ಕೆಐಎಲ್‌ಟಿ) ’ಡಿಪ್ಲೊಮಾ ಇನ್ ಲೆದರ್ ಅಂಡ್ ಫ್ಯಾಶನ್ ಟೆಕ್ನಾಲಜಿ ಕೋರ್ಸ್‘ ಮಾಡಲು ಪ್ರೋತ್ಸಾಹಧನ ನೀಡಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ಕಟ್ಟಡ ಕಲ್ಲು ಸೇರಿ ಎಲ್ಲ ಉಪ ಖನಿಜಗಳ ಅನಧಿಕೃತ ಗಣಿಗಾರಿಕೆಯನ್ನು ನಿಯಂತ್ರಿಸುವ ಜೊತೆಗೆ ಸಂಪೂರ್ಣ ಖನಿಜ ಬಳಕೆ ಪ್ರಮಾಣವನ್ನು ಡ್ರೋನ್ ಸರ್ವೆ ಮೂಲಕ ವೈಜ್ಞಾನಿಕವಾಗಿ ಅಂದಾಜಿಸುವ ವ್ಯವಸ್ಥೆಯನ್ನು ರಾಜ್ಯದಾದ್ಯಂತ ಅನುಷ್ಠಾನಗೊಳಿಸಿ, ರಾಜಸ್ವ ಸಂಗ್ರಹವನ್ನು ಹೆಚ್ಚಿಸಲಾಗುವುದು. ಇದರಿಂದ ಉದ್ಯಮಸ್ನೇಹಿ, ಸರಳ ಮತ್ತು ಉತ್ತರದಾಯಿತ್ವ ಹೊಂದಿರುವ ವ್ಯವಸ್ಥೆಯನ್ನು ದೊರಕಿಸಿಕೊಡಲಾಗುವುದು ಎಂದು ವಿವರಿಸಲಾಗಿದೆ.

ಸಾರ್ವಜನಿಕ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ನಿಗದಿತ ಬೆಲೆಯಲ್ಲಿ ಮರಳು ಲಭ್ಯವಾಗುವಂತೆ ಮಾಡಲು ಹೊಸ ಮರಳು ನೀತಿ–2020 ಅನ್ನು ಅನುಮೋದಿಸಲಾಗಿದೆ. ಸರ್ಕಾರದ ಎಲ್ಲ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ, ಈ ನೀತಿಯನ್ನು ಜಾರಿಗೊಳಿಸುವಲ್ಲಿನ ಗೊಂದಲಗಳನ್ನು ನಿವಾರಿಸಿ, ಸಾರ್ವಜನಿಕರಿಗೆ ಸುಲಭವಾಗಿ ಹಾಗೂ ಯೋಗ್ಯ ದರದಲ್ಲಿ ಮರಳನ್ನು ಒದಗಿಸಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT