ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget 2024 | ‘ಅಹಿಂದ’ ಅಭ್ಯುದಯ ‘ಗ್ಯಾರಂಟಿ’

Published 17 ಫೆಬ್ರುವರಿ 2024, 0:30 IST
Last Updated 17 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಈ ಬಜೆಟ್‌ನಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ‘ಸಾಮಾಜಿಕ ಬದ್ಧತೆ’ ಪ್ರದರ್ಶಿಸಿದ್ದಾರೆ. ಅಲ್ಪಸಂಖ್ಯಾತ, ಹಿಂದುಳಿದ, ದಲಿತ (ಅಹಿಂದ) ಸಮುದಾಯದ ಅಭ್ಯುದಯಕ್ಕೆ ಸಾಕಷ್ಟು ಯೋಜನೆಗಳನ್ನು ನೀಡಿದ್ದಾರೆ.‌ ‘ಕರ್ನಾಟಕ ಅನುಸೂಚಿತ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ’ (ಎಸ್‌ಸಿಎಸ್‌ಪಿ, ಟಿಎಸ್‌ಪಿ) ಅಡಿ ಪರಿಶಿಷ್ಟ ಜಾತಿ ಉಪ ಯೋಜನೆಗೆ ₹ 27,674 ಕೋಟಿ, ಪರಿಶಿಷ್ಟ ಪಂಗಡ ಉಪ ಯೋಜನೆಗೆ ₹ 11,447 ಕೋಟಿ ಸೇರಿ ಒಟ್ಟು ₹ 39,121 ಕೋಟಿ ಒದಗಿಸಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಆಡಳಿತ ಚುಕ್ಕಾಣಿ ‘ಕೈ’ಗೆ ತೆಗೆದುಕೊಂಡಿದ್ದ ಸಿದ್ದರಾಮಯ್ಯ, ಜುಲೈನಲ್ಲಿ ಮಂಡಿಸಿದ್ದ ಆಯವ್ಯಯದಲ್ಲಿ ಪರಿಶಿಷ್ಟರಿಗೆ ₹ 34,294 ಕೋಟಿ ಒದಗಿಸಿದ್ದರು. ಈ ಬಾರಿ ₹ 4,827 ಕೋಟಿ ಹೆಚ್ಚು ನೀಡಿದ್ದಾರೆ. ಆ ಮೂಲಕ, ತುಳಿತಕ್ಕೆ ಒಳಗಾದ, ಅವಕಾಶ ವಂಚಿತ ಸಮುದಾಯಗಳ ಅಭಿವೃದ್ಧಿಯ ತಮ್ಮ ಪ್ರತಿಪಾದನೆ ಪ್ರಶ್ನಾತೀತ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

2012–13ರಲ್ಲಿ ಮತ್ತು ಅದಕ್ಕೂ ಮೊದಲು ಪರಿಶಿಷ್ಟರಿಗೆ ವೈಜ್ಞಾನಿಕವಾಗಿ ಅನುದಾನ ಹಂಚಿಕೆಯಾಗುತ್ತಿರಲಿಲ್ಲ. ಆ ನ್ಯೂನತೆ ಸರಿಪಡಿಸುವ ಉದ್ದೇಶದಿಂದ ಜನಸಂಖ್ಯೆ ಆಧರಿಸಿ ಅನುದಾನ ಹಂಚಿಕೆ ಮತ್ತು ನಿರ್ದಿಷ್ಟ ಉದ್ದೇಶಗಳಿಗೇ ಬಳಕೆ ಮಾಡಲು ‘ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆ– 2013’ ಜಾರಿಗೆ ತಂದ ಶ್ರೇಯ ಸಿದ್ದರಾಮಯ್ಯ ಅವರದ್ದು. ಪರಿಶಿಷ್ಟರಿಗೆ 2013–14ರಲ್ಲಿ ₹ 8,988 ಕೋಟಿ ಹಂಚಿಕೆಯಾಗಿತ್ತು. ಕಾಯ್ದೆ ಜಾರಿಯ ನಂತರ ಆಯವ್ಯಯದ ಶೇ 24.1ರಷ್ಟು ಕಡ್ಡಾಯವಾಗಿ ದೊರಕಿಸಿಕೊಟ್ಟಿದೆ. 2023ರ ಫೆಬ್ರವರಿಯಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಮಂಡಿಸಿದ್ದ ಬಜೆಟ್‌ನಲ್ಲಿ ಪರಿಶಿಷ್ಟರಿಗೆ ₹ 30,215 ಕೋಟಿ ಹಂಚಿಕೆ ಮಾಡಿದ್ದರು.

ಈ ಬಾರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ವಸತಿ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಒಟ್ಟು ₹ 2,710 ಕೋಟಿ ಒದಗಿಸಲಾಗಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಗಳ (ಕ್ರೈಸ್‌) ಅಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳಿಗೆ ಸೇರಿದ 29 ವಸತಿ ಶಾಲಾ ಸಂಕೀರ್ಣಗಳ ನಿರ್ಮಾಣ ಕಾಮಗಾರಿಗಳನ್ನು ₹ 638 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆ.

ಇನ್ನು 20 ಹೋಬಳಿಗಳಲ್ಲಿ ಹೊಸ ವಸತಿ ಶಾಲೆಗಳನ್ನು ಆರಂಭಿಸಲು ಮತ್ತು ಬಾಡಿಗೆ ಕಟ್ಟಡದಲ್ಲಿರುವ 18 ವಿದ್ಯಾರ್ಥಿನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಪ್ರಸ್ತಾವಿಸಲಾಗಿದೆ. ಶೈಕ್ಷಣಿಕವಾಗಿ ಪ್ರಮುಖ ನಗರಗಳಲ್ಲಿ ವಸತಿನಿಲಯಗಳಿಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ 31 ಹೊಸ ಮೆಟ್ರಿಕ್‌ ನಂತರದ ವಸತಿನಿಲಯಗಳನ್ನು ಮಂಜೂರು ಮಾಡುವ ಪ್ರಸ್ತಾವವಿದೆ. ಸರ್ಕಾರಿ ಮೆಟ್ರಿಕ್‌ ಪೂರ್ವ, ಮೆಟ್ರಿಕ್‌ ನಂತರದ ವಸತಿ ನಿಲಯಗಳು, ಆಶ್ರಮ ಶಾಲೆಗಳು ಮತ್ತು ವಸತಿ ಶಾಲೆಗಳ ವಿದ್ಯಾರ್ಥಿಗಳ ಭೋಜನ ವೆಚ್ಚವನ್ನು ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳಿಗೆ ₹ 100 ರಂತೆ ಹೆಚ್ಚಿಸಲು,‌ ಪರಿಶಿಷ್ಟರಿಗೆ ದುಬಾರಿ ವೆಚ್ಚದ ಚಿಕಿತ್ಸೆ ನೀಡಲು ₹ 35 ಕೋಟಿಯ ಕಾರ್ಪಸ್‌ ನಿಧಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಗಮಗಳಿಂದ ಒಟ್ಟು ₹ 1,750 ಕೋಟಿಯ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಪ್ರಸ್ತಾವವಿದೆ.

ಪರಿಶಿಷ್ಟ ಪಂಗಡಗಳ ಕಲ್ಯಾಣ:

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಆಶ್ರಮ ಶಾಲೆಗಳ ಹೆಸರನ್ನು ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗಳು ಎಂದು ಮರು ನಾಮಕರಣ ಮಾಡಲಾಗುವುದು. ಈ ಶಾಲೆಗಳನ್ನು ಉನ್ನತೀಕರಿಸುವ ಜೊತೆಗೆ ವಿದ್ಯಾರ್ಥಿಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುವುದು.  ಏಳು ಜಿಲ್ಲಾ ಕೇಂದ್ರಗಳಲ್ಲಿ ತಲಾ ಎರಡರಂತೆ 100 ಸಂಖ್ಯಾ ಬಲದ ಬಾಲಕ, ಬಾಲಕಿಯರ ಮೆಟ್ರಿಕ್‌ ನಂತರದ 14 ವಿದ್ಯಾರ್ಥಿನಿಲಯಗಳನ್ನು ಆರಂಭಿಸಲಾಗುವುದು. ಐಐಎಸ್‌ಸಿ, ಐಐಟಿ ಮತ್ತು ಎನ್‌ಐಟಿ ಸಂಸ್ಥೆಗಳ ಮೂಲಕ ಕೃತಕ ಬುದ್ದಿಮತ್ತೆ ಮತ್ತು ಮಷಿನ್‌ ಲರ್ನಿಂಗ್‌ ಮುಂತಾದ 6 ರಿಂದ 12 ತಿಂಗಳ ಅವಧಿಯ ವೃತ್ತಿಪರ ತರಬೇತಿ ಕೋರ್ಸ್‌ಗಳಲ್ಲಿ ಭಾಗವಹಿಸುವ ಪರಿಶಿಷ್ಟ ಪಂಗಡಗಳ 200 ಎಂಜಿನಿಯರಿಂಗ್‌ ಪದವೀಧರರಿಗೆ ₹ 15 ಸಾವಿರ ಶಿಷ್ಯವೇತನ ನೀಡಲಾಗುವುದು. ಡ್ರೋನ್ ಆಧಾರಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಉದ್ಯೋಗ ಪಡೆಯಲು ಪರಿಶಿಷ್ಟ ಪಂಗಡದ ಐದು ಸಾವಿರ ಯುವಕ, ಯುವತಿಯರಿಗೆ ಡ್ರೋನ್ ತರಬೇತಿ ನೀಡಲಾಗುವುದು. ಕೊರಗ, ಜೇನುಕುರುಬ, ಯರವ, ಕಾಡುಕುರುಬ, ಸೋಲಿಗ, ಗೊಂಡ, ಸಿದ್ದಿ, ಮಲೈಕುಡಿ, ಕುಡಿಯ, ಹಸಲರು, ಗೌಡಲು, ಬೆಟ್ಟಕುರುಬ, ಹಕ್ಕಿ-ಪಿಕ್ಕಿ, ಇರುಳಿಗ, ರಾಜಗೊಂಡ ಹರಿಣಿಶಿಕಾರಿ ಮುಂತಾದ 23 ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಸಮಗ್ರ ಅಭಿವೃದ್ಧಿ ಉದ್ದೇಶದಿಂದ ಏಕಲವ್ಯ ಮಾದರಿಯ ಪ್ರತಿ ವಸತಿ ಶಾಲೆಯಲ್ಲಿ 20 ಸೀಟುಗಳನ್ನು ಮೀಸಲಿರಿಸಿ ನೇರ ಪ್ರವೇಶ ಕಲ್ಪಿಸಲಾಗುವುದು. ಪಡಿತರ ಚೀಟಿ ಮುಂತಾದ ಸರ್ಕಾರಿ ದಾಖಲೆಗಳನ್ನು ಒದಗಿಸಲು ₹ 3 ಕೋಟಿ ಅನುದಾನದಲ್ಲಿ  ಒಂದು ವರ್ಷದ ಅವಧಿಗೆ ವಿಶೇಷ ಕೋಶ ಸ್ಥಾಪಿಸಲಾಗುವುದು.

ಹಿಂದುಳಿದ ಸಮುದಾಯ: 

ಪ್ರಸಕ್ತ ಸಾಲಿನಲ್ಲಿ 500 ಪ್ರತಿಭಾವಂತ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಿಂದ ಎರಡು ವರ್ಷ ಉಚಿತ ಜೆಇಇ, ನೀಟ್ ತರಬೇತಿ ನೀಡುವ ಯೋಜನೆ ಘೋಷಿಸಲಾಗಿದೆ. ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನಕ್ಕೆ ‘ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಆಯೋಗ ರಚನೆ ಹಾಗೂ
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಿಎಲ್ಎಟಿ, ಎಂಎಟಿ ಮತ್ತು ಚಾರ್ಟರ್ಡ್‌ ಅಕೌಂಟೆಂಟ್ ಫೌಂಡೇಷನ್ ಪರೀಕ್ಷೆಗಳಿಗೆ ಸಿದ್ಧಗೊಳಿಸಲು ಪರೀಕ್ಷಾ ಪೂರ್ವ ತರಬೇತಿ ನೀಡುವ ಯೋಜನೆಯನ್ನೂ ಪ್ರಕಟಿಸಲಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ 100 ಸಂಖ್ಯಾಬಲದ ಮೆಟ್ರಿಕ್‌ ನಂತರದ ತಲಾ 75 ಬಾಲಕರ ಮತ್ತು ಬಾಲಕಿಯರ ವಸತಿನಿಲಯಗಳನ್ನು ಆರಂಭಿಸಲಾಗುವುದು.‌ ಈಗ ಇರುವ 100 ಸಂಖ್ಯಾಬಲದ 150 ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಹಾಗೂ 174 ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಾಲೇಜುಗಳಲ್ಲಿ ₹ 200 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಒದಗಿಸುವುದು.‌ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 30 ವಿದ್ಯಾರ್ಥಿನಿಲಯಗಳಿಗೆ ₹ 4 ಕೋಟಿ  ಘಟಕ ವೆಚ್ಚದಲ್ಲಿ ಸ್ವಂತ ಕಟ್ಟಡಗಳನ್ನು ನಿರ್ಮಿಸಲಾಗುವುದು.‌ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಆಶ್ರಮ ಶಾಲೆಗಳನ್ನು ಡಿ. ದೇವರಾಜು ಅರಸು ವಸತಿ ಶಾಲೆಗಳೆಂದು ಮರುನಾಮಕರಣ ಮಾಡಲು ಉದ್ದೇಶಿಸಲಾಗಿದೆ.

ಅಲ್ಪಸಂಖ್ಯಾತರ ಕಲ್ಯಾಣ:

ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ 50 ಸಂಖ್ಯಾಬಲದ 50 ಮೊರಾರ್ಜಿ ದೇಸಾಯಿ ವಸತಿ ಶಾಲೆ, 100 ಸಂಖ್ಯಾಬಲದ 100 ಮೆಟ್ರಿಕ್‌ ನಂತರದ ಬಾಲಕ, ಬಾಲಕಿಯರ ವಿದ್ಯಾರ್ಥಿನಿಲಯ, 100 ಹೊಸ ಮೌಲಾನಾ ಆಜಾದ್‌ ಶಾಲೆ, ಸ್ವಂತ ಕಟ್ಟಡವನ್ನು ಹೊಂದಿರುವ 25 ಶಾಲೆಗಳಲ್ಲಿ ಪದವಿ ಪೂರ್ವ ಶಿಕ್ಷಣ ಆರಂಭಿಸಲಾಗುವುದು. ಸರ್ಕಾರಿ,ಖಾಸಗಿ ಕಾಲೇಜುಗಳಲ್ಲಿ ಬಿಎಸ್‌ಸಿ ನರ್ಸಿಂಗ್‌, ಜೆಎನ್‌ಎಂ ನರ್ಸಿಂಗ್‌ ಕೋರ್ಸ್‌ ಕಲಿಯುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಶುಲ್ಕ ಭರಿಸುವ ಯೋಜನೆ ಮತ್ತೆ ಆರಂಭಿಸಲಾಗುವುದು. ಅಲ್ಪಸಂಖ್ಯಾತ ಉದ್ಯಮಶೀಲರು ಸ್ಥಾಪಿಸುವ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ಹೊಸ ಘಟಕಗಳನ್ನು ಸ್ಥಾಪಿಸಲು ಆರ್ಥಿಕ ನೆರವು, ರೇಷ್ಮೆ ನೂಲು ಬಿಚ್ಚಾಣಿಕೆಯಲ್ಲಿ ತೊಡಗಿರುವ ಅಲ್ಪಸಂಖ್ಯಾತ ಫಲಾನುಭವಿಗಳ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು ರೇಷ್ಮೆ ಇಲಾಖೆ ಮೂಲಕ ತರಬೇತಿ ಮತ್ತು ಕೆಎಂಡಿಸಿ ಮೂಲಕ ಸಾಲ ಸೌಲಭ್ಯ ನೀಡಲಾಗುವುದು. ಅಲ್ಪಸಂಖ್ಯಾತ ಸಮುದಾಯದ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ವಿವಿಧ ರೀತಿಯ ಸ್ವಯಂ ಉದ್ಯೋಗ ಚಟುವಟಿಕೆಗಳಿಗೆ ಉತ್ತೇಜನ ನೀಡಲು ₹ 10 ಕೋಟಿ ಒದಗಿಸಲಾಗುವುದು.

‘ಕೆಕೆಆರ್‌ಡಿಬಿ’ಗೆ ₹ 5 ಸಾವಿರ ಕೋಟಿ

‌ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ವ್ಯಾಪ್ತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ₹ 5 ಸಾವಿರ ಕೋಟಿ ಒದಗಿಸಲಾಗಿದೆ. ಅಲ್ಲದೆ, ಡಿ.ಎಂ. ನಂಜುಂಡಪ್ಪ ವರದಿಯ ಆಧಾರದ ಮೇಲೆ ಹಿಂದುಳಿದ ಪ್ರದೇಶಗಳಲ್ಲಿ ಪ್ರಾದೇಶಿಕ ತಾರತಮ್ಯ ನಿವಾರಿಸಲು ಬಹಳಷ್ಟು ಯೋಜನೆಗಳನ್ನು ಮತ್ತು ಬಂಡವಾಳ ಹೂಡಿಕೆ ಮಾಡಲಾಗಿದೆ. ಇದರಿಂದ ಆಗಿರುವ ಬದಲಾವಣೆಗಳು ಮತ್ತು ಪರಿಣಾಮಗಳನ್ನು ಅಧ್ಯಯನ ಮಾಡಲು ಪ್ರಸಕ್ತ ಸಾಲಿನಲ್ಲಿ ಒಂದು ಉನ್ನತಾಧಿಕಾರಿ ಸಮಿತಿಯನ್ನು ರಚಿಸಲಾಗುವುದು. ಈ ಸಮಿತಿಯ, ರಾಜ್ಯದಲ್ಲಿನ ಆರ್ಥಿಕ ಮತ್ತು ಪ್ರಾದೇಶಿಕ ಅಸಮಾನತೆಯ ಆಧಾರದ ಮೇಲೆ ಜಿಲ್ಲೆ ಮತ್ತು ತಾಲ್ಲೂಕುಗಳನ್ನು ವರ್ಗೀಕರಿಸಿ ಹೊಸ ಅಭಿವೃದ್ಧಿ ಸೂಚ್ಯಂಕ ತಯಾರಿಸಲು ಪ್ರಸ್ತಾಪಿಸಲಾಗಿದೆ. ರಾಜ್ಯ ಯೋಜನಾ ಮಂಡಳಿಯನ್ನು ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆಯಾಗಿ ಬದಲಾಯಿಸಲಾಗಿತ್ತು. ಸಂಸ್ಥೆಯ ಹೆಸರನ್ನು ಬದಲಾವಣೆ ಮಾಡಿ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ (ಕೆಎಸ್‌ಪಿಪಿಸಿ) ಎಂದು ಪುನರ್‌ ರಚಿಸಲಾಗುವುದು.

ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ (ರಾಯಚೂರು) ಭಾಗದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನೂತನ ಜವಳಿ ಪಾರ್ಕ್‌ಗಳನ್ನು ಆರಂಭಿಸಿ ಉದ್ಯೋಗ ಸೃಷ್ಟಿಸಲು ಉದ್ದೇಶಿಸಲಾಗಿದೆ. ಕೆಕೆಆರ್‌ಡಿಬಿ ಸಹಯೋಗದಲ್ಲಿ ಸರ್ಕಾರಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸಲಾಗುವುದು. ಅವಶ್ಯವಿರುವ ಜಿಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕೆಕೆಆರ್‌ಡಿಬಿ ವತಿಯಿಂದ ಕೊಪ್ಪಳ, ಬೀದರ್, ಯಾದಗಿರಿ, ರಾಯಚೂರು ಮತ್ತು ಕಲಬುರಗಿಯಲ್ಲಿ ವಿಶ್ವವಿದ್ಯಾಲಯಗಳ ಘಟಕ ಕಾಲೇಜನ್ನು ಸ್ಥಾಪಿಸಲಾಗುವುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ 46 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೆಕೆಆರ್‌ಡಿಬಿ ಮೂಲಕ ₹ 221 ಕೋಟಿದಲ್ಲಿ ಸ್ಥಾಪಿಸಲಾಗುವುದು. ಕಲ್ಯಾಣ ಕರ್ನಾಟಕದಲ್ಲಿ ಹಿಮೋಫಿಲಿಯಾ ಮತ್ತು ತಲಸೀಮಿಯಾ ರೋಗಿಗಳಿಗೆ ಸೂಕ್ತ ಚಿಕಿತ್ಸಾ ಸೌಲಭ್ಯಗಳ ಕೊರತೆ ಇರುವುದರಿಂದ ಕಲಬುರಗಿ ಮತ್ತು ಕೊಪ್ಪಳದ ಐಸಿಡಿಟಿ ಕೇಂದ್ರಗಳ ಬಲವರ್ಧನೆಗೆ ₹ 7 ಕೋಟಿ ಒದಗಿಸಲಾಗುವುದು.

ವಕ್ಫ್‌ಗೆ ₹ 100 ಕೋಟಿ, ಕ್ರೈಸ್ತರಿಗೆ ₹ 200 ಕೋಟಿ

ರಾಜ್ಯದಲ್ಲಿರುವ ವಕ್ಫ್‌ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ₹ 100 ಕೋಟಿ‌, ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ₹ 200 ಕೋಟಿ‌, ಜೈನರ ಪ್ರಮುಖ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ ₹ 50 ಕೋಟಿ ಅನುದಾನ ಘೋಷಿಸಲಾಗಿದೆ. ಅಲ್ಲದೆ, ಮಂಗಳೂರಿನಲ್ಲಿ ₹ 10 ಕೋಟಿ ವೆಚ್ಚದಲ್ಲಿ ಹಜ್‌ ಭವನ ನಿರ್ಮಿಸಲಾಗುವುದು.  ಬೌದ್ಧರ ಪವಿತ್ರ ಗ್ರಂಥಗಳಾದ ತ್ರಿಪಿಟಕಗಳನ್ನು ಪಾಲಿ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಲು ಸೂಕ್ತ ಅನುದಾನ ಒದಗಿಸಲಾಗುವುದು. ರಾಜ್ಯದಲ್ಲಿ ವಾಸಿಸುತ್ತಿರುವ ಸಿಖ್ಖ್‌ ಲಿಗಾರ್‌ ಸಮುದಾಯದ ಜನರ ಆರ್ಥಿಕ ಸಬಲೀಕರಣಕ್ಕಾಗಿ ₹ 2 ಕೋಟಿಯಲ್ಲಿ ಹೊಸ ಯೋಜನೆ ರೂಪಿಸಲಾಗುವುದು. ಬೀದರ್‌ನಲ್ಲಿರುವ ಶ್ರೀ ನಾನಕ್‌ ಝರಾ ಸಾಹೇಬ್ ಗುರುದ್ವಾರದ ಅಭಿವೃದ್ಧಿಗೆ ₹ 1 ಕೋಟಿ ಅನುದಾನ ನೀಡಲಾಗುವುದು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಈ ಸಾಲಿನಲ್ಲಿ ಒಟ್ಟು ₹ 393 ಕೋಟಿಯ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು ಎಂದು ಪ್ರಸ್ತಾಪಿಸಲಾಗಿದೆ.

ವಾರಾಣಸಿ ವಸತಿ ಸಂಕೀರ್ಣಕ್ಕೆ ₹5 ಕೋಟಿ:

‌ವಾರಾಣಸಿಯಲ್ಲಿ ₹ 5 ಕೋಟಿ ವೆಚ್ಚದಲ್ಲಿ ವಸತಿ ಸಂಕೀರ್ಣ, ಮಂತ್ರಾಲಯಕ್ಕೆ ಸಂಪರ್ಕ ಕಲ್ಪಿಸಲು ರಾಯಚೂರಿನ ಚಿಕ್ಕಮಂಚಾಲಿ ಗ್ರಾಮದ ಬಳಿ ₹ 158 ಕೋಟಿ ವೆಚ್ಚದಲ್ಲಿ ಬ್ರಿಡ್ಜ್-ಕಂ-ಬ್ಯಾರೇಜ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಹಾಗೂ ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಾಲಯದ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ, ಆದಾಯ ಇಲ್ಲದೆ 34,165 ʻಸಿʼ ವರ್ಗದ ಐತಿಹಾಸಿಕ ದೇವಾಲಯಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ‘ವಿಷನ್‌ ಗ್ರೂಪ್‌’ ರಚನೆ, ಇನಾಂ/ಇನಾಂಯೇತರ ಜಮೀನು ಕಳೆದುಕೊಂಡ ʻಸಿʼ ವರ್ಗದ 29,523 ದೇವಾಲಯಗಳ ಅರ್ಚಕರ ಬ್ಯಾಂಕ್‌ ಖಾತೆಗೆ ತಸ್ತಿಕ್ ಮೊತ್ತ‌ ಜಮೆ ಮಾಡಲಾಗುವುದು ಎಂದು ಆಯವ್ಯಯದಲ್ಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT