ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget 2024 | ಹೊಸದು ಸಿಗದ ಬೆಂಗಳೂರು ನಗರಕ್ಕೆ ಅನುದಾನವೂ ಮರೀಚಿಕೆ

ಹಳೆಯ ಘೋಷಣೆಗಳಿಗಷ್ಟೇ ‘ಬಜೆಟ್‌ ರೂಪ’
Published 17 ಫೆಬ್ರುವರಿ 2024, 0:30 IST
Last Updated 17 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬ್ರ್ಯಾಂಡ್‌ ಬೆಂಗಳೂರು’ ಯೋಜನೆಯಡಿ ರಾಜಧಾನಿ ಬೆಂಗಳೂರಿಗೆ ಈ ಬಾರಿ ಬಜೆಟ್‌ನಲ್ಲಿ ಅತ್ಯಧಿಕ ಅನುದಾನ ದೊರೆತು, ಅಂತರರಾಷ್ಟ್ರೀಯ ಮಟ್ಟದ ಬೃಹತ್‌ ಯೋಜನೆಗಳಿಗೆ ಚಾಲನೆ ಸಿಗುತ್ತವೆ ಎಂಬ ನಿರೀಕ್ಷೆ ಸುಳ್ಳಾಗಿದೆ. ಹೊಸದಾಗಿ ಯಾವುದೇ ಯೋಜನೆ ಘೋಷಣೆಯೂ ಆಗಿಲ್ಲ, ಹಿಂದೆ ಹೇಳಿಕೆಯಾಗಿದ್ದ ಯೋಜನೆಗಳಿಗೆ ಅನುದಾನ ನೀಡುವ ಭರವಸೆಯೂ ಸಿಕ್ಕಿಲ್ಲ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಕಳೆದ ಎಂಟು ತಿಂಗಳಲ್ಲಿ ಘೋಷಣೆ ಮಾಡಿದ್ದ ಯೋಜನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಸ್ಥಾನ ಪಡೆದುಕೊಂಡಿವೆ.

ಬೆಂಗಳೂರನ್ನು ವಿಶ್ವದರ್ಜೆ ನಗರವನ್ನಾಗಿ ಅಭಿವೃದ್ದಿಪಡಿಸಲು, ಹೂಡಿಕೆದಾರರು ಆಕರ್ಷಿಸಲು ದಿಟ್ಟ ಕ್ರಮ ಕೈಗೊಂಡಿದ್ದೇವೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾಸಗಿಯವರಿಗೆ ಕೆಂಪು ಹಾಸಿನ ಸ್ವಾಗತ ನೀಡಿದ್ದಾರೆ. ಹೀಗಾಗಿಯೇ, ಬಿಬಿಎಂಪಿ, ಬಿಡಿಎಗೆ ಅನುದಾನ ನೀಡದೆ, ಖಾಸಗಿ ಸಹಭಾಗಿತ್ವಕ್ಕೇ ಹೆಚ್ಚು ಒತ್ತು ನೀಡಲಾಗಿದೆ. ಸ್ಕೈ–ಡೆಕ್‌, ವರ್ತುಲ ರಸ್ತೆ, ಸುರಂಗ ರಸ್ತೆಯಂತಹ ನೂರಾರು ಕೋಟಿ ವೆಚ್ಚದ ಯೋಜನೆಗಳು ಪಿಪಿಪಿ ಮಾದರಿಯಲ್ಲಿ ನಿರ್ಮಾಣವಾದರೆ ಅದರ ಹೊರೆ ನಾಗರಿಕರ ಮೇಲೆ ನೇರವಾಗಿ ಬೀಳಲಿದೆ.

147 ಕಿ.ಮೀ ವೈಟ್‌ ಟಾಪಿಂಗ್‌, ಪ್ರಾಯೋಗಿಕವಾಗಿ ಸುರಂಗ ರಸ್ತೆ, ರಾಜಕಾಲುವೆ ಬಫರ್‌ ಝೋನ್‌ನಲ್ಲಿ ರಸ್ತೆ, ಸಾರ್ವಜನಿಕ– ಖಾಸಗಿ ಸಹಭಾಗಿತ್ವದಲ್ಲಿ ₹27 ಸಾವಿರ ಕೋಟಿಯಲ್ಲಿ 73 ಪೆರಿಫೆರಲ್‌ ವರ್ತುಲ ರಸ್ತೆ ನಿರ್ಮಾಣ, 250 ಮೀಟರ್‌ ಎತ್ತರದ ಸ್ಕೈ–ಡೆಕ್‌, ನಮ್ಮ ಮೆಟ್ರೊ ವಿಸ್ತರಣೆ, ಉಪ ನಗರ ರೈಲು ಕಾಮಗಾರಿಗೆ ವೇಗ, ಕಾವೇರಿಯಿಂದ 110 ಹಳ್ಳಿಗಳಿಗೆ ನೀರು, ತ್ಯಾಜ್ಯ ನೀರು ಸಂಸ್ಕರಣೆ ಘಟಕಗಳ (ಎಸ್‌ಟಿಪಿ) ಉನ್ನತೀಕರಣ ಯೋಜನೆಗಳನ್ನೇ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.

ವೈಟ್‌ ಟಾಪಿಂಗ್ ಕಾಮಗಾರಿಗೆ ಈಗಾಗಲೇ ಟೆಂಡರ್‌ ಆಹ್ವಾನಿಸಲಾಗಿದ್ದು, ಹಿಂದಿನ ಸರ್ಕಾರದಲ್ಲಿ  ನಗರೋತ್ಥಾನ ಯೋಜನೆಯಡಿ ಘೋಷಿಸಲಾಗಿದ್ದ ₹6 ಸಾವಿರ ಕೋಟಿ ಅನುದಾನದಲ್ಲೇ ನಿರ್ವಹಿಸಲಾಗುತ್ತಿದೆ. ಸುರಂಗ ರಸ್ತೆಗೆ ಸರ್ಕಾರದಿಂದ ಅನುದಾನ ದೊರೆತು ಅದರಿಂದ ಪ್ರಾಯೋಗಿಕವಾಗಿ 3 ಕಿ.ಮೀ ರಸ್ತೆ ನಿರ್ಮಿಸುವ ಯೋಜನೆ ಹೊಂದಲಾಗಿತ್ತು. ಪ್ರತಿ ಕಿ.ಮೀಗೆ ₹500 ಕೋಟಿ ವೆಚ್ಚವಾಗುವ ಈ ಸುರಂಗ ರಸ್ತೆಗೆ ಸರ್ಕಾರ ಒಂದು ರೂಪಾಯಿ ಅನುದಾನವನ್ನೂ ಘೋಷಿಸಿಲ್ಲ. ಇನ್ನೂ ಬಿಬಿಎಂಪಿಯೇ ತನ್ನ ಸಂಪನ್ಮೂಲದಿಂದ ₹1,500 ಕೋಟಿ ವೆಚ್ಚ ಮಾಡುವ ಸ್ಥಿತಿಯಲ್ಲಂತೂ ಇಲ್ಲ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ವಹಿಸುವ ಪೆರಿಫೆರಲ್‌ ವರ್ತುಲ ರಸ್ತೆಗೆ (ಪಿಆರ್‌ಆರ್‌) ಖಾಸಗಿ ಸಹಭಾಗಿತ್ವದಲ್ಲಿ ₹27 ಸಾವಿರ ಕೋಟಿ ವೆಚ್ಚ ಮಾಡುವುದಾಗಿ ಬಜೆಟ್‌ನಲ್ಲಿ ಪುನರುಚ್ಚರಿಸಲಾಗಿದೆ. ಆದರೆ, ಅತ್ಯಂತ ಪ್ರಮುಖ ಘಟ್ಟವಾಗಿರುವ ಭೂ ಸ್ವಾಧೀನ  ಪರಿಹಾರದ ಬಗ್ಗೆ ಯಾವುದೇ ವಿವರಣೆ ಇಲ್ಲ. 

ನಗರದಲ್ಲಿ ಹೆಚ್ಚಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಹೊಸ ಪರಿಹಾರವನ್ನೇನೂ ಆಯವ್ಯಯದಲ್ಲಿ ನೀಡಲಾಗಿಲ್ಲ. ಬದಲಿಗೆ, ಜಲಮಂಡಳಿಯಿಂದ ಕಾವೇರಿ 5ನೇ ಹಂತದಲ್ಲಿ ಮೇನಲ್ಲಿ ಕುಡಿಯುವ ನೀರು ಒದಗಿಸಲಾಗುತ್ತದೆ, 110 ಹಳ್ಳಿಗಳಿಗೆ ನೀರು ಪೂರೈಸಲು ₹200 ಕೋಟಿ ನೀಡಲಾಗಿದೆ ಎಂಬುದನ್ನು ಮತ್ತೆ ಹೇಳಲಾಗಿದೆ.

ವಾಹನ ದಟ್ಟಣೆಯಿಂದ ನಲುಗುತ್ತಿರುವ ರಾಜಧಾನಿಯಲ್ಲಿ ಸುಗಮ ಸಂಚಾರಕ್ಕೆ ಕೈಗೊಂಡಿರುವ ಹಿಂದಿನ ಯೋಜನೆಗಳ ಪ್ರಗತಿಯನ್ನೇ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ನಮ್ಮ ಮೆಟ್ರೊ ವಿಸ್ತರಣೆ ಮಾರ್ಗ, ಬಿಎಂಟಿಸಿಗೆ ಹೊಸ ಬಸ್‌, ಜಪಾನ್‌ ಸರ್ಕಾರ ನೆರವಿನಿಂದ ಅತ್ಯಾಧುನಿಕ ತಂತ್ರಜ್ಞಾನ ಟ್ರಾಫಿಕ್‌ ಸಿಗ್ನಲ್‌ ಅನುಷ್ಠಾನವನ್ನು ಪ್ರಸ್ತಾಪಿಸಲಾಗಿದೆ.

ಒಟ್ಟಾರೆಯಾಗಿ, ‘ಬ್ರ್ಯಾಂಡ್‌ ಬೆಂಗಳೂರು’ ಪರಿಕಲ್ಪನೆಯಲ್ಲಿ ಬಿಬಿಎಂಪಿ ಸರ್ಕಾರದಿಂದ ಆರ್ಥಿಕ ಸಹಾಯ ಸೇರಿದಂತೆ ಸಾಕಷ್ಟು ರೀತಿಯ ನೆರವನ್ನು ಬಯಸಿತ್ತು. ಎಂಟು ವರ್ಗಗಳಲ್ಲಿ ಯೋಜನೆಗಳ ಪಟ್ಟಿಯನ್ನೇ ಮಾಡಿಕೊಟ್ಟಿತ್ತು. ಆದರೆ, ಇವುಗಳ ಪ್ರಸ್ತಾಪವೂ ಬಜೆಟ್‌ನಲ್ಲಿ ಆಗಿಲ್ಲ. ಅಗಾಧವಾದದ್ದನ್ನು ನಿರೀಕ್ಷಿಸಿದ್ದ ಬಿಬಿಎಂಪಿ, ಏನೂ ಸಿಗದಿರುವುದರಿಂದ ತನ್ನ ವೆಚ್ಚಕ್ಕೆ ತನ್ನದೇ ಸಂಪನ್ಮೂಲವನ್ನು ಅವಲಂಬಿಸಬೇಕಾಗಿದೆ.

ತ್ಯಾಜ್ಯ ವಿಲೇವಾರಿಗೆ ಸಂಸ್ಥೆ!

ಮನೆಯಿಂದ ತ್ಯಾಜ್ಯ ಸಂಸ್ಕರಣೆ ಘಟಕಗಳವರೆಗೆ ತ್ಯಾಜ್ಯ ವಿಲೇವಾರಿಯನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಹೊಣೆಯನ್ನು ‘ನುರಿತ ಸಂಸ್ಥೆಗೆ’ ವಹಿಸಲು ಸರ್ಕಾರ ನಿರ್ಧರಿಸಿದೆ.  ಬಿಎಂಪಿಯಿಂದ ಹೊರತಾಗಿ ಸಂಸ್ಥೆಯೊಂದು ತ್ಯಾಜ್ಯ ನಿರ್ವಹಣೆಗೆ ಈ ಮೂಲಕ ಹೆಜ್ಜೆ ಇರಿಸಲಿದೆ. ನಗರ ಜಿಲ್ಲೆಯನ್ನೇ ನಾಲ್ಕು ವಲಯವನ್ನಾಗಿ ವಿಂಗಡಿಸಿ, ಪ್ರತಿಯೊಂದು ವಲಯಕ್ಕೆ ‘ನುರಿತ ಸಂಸ್ಥೆಯನ್ನು’ ಪಾರದರ್ಶಕವಾಗಿ ನೇಮಿಸಲಾಗುವುದು ಎಂದು ಪ್ರಕಟಿಸಲಾಗಿದೆ. ಇದಲ್ಲದೆ, ನಗರದ ಹೊರವಲಯದ ನಾಲ್ಕು ಕಡೆಗಳಲ್ಲಿ 50ರಿಂದ 100 ಎಕರೆ ಜಮೀನು ಗುರುತಿಸಿ, ಮುಂದಿನ 30 ವರ್ಷ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಪುನರುಚ್ಚರಿಸಲಾಗಿದೆ.

ತೆರಿಗೆ ಸಂಗ್ರಹವಷ್ಟೇ ಗುರಿ!

ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಅನುದಾನವನ್ನು ಪಡೆಯದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2024–25ನೇ ಸಾಲಿನಲ್ಲಿ ತೆರಿಗೆ ಮತ್ತು ತೆರಿಗೆಯೇತರ ಸಂಪನ್ಮೂಲಗಳನ್ನು ಸಂಗ್ರಹಿಸಿಯೇ ನಗರ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಬೇಕಿದೆ.

2023–24ನೇ ಸಾಲಿನಲ್ಲಿ ₹4,300 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ತಲುಪುವುದಾಗಿ ಹೇಳಲಾಗಿದ್ದು, ಇದು ಹಿಂದಿನ ವರ್ಷಕ್ಕಿಂತ ₹1 ಸಾವಿರ ಕೋಟಿ ಹೆಚ್ಚು. ಇದೇ ರೀತಿ ಮುಂದಿನ ಆರ್ಥಿಕ ವರ್ಷದಲ್ಲಿ ₹6 ಸಾವಿರ ಕೋಟಿ ತೆರಿಗೆ ಸಂಗ್ರಹದ ಗುರಿಯನ್ನು ಬಜೆಟ್‌ನಲ್ಲಿ ನೀಡಲಾಗಿದೆ. ಈ ಗುರಿ ನೀಡುವ ಮೂಲಕ ಆಸ್ತಿ ಮಾಲೀಕರ ಮೇಲೆ ಬಿಬಿಎಂಪಿ ಒತ್ತಡ ಹೆಚ್ಚಾಗಲಿದೆ.

ಜಾಹೀರಾತು ನೀತಿಯನ್ನು ಪರಿಷ್ಕರಿಸಿ, ಅಪಾರ್ಟ್‌ಮೆಂಟ್‌ಗಳ ‘ಪ್ರೀಮಿಯಂ ಎಫ್‌ಎಆರ್’ ನೀತಿಯನ್ನೂ ಜಾರಿಗೆ ತರುವ ಮೂಲಕ ಹೆಚ್ಚುವರಿಯಾಗಿ ₹2 ಸಾವಿರ ಕೋಟಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಈ ಮೂಲಕ ಬಿಬಿಎಂಪಿ ರಾಜ್ಯ ಸರ್ಕಾರದಿಂದ ಯಾವುದೇ ಅನುದಾನವನ್ನು ನಿರೀಕ್ಷಿಸದೆ ತನ್ನದೇ ಸಂಪನ್ಮೂಲವನ್ನು ಕ್ರೋಢೀಕರಿಸಿಕೊಂಡು ಯೋಜನೆಗಳನ್ನು ರೂಪಿಸಬೇಕಿದೆ. ತೆರಿಗೆ ಸಂಗ್ರಹವಲ್ಲದೆ ಇನ್ನಾವ ರೀತಿಯಲ್ಲೂ 2024–25ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ ಹಣ ನಿರೀಕ್ಷಿಸುವಂತಿಲ್ಲ. ಹೀಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳಿಗೇ ಸಾವಿರಾರು ಕೋಟಿ ಹಣವನ್ನು ಪಾವತಿಸಬೇಕಿರುವ ಬಿಬಿಎಂಪಿಗೆ ಮುಂದಿನ ಹೊಸ ಯೋಜನೆ ರೂಪಿಸಲು ಆರ್ಥಿಕ ಹಿನ್ನಡೆಯಾಗಲಿದೆ.

‘ಸರ್ಕಾರದಿಂದ ಅನುದಾನ ನಿರೀಕ್ಷಿಸದೆ, ಬಿಬಿಎಂಪಿ ತನ್ನ ಯೋಜನೆಗಳಿಗೆ ತಾನೇ ಹಣ ಕ್ರೋಡೀಕರಿಸಿಕೊಳ್ಳಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಆಗಾಗ್ಗೆ ಹೇಳುತ್ತಿದ್ದರು. ಅದು ರಾಜ್ಯ ಬಜೆಟ್‌ನಲ್ಲಿ ಪ್ರತಿಫಲನವಾಗಿವೆ.

430 ಪ್ರಯೋಗಾಲಯಕ್ಕೆ ₹20 ಕೋಟಿ

ಬೆಂಗಳೂರಿನಲ್ಲಿ ಬಡಜನತೆಗೆ ಉಚಿತ ಪ್ರಯೋಗಾಲಯ ಸೇವೆಯನ್ನು ಒದಗಿಸಲು ಹಬ್‌ ಆ್ಯಂಡ್‌ ಸ್ಪೋಕ್‌ ಮಾದರಿಯಲ್ಲಿ 430 ಪ್ರಯೋಗಾಲಯಗಳ ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಪ್ರಯೋಗಾಲಯಗಳಿಗೆ ₹20 ಕೋಟಿ ಅನುದಾನ ಪ್ರಕಟಿಸಲಾಗಿದೆ.

ಬೆಂಗಳೂರು ಪೂರ್ವ ಭಾಗದಲ್ಲಿ 500 ಸಂಖ್ಯೆಯ ‘ಒಂದು ನಿರಾಶ್ರಿತರ ಪರಿಹಾರ ಕೇಂದ್ರ’ವನ್ನು ₹10 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾಗುವುದು. ಕೆ.ಸಿ. ಜನರಲ್ ಆಸ್ಪತ್ರೆ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡವನ್ನು ₹150 ಕೋಟಿ ವೆಚ್ಚದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ.

ಕೃಷಿ ಉತ್ಪನ್ನ ಸಂಸ್ಕರಣೆ, ಮಾರುಕಟ್ಟೆ ಸಂಪರ್ಕ ಮತ್ತು ಮೌಲ್ಯವರ್ಧನೆಯಡಿ ಬೆಂಗಳೂರಿನ ದಾಸನಪುರ ಮಾರುಕಟ್ಟೆಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ‘ಬಯೊ ಸಿಎನ್‌ಜಿ ಘಟಕ’ ಸ್ಥಾಪಿಸಿ ‘ಶೂನ್ಯ ತ್ಯಾಜ್ಯ ತರಕಾರಿ ಮಾರುಕಟ್ಟೆ’ಯನ್ನಾಗಿ ಪರಿವರ್ತಿಸಲು ಪ್ರಕಟಿಸಲಾಗಿದೆ.

****

ಬೆಂಗಳೂರು ನಗರವನ್ನು ವಿಶ್ವದರ್ಜೆಯ ನಗರವಾಗಿ ಅಭಿವೃದ್ಧಿಪಡಿಸಲು ನಾವು ‘ಬ್ರ್ಯಾಂಡ್‌ ಬೆಂಗಳೂರು ಪರಿಕಲ್ಪನೆ’ ಜಾರಿಗೊಳಿಸುತ್ತಿದ್ದೇವೆ. ಹೂಡಿಕೆದಾರರನ್ನು ಆಕರ್ಷಿಸಲು ವಿವಿಧ ವಲಯಗಳಲ್ಲಿ ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದ್ದೇವೆ

-ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT