ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget 2024 | ಮೂಲಸೌಕರ್ಯ ಇದ್ದಿದ್ದೇ ಮುಂದುವರಿಕೆ

ಹೊಸ ಯೋಜನೆಗಳ ಘೋಷಣೆಗಳಿಲ್ಲದ ಬಜೆಟ್
Published 17 ಫೆಬ್ರುವರಿ 2024, 0:30 IST
Last Updated 17 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಮೆಟ್ರೊ, ಉಪನಗರ ರೈಲು, ಬಿಎಂಟಿಸಿ ಸಹಿತ ನಗರದ ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ ಹೊಸ ಘೋಷಣೆಗಳಿಲ್ಲ. ಇರುವ ಯೋಜನೆಗಳನ್ನೇ ಮುಂದಿನ ಹಂತಕ್ಕೆ ಒಯ್ಯುವುದಷ್ಟೇ ಬಜೆಟ್‌ನಲ್ಲಿ ಉಲ್ಲೇಖವಾಗಿವೆ.

ದೇಶದ ಅತ್ಯುತ್ತಮ ಮೆಟ್ರೊಗಳಲ್ಲಿ ಒಂದಾಗಿರುವ ‘ನಮ್ಮ ಮೆಟ್ರೊ’ ಇದೇ ಪ್ರಥಮ ಬಾರಿಗೆ ಲಾಭದಾಯಕ ಪಥಕ್ಕೆ ಬಂದಿದೆ. ಮೆಟ್ರೊ ಮಾರ್ಗ ಸದ್ಯ 74 ಕಿ.ಮೀ. ಇದ್ದು, ಇನ್ನು ಒಂದು ವರ್ಷದಲ್ಲಿ 44 ಕಿ.ಮೀ. ಸೇರಲಿದೆ. 2026ಕ್ಕೆ ಹಂತ 2 ಮತ್ತು 2 ಎ ಆರಂಭಗೊಳ್ಳಲಿದೆ. ಇವು ಈಗಾಗಲೇ ಕಾಮಗಾರಿ ನಡೆಯುತ್ತಿರುವ ಯೋಜನೆಗಳಾಗಿದ್ದು, ಹೊಸತಲ್ಲ. 

3ನೇ ಹಂತದಲ್ಲಿ ₹ 15,611 ಕೋಟಿ ಅಂದಾಜು ವೆಚ್ಚದ ಯೋಜನೆಗೆ ರಾಜ್ಯ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಕೇಂದ್ರ ಸರ್ಕಾರದ ಅನುಮೋದನೆಯ ನಿರೀಕ್ಷೆಯಲ್ಲಿದೆ. 3ಎ ಹಂತದಲ್ಲಿ ಸರ್ಜಾಪುರ–ಹೆಬ್ಬಾಳ ಸಂಪರ್ಕಿಸುವ ಮಾರ್ಗ ನಿರ್ಮಾಣದ ಡಿಪಿಆರ್‌ ಕರಡು ಸಿದ್ಧಪಡಿಸಿದ್ದು, ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಬೇಕಿದೆ. 

ಬೆಂಗಳೂರು ಉಪನಗರ ರೈಲು ಯೋಜನೆ ಕೂಡ ಈಗಿರುವ ಕಾಮಗಾರಿಗಳನ್ನೇ ಚುರುಕುಗೊಳಿಸುವ ಪ್ರಸ್ತಾಪವಿದೆ. ಬೈಯಪ್ಪನಹಳ್ಳಿ–ಚಿಕ್ಕಬಾಣಾವರ (ಕಾರಿಡಾರ್‌–2) ಸಿವಿಲ್‌ ಕಾಮಗಾರಿ ನಡೆಯುತ್ತಿದೆ. ಇತ್ತೀಚೆಗೆ ಈ ಕಾಮಗಾರಿ ಸ್ವಲ್ಪ ವೇಗ ಪಡೆದಿದೆಯಾದರೂ ತಿಂಗಳಿಗೆ ಶೇ 5ರಷ್ಟು ಪ್ರಗತಿ ಕೂಡ ಆಗುತ್ತಿಲ್ಲ. ಇದರಿಂದ ನಿಗದಿತ ಸಮಯದಲ್ಲಿ ಈ ಕಾಮಗಾರಿ ಮುಗಿಯುವ ಲಕ್ಷಣಗಳಿಲ್ಲ. ಕಾಮಗಾರಿ ಚುರುಕುಗೊಳಿಸಲು ಯಾವುದೇ ಕ್ರಮಗಳು ಕಾಣುತ್ತಿಲ್ಲ. 

ಹೀಲಲಿಗೆ–ರಾಜಾನುಕುಂಟೆ (ಕಾರಿಡಾರ್‌–4) ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ. ರೋಲಿಂಗ್ ಸ್ಟಾಕ್‌ (ಬೋಗಿ) ಪೂರೈಕೆ, ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಯುರೋಪಿಯನ್‌ ಇನ್ವೆಸ್ಟ್‌ ಬ್ಯಾಂಕ್‌ ಮತ್ತು ಜರ್ಮನಿಯ ಕೆಎಫ್‌ಡಬ್ಲ್ಯು ಬ್ಯಾಂಕ್‌ಗಳ ಜೊತೆಗೆ ಆರ್ಥಿಕ ಒಪ್ಪಂದ ಮಾಡಿಕೊಳ್ಳುತ್ತಿದೆ. ಇವೆಲ್ಲವೂ ಪೂರ್ವನಿರ್ಧರಿತ ಕಾರ್ಯಗಳಾಗಿವೆ.

ಬೆಂಗಳೂರು ಸಂಪರ್ಕ ಕ್ಷೇತ್ರದ ಜೀವನಾಡಿ ಆಗಿರುವ ಬಿಎಂಟಿಸಿಗೆ 1,334 ಹೊಸ ಎಲೆಕ್ಟ್ರಿಕ್‌ ಬಸ್‌ಗಳು ಹಾಗೂ 820 ಬಿಎಸ್‌–6 ಡೀಸೆಲ್ ಬಸ್‌ಗಳನ್ನು ಸೇರ್ಪಡೆಗೊಳ್ಳಲಿವೆ. ಪ್ರಯಾಣಿಕರ ಸುರಕ್ಷತೆಗಾಗಿ ವೆಹಿಕಲ್‌ ಟ್ರ್ಯಾಕಿಂಗ್‌ ಹೊಂದಿರುವ ಮೊಬೈಲ್‌ ಆ್ಯಪ್‌ ಅನುಷ್ಠಾನಗೊಳಿಸಲಾಗುತ್ತಿದೆ. ವಾಹನ ಸಂದಣಿ ಕಡಿಮೆಗೊಳಿಸಲು ಜಪಾನ್‌ ಸರ್ಕಾರದ ಸಹಯೋಗದಲ್ಲಿ ಪ್ರಮುಖ 28 ಜಂಕ್ಷನ್‌ಗಳಲ್ಲಿ ಏರಿಯಾ ಟ್ರಾಫಿಕ್‌ ಸಿಗ್ನಲ್‌ ಕಂಟ್ರೋಲ್‌ ಸಿಸ್ಟಂ ಅಳವಡಿಸಲು ನಿರ್ಧರಿಸಿದೆ.

ಹೊಸ ಹೊರೆಯನ್ನು ಹೊತ್ತುಕೊಳ್ಳಲು ತಯಾರಿಲ್ಲದ ಸಿದ್ದರಾಮಯ್ಯ ಸರ್ಕಾರವು ಇರುವ ಯೋಜನೆಗಳನ್ನೇ ಮುಂದುವರಿಸುವ ಜಾಣ್ಮೆ ನಡೆಯನ್ನು ಪ್ರದರ್ಶಿಸಿದೆ. ಹೊಸ ಯೋಜನೆಗಳ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT