ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಸಾಗಣೆ ದರ ದುಬಾರಿ: ಮಾವು ರಫ್ತಿಗೆ ಅಡ್ಡಿ

ಕೆ.ಜಿಗೆ ₹500 ಮುಟ್ಟಿದ ಸಾಗಣೆ ದರ
Published 1 ಮೇ 2024, 23:50 IST
Last Updated 1 ಮೇ 2024, 23:50 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ (ಜುಲೈನಿಂದ ಜೂನ್‌ವರೆಗೆ) ಮಾವಿನ ಇಳುವರಿ ಕುಂಠಿತವಾಗಿರುವ ಬೆನ್ನಲ್ಲೇ, ಕೆಂಪು ಸಮುದ್ರದ ಬಿಕ್ಕಟ್ಟು ಮಾವಿನ ಹಣ್ಣುಗಳ ರಫ್ತಿಗೆ ಅಡ್ಡಿಯಾಗಿದೆ.

ಬಿಕ್ಕಟ್ಟಿನಿಂದಾಗಿ ಹಡಗಿನ ಮೂಲಕ ವಿದೇಶಗಳಿಗೆ ಮಾವಿನ ಹಣ್ಣುಗಳನ್ನು ರವಾನೆ ಮಾಡಲು ಸಾಧ್ಯವಾಗುತ್ತಿಲ್ಲ. ವಿಮಾನದ ಮೂಲಕವೇ ರವಾನಿಸುವುದು ಅನಿವಾರ್ಯವಾಗಿದೆ. ಆದರೆ, ವಿಮಾನ ಸಾಗಣೆ ದರ ಏರಿಕೆಯಾಗಿದ್ದು, ರಫ್ತುದಾರರು ಮತ್ತು ಬೆಳೆಗಾರರನ್ನು ಅಡಕತ್ತರಿಗೆ ಸಿಲುಕಿಸಿದೆ. 

ಯೂರೋಪ್‌ ದೇಶಗಳಿಗೆ ಭಾರತದ ರಫ್ತು ಹಾಗೂ ಆಮದು ವಹಿವಾಟು ಕೆಂಪು ಸಮುದ್ರದ ಮಾರ್ಗವಾಗಿಯೇ ನಡೆಯುತ್ತಿದೆ. ಆದರೆ, ಅಲ್ಲಿ ತಲೆದೋರಿರುವ ಬಿಕ್ಕಟ್ಟು ಇನ್ನೂ ಶಮನಗೊಂಡಿಲ್ಲ. ಇದರಿಂದ ಸರಕು ಸಾಗಣೆ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿದೆ. 

‘ವಿಮಾನದ ಮೂಲಕ ವಿದೇಶಗಳಿಗೆ ಮಾವಿನ ಹಣ್ಣುಗಳ ರವಾನೆಗೆ ಕಳೆದ ವರ್ಷ ಪ್ರತಿ ಕೆ.ಜಿಗೆ ₹150 ಸಾಗಣೆ ದರ ಇತ್ತು. ಈಗ ₹450ರಿಂದ ₹500ಕ್ಕೆ ಮುಟ್ಟಿದೆ. ಇದರಿಂದ ರಫ್ತುದಾರರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಮಾವು ಬೆಳೆಗಾರರು ಹೇಳುತ್ತಾರೆ.

ಮಾವಿನ ಹಣ್ಣುಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡಲು ಆಗುವುದಿಲ್ಲ. ಕೊಯ್ಲು ಮಾಡಿದ 8ರಿಂದ 10 ವಾರದೊಳಗೆ ರಫ್ತು ಮಾಡಬೇಕಿದೆ. ಸಾಗಣೆ ದರ ದುಬಾರಿಯಾಗಿರುವುದರಿಂದ ರಫ್ತುದಾರರು, ಮಾವಿನ ಹಣ್ಣುಗಳನ್ನು ಬೆಳೆಗಾರರಿಗೆ ಹಿಂದಿರುಗಿಸುತ್ತಿದ್ದಾರೆ ಎಂದು ವಿವರಿಸುತ್ತಾರೆ.

ಕೆಲವು ರೈತರು ಗುಣಮಟ್ಟದ ಮಾವು ಬೆಳೆದಿದ್ದು, ಇದಕ್ಕೆ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಸ್ಥಳೀಯ ಮಾರುಕಟ್ಟೆಯಲ್ಲಿ ಈ ಹಣ್ಣುಗಳನ್ನು ಮಾರಾಟ ಮಾಡಿದರೆ ಅವರಿಗೆ ಲಾಭ ಸಿಗುವುದಿಲ್ಲ. ರಫ್ತು ಮಾಡಿದರಷ್ಟೇ ಲಾಭ ಸಿಗುತ್ತದೆ. 

‘ವಿಮಾನದಲ್ಲಿ ಮಾವು ಸಾಗಣೆ ವೆಚ್ಚವು ದುಬಾರಿಯಾಗಿರುವ ಬಗ್ಗೆ ಸಾಕಷ್ಟು ದೂರುಗಳನ್ನು ಸ್ವೀಕರಿಸಲಾಗಿದೆ. ಬೆಳೆಗಾರರು ಮತ್ತು ರಫ್ತುದಾರರಿಗೆ ಅನುಕೂಲವಾಗುವಂತೆ ಸಾಗಣೆ ದರ ನಿಗದಿಪಡಿಸುವ ಬಗ್ಗೆ ಕೇಂದ್ರ ವಾಣಿಜ್ಯ ಸಚಿವಾಲಯವು ನಾಗರಿಕ ವಿಮಾನಯಾನ ಸಚಿವಾಲಯದ ಜೊತೆಗೆ ಶೀಘ್ರವೇ ಚರ್ಚಿಸಲಿದೆ’ ಎಂದು ಕೇಂದ್ರದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಎಪಿಇಡಿಎ) ಪ್ರತಿನಿಧಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT