ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಉಳಿತಾಯ ಬಾಂಡ್‌

Last Updated 1 ಜುಲೈ 2020, 3:09 IST
ಅಕ್ಷರ ಗಾತ್ರ
ADVERTISEMENT
""
""

ಕೇಂದ್ರ ಸರ್ಕಾರವು ಇಂದಿನಿಂದ (ಜುಲೈ 1) ಬದಲಾಗುವ ಬಡ್ಡಿ ದರಗಳ ಮತ್ತು ತೆರಿಗೆಗೆ ಒಳಪಡುವ ಹೊಸ ಉಳಿತಾಯ ಬಾಂಡ್‌ಗಳನ್ನು (Floating Rate Savings Bonds, 2020 –Taxable) ಪರಿಚಯಿಸಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌, ಸರ್ಕಾರದ ಪರವಾಗಿ ಈ ಬಾಂಡ್‌ಗಳನ್ನು ವಿತರಿಸಲಿದೆ. ಆರ್‌ಬಿಐ ಬಾಂಡ್‌ ಎಂದೇ ಇವು ಜನಪ್ರಿಯವಾಗಿವೆ. ಮೇ 28ರಂದು ರದ್ದುಪಡಿಸಿದ್ದ ಶೇ 7.75 ಬಡ್ಡಿ ದರದ ಉಳಿತಾಯ (ತೆರಿಗೆಗೆ ಒಳಪಡುವ) ಬಾಂಡ್ಸ್‌ 2018ರ ಬದಲಿಗೆ ಈಹೊಸ ಬಾಂಡ್‌ಗಳನ್ನು ಪರಿಚಯಿಸಲಾಗಿದೆ. ಅಸಲಿನ ಸುರಕ್ಷತೆ, ಹೆಚ್ಚಿನ ಬಡ್ಡಿ ಮತ್ತು ನಿಯಮಿತ ಆದಾಯದ ಕಾರಣಕ್ಕೆ ಸಾಮಾನ್ಯ ಹೂಡಿಕೆದಾರರಲ್ಲಿ ಈ ಬಾಂಡ್‌ಗಳು ಹೆಚ್ಚು ಜನಪ್ರಿಯವಾಗಿವೆ.

ಏಳು ವರ್ಷಗಳ ಅವಧಿಯ ಈ ಬಾಂಡ್‌ಗಳ ಬಡ್ಡಿ ದರವನ್ನು ಆರಂಭದಲ್ಲಿ ವಾರ್ಷಿಕ ಶೇ 7.15ರಂತೆ ನಿಗದಿಪಡಿಸಲಾಗಿದೆ. ಬಡ್ಡಿ ದರಗಳು ಪ್ರತಿ ಆರು ತಿಂಗಳಿಗೊಮ್ಮೆ ಬದಲಾಗಲಿವೆ. ಮೊದಲ ಬದಲಾವಣೆಯು 2021ರ ಜನವರಿ 1ರಂದು ನಡೆಯಲಿದೆ. ಬಾಂಡ್‌ ಪರಿಪಕ್ವಗೊಂಡಾಗ ಒಟ್ಟಾರೆ ಬಡ್ಡಿ ಪಾವತಿಸುವ ಬದಲಿಗೆ ಪ್ರತಿ ಆರು ತಿಂಗಳಿಗೊಮ್ಮೆ ಬಡ್ಡಿ ಪಾವತಿಸಲಾಗುವುದು.

ಸರ್ಕಾರವು ಮೇನಲ್ಲಿ ತನ್ನ ಶೇ 7.75ರಷ್ಟು ಬಡ್ಡಿ ದರದ ಉಳಿತಾಯ ಬಾಂಡ್‌ಗಳನ್ನು ಹಠಾತ್ತಾಗಿ ರದ್ದುಪಡಿಸಿತ್ತು. ಇತರ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ ಈ ಬಾಂಡ್‌ಗಳ ಬಡ್ಡಿ ದರ ಹೆಚ್ಚಿಗೆ ಇತ್ತು. ಹೀಗಾಗಿ ಈ ಬಾಂಡ್‌ಗಳಿಗೆ ಬೇಡಿಕೆ ಹೆಚ್ಚಿತ್ತು. ಸರ್ಕಾರದ ಸಾಲ ಎತ್ತುವ ನೀತಿಗೆ ಈ ಬಾಂಡ್‌ಗಳು ದುಬಾರಿಯಾಗಿ ಪರಿಣಮಿಸಿದ ಕಾರಣಕ್ಕೆ ಅವುಗಳನ್ನು ರದ್ದು ಮಾಡುವ ನಿರ್ಧಾರ ಕೈಗೊಂಡಿತ್ತು.

ಈ ಹಿಂದೆಯೂ ಸರ್ಕಾರ ತನ್ನ ಬಾಂಡ್‌ಗಳನ್ನು ರದ್ದುಪಡಿಸಿತ್ತು. ಆನಂತರ ಬಡ್ಡಿ ದರಗಳನ್ನು ಕಡಿಮೆ ಮಾಡಿ ಹೊಸ ಬಾಂಡ್‌ಗಳನ್ನು ಪರಿಚಯಿಸಿತ್ತು. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌) ಮತ್ತು ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಗಮನಾರ್ಹವಾಗಿ ತಗ್ಗಿರುವಾಗ, ಆರ್‌ಬಿಐ ಬಾಂಡ್‌ ಕೈಬಿಟ್ಟಿರುವುದು ಇನ್ನೊಂದು ಹೊಡೆತವಾಗಿತ್ತು. ನಿರೀಕ್ಷೆಯಂತೆ ಈಗ ಬಡ್ಡಿ ದರಗಳನ್ನು ಶೇ 7.75 ರಿಂದ ಶೇ 7.15ಕ್ಕೆ ತಗ್ಗಿಸಿ (ಶೇ 0.60ರಷ್ಟು ಕಡಿಮೆ ಮಾಡಿ) ಹೊಸ ಬಾಂಡ್‌ಗಳನ್ನು ಬಿಡುಗಡೆ ಮಾಡುತ್ತಿದೆ.

ಹೂಡಿಕೆಗೆ ಯಾರಿಗೆ ಅವಕಾಶ

ಬ್ಯಾಂಕ್‌ಗಳಲ್ಲಿ ಜಂಟಿ ಖಾತೆ ಹೊಂದಿದವರೂ ಸೇರಿದಂತೆ ವ್ಯಕ್ತಿಗಳು ಮತ್ತು ಹಿಂದೂ ಅವಿಭಕ್ತ ಕುಟುಂಬ ಬಾಂಡ್‌ಗಳಲ್ಲಿ ಹಣ ಹೂಡಿಕೆ ಮಾಡಬಹುದು. ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಹೂಡಿಕೆ ಅವಕಾಶ ಇಲ್ಲ. ಷೇರುಪೇಟೆಗಳಲ್ಲಿ ಈ ಬಾಂಡ್‌ಗಳ ವಹಿವಾಟು ಇರುವುದಿಲ್ಲ.

ಹೂಡಿಕೆ ಮೊತ್ತ

₹ 100 ಮುಖಬೆಲೆಯ ಬಾಂಡ್‌ಗಳಲ್ಲಿ ಕನಿಷ್ಠ ಹೂಡಿಕೆಯು ₹ 1,000. ಹೂಡಿಕೆಗೆ ಯಾವುದೇ ಗರಿಷ್ಠ ಮಿತಿ ವಿಧಿಸಿಲ್ಲ.

ಬಾಂಡ್‌ಗಳ ಅವಧಿ

ಬಾಂಡ್‌ ನೀಡಿಕೆ ದಿನಕ್ಕೆ 7 ವರ್ಷ ಪೂರ್ಣಗೊಂಡ ನಂತರ ಬಾಂಡ್‌ ಮೊತ್ತವನ್ನು ಹೂಡಿಕೆದಾರರಿಗೆ ಮರಳಿಸಲಾಗುವುದು. ಅವಧಿಗೆ ಮುನ್ನವೇ ಬಾಂಡ್‌ ಮರಳಿಸಿ ಹಣ ಹಿಂದೆ ಪಡೆಯಲು ಹಿರಿಯ ನಾಗರಿಕರಿಗೆ ಅವಕಾಶ ಕಲ್ಪಿಸಲಾಗಿದೆ.

60 ರಿಂದ 70 ವರ್ಷದವರಿಗೆ 6 ವರ್ಷಗಳ ನಂತರ, 70 ರಿಂದ 80 ವರ್ಷದವರಿಗೆ 5 ವರ್ಷಗಳ ನಂತರ ಮತ್ತು 80ಕ್ಕಿಂತ ಹೆಚ್ಚಿನ ವಯೋಮಾನದವರಿಗೆ 4 ವರ್ಷಗಳ ನಂತರ ಬಾಂಡ್‌ ಹಣ ಹಿಂದೆ ಪಡೆಯಲು ಅವಕಾಶ ನೀಡಲಾಗಿದೆ.

ಬಡ್ಡಿ ಆದಾಯಕ್ಕೆ ತೆರಿಗೆ

ಬಾಂಡ್‌ ಹೂಡಿಕೆದಾರರು ಪಡೆಯುವ ಬಡ್ಡಿಗೆ, ಆದಾಯ ತೆರಿಗೆ ಹಂತಗಳ ಅನ್ವಯ ತೆರಿಗೆ ವಿಧಿಸಲಾಗುವುದು. ಬಡ್ಡಿ ಆದಾಯಕ್ಕೆ ಮೂಲದಲ್ಲಿಯೇ ತೆರಿಗೆ ಕಡಿತ (ಟಿಡಿಎಸ್‌) ಮಾಡಲಾಗುವುದು.

2021ರ ಜನವರಿ 1ರಂದು ಶೇ 7.15ರಷ್ಟು ಬಡ್ಡಿಯ ಮೊದಲ ಕಂತು ಪಾವತಿಯಾಗಲಿದೆ. ಅರ್ಧವಾರ್ಷಿಕ ಬಡ್ಡಿ ದರವನ್ನು ಪ್ರತಿ 6 ತಿಂಗಳಿಗೊಮ್ಮೆ ನಿರ್ಧರಿಸಲಾಗುವುದು. ಬಡ್ಡಿಯನ್ನು ವರ್ಷದಲ್ಲಿ ಎರಡು ಬಾರಿ (ಜನವರಿ 1 ಮತ್ತು ಜುಲೈ 1) ಪಾವತಿಸಲಾಗುವುದು.

ಹೂಡಿಕೆ ವಿಧಾನ ಹೇಗೆ?

₹ 20 ಸಾವಿರದವರೆಗೆ ನಗದು, ₹ 20 ಸಾವಿರಕ್ಕಿಂತ ಹೆಚ್ಚಿನ ಮೊತ್ತಕ್ಕೆ ಡ್ರಾಫ್ಟ್‌, ಚೆಕ್‌, ಎಲೆಕ್ಟ್ರಾನಿಕ್‌ ವಿಧಾನಗಳಲ್ಲಿ ಹಣ ಪಾವತಿಸಬೇಕು. ಎಸ್‌ಬಿಐ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಐಸಿಐಸಿಐ ಬ್ಯಾಂಕ್‌, ಐಡಿಬಿಐ ಬ್ಯಾಂಕ್‌, ಆ್ಯಕ್ಸಿಸ್ ಬ್ಯಾಂಕ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳಲ್ಲಿ ಬಾಂಡ್‌ ಲೆಡ್ಜರ್‌ ಅಕೌಂಟ್‌ ರೂಪದಲ್ಲಿ ಬಾಂಡ್‌ಗೆ ಅರ್ಜಿ ಸಲ್ಲಿಸಬೇಕು. ಬಾಂಡ್‌ಗಳನ್ನು ಕೇವಲ ವಿದ್ಯುನ್ಮಾನ ರೂಪದಲ್ಲಿ ನೀಡಲಾಗುವುದು. ಬಾಂಡ್‌ ಖರೀದಿಸಿದವರ ಬಾಂಡ್‌‌ ಲೆಡ್ಜರ್‌ ಅಕೌಂಟ್‌ಗಳಲ್ಲಿ ಬಾಂಡ್‌ಗಳು ಇರಲಿವೆ.

ಬಾಂಡ್ ಅಧಿಸೂಚನೆಯ ವಿವರಗಳು https://rbidocs.rbi.org.in/rdocs/content/pdfs/GOI26062020.pdf ಇಲ್ಲಿ ಲಭ್ಯ.

ನಿಬಂಧನೆಗಳು

* ಬ್ಯಾಂಕ್‌, ಹಣಕಾಸು ಸಂಸ್ಥೆ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಈ ಬಾಂಡ್‌ಗಳನ್ನು ಅಡಮಾನ ಇಡುವಂತಿಲ್ಲ.

* ಬಾಂಡ್‌ ಹೊಂದಿದವರು ಇತರರನ್ನು ನಾಮಕರಣ ಮಾಡಬಹುದು.

* ನಾಮಕರಣಗೊಂಡವರಿಗೆ ಮಾತ್ರ ಬಾಂಡ್‌ಗಳನ್ನು ವರ್ಗಾಯಿಸಬಹುದು. ಬಾಂಡ್‌ ಹೊಂದಿದವರು ಮೃತಪಟ್ಟ ಸಂದರ್ಭದಲ್ಲಿ ಅವರ ಆಸ್ತಿಯ ವಾರಸುದಾರರಿಗೆ ವರ್ಗಾಯಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT