ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳಿತಾಯದ ಸರಳ ಸೂತ್ರಗಳು

Last Updated 8 ಜನವರಿ 2019, 19:30 IST
ಅಕ್ಷರ ಗಾತ್ರ

ನಮಗೆ ಮನೆ ಕಟ್ಟುವ ಆಲೋಚನೆ ಬಂದಾಗ ನಮ್ಮ ಕನಸಿನ ಮನೆ ಹೇಗಿರಬೇಕೆಂದು ಅಂದಾಜಿಸಿ ಒಬ್ಬ ಎಂಜಿನಿಯರ್‌ ಭೇಟಿಯಾಗಿ ಮನೆಯಲ್ಲಿ ಬೇಕಾಗುವ ಸೌಲಭ್ಯಗಳ ಬಗ್ಗೆ ತಿಳಿಸಿ ಅವರಿಂದ ನೀಲನಕ್ಷೆ ಹಾಗೂ ಒಳ್ಳೆಯ ವಿನ್ಯಾಸ ತಯಾರಿಸುತ್ತೇವೆ. ಮುಂದೆ ಕೆಲವೇ ದಿನಗಳಲ್ಲಿ ನಮ್ಮ ಕನಸಿನ ಮನೆ ಸಿದ್ಧವಾಗಿರುತ್ತದೆ. ಹಾಗೆಯೇ ನಾವು ನಮ್ಮ ದುಡಿಮೆಯ ಆರಂಭದ ದಿನಗಳಲ್ಲಿ ಉಳಿತಾಯದ ಯೋಜನೆಯನ್ನು ಸಿದ್ಧಪಡಿಸಿಕೊಂಡರೆ, ಜೀವನದ ಪ್ರತಿ ಹಂತದಲ್ಲಿ ಉಳಿತಾಯದ ಮೊತ್ತವು ನೆರವಿಗೆ ಬರುತ್ತದೆ.

ಹೀಗೆ ಉಳಿತಾಯದ ವಿಚಾರ ಬಂದಾಗ ಬಹಳಷ್ಟು ಜನರಿಗೆ ಗೊಂದಲ ಉಂಟಾಗುವುದು ಸಹಜ. ಏಕೆಂದರೆ ಉಳಿತಾಯದ ಹಲವಾರು ವಿಧಾನಗಳು ಇರುವ ಕಾರಣ ಮತ್ತು ದಿನನಿತ್ಯದ ಖರ್ಚುವೆಚ್ಚಗಳನ್ನು ನಿಭಾಯಿಸಿ ಯಾವುದಕ್ಕೆ ಎಷ್ಟು ಉಳಿತಾಯ ಮಾಡಬೇಕು ಎನ್ನುವುದು ತಿಳಿಯದೇ ಅಥವಾ ಹೆಚ್ಚಿನ ಬಡ್ಡಿಯ ಆಮಿಷಕ್ಕೆ ಒಳಗಾಗಿ ನಮಗೆ ಬೇಕಾದ ಸಮಯಕ್ಕೆ ಹಣ ಸಿಗದೇ ಆರ್ಥಿಕ ತೊಂದರೆಗಳಿಗೆ ಸಿಲುಕುವ ಬದಲು ಯೋಜನಾಬದ್ಧವಾಗಿ ಉಳಿತಾಯ ಮಾಡಿದರೆ ನಮ್ಮ ಜೀವನ ನೆಮ್ಮದಿಯಾಗಿರುತ್ತದೆ.
ಉಳಿತಾಯ ಮಾಡಬೇಕೆಂದು ನಮ್ಮ ಬಳಿ ಇದ್ದಬದ್ದ ಹಣವನ್ನೆಲ್ಲಾ ಒಂದೇ ವಿಧದ ಉಳಿತಾಯದ ಯೋಜನೆಗಳಲ್ಲಿ ತೊಡಗಿಸುವುದು ಸರಿಯಾದ ನಿರ್ಧಾರವಲ್ಲ.

ಹೀಗಾಗಿ ಉಳಿತಾಯದ ಯೋಜನೆಗಳನ್ನು ತಿಳಿಯುವುದು ಅವಶ್ಯ. ಉಳಿತಾಯ ಯೋಜನೆಗಳಲ್ಲಿ ಎರಡು ವಿಧಗಳು ಇವೆ 1) ಅಲ್ಪಾವಧಿ ಉಳಿತಾಯ ಯೋಜನೆಗಳು 2) ದೀರ್ಘಾವಧಿಯ ಉಳಿತಾಯ ಯೋಜನೆಗಳು

ಅಲ್ಪಾವಧಿಯ ಉಳಿತಾಯ ಯೋಜನೆ

ಬ್ಯಾಂಕ್ ಠೇವಣಿ, ಆರ್.ಡಿ., ಪಿಗ್ಮಿ, ಸರ್ಕಾರದ ನೋಂದಾಯಿತ ಹಾಗೂ ಖಚಿತ ಬಡ್ಡಿದರ ನೀಡುವ ಬಾಂಡ್, ಷೇರು ಹಾಗೂ ಉತ್ತಮ ಕಂಪನಿಯ ಮ್ಯೂಚುವಲ್ ಫಂಡಗಳು. ಷೇರು ಹಾಗೂ ಮ್ಯೂಚುವಲ್ ಫಂಡಗಳಲ್ಲಿ ಉಳಿತಾಯ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು ಮತ್ತು ಹಣಕಾಸು ಮಾರುಕಟ್ಟೆಯ ಬಗ್ಗೆ ಪ್ರಚಲಿತ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡುವುದನ್ನು ಮರೆಯಬಾರದು.

ದೀರ್ಘಾವಧಿ ಉಳಿತಾಯ ಯೋಜನೆ

ಜೀವ ವಿಮಾ ಪಾಲಿಸಿಗಳು, ಸಾರ್ವಜನಿಕ ಭವಿಷ್ಯ ನಿಧಿ(ಪಿ.ಪಿ.ಎಫ್).

ನಮ್ಮ ದುಡಿಮೆಯ ಎಷ್ಟು ಪ್ರತಿಶತದ ಮೊತ್ತವನ್ನು ಉಳಿತಾಯ ಹಾಗೂ ಖರ್ಚುವೆಚ್ಚಗಳಿಗೆ ಬಳಸಬೇಕು ಎನ್ನುವ ಸರಳ ಹಾಗೂ ಸಾಮಾನ್ಯ ಸೂತ್ರಗಳಿವೆ.

ದುಡಿಮೆಯ ಶೇ 30ರಷ್ಟು ಮೊತ್ತವನ್ನು ದಿನನಿತ್ಯದ ಖರ್ಚುವೆಚ್ಚಗಳಿಗೆ ಬಳಸಬಹುದು. ಶೇ30ರಷ್ಟು ಮೊತ್ತವನ್ನು ಇ.ಎಮ್.ಐ.(ಸಾಲದ ಮಾಸಿಕ ಕಂತು)ಗಳಿಗೆ ಬಳಸುವುದು. ಸಾಲದ ಕಂತುಗಳೆಂದರೆ ಫ್ಲ್ಯಾಟ್‌ ಖರೀದಿಸಲು, ಮನೆ ಕಟ್ಟಿಸಲು, ಕಾರ್ ಖರೀದಿಸಲು ಅಥವಾ ಯಾವುದಾದರು ಒಳ್ಳೆಯ ಉದ್ದೇಶಕ್ಕಾಗಿ ಪಡೆದ ಸಾಲದ ಮೊತ್ತ ಮರುಪಾವತಿಸಲು. ಶೇ 10ರಷ್ಟು ಆಧುನಿಕ ಜೀವನ ಶೈಲಿಗಾಗಿ. ಶೇ30ರಷ್ಟು ಮೊತ್ತವನ್ನು ಕಡ್ಡಾಯವಾಗಿ ಉಳಿತಾಯಕ್ಕಾಗಿ ಮೀಸಲಾಗಿಡುವುದು ಅವಶ್ಯ. ಈ ಶೇ 30ರಲ್ಲಿ ಶೇ 10ರಷ್ಟು ಅಲ್ಪಾವಧಿಯ ಉಳಿತಾಯ ಯೋಜನೆಗಳಲ್ಲಿ ಹಾಗೂ ಶೇ 20ರಷ್ಟು ದೀರ್ಘಾವಧಿಯ ಉಳಿತಾಯದ ಯೋಜನೆಗಳಲ್ಲಿ ಮೀಸಲಿಡುವುದು ಒಳ್ಳೆಯದು.

ಉಳಿತಾಯದ ಶೇ 10ರಷ್ಟು ಅಲ್ಪಾವಧಿಯ ಉಳಿತಾಯ ಯೋಜನೆಗಳಾದ ಬ್ಯಾಂಕ್ ಠೇವಣಿ ರೂಪದಲ್ಲಿ, ಆರ್.ಡಿ. ಪೋಸ್ಟ್ ಆಫೀಸ್ ಉಳಿತಾಯಗಳಲ್ಲಿ , ಉತ್ತಮ ಕಂಪನಿಯ ಮ್ಯೂಚುವಲ್ ಫಂಡಗಳಲ್ಲಿ , ಸರ್ಕಾರದ ನೋಂದಾಯಿತ ಹಾಗೂ ಖಚಿತ ಬಡ್ಡಿ ದರ ನೀಡುವ ಬಾಂಡ್‌ಗಳಲ್ಲಿ ವಿನಿಯೋಗಿಸುವುದು ಒಳ್ಳೆಯದು. ಈ ತರಹದ ಉಳಿತಾಯಗಳು ಮಕ್ಕಳ ಶೈಕ್ಷಣಿಕ ಶುಲ್ಕ ತುಂಬಲು, ಕಾರ್ ಅಥವಾ ಬೈಕ್ ಕೊಳ್ಳಲು, ನಿವೇಶನ ಕೊಳ್ಳಲು ಇಲ್ಲವೇ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಸಹಕಾರಿಯಾಗುತ್ತದೆ.

ಶೇ 20ರಷ್ಟು ಉಳಿತಾಯವು ದೀರ್ಘಾವಧಿಯ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ನೆರವಾಗುತ್ತವೆ. ದೀರ್ಘಾವಧಿಯ ಉಳಿತಾಯ ಯೋಜನೆಗಳಲ್ಲಿ ಮೊದಲನೆಯದಾಗಿ ಜೀವ ವಿಮೆ ಪಾಲಿಸಿ ಪಡೆಯುವುದು. ದೀರ್ಘಾವಧಿಯ ಪಾಲಿಸಿ ಪಡೆಯುವುದರಿಂದ ಹೆಚ್ಚಿನ ವಿಮಾ ರಕ್ಷಣೆಯ ಜೊತೆಗೆ ಬೋನಸ್ ಹಾಗೂ ಹೆಚ್ಚುವರಿ ಬೋನಸ್ ದೊಂದಿಗೆ ಪಾಲಿಸಿ ಅವಧಿ ನಂತರ ಉತ್ತಮ ಮೊತ್ತವು ಆದಾಯ ತೆರಿಗೆ ವಿನಾಯಿತಿಯೊಂದಿಗೆ ಕೈಸೇರುವುದು. ಇಂತಹ ಮೊತ್ತವನ್ನು ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ, ಮದುವೆ, ಮನೆ ಕಟ್ಟಿಸಲು ಅಥವಾ ಜೀವನದ ಸಂಧ್ಯಾಕಾಲದಲ್ಲಿ ಪಿಂಚಣಿ ಪಡೆಯಲು ಖಚಿತ ಹಾಗೂ ನಿಗದಿತ ದರದ ಪಿಂಚಣಿ ನೀಡುವ ಯೋಜನೆಗಳಲ್ಲಿ ತೊಡಗಿಸಿ ಆರ್ಥಿಕ ಸಬಲತೆ ಪಡೆಯಬಹುದು.

ಹಾಗೆಯೇ ದೀರ್ಘಾವಧಿಯ ಉಳಿತಾಯವಾಗಿ ಸಾರ್ವಜನಿಕ ಭವಿಷ್ಯ ನಿಧಿ (ಪಿ.ಪಿ.ಫ್) ಯೋಜನೆಯಲ್ಲಿನ ಉಳಿತಾಯವು ಸಹಕಾರಿ
ಯಾಗಲಿದೆ. ಈ ಯೋಜನೆಯು ಗರಿಷ್ಠ 15 ವರ್ಷಗಳಿಗೆ ಮಾತ್ರ ಲಭ್ಯವಿದೆ. ತಾವು ಉಳಿತಾಯ ಮಡಿದ ಮೊತ್ತ ಹಾಗೂ ಪೂರ್ಣಾವಧಿಯ ಬಡ್ಡಿಯೊಂದಿಗೆ ಉತ್ತಮ ಮೊತ್ತವು ಲಭ್ಯವಾಗಲಿದೆ.

ಇದಲ್ಲದೇ ಯಾವ ವಯೋಮಾನದವರು ಎಷ್ಟು ಪ್ರತಿಶತದಷ್ಟು ಮೊತ್ತವನ್ನು ಅಲ್ಪಾವಧಿಯ ಉಳಿತಾಯ ಹಾಗೂ ದೀರ್ಘಾವಧಿಯ ಉಳಿತಾಯಗಳಲ್ಲಿ ಮಾಡಿದರೆ ಒಳ್ಳೆಯದು ಎನ್ನುವುದೂ ಮುಖ್ಯವಾಗುತ್ತದೆ.

30ರಿಂದ 40ರ ವಯೋಮಾನದವರುಶೇ 10ರಷ್ಟು ಅಲ್ಪಾವಧಿ ಉಳಿತಾಯಗಳಲ್ಲಿ ಹಾಗೂ ಶೇ 20ರಷ್ಟು ದೀರ್ಘಾವಾಧಿಯ ಉಳಿತಾಯ ಯೋಜನೆಗಳಲ್ಲಿ ವಿನಿಯೋಗಿಸಬೇಕು. 40ರಿಂದ 45ರ ವಯೋಮಾನದವರು ಶೇ 15 ರಷ್ಟು ಅಲ್ಪಾವಧಿ ಹಾಗೂ ಶೇ 15ರಷ್ಟು ದೀರ್ಘಾವದಿ ಯೋಜನೆಗಳಲ್ಲಿ ಉಳಿತಾಯ ಮಾಡುವುದು.

ಹಾಗೆಯೇ 45ರಿಂದ 50ರ ವಯೋಮಾನದವರು ಶೇ 20ರಷ್ಟು ಅಲ್ಪಾವಧಿ ಹಾಗೂ ಶೇ 10ರಷ್ಟು ದೀರ್ಘಾವಧಿ ಯೋಜನೆಗಳಲ್ಲಿ ಉಳಿತಾಯ ಮಾಡುವುದು. ಇಲ್ಲಿ ನೀಡಿರುವ ಮಾಹಿತಿ ಒಂದು ಮಾದರಿ ಉಳಿತಾಯದ ಸೂತ್ರಗಳು. ಆದರೆ ಆಯಾ ಕುಟುಂಬದ ಅಗತ್ಯತೆಗಳನ್ನು ಅರಿತು ಉಳಿತಾಯದ ವಿಧಾನಗಳಲ್ಲಿ ಕೆಲವೊಂದು ಮಾರ್ಪಾಡು ಮಾಡಿಕೊಂಡು ಉಳಿತಾಯ ಮಾಡುವುದು ಅವಶ್ಯ.

ಕಷ್ಟಪಟ್ಟು ದುಡಿದ ಆದಾಯವನ್ನು ನಮ್ಮ ಜೀವನದ ಪ್ರತಿ ಘಟ್ಟಗಳಲ್ಲಿ ಹಾಗೂ ನಮ್ಮ ದೈನಂದಿನ ಜೀವನೋಪಾಯಕ್ಕೆ ಸಹಕಾರಿಯಾಗುವ ರೀತಿ ಉಳಿತಾಯ ಮಾಡಿದರೆ ಆರ್ಥಿಕವಾಗಿ ಸಬಲರಾಗಿರಲು ಸಾಧ್ಯ. ಪ್ರತಿಯೊಂದು ಕುಟುಂಬವೂ ಉತ್ತಮ ಉಳಿತಾಯದ ನೀತಿಗಳನ್ನು ಅಳವಡಿಸಿಕೊಂಡಲ್ಲಿ ಆರ್ಥಿಕ ತೊಂದರೆ ಎದುರಾಗುವುದು ಬಹಳ ಕಡಿಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT