ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಕ್ಕೆ ಪ್ರೇರಣೆ ಸ್ವಾವಲಂಬನೆ ಕನಸು

ನಾನೂ ಉದ್ಯಮಿ
Last Updated 24 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಪತಿ ಡಾಕ್ಟರ್‌. ಸುಂದರವಾದ ಮನೆ, ಕಾರು, ಬೇಕೆನಿಸಿದ್ದನ್ನು ಕೊಳ್ಳಲು ಸಾಕಷ್ಟು ಹಣ... ಎಲ್ಲವೂ ಇದೆ. ಆದರೆ ಬಿಎಸ್‌ಸಿ ಪದವಿ ಮುಗಿಸಿ ಮನೆಗೆಲಸ ಮಾಡಿಕೊಂಡು, ಧಾರಾವಾಹಿ ನೋಡುತ್ತಾ ಕಾಲ ಕಳೆಯುತ್ತಿದ್ದಾಗ, ಹುಬ್ಬಳ್ಳಿಯ ಸುಮಾ ಜೀವಣ್ಣವರ್‌ ಅವರನ್ನು ‘ಸ್ವಾವಲಂಬನೆ’ ಪ್ರಶ್ನೆ ಕಾಡಲಾರಂಭಿಸಿತು. ಇದಕ್ಕೆ ಸೂಕ್ತ ಉತ್ತರವನ್ನು ಉದ್ಯಮವನ್ನು ಆರಂಭಿಸುವ ಮೂಲಕ ಕಂಡುಕೊಂಡ ಸುಮಾ ಅವರು, ಹಲವು ಮಹಿಳೆಯರಿಗೂ ಉದ್ಯೋಗಾವಕಾಶ ಒದಗಿಸಿದ್ದಾರೆ. ತಮ್ಮಂತೆಯೇ ಸ್ವಾವಲಂಬನೆ ಕುರಿತು ಚಡಪಡಿಸುವ ವನಿತೆಯರಿಗೆ ಮಾರ್ಗದರ್ಶಕರೂ ಆಗಿದ್ದಾರೆ.

‘ಸ್ವಂತ ಉದ್ಯಮ’ ಆರಂಭಿಸಬೇಕೆಂಬ ಸುಮಾ ಅವರ ತುಡಿತಕ್ಕೆ ತಕ್ಕ ರೀತಿಯಲ್ಲಿ ಸ್ಪಂದಿಸಿದವರು ಸಂಬಂಧಿ ಮಹಾಂತೇಶ ಜೀವಣ್ಣವರ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರಾಗಿರುವ ಮಹಾಂತೇಶ ಜೀವಣ್ಣವರ ಸ್ವಂತವಾಗಿ ಉದ್ದಿಮೆ ಆರಂಭಿಸಲು ಬಯಸುವವರಿಗೆ ಸರ್ಕಾರದ ಕಡೆಯಿಂದ ಲಭ್ಯವಿರುವ ಸವಲತ್ತು, ಸಹಾಯಧನ ಮತ್ತು ಮಾರುಕಟ್ಟೆ ಅವಕಾಶಗಳ ಕುರಿತು ತಿಳಿಸಿಕೊಟ್ಟರು.

ಪತಿ ಡಾ. ಜೀವಣ್ಣವರ್‌ ರೋಗಿಗಳ ತಪಾಸಣೆ ಮಾಡಿ ಔಷಧ ನೀಡುವಾಗ ಕೆಲವರಾದರೂ ‘ಸರ್‌, ನಿಮಗೆ ಫೀಸ್‌ ಕೊಡಲು ದುಡ್ಡಿಲ್ಲ, ಗಂಡ ಕುಡುಕ, ಮಕ್ಕಳು ಉಪವಾಸ. ನನಗೊಂದು ಕೆಲಸ ಕೊಡಿಸಿ ಸರ್‌’ ಎಂದು ಬೇಡಿಕೊಳ್ಳುತ್ತಿದ್ದರು.

ಬಡ ರೋಗಿಗಳ ಸಮಸ್ಯೆಗೆ ಹೇಗೆ ಸ್ಪಂದಿಸುವುದು ಎಂದು ಮನೆಯಲ್ಲಿ ಚಿಂತಿಸುತ್ತಿದ್ದ ಪತಿಗೆ, ‘ನಾವೇ ಒಂದು ಉದ್ಯಮ ಆರಂಭಿಸಿ ಅವರಿಗೆಲ್ಲಾ ನೌಕರಿ ನೀಡಬಹುದಲ್ಲಾ’ ಎಂದು ಸುಮಾ ಅವರೇ ಪರಿ­ಹಾರ ಸೂಚಿಸಿದರು. ಅದೇ ವೇಳೆ, ಸ್ವಂತ ಉದ್ಯಮದ ಕನಸನ್ನೂ ನನಸಾಗಿಸಿಕೊಳ್ಳಲು ಯತ್ನಿಸಿದರು.

ಹೀಗೆ ಸಮಾಜಮುಖಿ ಆಲೋಚನೆ ಮತ್ತು ಸ್ವಾವಲಂಬನೆಯ ಕನಸಿನೊಂದಿಗೆ ಉದ್ಯಮಿ ಸುಮಾ ಜೀವಣ್ಣವರ್‌ ಅವರ ಸಾಬೂನು ತಯಾರಿಕಾ ಕಾರ್ಖಾನೆ 2001ರಲ್ಲಿ ಕಾರ್ಯಾರಂಭ ಮಾಡಿತು. ಮೊದಲಿಗೆ ಇಬ್ಬರು ಮಹಿಳೆಯರಿಗೆ ಕೆಲಸ ನೀಡಿತು.

ಬಂಡವಾಳ ₨50 ಸಾವಿರ!
ಸುಮಾ ಅವರು ಈ ಸಾಬೂನು ತಯಾರಿಕೆ ಘಟಕಕ್ಕೆ ಆರಂಭದಲ್ಲಿ  ತೊಡಗಿಸಿದ ಬಂಡವಾಳ ಕೇವಲ ₨50 ಸಾವಿರ!
ಸುಮಾ ಅವರಿಗೆ ಸಾಬೂನು ತಯಾರಿಕೆ ವಿಚಾರದಲ್ಲಿ ಹೆಚ್ಚೇನೂ ಅರಿವಿರಲಿಲ್ಲ. ಮನೆಯಲ್ಲಿ ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು, ಸ್ನಾನಕ್ಕೆ ಸಾಬೂನು ಬಳಸಿದ್ದಷ್ಟೇ ಗೊತ್ತಿತ್ತು. ಸಾಬೂನು ಹೇಗೆ ತಯಾರಾಗುತ್ತದೆ ಎಂಬುದನ್ನು ತಿಳಿಯುವುದು ದೂರದ ವಿಚಾರವಾಗಿತ್ತು.

ಹೀಗೆ, ಸುಮಾ ಅವರಿಗೆ ಅಷ್ಟೇನೂ  ಪರಿಚಿತವಲ್ಲದ ಉದ್ಯಮದಲ್ಲಿ ಆರಂಭದ ದಿನಗಳಲ್ಲಿ ವೈಜ್ಞಾನಿಕ ಸಲಹೆ ಮತ್ತು ತಯಾರಿಕೆಯ ರೀತಿ ಕುರಿತು ಮಾರ್ಗದರ್ಶನ ನೀಡಲು ಮುಂದಾದವರು ಮಾರ್ಜಕ ವಿಚಾರದಲ್ಲಿ ತಜ್ಞರಾದ ಡಾ. ಅಂಕಲಗಿ.

ಶ್ರೀ ಏಳು ಕೋಟಿ ಟ್ರೇಡರ್ಸ್‌
ಕಡೆಗೂ 2001ರಲ್ಲಿ ಒಂದು ದಿನ ಸುಮಾ ಜೀವಣ್ಣವರ್‌ ಅವರ ಕನಸಿನ ಉದ್ಯಮ ಆರಂಭಗೊಂಡಿತು. ರಾಜ್ಯ ಕೈಗಾರಿಕಾ ಇಲಾಖೆಯ ಸಹಾಯ ಪಡೆದು ‘ಶ್ರೀ ಏಳು ಕೋಟಿ ಟ್ರೇಡರ್ಸ್‌’  ಎಂಬ ಸಂಸ್ಥೆಯನ್ನು ಆರಂಭಿಸಿದರು.

ಉದ್ಯಮ ಸಂಸ್ಥೆಯೇನೋ ಕಾರ್ಯಾರಂಭ ಮಾಡಿತು. ಆದರೆ, ತಾವು ಉತ್ಪಾದಿಸುವ ಸಾಬೂನಿಗೆ ಒಂದು ಹೆಸರು ಬೇಕಲ್ಲಾ? ಅದಕ್ಕಾಗಿ ಅವರು ಪವಿತ್ರಾ ಗಂಗಾ ನದಿಯ ಹೆಸರನ್ನೇ ಆರಿಸಿಕೊಂಡರು. ‘ಗಂಗಾ ಸೋಪ್‌’ ಎಂಬ ಟ್ರೇಡ್‌ ಮಾರ್ಕ್‌ ನೋಂದಣಿ ಮಾಡಿಸಿದರು.
ಮೊದಲು ₨5 ಸಾವಿರ ಕೊಟ್ಟು ಒಂದು ಡಾಂಬರ್‌ ಮಿಕ್ಸ್‌ ಮಾಡುವ ಹಳೆಯ ಯಂತ್ರ ಕೊಂಡುಕೊಂಡರು. ಉಳಿದ ಹಣದಲ್ಲಿ ಕಚ್ಚಾ ಸಾಮಗ್ರಿಗಳನ್ನು ಖರೀದಿ ಸಿದರು. ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ಸಿಬ್ಬಂದಿಯ ತಂಡ ಬಂದು ಪಾತ್ರೆ ತೊಳೆಯುವ ಪುಡಿ ತಯಾರಿಕೆಯ ವಿಧಾನ ಮತ್ತು ವಿವಿಧ ಹಂತಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಕುರಿತು ಪ್ರಾತ್ಯಕ್ಷಿಕೆ ನೀಡಿ ವಿವರಿಸಿತು.

ಮೊದಲಿಗೆ ಪಾತ್ರೆ ತೊಳೆಯುವ ಪುಡಿಯನ್ನು ತಯಾರಿಸುವ ಕೌಶಲವನ್ನು ಕರಗತ ಮಾಡಿಕೊಂಡ ಸುಮಾ ಅವರು,  ಇಬ್ಬರು ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಂಡರು. ಸಣ್ಣ ಪ್ರಮಾಣದಲ್ಲಿ ಪಾತ್ರೆ ತೊಳೆ ಯುವ ಪುಡಿ ತಯಾರಿಸಿ, ಹುಬ್ಬಳ್ಳಿಯ ಹೋಟೆಲ್‌ಗಳಿಗೆ ಸರಬರಾಜು ಮಾಡಲಾರಂಭಿಸಿದರು.

ಕೆಲವು ತಿಂಗಳುಗಳ ನಂತರ ಪತಿಯ ಆಸ್ಪತ್ರೆಗೆ ಬರುವ ರೋಗಿಗಳು ಔಷಧೋಪಚಾರದ ನಂತರ ಮನೆಗೆ ಮರಳುವಾಗ ಶ್ರೀ ಏಳು ಕೋಟಿ ಟ್ರೇಡರ್ಸ್‌ನಲ್ಲಿ ಕಡಿಮೆ ದರದಲ್ಲಿ ಸಿಗುವ ಪಾತ್ರೆ ತೊಳೆಯುವ ಪುಡಿಯನ್ನು ಖರೀದಿಸುವಂತೆ ಆಕರ್ಷಿಸಲಾಯಿತು.

₨2.50ಕ್ಕೆ ಬಟ್ಟೆಸೋಪು
ಒಂದು ವರ್ಷದ ನಂತರ ಶ್ರೀ ಏಳು ಕೋಟಿ ಟ್ರೇಡರ್ಸ್‌, ‘ಗಂಗಾ’ ಹೆಸರಿನ ಬಟ್ಟೆ ಸೋಪ್‌ ತಯಾರಿಸಲು ಆರಂಭಿಸಿತು. ₨2.50 ದರ ನಿಗದಿ ಪಡಿಸಲಾಯಿತು.

3 ವರ್ಷ ಸತತ ನಷ್ಟ
ಮಾರುಕಟ್ಟೆಯಲ್ಲಿ ಇಷ್ಟೇ ಗುಣಮಟ್ಟದ ಇತರೆ ಬಟ್ಟೆ ಸೋಪ್‌ಗಳ ಬೆಲೆ ₨6 ಇದೆ. ಆದರೆ, ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಸೋಪ್‌ ಒದಗಿಸಿದರೂ ಜನರು ಆಕರ್ಷಿತರಾಗಲಿಲ್ಲ. ಹಾಗಾಗಿ, ಸುಮಾ ಅವರ ಕನಸಿನ ಉದ್ಯಮ ಸಂಸ್ಥೇ, ಆರಂಭದ ಮೂರು ವರ್ಷಗಳೂ ನಷ್ಟವನ್ನೇ ಅನುಭವಿಸಿತು. ಗಂಗಾ ಸಾಬೂನಿನತ್ತ ಗ್ರಾಹಕರನ್ನು ಸೆಳೆಯಲು ಉಚಿತ ಕೊಡುಗೆಯ  ಆಕರ್ಷಣೆ ತೋರಲಾಯಿತು.
ಎದುರಾದ ಹತ್ತು ಹಲವು ಸಮಸ್ಯೆಗಳನ್ನೇ ಸವಾಲಾಗಿ ಸ್ವೀಕರಿಸಿ ಪರಿಹಾರ ಹುಡುಕುತ್ತಾ ತಮ್ಮ ಉದ್ಯಮ ಸಂಸ್ಥೆಯನ್ನು ಸುಮಾ ಅವರು ನಿಧಾನವಾಗಿ ಬೆಳೆಸುತ್ತಾ ಹೋದರು. ಈಗ ತಿಂಗಳಿಗೆ ₨5 ಲಕ್ಷದವರೆಗೆ ವ್ಯವಹಾರ ನಡೆಸುತ್ತಿದ್ದಾರೆ. 

‘ಗಂಗಾ ಸಾಬೂನಿಗೂ ಮತ್ತು ಮಾರುಕಟ್ಟೆಯಲ್ಲಿ ದೊರೆಯುವ ಇತರೆ ಸೋಪ್‌ಗೂ ಗುಣಮಟ್ಟದಲ್ಲಿ ವ್ಯತ್ಯಾಸವೇನೂ ಇಲ್ಲ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಸೋಪ್‌ಗೆ ಬೇರೆಯದೇ ಬಣ್ಣ, ಆಕರ್ಷಕ ಕವರ್‌ ಮತ್ತು ಮಾರುಕಟ್ಟೆ ಉತ್ತೇಜಿಸುವ ಪ್ರತಿನಿಧಿಗಳ ಬೆಂಬಲಗಳಿವೆ.

ಜತೆಗೆ, ಕೋಟ್ಯಂತರ ರೂಪಾಯಿ ವೆಚ್ಚದ ಜಾಹೀರಾತುಗ­ಳೂ ಇರುತ್ತವೆ. ಬಹುರಾಷ್ಟ್ರೀಯ ಕಂಪೆನಿಗಳಂತೂ ಈ ಎಲ್ಲ ಖರ್ಚಿಗಾಗಿ ಶೇ 40ಕ್ಕೂ ಹೆಚ್ಚು ವ್ಯಯಿಸುತ್ತವೆ. ಇದಾವುದೇ ಹೆಚ್ಚುವರಿ ಅವಕಾಶ, ಸೌಲಭ್ಯಗಳೂ ಇಲ್ಲದೇ ನಮ್ಮ ಸಾಬೂನು ಗುಣಮಟ್ಟ ಮತ್ತು ಕಡಿಮೆ ಬೆಲೆ ಕಾರಣದಿಂದಾಗಿಯೇ ಮಾರುಕಟ್ಟೆಯಲ್ಲಿ ಸ್ಥಾನ ಪಡೆದುಕೊಂಡಿದೆ’ ಎಂದು ಬಹಳ ಹರ್ಷಚಿತ್ತರಾಗಿ ಹೇಳುತ್ತಾರೆ ಉದ್ಯಮಿ ಸುಮಾ.

‘ದೊಡ್ಡ ಕಂಪೆನಿಗಳು ಮಾಡುವ ಇಂತಹ ಖರ್ಚುಗಳನ್ನು ಕಡಿಮೆ ಮಾಡಿರುವುದರಿಂದ ನಮ್ಮ ಗಂಗಾ ಸಾಬೂನನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತಿದೆ. ಸಾಬೂನು ಸಾಗಣೆಗಾಗಿ ಹೊಸ ರಟ್ಟಿನ ಪೆಟ್ಟಿಗೆಗಳನ್ನೇನೂ ನಾವು ಖರೀದಿಸುವುದಿಲ್ಲ. ರದ್ದಿ ಅಂಗಡಿಯಲ್ಲಿ ಸಿಗುವ ಹಳೆಯ ಬಾಕ್ಸ್‌ಗಳನ್ನೇ ₨3ಕ್ಕೆ ಖರೀದಿಸಿ ಬಳಸುತ್ತೇವೆ. ಮನೆ ಮನೆ ತಿರುಗಿ ಸೋಪ್‌ ಮಾರುವ ಮಹಿಳಾ ಮಾರಾಟಗಾರರು, ನಂತರ ಖಾಲಿಯಾಗುವ ಬಾಕ್ಸ್‌ಗಳನ್ನು ಸಂಸ್ಥೆಗೆ ಮರಳಿ ನೀಡಿದರೆ ಅವರಿಗೆ ₨3 ವಾಪಸ್‌ ಮಾಡಲಾಗುತ್ತದೆ’ ಎನ್ನುತ್ತಾರೆ ಸುಮಾ.

ಕಚ್ಚಾ ಪದಾರ್ಥಗಳು
ಸೋಪ್‌ ತಯಾರಿಕೆಗೆ ಅವಶ್ಯಕವಾಗಿ ಬೇಕಾದ ಚೀನಾ ಮಣ್ಣು, ಸ್ಲರಿ, ಕಾಸ್ಟಿಕ್‌ ಸೋಡಾ ಮತ್ತಿತರ ಕಚ್ಚಾವಸ್ತುಗಳನ್ನು ಚೆನ್ನೈ, ಅಹ್ಮದಾಬಾದ್‌, ರಾಜಸ್ತಾನದಿಂದ ತರಿಸಿಕೊಳ್ಳಲಾಗುತ್ತದೆ. ಇಲ್ಲಿ ‘ಗಂಗಾ’ ಮತ್ತು ‘ನೀತಾ’ ಎಂಬ ಕೇಕ್‌ ಸೋಪ್‌, ಗಂಗಾ ಪಾತ್ರೆ ತೊಳೆಯುವ ಪುಡಿ, ಪಾತ್ರೆ ತೊಳೆಯುವ ಕೇಕ್‌, ಬಟ್ಟೆ ಒಗೆಯಲು ಬಳಸುವ ಸಾಬೂನು  ತಯಾರಿಸಲಾಗುತ್ತದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿವಿಧ ಪ್ರಮಾಣದಲ್ಲಿ ಸೋಪ್‌ ತಯಾರಿಸಲಾಗುತ್ತದೆ. ಜೊತೆಗೆ ಮಾರಾಟಗಾರರಿಗೆ ಹೆಚ್ಚು ಲಾಭ ದೊರೆಯುವಂತೆ ಮಾಡಲು ಸ್ನಾನದ ಸಾಬೂನನ್ನು ತುಮಕೂರಿನಿಂದ ಮತ್ತು ಹೆವಿ ಎಂಬ ಟಾಯ್ಲೆಟ್‌ ಕ್ಲೀನರನ್ನು ಅಹ್ಮದಾಬಾದ್‌ನಿಂದ ತರಿಸಿ ಕೊಡಲಾಗುತ್ತಿದೆ. ಇವೆರಡೂ ಸ್ವದೇಶಿ ಕಂಪೆನಿಗಳೇ ಆಗಿವೆ. ಈ ಮೈಸಾಬೂನಿನ ಬೆಲೆ ₨13. ನಮ್ಮ ಸಂಸ್ಥೆಗೆ ಇದರಲ್ಲಿ ₨1 ಉಳಿಯುತ್ತದೆ. ಟಾಯ್ಲೆಟ್‌ ಕ್ಲೀನಿಂಗ್ ಉತ್ಪನ್ನದ ಬೆಲೆ ₨35. ಇದರಲ್ಲಿಯೂ ₨5 ಉಳಿಯುತ್ತದೆ ಎಂದು ಸಂಸ್ಥೆಯ ವಹಿವಾಟು ಕುರಿತು ಬಹಳ ಆಸ್ತೆಯಿಂದ ವಿವರಿಸುತ್ತಾರೆ ಈ ಮಹಿಳಾ ಉದ್ಯಮಿ.

ಸಾಗಣೆ
ಹುಬ್ಬಳ್ಳಿ ನಗರದಲ್ಲಿ ಮಾರಾಟ ಮಾಡುವ ಮಹಿಳೆಯರು ಸಾಬೂನು ತಯಾರಿಕಾ ಘಟಕಕ್ಕೇ ತೆರಳಿ ಖರೀದಿಸುತ್ತಾರೆ. ಉಪನಗರ  ವ್ಯಾಪ್ತಿಯಲ್ಲಿ ಮತ್ತು ಧಾರವಾಡದಲ್ಲಿ ಮಾರಾಟ ಮಾಡುವ ಮಹಿಳೆಯರಿಗೆ ಮೂರು ಟಾಟಾ ಏಸ್‌ ವಾಹನಗಳ ಮೂಲಕ ಆಯಾ ವ್ಯಾಪಿಗೇ ಸಾಬೂನು ಮೊದಲಾದ ಉತ್ಪನ್ನಗಳನ್ನು ಪೂರೈಸಲಾಗುತ್ತದೆ. ಮಾರಾಟಗಾರರು ಇದ್ದಲ್ಲಿಗೇ ಸರಕು ಪೂರೈಸುವುದಕ್ಕೆ ಪ್ರತಿ ಬಾಕ್ಸಿಗೆ ₨5ರಂತೆ ಸಾಗಣೆ ವೆಚ್ಚವಾಗುತ್ತದೆ.  ದಾವಣಗೆರೆಯಲ್ಲಿ ಒಂದು ಸಾಬೂನು ಘಟಕ ಸ್ಥಾಪಿಸಿ, ಸುತ್ತಲಿನ ಪ್ರದೇಶಗಳಿಗೆ ಸೋಪ್‌ ಪೂರೈಸುವ ಆಲೋಚನೆ ಇದೆ’ ಎಂದು ವಹಿವಾಟು ವಿಸ್ತರಣೆಯ ಕನಸನ್ನು ಬಿಚ್ಚಿಡುತ್ತಾರೆ 14 ವರ್ಷಗಳ ಅನುಭವಿಯಾದ ಈ ಮಹಿಳಾ ಉದ್ಯಮಿ.

120 ಮಹಿಳೆಯರಿಗೆ ಉದ್ಯೋಗ
2001ರಲ್ಲಿ ಕೇವಲ ಇಬ್ಬರು ಮಹಿಳಾ ಕಾರ್ಮಿಕರಿಂದ ಆರಂಭವಾದ ಶ್ರೀ ಏಳು ಕೋಟಿ ಟ್ರೇಡರ್ಸ್‌ನ ಸಾಬೂನು ತಯಾರಿಕಾ ಘಟಕದಲ್ಲಿ ಈಗ 40 ಉದ್ಯೋಗಿಗಳಿದ್ದಾರೆ. 120ಕ್ಕೂ ಹೆಚ್ಚು ಮಹಿಳೆಯರು ಈ ಸಾಬೂನು ಮಾರಾಟ ಮಾಡುವ ಮೂಲಕ ಬದುಕಿಗೆ ದಾರಿ ಕಂಡುಕೊಂಡಿದ್ದಾರೆ.

ಆರಂಭದ ಮೂರು ವರ್ಷ ಸತತವಾಗಿ ನಷ್ಟ ಅನುಭವಿಸಿದ್ದರಿಂದ  ಸ್ವಲ್ಪ ಹತಾಶರಾಗಿದ್ದ ಸುಮಾ ಅವರು, ಸಾಬೂನು ಘಟಕ ಮುಚ್ಚುವ, ಉದ್ಯಮದ ಕನಸನ್ನು ಕೈಬಿಡುವ ಎಂಬ ಆಲೋಚನೆಯಲ್ಲಿಯೇ ಇದ್ದರು. ಆದರೆ, ಈ ಘಟಕವನ್ನೇ ಅವಲಂಬಿಸಿದ್ದ ಮಹಿಳಾ ಕಾರ್ಮಿಕರ ಹಿತಕಾಯುವ ಸಲುವಾಗಿ, ನಷ್ಟವಾದರೂ ಇನ್ನಷ್ಟು ಕಾಲ  ಮುಂದುವರಿಸಿ ನೋಡೋಣ ಎಂದು ಧೈರ್ಯ ಮಾಡಿದರು. ಅವರ ನಂಬಿಕೆ ಸುಳ್ಳಾಗಲಿಲ್ಲ. ದಿನಕಳೆದಂತೆ ಸಾಬೂನು ಮಾರಾಟ ಹೆಚ್ಚಿತು. ಲಾಭವೂ ಬರಲಾರಂಭಿಸಿತು.

ಗಾಂಧಿ ಅವರ ಸ್ವದೇಶಿ ಚಳವಳಿಯ ಕನಸು ಮತ್ತು ಮಹಿಳಾ ಸಬಲೀಕರಣದ ಪರಿಕಲ್ಪನೆ ಅನುಷ್ಠಾನಕ್ಕೆ ಇದುವೇ ಉತ್ತಮ ಮಾರ್ಗ ಎಂದು ಅರ್ಥ ಮಾಡಿಕೊಂಡಿದ್ದಾರೆ ಸುಮಾ.

ಮಹಿಳೆಯರು ತಮ್ಮ ಮನೆಯ ಸುತ್ತಲಿನ ಎರಡು ಮೂರು ರಸ್ತೆಗಳನ್ನು ತಮ್ಮೊಳಗೇ ವಿಭಜಿಸಿಕೊಂಡು ಸಾಬೂನು ಮಾರಾಟ ಮಾಡುತ್ತಿದ್ದಾರೆ. ಪುರುಷರೂ ಸಹ ಸಾಬೂನು  ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

‘ಮಗ ಆಸ್ತಿ ಕಸಿದುಕೊಂಡು ಹೊರಗೆ ಹಾಕಿದ. ಆಶ್ರಯವಿಲ್ಲದೇ ಒದ್ದಾಡುತ್ತಿದ್ದೆ. ಮುದಿ ವಯಸ್ಸಿನಲ್ಲಿ ಕೆಲಸಕ್ಕೆ ತೆಗೆದುಕೊಳ್ಳುವವರು ಯಾರು ಎಂಬ ಚಿಂತೆ ಕಾಡುತ್ತಿರುವಾಗ ಸುಮಾ ಮೇಡಂ ಕಂಪೆನಿಯ ಸಾಬೂನನ್ನು ನನಗೆ ಪರಿಚಯವಿದ್ದ ರಸ್ತೆಯ ಮನೆಗಳಿಗೆ ಮಾರಲು ಆರಂಭಿಸಿದೆ. ಇದರಿಂದ ದಿನಕ್ಕೆ ₨100 ಗಳಕೆ ಆಗುತ್ತಿದ್ದು, ದಿನ ದೂಡುತ್ತಿದ್ದೇನೆ ಎನ್ನುತ್ತಾರೆ ಹುಬ್ಬಳ್ಳಿ ರವಿನಗರ ನಿವಾಸಿ, 70 ವರ್ಷದ ಮಿಶ್ರಿಕೋಟಿ ಅಜ್ಜ.

ಸುಮಾ ಅವರ ಪುತ್ರ ರಾಘವೇಂದ್ರ, ಮೆಕಾನಿಕಲ್‌ ಎಂಜಿನಿಯರಿಂಗ್‌ ಪದವಿ ಮುಗಿಸಿದ ನಂತರ ಇದೇ ಉದ್ಯಮದಲ್ಲಿ 2010ರಿಂದ ಪೂರ್ಣ ಪ್ರಮಾಣದಲ್ಲಿ ತೊಡಗಿಸಿದ್ದಾರೆ. ಈ ಶ್ರೀ ಏಳು ಕೋಟಿ ಟ್ರೇಡರ್ಸ್‌, ಅಮ್ಮನ ಮಡಿಲಿನಿಂದ ಮಗನ ಹೆಗಲಿಗೇರಿದೆ. ಎರಡನೇ ತಲೆಮಾರು ಉದ್ಯಮವನ್ನು ಇನ್ನಷ್ಟು ಬೆಳೆಸುವ ಕನಸು ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT