ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಟ್ ಏರ್‌ವೇಸ್ ಇನ್ನು ಒಂದೇ ಬ್ರಾಂಡ್

ಇತಿಹಾದ್ ಏರ್‌ವೇಸ್ ಜತೆಗೂಡಿ ಅಭಿವೃದ್ಧಿ: ನರೇಶ್ ಗೋಯಲ್
Last Updated 11 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಮುಂಬೈ: ಹತ್ತು ತಿಂಗಳ ಹಿಂದೆ ಅಬುದಾಬಿ ಮೂಲದ ಇತಿಹಾದ್ ಏರ್‌ಲೈನ್ಸ್‌ನ ಜತೆಗೂಡಿದ ಜೆಟ್ ಏರ್‌ಲೈನ್ಸ್, ದೇಶದಲ್ಲಿನ ನಾಗರಿಕ ವಿಮಾನಯಾನ ಮಾರುಕಟ್ಟೆಯಲ್ಲಿ ತನ್ನ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿ­ಕೊಳ್ಳಲು ಕಾರ್ಯತಂತ್ರ ರೂಪಿಸಿದೆ. ಇದರ ಮೊದಲ ಹೆಜ್ಜೆಯಾಗಿ ತನ್ನ ಮೂರೂ ಬ್ರಾಂಡ್ ಕಂಪೆನಿಗಳನ್ನು ಒಟ್ಟುಗೂಡಿಸಿ ಒಂದೇ ಬ್ರಾಂಡ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಲು ಮುಂದಾಗಿದೆ.

ಇಲ್ಲಿ ಸೋಮವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಜೆಟ್ ಏರ್‌ವೇಸ್ ಅಧ್ಯಕ್ಷ ನರೇಶ್ ಗೋಯಲ್, ಇನ್ನು ಮುಂದೆ ‘ಜೆಟ್ ಏರ್‌ವೇಸ್’ ಎಂಬ ಒಂದೇ ಬ್ರಾಂಡ್‌ನಡಿ ಕಂಪೆನಿ ದೇಶೀಯ ಮಾರುಕಟ್ಟೆಯಲ್ಲಿ ವಿಮಾನಯಾನ ಸೇವೆ ಒದಗಿಸಲಿದೆ ಎಂದು ಪ್ರಕಟಿಸಿದರು.

ಈ ಮೊದಲು ಜೆಟ್ ಏರ್‌ವೇಸ್, ಜೆಟ್ ಕನೆಕ್ಟ್ ಮತ್ತು ಜೆಟ್ ಲೈಟ್ ಬ್ರಾಂಡ್‌ಗಳಡಿ ಕಾರ್ಯನಿರ್ವ­ಹಿಸುತ್ತಿತ್ತು. ಜೆಟ್ ಲೈಟ್ ಬ್ರಾಂಡ್‌ನಲ್ಲಿ ೧೧ ವಿಮಾನಗಳು ಹಾರಾಟ ನಡೆಸು­ತ್ತಿದ್ದವು. ಜೆಟ್ ಕನೆಕ್ಟ್ ಬ್ರಾಂಡ್‌ನಲ್ಲಿ ದೇಶದ ೪೬ ನಗರಗಳ ನಡುವೆ ನಿತ್ಯ ೨೫೧ ವಿಮಾನಯಾನ ಸೇವೆಯನ್ನು ಕಡಿಮೆ ದರದಲ್ಲಿ ಒದಗಿಸುತ್ತಿತ್ತು.

ಕಳೆದ ಹಣಕಾಸು ವರ್ಷದಲ್ಲಿ
₨ ೪೧೪೯ ಕೋಟಿ ನಷ್ಟ ಅನುಭವಿಸಿದ್ದ ಜೆಟ್ ಏರ್‌ವೇಸ್, ಆಡಳಿತ ಮತ್ತು ನಿರ್ವಹಣೆ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡ ನಂತರ ವೆಚ್ಚದಲ್ಲಿ ಸಾಕಷ್ಟು ಕಡಿಮೆ ಮಾಡಿಕೊಂಡಿದೆ. ಆ ಮೂಲಕ ಪ್ರಸಕ್ತ ಹಣಕಾಸು ವರ್ಷದ ೧ನೇ ತ್ರೈಮಾಸಿಕದಲ್ಲಿ ನಷ್ಟದ ಪ್ರಮಾಣವನ್ನು ಶೇ ೨೬ರಷ್ಟು ತಗ್ಗಿಸಿಕೊಂಡಿದೆ ಎಂದು ನರೇಶ್ ಗೋಯಲ್ ವಿವರಿಸಿದರು.

ಕಳೆದ ನವೆಂಬರ್‌ನಲ್ಲಿ ಇತಿಹಾದ್ ಏರ್‌ಲೈನ್ಸ್ ಶೇ ೨೪ರಷ್ಟು ಷೇರು ಖರೀದಿಸಿದ್ದು ಸೇರಿದಂತೆ ಒಟ್ಟಾರೆಯಾಗಿ ೭೫ ಕೋಟಿ ಅಮೆರಿಕನ್ ಡಾಲರ್‌ಗಳಷ್ಟು (₨ ೪೫೦೦ ಕೋಟಿ) ಬಂಡವಾಳವನ್ನು ಜೆಟ್ ಏರ್‌ವೇಸ್‌ನಲ್ಲಿ ತೊಡಗಿಸಿದೆ. ಜತೆಗೆ, ಆ ಕಂಪೆನಿಯ ಕ್ರಾಮೆರ್ ಬಾಲ್ ಅವರು ಜೆಟ್ ಏರ್‌ವೇಸ್‌ನ ಮುಖ್ಯ ಕಾರ್ಯನಿರ್ವ­ಹಣಾ­ಧಿಕಾರಿಯಾಗಿ ನಿಯೋಜನೆ­ಗೊಂಡಿ­ದ್ದಾರೆ. ಎರಡೂ ಕಂಪೆನಿಗಳು ಜತೆಗೂಡಿ ದೇಶದ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಕಾಣಲು ವಿಶಿಷ್ಟ ರೀತಿಯ ಕಾರ್ಯತಂತ್ರವನ್ನು ರೂಪಿಸಿಕೊಂಡಿವೆ ಎಂದರು.

ಒಂದೆಡೆ ಸಾಲದ ಹೊರೆಯನ್ನು ತಗ್ಗಿಸಿಕೊಳ್ಳುತ್ತಿರುವ ಜೆಟ್ ಏರ್‌ವೇಸ್, ಇನ್ನೊಂದೆಡೆ ವರಮಾನ ಗಳಿಕೆಯನ್ನೂ ಹೆಚ್ಚಿಸಿಕೊಳ್ಳುತ್ತಿದೆ. ಇದರ ಪರಿಣಾಮವಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಕಂಪೆನಿ ಪ್ರಯಾಣಿಕರಿಂದ ಬರುವ ವರಮಾನವನ್ನು ₨೩೮,೫೫೫ ಕೋಟಿಯಿಂದ ₨ ೪೨,೬೨೬ ಕೋಟಿ (ಶೇ ೧೧.೧ರಷ್ಟು) ಹೆಚ್ಚಿಸಿಕೊಂಡಿದೆ. ಸರಕು ಸಾಗಣೆ ವಿಭಾಗದಲ್ಲಿಯೂ ₨ ೩೬೩೩ ಕೋಟಿ  ವರಮಾನ ಗಳಿಸುವುದ­ರೊಂದಿಗೆ ಶೇ ೧೦.೨ರಷ್ಟು ವೃದ್ಧಿ ಸಾಧಿಸಿದೆ. ಆ ಮೂಲಕ ಮೊದಲ ತ್ರೈಮಾಸಿಕದ ವರಮಾನವನ್ನು ₨೫೦,೪೦೧ ಕೋಟಿಗೆ (ಶೇ ೧೨.೮ರಷ್ಟು) ಹೆಚ್ಚಿಸಿಕೊಂಡಿದೆ ಎಂದು ವಿವರಿಸಿದರು. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಜೆಟ್ ಏರ್‌ವೇಸ್‌ನ ಒಟ್ಟಾರೆ ವರಮಾನ ₨೪೪,೬೯೩ ಕೋಟಿಯಷ್ಟಿತ್ತು.

ಇತಿಹಾದ್ ಏರ್‌ಲೈನ್ಸ್ ಅಧ್ಯಕ್ಷ ಜೇಮ್ಸ್ ಹೋಗೆನ್ ಮತ್ತು ಜೆಟ್ ಏರ್‌ವೇಸ್‌ನ ನಿಯೋಜಿತ ‘ಸಿಇಒ’ ಕ್ರಾಮೆರ್ ಬಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT