ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ ಸ್ಟೀಲ್‌ ಸ್ಥಗಿತಕ್ಕೆ ನಿರ್ಧಾರ

ಪುನಶ್ಚೇತನ ಅಸಾಧ್ಯ: ಪ್ರಧಾನಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಮಿತಿ ಹೇಳಿಕೆ
Last Updated 24 ಡಿಸೆಂಬರ್ 2015, 19:52 IST
ಅಕ್ಷರ ಗಾತ್ರ

ಹೊಸಪೇಟೆ: ದೇಶದ ಹಾಗೂ ವಿಶ್ವದ ವಿವಿಧ ಜಲಾಶಯಗಳಿಗೆ ಕ್ರೆಸ್ಟ್‌ಗೇಟ್‌ ಗಳನ್ನು ಪೂರೈಸಿದ್ದ ಇಲ್ಲಿಯ ತುಂಗಭದ್ರಾ ಸ್ಟೀಲ್‌ ಪ್ರಾಡಕ್ಟ್ಸ್‌ ಲಿ. (ಟಿಎಸ್‌ಪಿಎಲ್‌) ಕಾರ್ಖಾನೆಯನ್ನು ಮುಚ್ಚಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ನಷ್ಟದಲ್ಲಿರುವ ಈ ಕಾರ್ಖಾನೆ ಹಲವು ವರ್ಷಗಳಿಂದ ತಯಾರಿಕೆ ಸ್ಥಗಿತಗೊಳಿಸಿತ್ತು.

ಸರ್ಕಾರಿ ಸ್ವಾಮ್ಯದ ಉದ್ಯಮಗಳ ಅಡಿಯಲ್ಲಿ ಬರುವ ಈ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವುದು ಅಸಾಧ್ಯ ಎಂದು ಪ್ರಧಾನ ಮಂತ್ರಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಮಿತಿಯು ನಿರ್ಧಾರಕ್ಕೆ ಬಂದಿದೆ. ಈ ನಿರ್ಧಾರದಿಂದಾಗಿ 55 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಉದ್ಯಮವೊಂದು ಇತಿಹಾಸದ ಪುಟ ಸೇರಲಿದೆ.

ಗುಣಮಟ್ಟಕ್ಕೆ ಹೆಸರುವಾಸಿ: ಇಲ್ಲಿನ ತುಂಗಭದ್ರಾ ಜಲಾಶಯಕ್ಕೆ  ಕ್ರೆಸ್ಟ್‌ ಗೇಟ್‌ಗಳನ್ನು ತಯಾರಿಸಲು 1948ರಲ್ಲಿ ಸ್ಥಾಪನೆಯಾದ ಕಾರ್ಯಾಗಾರ, 1960ರಲ್ಲಿ ತುಂಗಭದ್ರಾ ಸ್ಟೀಲ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌ ಕಾರ್ಖಾನೆಯಾಯಿತು. ಗುಣಮಟ್ಟದ ಕ್ರೆಸ್ಟ್‌ಗೇಟ್‌ ಗಳ ಪೂರೈಕೆಯಿಂದಲೇ ಇದು ಹೆಸರು ವಾಸಿಯಾಗಿತ್ತು.

ಆರಂಭದಲ್ಲಿ 2000ಕ್ಕೂ ಅಧಿಕ ನೌಕರರು ಕಾರ್ಯ ನಿರ್ವಹಿಸುತ್ತಿದ್ದ ಈ ಉದ್ಯಮ ಕೇಂದ್ರ ಸರ್ಕಾರ (ಶೇ 79), ಕರ್ನಾಟಕ (ಶೇ 9) ಹಾಗೂ ಆಂಧ್ರಪ್ರದೇಶದ (ಶೇ 12) ಪಾಲುದಾರಿಕೆಯಲ್ಲಿ 90 ಎಕರೆ ಜಾಗದಲ್ಲಿ  ಮೈದಳೆದಿತ್ತು. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದ ಕಾರಣ ಸರ್ಕಾರದ ಯೋಜನೆಗಳಿಗೆ ಟಿಎಸ್‌ಪಿಯಿಂದಲೇ ಕ್ರೆಸ್ಟ್‌ ಗೇಟ್‌ಗಳನ್ನು ಖರೀದಿಸಬೇಕು ಎಂಬ ಫರ್ಮಾನು ಸಹ ಇತ್ತು.

ಜಾಗತೀಕರಣದಿಂದಾಗಿ ಕ್ರೆಸ್ಟ್‌ಗೇಟ್‌ಗಳ ಪೂರೈಕೆಗೆ ಟೆಂಡರ್‌ ಹಾಕುವ ಪದ್ಧತಿ ಆರಂಭವಾದ ನಂತರ ಖಾಸಗಿ ಕಂಪೆನಿಗಳೊಂದಿಗೆ ಪೈಪೋಟಿ ನಡೆಸಲು ಸಾಧ್ಯವಾಗದೇ ಕಾರ್ಖಾನೆ ಅವನತಿಯತ್ತ ಸಾಗಿತು ಎಂಬುದು ಇಲ್ಲಿನ ನೌಕರರ ಅಳಲು. ನಷ್ಟದಲ್ಲಿರುವ ಕಾರ್ಖಾನೆ ಸದ್ಯಕ್ಕೆ ಭಾರತೀಯ ಸ್ಟೇಟ್‌ ಬ್ಯಾಂಕಿಗೆ ₹ 15.28 ಕೋಟಿ ಸಾಲ ಹಿಂತಿರುಗಿಸಬೇಕು. ಆದರೆ ಇದರ ಮೇಲಿನ ಬಡ್ಡಿಯೇ ₹17.9 ಕೋಟಿಯಾಗಿದೆ.

ರಾಜ್ಯದ ವಿವಿಧ ಜಲಾಶಯಗಳಿಗೆ ಕ್ರೆಸ್ಟ್‌ ಗೇಟ್‌ಗಳನ್ನು ಪೂರೈಕೆ ಮಾಡಿರುವುದಕ್ಕೆ ಸರ್ಕಾರ ₹ 4 ಕೋಟಿಯನ್ನು ಕಾರ್ಖಾನೆಗೆ ಕೊಡಬೇಕಾಗಿದೆ. ನೌಕರರಿಗೆ ವೇತನ ಪಾವತಿಸಲೂ ಪರದಾಡಬೇಕಾದ ಸ್ಥಿತಿ ಬಂದಾಗ, ಕೇಂದ್ರ ಸರ್ಕಾರ ನೆರವಿಗೆ ಬಂತು. ಆದರೆ, 2004ರಲ್ಲಿ ತಯಾರಿಕೆ ಸ್ಥಗಿತಗೊಂಡಿದ್ದರಿಂದ ಇಲ್ಲಿನ ಬಹುತೇಕ ಯಂತ್ರೋಪಕರಣಗಳು ತುಕ್ಕು ಹಿಡಿದವು.

ಅಲ್ಲದೆ ಅವುಗಳೆಲ್ಲ ಹಳೆಯ ತಾಂತ್ರಿಕತೆ ಹೊಂದಿರುವುದರಿಂದ ಪ್ರಸ್ತುತ ಬಳಕೆಗೂ ಬಾರದಂತಾಗಿವೆ. ಇದೇ ವರ್ಷ ಜನವರಿ ತಿಂಗಳಲ್ಲಿ ಘಟಕಕ್ಕೆ ಭೇಟಿ ನೀಡಿದ್ದ ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉದ್ಯಮಗಳ ರಾಜ್ಯ ಸಚಿವ ಜಿ.ಎಂ.ಸಿದ್ದೇಶ್‌ ಪರಿಹಾರ ಒದಗಿಸುವ ಭರವಸೆ ನೀಡಿದ್ದರು.

ಸಿಬ್ಬಂದಿಗೆ ವಿಆರ್‌ಎಸ್‌
ನವದೆಹಲಿ (ಪಿಟಿಐ): 
ಸರ್ಕಾರಿ ಸ್ವಾಮ್ಯದ ಹೊಸಪೇಟೆಯ ನಷ್ಟಪೀಡಿತ ತುಂಗಭದ್ರಾ ಸ್ಟೀಲ್‌ ಪ್ರೊಡಕ್ಟ್ಸ್‌ (ಟಿಎಸ್‌ಪಿ) ಮುಚ್ಚಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸಂಸ್ಥೆಯ 72 ಮಂದಿ ಸಿಬ್ಬಂದಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್‌)   ಒದಗಿಸುವ ಮೂಲಕ, ‘ಟಿಎಸ್‌ಪಿ’ ಬಾಗಿಲು ಹಾಕಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿ ನಿರ್ಧರಿಸಿದೆ. ಸಿಬ್ಬಂದಿಗೆ 2007ರ ವೇತನ ಶ್ರೇಣಿ ಆಧರಿಸಿ ವಿಆರ್‌ಎಸ್‌ ಕೊಡುಗೆ ನೀಡಲಾಗುವುದು.  90 ಎಕರೆಗಳಷ್ಟು ಭೂಮಿ, ಭಾರಿ ಯಂತ್ರೋಪಕರಣಗಳನ್ನು ಹರಾಜು ಹಾಕಲು ನಿರ್ಧರಿಸಲಾಗಿದೆ.

ಇಲ್ಲಿ ತಯಾರಾದ ಕ್ರೆಸ್ಟಗೇಟ್‌ಗಳನ್ನು ಅಳವಡಿಸಿಕೊಂಡ ಜಲಾಶಯಗಳು: ಕೆಆರ್‌ಎಸ್‌ ಲಿಂಗನಮಕ್ಕಿ ಆಲಮಟ್ಟಿ ಸೂಪಾ ನಾರಾಯಣಪುರ ವಾರಾಹಿ ಹಿಡಕಲ್‌ ಹಿಪ್ಪರಗಿ ಸರ್ದಾರ್‌ ಸರೋವರ (ಗುಜರಾತ್‌)
ವಿದೇಶಕ್ಕೆ ರಫ್ತು: ಭೂತಾನ್‌, ನೇಪಾಳ, ದಕ್ಷಿಣ ಆಫ್ರಿಕಾ, ಉಗಾಂಡ, ರಷ್ಯಾ
₹15.28 ಕೋಟಿ: ಬ್ಯಾಂಕ್‌ ಸಾಲ
₹17.9 ಕೋಟಿ: ಬಡ್ಡಿ
₹4ಕೋಟಿ: ಕಾರ್ಖಾನೆಗೆ ಬರಬೇಕಾದ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT