ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆದು ಉಕ್ಕು ಉದ್ಯಮ ಹಾದಿ ದುರ್ಗಮ

Last Updated 3 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಹೊಸಪೇಟೆ: 2015ರ ನೂತನ ಖನಿಜ ಹರಾಜು ನಿಯಮಗಳ ಅನ್ವಯ ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳ ‘ಸಿ’ ಕೆಟಗರಿಯ 11 ಗಣಿಗಾರಿಕೆ ಪ್ರದೇಶಗಳನ್ನು ಇ–ಹರಾಜು ಮೂಲಕ ಗುತ್ತಿಗೆ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮದಿಂದಾಗಿ ರಾಜ್ಯದ ಮೆದು ಉಕ್ಕು ತಯಾರಿಕಾ ಘಟಕಗಳಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. 

ಬಳ್ಳಾರಿ, ಕೊಪ್ಪಳ, ರಾಯಚೂರು ಸೇರಿದಂತೆ ನೆರೆಯ ಆಂಧ್ರಪ್ರದೇಶದಲ್ಲಿರುವ 67 ಮೆದು ಉಕ್ಕು ಘಟಕಗಳು ಈಗಾಗಲೇ ಸ್ಪಾಂಜ್ ಅದಿರಿನ ಕೊರತೆಯಿಂದ ಬಳಲುತ್ತಿವೆ. ಮುಂದಿನ ದಿನಗಳಲ್ಲಿ ಅದಿರಿನ ಕೊರತೆ ತೀವ್ರವಾಗುವುದರಿಂದ ಉದ್ಯಮ ಸ್ಥಗಿತಗೊಳ್ಳುವ ಆತಂಕದಲ್ಲಿದ್ದು, ನೂತನ ಹರಾಜು ನಿಯಮಗಳೇ ಇದಕ್ಕೆ ಕಾರಣ ಎಂಬ ಆರೋಪ ಎದುರಾಗಿದೆ.

ಖನಿಜ ಹರಾಜು ನಿಯಮಗಳ ಅನ್ವಯ ಗಣಿ ಪ್ರದೇಶಗಳ ಗುತ್ತಿಗೆ ಪಡೆದ ಕಂಪೆನಿಯೇ  ಅದಿರನ್ನು ಬಳಸಿಕೊಳ್ಳಬೇಕು. ಅಲ್ಲದೇ ಇ–ಹರಾಜಿನಲ್ಲಿ ಒಂದೇ ಕಂಪೆನಿ ಪಾಲ್ಗೊಳ್ಳಬೇಕು ಎಂದು ಷರತ್ತು ವಿಧಿಸಲಾಗಿದೆ. ಆದರೆ, ಈಗ ಹರಾಜಿಗೆ ಇರುವ ಗಣಿ ಪ್ರದೇಶಗಳ ಮೌಲ್ಯ ಹೆಚ್ಚಾಗಿರುವುದರಿಂದ ಮೆದು ಉಕ್ಕು ತಯಾರಿಕಾ ಘಟಕಗಳ ಮಾಲೀಕರು ಪಾಲ್ಗೊಳ್ಳಲು ಕಷ್ಟಸಾಧ್ಯವಾಗಿದ್ದು, ದೊಡ್ಡ ಉದ್ಯಮಿಗಳಿಗೆ ಅನುಕೂಲ ಕಲ್ಪಿಸಲು ನಿಯಮ ರೂಪಿಸಲಾಗಿದೆ ಎಂದು ಕರ್ನಾಟಕ ಮೆದು ಉಕ್ಕು ತಯಾರಿಕಾ ಸಂಘದ ಅಧ್ಯಕ್ಷ ಟಿ.ಶ್ರೀನಿವಾಸರಾವ್‌(ವಾಸು) ಆರೋಪಿಸಿದ್ದಾರೆ.

‘ನೂತನ ನಿಯಮ ಮರಣ ಶಾಸನ’
‘2015ರ ನೂತನ ಖನಿಜ ಹರಾಜು ನಿಯಮ ರಾಜ್ಯದ ಮೆದು ಉಕ್ಕು ತಯಾರಿಕಾ ಘಟಕಗಳ ಪಾಲಿಗೆ ಮರಣ ಶಾಸನವಾಗಿದ್ದು, ಈಗಾಗಲೇ ಕೋಮಾದಲ್ಲಿರುವ ಉದ್ಯಮಕ್ಕೆ ಕೊಳ್ಳಿ ಇಡಲಾಗಿದೆ’ ಎಂದು  ಟಿ.ಶ್ರೀನಿವಾಸರಾವ್‌ ಕಟುವಾಗಿ ಟೀಕಿಸಿದರು.

ನೂತನ ಖನಿಜ ಹರಾಜು ನಿಯಮ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಮೆದು ಉಕ್ಕು ಘಟಕಗಳಿಗೆ ವಾರ್ಷಿಕ 50 ರಿಂದ 80 ಸಾವಿರ ಟನ್‌್ ಮೆದು ಅದಿರಿನ ಅಗತ್ಯವಿದೆ. ಆದರೆ, ಈಗ ಕರೆದಿರುವ ಇ–ಹರಾಜು ಪ್ರಕ್ರಿಯೆಯಲ್ಲಿ ದಶಲಕ್ಷ ಮೆಟ್ರಿಕ್‌ ಟನ್‌ಗಟ್ಟಲೇ ಇರುವುದರಿಂದ ಇಷ್ಟು ದೊಡ್ಡ ಮಟ್ಟದ ಅದಿರು ಖರೀದಿಸುವ ಹಾಗೂ ಬಳಸಿಕೊಳ್ಳುವ ಸಾಮರ್ಥ್ಯ ನಮ್ಮ ಉದ್ಯಮಕ್ಕೆ ಇಲ್ಲ.

ಅದೇ ರೀತಿ ಹೆಚ್ಚುವರಿ ಅದಿರನ್ನು ಮಾರಾಟ ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲ. ಹೀಗಾಗಿ ಉದ್ಯಮ  ಸಂಕಷ್ಟಕ್ಕೆ ಸಿಲುಕಿದೆ’ ಎಂದರು.

‘ನಿವೃತ್ತ ಲೋಕಾಯುಕ್ತ  ಸಂತೋಷ ಹೆಗ್ಡೆ   ವರದಿಯಲ್ಲಿ ಸ್ಥಳಿಯ ಉದ್ಯಮಗಳಿಗೆ ಅದಿರು ಪೂರೈಸಲು ನಿಯಮ ರೂಪಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೆ, ಸರ್ಕಾರ ಅವರ ವರದಿಗೆ ಕವಡೆ ಕಿಮ್ಮತ್ತು ನೀಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT