ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಉತ್ಪನ್ನಗಳಿಗೆ ‘ಭೌಗೋಳಿಕ ಸೂಚಿ’

Last Updated 15 ಸೆಪ್ಟೆಂಬರ್ 2015, 19:54 IST
ಅಕ್ಷರ ಗಾತ್ರ

ಒಂದು ಉತ್ಪನ್ನವನ್ನು ಅದು ಸಿದ್ಧಗೊಳ್ಳುವ ಅಥವಾ ಉತ್ಪಾದನೆ ಆಗುವ ಭೌಗೋಳಿಕ ಸ್ಥಳದಿಂದ ಗುರುತಿಸಿದರೆ, ಅದರ ಆಧಾರದ ಮೇಲೆಯೇ  ಅದರ ಗುಣಮಟ್ಟವನ್ನು ನಿರ್ಧರಿಸುವುದಕ್ಕೆ ಭೌಗೋಳಿಕ ಸೂಚಿಕೆ ಅಥವಾ ಜಿಯಾಗ್ರಫಿಕಲ್ ಇಂಡಿಕೇಷನ್ಸ್  (ಜಿಐ) ಎಂದು ಕರೆಯಲಾಗುತ್ತದೆ.

ಡಾರ್ಜಿಲಿಂಗ್ ಟೀ (ಚಹಾ),  ಕಾಂಚೀಪುರದಲ್ಲಿ ನೇಯ್ದ ವಿಶೇಷ ರೇಷ್ಮೆ ಸೀರೆ, ಕಾಶ್ಮೀರದಲ್ಲಿ ಸಿದ್ಧಗೊಂಡ ಪಶ್ಮಿನ್ ಶಾಲು, ಡಾಕಾ ಮಸ್ಲಿನ್.... ಹೀಗೆ ಕೆಲವು ವಿಶಿಷ್ಟ ಎನಿಸುವಂತಹ ಉತ್ಪನ್ನಗಳು ‘ಭೌಗೋಳಿಕ ಸೂಚಿಕೆ’ಗಳಿಗೆ ಕೆಲವು ಉದಾಹರಣೆಗಳಾಗಿವೆ. ಬೇರೆಲ್ಲಾ ಪ್ರದೇಶಗಳಲ್ಲಿ ಬೆಳೆಯುವ ಟೀ ಸೊಪ್ಪಿಗಿಂತಲೂ ಡಾರ್ಜಿಲಿಂಗ್ ಟೀ ಸೊಪ್ಪು ಗುಣಮಟ್ಟ, ರುಚಿಯಲ್ಲಿ ಜಗತ್ಪಸಿದ್ಧಿ ಪಡೆದುಕೊಂಡಿದೆ. ಇದು ಆ  ಸ್ಥಳದ ಬೌಗೋಳಿಕ ಪರಿಸರದಿಂದ ಸಾಧ್ಯವಾಗಿದೆ. ಹೀಗೆ, ಒಂದು ಸರಕು ಅಥವಾ ವಸ್ತು ಯಾವ ಸ್ಥಳದಲ್ಲಿ ಉತ್ಪಾದನೆಯಾಗಿದೆ ಎಂಬುದರ ಆಧಾರದ ಮೇಲೆ ಅದರ ಗುಣ ಲಕ್ಷಣಗಳು ನಿರ್ಧಾರವಾಗುತ್ತವೆ.

ಭೌಗೋಳಿಕ ಸೂಚಿಕೆಗಳನ್ನು ಗುರುತಿಸಲು ಭಾರತದಲ್ಲಿ ಪ್ರತ್ಯೇಕ ಕಾನೂನು ಜಾರಿಯಲ್ಲಿದೆ. ಇವುಗಳ ನೋಂದಣಿ  ಮತ್ತು ಸಂರಕ್ಷಣೆಗೆ  ಪೇಟೆಂಟ್ ಡಿಸೈನ್ ಮತ್ತು ಟ್ರೇಡ್ ಮಾರ್ಕ್‌ಗಳ ಮಹಾ ನಿಯಂತ್ರಕರು ನಿಯುಕ್ತರಾಗಿರುತ್ತಾರೆ. ಇದೇ ರೀತಿ ವರ್ಲ್ಡ್‌ ಟ್ರೇಡ್‌ ಆರ್ಗನೈಸೇಷನ್‌ (ಡಬ್ಲ್ಯುಟಿಒ ಅರ್ಥಾತ್‌ ವಿಶ್ವ ವ್ಯಾಪಾರ ಸಂಸ್ಥೆ) ಕೂಡ ಭೌಗೋಳಿಕ ಸೂಚಿಕೆಗಳಿಗೆ ಕೆಲವು ರೀತಿಯ ರಕ್ಷಣೆ ನೀಡುತ್ತದೆ. ಈ ರೀತಿಯ ಸಂರಕ್ಷಣೆಯು ನಿರ್ದಿಷ್ಟ ಭೌಗೋಳಿಕ ಸೂಚಿಕೆ, ವಸ್ತುಗಳ ಗುಣಮಟ್ಟ ಮತ್ತು ಉಪಯುಕ್ತತೆಗಳನ್ನು ಸುಧಾರಿಸಿ ತಮ್ಮದೇ ಆದ ಮಾರುಕಟ್ಟೆಯನ್ನು ಹೊಂದಲು, ಮಾರುಕಟ್ಟೆಯಲ್ಲಿನ ಪಾಲನ್ನು ಹೆಚ್ಚಿಸಿಕೊಳ್ಳಲು ಅನುಕೂಲ ಮಾಡಿಕೊಡುತ್ತದೆ.

ಭೌಗೋಳಿಕ ಸೂಚಿಕೆ ಗುಣ ಲಕ್ಷಣ
ಭೌಗೋಳಿಕ ಸೂಚಿಕೆಗಳು ತಮ್ಮದೇ ಆದ ವಿಶಿಷ್ಟ ಗುಣ ಸ್ವಭಾವ, ಲಕ್ಷಣ ಹಾಗೂ ಆಯಾ ಸ್ಥಳದ್ದೇ ಆದ ವಿಶಿಷ್ಟ ಗುಣಗಳನ್ನು ಹೊಂದಿರುತ್ತವೆ. ಉದಾ: ಬಾಸುಮತಿ ಅಕ್ಕಿಯ ವಿಶೇಷ ಪರಿಮಳ, ಪೋಚಂಪಲ್ಲಿ ಸೀರೆಯ ವಿಶಿಷ್ಟ ವರ್ಣವಿನ್ಯಾಸ ಇತ್ಯಾದಿ. ನೋಂದಣಿಯಿಂದ ಉಪಯೋಗ ಭಾರತದಲ್ಲಿ ಈ ವಸ್ತುಗಳಿಗೆ, ಅದನ್ನು ಯಾರೂ ನಕಲು ಮಾಡಲಾಗದಂತೆ, ಗುಣಮಟ್ಟ ಹಾಳು ಮಾಡದಂತೆ ಕಾನೂನು ರೀತಿಯ ರಕ್ಷಣೆಯೂ ದೊರಕುತ್ತದೆ.

ನೋದಾಯಿತ ವಸ್ತುಗಳನ್ನು ಬೇರೆಯವರು ಅನಧಿಕೃತವಾಗಿ ಬಳಸುವುದನ್ನು ಕಾನೂನು ತಡೆಯುತ್ತದೆ. ಭೌಗೋಳಿಕ ಸೂಚಿಕೆಗಳಿಗೆ ಕಾನೂನಿನ ರಕ್ಷಣೆ ದೊರೆತು ರಫ್ತು ಮಾರುಕಟ್ಟೆ ಹೆಚ್ಚುತ್ತದೆ. ಸಂಬಂಧಿಸಿದ ಭೌಗೋಳಿಕ ಪ್ರದೇಶದಲ್ಲಿ ಆಯಾ ವಸ್ತುಗಳ ಉತ್ಪಾದಕರ ಆರ್ಥಿಕ ಪರಿಸ್ಥಿತಿ ಉತ್ತಮಗೊಂಡು ಆ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಉತ್ತೇಜಕವಾಗುತ್ತದೆ.

ನೋಂದಣಿ ಹೇಗೆ?
ಭೌಗೋಳಿಕ ಸೂಚಿಕೆಗಳ ನೋಂದಣಿಗೆ, ಉತ್ಪಾದಕರು, ಯಾವುದೇ ವ್ಯಕ್ತಿಗಳ ಸಂಘಟನೆ, ಕಾನೂನು ರೀತ್ಯಾ ಸ್ಥಾಪಿತವಾದ ಸಂಘ ಸಂಸ್ಥೆಗಳು ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಉತ್ಪಾದಕರ ಹಿತಾಸಕ್ತಿಯನ್ನು ಪ್ರತಿನಿಧಿಸಬೇಕು. ಅರ್ಜಿಯು ನಿಗದಿತ ನಮೂನೆಯಲ್ಲಿ ಬರಹದಲ್ಲಿರಬೇಕು. ಅರ್ಜಿಯನ್ನು ರಿಜಿಸ್ಟ್ರಾರ್, ಜಿಯಾಗ್ರಫಿಕಲ್ ಇಂಡಿಕೇಷನ್ಸ್ ಅವರ ಕಚೇರಿಗೆ, ನಿಗದಿತ ನೋಂದಣಿ ಶುಲ್ಕ ಪಾವತಿಸಿ ಸಲ್ಲಿಸಬೇಕು.

ರಿಜಿಸ್ಟ್ರಾರ್‌ ಅವರಿಂದ ಅನುಮತಿ ದೊರೆತ ನಂತರದಲ್ಲಿನ ಅರ್ಜಿಯಲ್ಲಿ ನಮೂದಿಸಲಾದ ವ್ಯಕ್ತಿ, ವ್ಯಕ್ತಿಗಳ ಸಂಘವು ಭೌಗೋಳಿಕ ಸೂಚಿಕೆಯ ನೋಂದಾಯಿತ ಮಾಲಿಕರಾಗುವರು. ಆ ವ್ಯಕ್ತಿ ಮೃತನಾದರೆ ಆತನ ಅಧಿಕೃತ ವಾರಸುದಾರ ಬೌಗೋಳಿಕ ಸೂಚಿಕೆಯ ಹಕ್ಕು ಮುಂದುವರಿಸಿಕೊಂಡು ಹೋಗಲು ಅವಕಾಶ ಪಡೆಯುತ್ತಾನೆ. ಈ ನೋಂದಣಿಯು 10 ವರ್ಷಗಳವರೆಗೆ ಊರ್ಜಿತದಲ್ಲಿರುತ್ತದೆ. ಭೌಗೋಳಿಕ ಸೂಚಿಕೆಗಳ ನೋಂದಣಿಯನ್ನು ನವೀಕರಿಸ ಬೇಕಾಗುತ್ತದೆ. ನವೀಕರಿಸದಿದ್ದರೆ ನೋಂದಣಿ ದಾಖಲೆಯಿಂದ ತೆಗೆದು ಹಾಕಲಾಗುತ್ತದೆ.

ಪರಬಾರೆ, ವರ್ಗಾವಣೆ ಅಸಾಧ್ಯ
ನೋಂದಣಿ ಪಡೆದ ಭೌಗೋಳಿಕ ಸೂಚಿಕೆಗಳನ್ನು ಪರಬಾರೆ, ವರ್ಗಾವಣೆ, ಮಾಡಲು ಸಾಧ್ಯವಿಲ್ಲ. ನೋಂದಣಿಯು ಸಂಬಂಧಿಸಿದ ಉತ್ಪಾದಕರ ಸಾರ್ವಜನಿಕ ಸ್ವಾಮ್ಯದ ಸ್ವತ್ತು. ಈ ನೋಂದಣಿಯನ್ನು ಪರಬಾರೆ, ವರ್ಗಾವಣೆ , ಅಡಮಾನ, ಲೈಸನ್ಸಿಂಗ್ ಮುಂತಾದ ಕರಾರಿಗೆ ಒಳಪಡಿಸಲು ಸಾಧ್ಯವಿಲ್ಲ.

ಟ್ರೇಡ್ ಮಾರ್ಕ್‌ನಿಂದ ಭಿನ್ನ
ಭೌಗೋಳಿಕ ಸೂಚಿಕೆಯು ವ್ಯಾಪಾರ ಚಿಹ್ನೆಯಿಂದ (ಟ್ರೇಡ್ ಮಾರ್ಕ್) ಬೇರೆಯಾಗಿದೆ. ಹೇಗೆಂದರೆ, ವ್ಯಾಪಾರ, ವ್ಯವಹಾರಗಳಲ್ಲಿ ಒಂದು ಉದ್ಯಮದ ಉತ್ಪನ್ನ ಮತ್ತು ಸೇವೆಗಳನ್ನು ಪ್ರತ್ಯೇಕವಾಗಿ ಗುರುತಿಸುವ ಚಿಹ್ನೆಯೇ ಟ್ರೇಡ್ ಮಾರ್ಕ್. ಆದರೆ ಭೌಗೋಳಿಕ ಸೂಚಿಕೆಯು ಒಂದು ನಿರ್ದಿಷ್ಟ ಸ್ಥಳದಲ್ಲಿ ಬೆಳೆದು ಬಂದಿರುವ ವಿಶಿಷ್ಟ ಗುಣಲಕ್ಷಣಗಳಿಂದ ಕೂಡಿರುವ ಉತ್ಪನ್ನಗಳನ್ನು ಪ್ರತ್ಯೇಕಿಸಿ ಗುರುತಿಸುವ ವಿಧಾನವಾಗಿದೆ. ಭೌಗೋಳಿಕ ಸೂಚಿಕೆಗಳ ನೋಂದಣಿಯ ಕೇಂದ್ರ ಕಚೇರಿ, ಚೆನ್ನೈ, ತಮಿಳುನಾಡಿನಲ್ಲಿದೆ.

ಭೌಗೋಳಿಕ ಸೂಚಿಕೆ ರಕ್ಷಣೆ
ಬೇರೆ ಬೇರೆ ದೇಶಗಳಲ್ಲಿ ಭೌಗೋಳಿಕ ಸೂಚಿಕೆಗಳನ್ನು ರಕ್ಷಿಸುವ ಅವುಗಳದ್ದೇ ಆದ ಪ್ರತ್ಯೇಕ ವ್ಯವಸ್ಥೆಯಿದೆ. ಕೆಲವು ದೇಶಗಳು ತಮ್ಮಲ್ಲಿ ಪ್ರಚಲಿತವಿರುವ ಟ್ರೇಡ್ ಮಾರ್ಕ್ ಕಾನೂನು ಗ್ರಾಹಕ ರಕ್ಷಣಾ ಕಾಯಿದೆ, ಪೈಪೋಟಿ ಕಾಯಿದೆಗಳ ಮೂಲಕ ರಕ್ಷಣೆ ನೀಡಿದರೆ, ಇನ್ನೂ ಕೆಲವು ದೇಶಗಳಲ್ಲಿ ಪ್ರತ್ಯೇಕ ಕಾನೂನು ಇದೆ. ಇನ್ನು ಕೆಲವು ದೇಶಗಳಲ್ಲಿ ಭಾರತದಲ್ಲಿರುವಂತೆ ನೋಂದಣಿ ವ್ಯವಸ್ಥೆಯಿದೆ. ಭಾರತದ ಭೌಗೋಳಿಕ ಸೂಚಿಕೆಯ ನೋಂದಾಯಿತ ಮಾಲೀಕನು ಆಯಾ ದೇಶದಲ್ಲಿ ಪ್ರಚಲಿತವಿರುವ ವ್ಯವಸ್ಥೆಗೆ ಅನುಗುಣವಾಗಿ ರಕ್ಷಣೆಯನ್ನು ಪಡೆಯಬೇಕಾಗಿರುತ್ತದೆ.

ವಿಶ್ವ ವ್ಯಾಪಾರ ಸಂಸ್ಥೆಯ (ಡಬ್ಲ್ಯುಟಿಒ) ಇನ್ನಿತರ ಸದಸ್ಯ ರಾಷ್ಟ್ರಗಳು ಕೂಡಾ ಆಯಾ ಭೌಗೋಳಿಕ ಸೂಚಿಕೆಗಳನ್ನು ಉತ್ಪಾದಿಸುವ ದೇಶದಲ್ಲಿ ದೊರೆಯುವ ರೀತಿಯಲ್ಲಿ ರಕ್ಷಣೆ ನೀಡಲು ಬದ್ಧವಾಗಿವೆ. ಟ್ರಿಪ್ಸ್ ಒಪ್ಪಂದದ ಅನುಚ್ಛೇದ 22 ಮತ್ತು 23 ಹಾಗೂ 24 ಭೌಗೋಳಿಕ ಸೂಚಿಕೆಗಳ ರಕ್ಷಣೆ ಮತ್ತು ಅಂತರರಾಷ್ಟ್ರೀಯ ಸಂಧಾನ ಅಪವಾದಗಳ ಬಗ್ಗೆ ತಿಳಿಸಿಕೊಡುತ್ತದೆ.

ಗ್ಯಾಟ್‌ ಒಪ್ಪಂದ
ಔದ್ಯಮಿಕ ಸಂಪತ್ತು (ಆಸ್ತಿ) ರಕ್ಷಣೆ ಕುರಿತ ಪ್ಯಾರಿಸ್ ಸಮಾವೇಶದ 1(2) ಮತ್ತು 10ನೇ ಕಲಮಿನಂತೆ, ವಸ್ತುಗಳ ಮೇಲೆ ಸ್ಥಳ ನಮೂದಿಸುವುದು ಬೌದ್ಧಿಕ ಆಸ್ತಿ ಹಕ್ಕಿನ ಒಂದು ಅಂಶವಾಗಿದೆ. ಇದು ಉರುಗ್ವೆ ಸುತ್ತಿನ ಗ್ಯಾಟ್ (ಜಿಎಟಿಟಿ–ಜನರಲ್‌ ಅಗ್ರೀಮೆಂಟ್ ಆನ್‌ ಟ್ರೇಡ್‌ ಆ್ಯಂಡ್‌ ಟ್ರೀಟಿ) ಮಾತುಕತೆಯಲ್ಲಿ ಬರಲಾದ ಟ್ರಿಪ್ಸ್ (TRIPS- ವ್ಯಾಪಾರ ಸಂಬಂಧಿ ಬೌದ್ಧಿಕ ಆಸ್ತಿ ಹಕ್ಕು) ಒಪ್ಪಂದ ಅಡಿಯಲ್ಲಿಯೂ ಬರುತ್ತದೆ.

ವಿಶ್ವ ವ್ಯಾಪಾರ ಸಂಘಟನೆಯ ಸದಸ್ಯ ದೇಶವಾಗಿರುವ ಭಾರತ, ಸರಕುಗಳ ಭೌಗೋಳಿಕ ಸೂಚಿ (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆ-1999 ರೂಪಿಸಿ, 2003ರ  ಸೆಪ್ಟೆಂಬರ್ 15ರಂದು ಜಾರಿಗೆ ತಂದಿದೆ. ಇದರಿಂದ ಆಯಾ ಭೌಗೋಳಿಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವವರು ಒಂದು ಜನಪ್ರಿಯ ಉತ್ಪನ್ನದ ಹೆಸರನ್ನು ಮತ್ತೊಂದು ಉತ್ಪನ್ನಕ್ಕೆ ಬಳಸುವಂತಿಲ್ಲ. 2004–05ರಲ್ಲಿ ಡಾರ್ಜಿಲಿಂಗ್ ಟೀ, ಭೌಗೋಳಿಕ ಸೂಚಿ ಪಡೆದ ಮೊದಲ ಉತ್ಪನ್ನ ಎನಿಸಿಕೊಂಡಿತು. ಚಂದೇರಿ ಜವಳಿ, ಕಾಂಚೀಪುರ ರೇಷ್ಮೆ ಮೊದಲಾದವು ಇದರಲ್ಲಿ ಸೇರಿವೆ. ಈವರೆಗೆ ದೇಶದ ವಿವಿಧೆಡೆಯ ಒಟ್ಟು 235 ಉತ್ಪನ್ನಗಳು ಈ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.

***
ಭೌಗೋಳಿಕ ಸೂಚಿ ಗುರುತು
ಯಾವುದೇ ಗುಣಮಟ್ಟದ ವಸ್ತು ಸಾಮಗ್ರಿ ಮೇಲೆ ಅವುಗಳ ಮೂಲ ಘಟಕಗಳ ಪ್ರಮಾಣದೊಂದಿಗೆ ಅವು ಎಲ್ಲಿ ಉತ್ಪಾದನೆ ಆಗಿವೆ ಅಥವಾ ತಯಾರಿಕೆಯಾಗಿವೆ ಎಂಬ ಸ್ಥಳದ ವಿವರಗಳನ್ನು ಕೂಡ ನಮೂದಿಸಲಾಗಿ ರುತ್ತದೆ. ಇದನ್ನೇ ಭೌಗೋಳಿಕ ಸೂಚಿ ಎಂದು ಕರೆಯಲಾಗುತ್ತದೆ.

* ಉತ್ಪನ್ನಗಳು ಆಯಾ ನಿರ್ಧಿಷ್ಟ ಸ್ಥಳದಲ್ಲೇ ಉತ್ಪಾದನೆ, ಸಂರಕ್ಷಣೆ ಅಥವಾ ತಯಾರಾಗಿರಬೇಕು.
* ಆ ವಸ್ತುಗಳಿಗೆ ವಿಶಿಷ್ಟ ಗುಣಮಟ್ಟದ ಪ್ರಖ್ಯಾತಿ ಅಥವಾ ಇತರ ವಿಶೇಷ ಗುಣಲಕ್ಷಣಗಳು ಇರಬೇಕು.
* ಸ್ಥಾಪಿಸಲ್ಪಟ್ಟ ಸಂಘ ಸಂಸ್ಥೆಗಳು ನೊಂದಾಯಿತವಾದ ಹೆಸರನ್ನೇ ಅರ್ಜಿಯಲ್ಲಿ ನಮೂದಿಸಬೇಕು.

ಉತ್ಪಾದಕನ ನಿರ್ಧಾರ
ಈ ಕೆಳಗೆ ಸೂಚಿಸಿರುವ ನಾಲ್ಕು ರೀತಿಯ ವಸ್ತುಗಳ ಉತ್ಪಾದನಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಉತ್ಪಾದಕ ಯಾರು ಎಂಬ ನಿರ್ಧಾರ ಆಗುತ್ತದೆ.
* ಕೃಷಿ ಉತ್ಪನ್ನಗಳನ್ನು ಬೆಳೆಸುವುದು, ಉತ್ಪನ್ನಗಳ ಸಂಸ್ಕರಣೆ ಮತ್ತು ವ್ಯಾಪಾರ ಅಥವಾ ವ್ಯವಹಾರ
* ನೈಸರ್ಗಿಕ ವಸ್ತುಗಳ ಉತ್ಪಾದನೆ ಮತ್ತು ವ್ಯಾಪಾರ ಅಥವಾ ವ್ಯವಹಾರ
* ಕರಕುಶಲ ಅಥವಾ ಕೈಗಾರಿಕಾ ವಸ್ತುಗಳ ರಚನೆ, ಉತ್ಪಾದನೆ ಮತ್ತು ವ್ಯಾಪಾರ ಅಥವಾ ವ್ಯವಹಾರ.
* ಆಹಾರ ಪದಾರ್ಥಗಳ ತಯಾರಿಸುವಿಕೆ ಮತ್ತು ವ್ಯಾಪಾರ ಅಥವಾ ವ್ಯವಹಾರ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT