ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ ಮುಚ್ಚುವ ದಾರಿ ಇನ್ನೂ ದೂರ

Last Updated 3 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಲಿಂಗ ಸಮಾನತೆ ಸಾಧನೆಯಲ್ಲಿ ಭಾರತ ಸಾಗಬೇಕಾಗಿರುವ ಹಾದಿ ಇನ್ನೂ ದೂರ ಇದೆ. ಶಾಲೆಗಳಾಗಲಿ, ಬೀದಿಗಳಾಗಲಿ ಕಡೆಗೆ ಮನೆಗಳೂ ಹೆಣ್ಣುಮಕ್ಕಳಿಗೆ ಸುರಕ್ಷಿತವಲ್ಲ ಎಂಬುದನ್ನು ಇತ್ತೀಚೆಗೆ ವರದಿಯಾಗುತ್ತಿರುವ ಘಟನೆಗಳು ಎತ್ತಿ ತೋರಿಸುತ್ತಿವೆ. ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಲ್ಲಿ ಪುಟ್ಟ ಹೆಣ್ಣುಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳು, ತೀರ್ಥ­ಹಳ್ಳಿಯಲ್ಲಿ ಶಾಲಾ ಬಾಲಕಿ ನಂದಿತಾಳ ಸಾವಿನ ಪ್ರಕರಣ ಅಥವಾ ಒಂದೆರಡು ತಿಂಗಳ ಹಿಂದೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಆಲ­ಮೇಲ ಪಟ್ಟಣದ ವಸತಿ ಶಾಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳ ವರದಿ ಬಿತ್ತುವ ಅಭದ್ರತೆಯನ್ನು ಅಳಿಸುವುದು ಹೇಗೆ?

ಇಂತಹ ಅಸುರಕ್ಷತತೆಯ ಆತಂಕ ಮಡುಗಟ್ಟಿ­ರುವ ಸಂದರ್ಭದಲ್ಲಿಯೇ ಜಿನೀವಾ ಮೂಲದ ವಿಶ್ವ ಆರ್ಥಿಕ ವೇದಿಕೆ  (ಡಬ್ಲ್ಯುಇಎಫ್) ಹೊರ­ತಂದಿರುವ  ‘ಲಿಂಗತ್ವ ಸಮಾನತೆ ಸೂಚ್ಯಂಕ’  ಮತ್ತೊಂದಿಷ್ಟು ಕಹಿ ಸಂಗತಿಗಳನ್ನು ಬಿಚ್ಚಿಟ್ಟಿದೆ. ಲಿಂಗ ಅಸಮಾನತೆ ದೃಷ್ಟಿಯಿಂದ ಜಾಗತಿಕವಾಗಿ ಭಾರತ ಅತ್ಯಂತ ಕೆಳಗಿನ ಮಟ್ಟದಲ್ಲಿದೆ. ಮಹಿ­ಳೆಯ ಸ್ಥಿತಿಗತಿಗೆ ಸಂಬಂಧಿಸಿದಂತೆ 2013 ರಲ್ಲಿ 142 ರಾಷ್ಟ್ರಗಳ ಪೈಕಿ 101ನೇ ಸ್ಥಾನದಲ್ಲಿದ್ದ ಭಾರತ 13 ಸ್ಥಾನಗಳಷ್ಟು ಕೆಳಗಿಳಿದು 2014­ರಲ್ಲಿ 114 ನೇ ಸ್ಥಾನಕ್ಕೆ ಕುಸಿದಿದೆ. ರಾಷ್ಟ್ರದ ಮಹಿ­ಳೆಯರ ಸ್ಥಿತಿಗತಿಗೆ ಈ ವರದಿ ಕನ್ನಡಿ ಹಿಡಿದಿದೆ. ಈ ಕನ್ನಡಿಯಲ್ಲಿ ನಮಗೆ ಕಾಣಿಸುತ್ತಿರು­ವುದು ಮಂಕಾದ ಚಿತ್ರ.

ಆರ್ಥಿಕ ಕ್ಷೇತ್ರದಲ್ಲಿ ಪಾಲ್ಗೊಳ್ಳುವಂತಹ ಅವ­ಕಾಶ, ಶಿಕ್ಷಣ ಹಾಗೂ ಆರೋಗ್ಯದಂತಹ ಮಾನ­ದಂಡಗಳು ಬದುಕಿನ ಗುಣಮಟ್ಟ ಅಳೆಯುವಲ್ಲಿ ಮೂಲಭೂತವಾದವು. ಆದರೆ ಈ ಮಾನ­ದಂಡ­ಗಳಲ್ಲಿ ಗೋಚರಿಸಿರುವ ಸತ್ಯ ಎಂದರೆ ಲಿಂಗತ್ವ ಅಸ­ಮಾನತೆ ಎಂಬುದು ಭಾರತದಲ್ಲಿ ದೊಡ್ಡ­ಮಟ್ಟ­­ದಲ್ಲೇ ಮಡುಗಟ್ಟಿದೆ. ಈ ಮಾನದಂಡ­ಗಳಲ್ಲಿ ಕ್ರಮವಾಗಿ ಭಾರತ 134, 126 ಹಾಗೂ 141ನೇ ಸ್ಥಾನ ಪಡೆದಿದೆ. ಇದು ಕಳಪೆ ಸಾಧನೆ­ಯಲ್ಲದೆ ಮತ್ತೇನು? ಮಹಿಳೆಗೆ ಸಂಬಂಧಿಸಿದಂತೆ ಆರೋಗ್ಯ ಹಾಗೂ ಬದುಕು­ಳಿಯುವ ಮಾನದಂಡದಲ್ಲಿ ಅತ್ಯಂತ ಕಳಪೆ ಸಾಧನೆ ತೋರು­ತ್ತಿ­ರುವ ಮೊದಲ ರಾಷ್ಟ್ರ ಆರ್ಮೇನಿಯಾದ ನಂತರ ಎರಡನೇ ರಾಷ್ಟ್ರ­­ವಾ­ಗಿದೆ ಭಾರತ. ಬದುಕಿ­ನಲ್ಲಿ  ನೆಲೆ ನಿಲ್ಲಲು ಸಿಗ­ಬೇಕಾದ ಮೂಲಭೂತ ಅವಶ್ಯಕತೆ­ಗಳಿವು. ಅಷ್ಟೇ ಅಲ್ಲ, ಇವು ದೊರಕಿದಲ್ಲಿ ಹೆಣ್ಣು­ಮಕ್ಕಳು ಮೌನ ಬಲಿಪಶುಗಳಾಗುವುದಿಲ್ಲ. ಸಬಲೀ­ಕರ­ಣದ ಕಸುವು ನೀಡಲು ಇವು ಬೇಕೇ­ಬೇಕು. ಆದರೆ ಈ ಕ್ಷೇತ್ರಗಳಲ್ಲಿ ಭಾರತದ ಸಾಧನೆ ಸರಾಸರಿ ಪ್ರಮಾ­ಣ­ಕ್ಕಿಂತ ಕಡಿಮೆ ಇದೆ ಎಂಬುದು ಏನನ್ನು ಧ್ವನಿ­ಸುತ್ತದೆ? ಸವಕಲಾದ, ಅತಾರ್ಕಿಕ­ವಾದ, ಲಿಂಗತ್ವ ಪೂರ್ವಗ್ರಹಗಳನ್ನು ತೊಡೆ­ಯುವ­ವರೆಗೂ ನೀತಿ ನಿರೂಪಣೆಗಳಲ್ಲಿ ಅಳವ­ಡಿಸಿಕೊಳ್ಳಲಾಗುವ ಬದ­ಲಾವಣೆಗಳು ಆಲಂಕಾ­ರಿಕ­ವಾಗಿ ಮಾತ್ರ ಉಳಿಯುತ್ತವೆ.

ಕಾರ್ಮಿಕ ವಲಯದಲ್ಲಿ ಮಹಿಳೆಯರ ಸಂಖ್ಯೆ ಕ್ಷೀಣಿಸುತ್ತಿದೆ ಎಂಬುದನ್ನು ಈ ಹಿಂದೆ 2011–12ರ ಉದ್ಯೋಗ ಹಾಗೂ ನಿರುದ್ಯೋಗ  ಕುರಿ­ತಂತೆ ರಾಷ್ಟ್ರೀಯ ಮಾದರಿ ಸಮೀಕ್ಷೆಯ ವರ­ದಿಯೂ ಹೇಳಿತ್ತು. ಈ ಅಂಶ ಯೋಜನೆಗಳನ್ನು ರೂಪಿಸುವವರಿಗೊಂದು ಎಚ್ಚರಿಕೆಯ ಗಂಟೆಯಾ­ಗಿತ್ತು. ಈಗ ಡಬ್ಲ್ಯುಇಎಫ್ ವರದಿಯ ಪ್ರಕಾರ, ಒಂದೇ ಬಗೆಯ ಕೆಲಸ ಮಾಡುವ ಹೆಣ್ಣಿಗೂ, ಗಂಡಿಗೂ ಒಂದೇ ವೇತನ ಎಂಬುದು ಜಗ­ತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ಈಗಲೂ ಮರೀಚಿ­ಕೆಯೇ ಆಗಿದೆ. ಈ ಅಂತರ ಮುಚ್ಚಲು ಇನ್ನೂ 81 ವರ್ಷ­ಗಳಾದರೂ ಬೇಕು ಎನ್ನುತ್ತದೆ ಈ ವರದಿ. ಆದರೆ ಒಂದೇ ಸಮಾಧಾನದ ಸಂಗತಿ ಎಂದರೆ ನಿಧಾನ­ಕ್ಕಾ­ದರೂ ಈ ಅಂತರ ಕಡಿಮೆ­ಯಾ­ಗುತ್ತಾ ಬರುತ್ತಿದೆ.

ಭಾರತ ಬಹಳ ಹಿಂದೆಯೇ ಮಹಿಳಾ ಪ್ರಧಾನಿ ಹೊಂದಿದ ರಾಷ್ಟ್ರ. ಅನೇಕ ಮಹಿಳಾ ಮುಖ್ಯ­ಮಂತ್ರಿ­ಗಳನ್ನೂ ಭಾರತ ಕಂಡಿದೆ. ಹೀಗಾಗಿ   ಮಹಿಳಾ ನೇತಾರರನ್ನು ಹೊಂದಿದ ರಾಷ್ಟ್ರ ಎಂಬ ಸೂಚ್ಯಂಕದಲ್ಲಿ ಭಾರತಕ್ಕೆ ಅಚ್ಚರಿಯ ಮೊದ­ಲನೇ ಸ್ಥಾನ ದಕ್ಕಿದೆ. ಈ ಅಧ್ಯಯನ ಪರಿಗಣನೆಗೆ ತೆಗೆ­ದುಕೊಂಡಿದ್ದ  ವರ್ಷಗಳಲ್ಲಿ 15 ವರ್ಷಗಳು ಇಂದಿರಾ ಗಾಂಧಿಯವರು ಪ್ರಧಾನಿ ಆಗಿದ್ದುದು ಇದಕ್ಕೆ ಕಾರಣ. ಆದರೆ ಸಂಸತ್‌ನಲ್ಲಿ ಮಹಿಳಾ ಪ್ರಾತಿನಿಧ್ಯ ವಿಚಾರದಲ್ಲಿ ಭಾರತಕ್ಕೆ ದಕ್ಕಿರುವುದು 111ನೇ ಸ್ಥಾನ. ಮಹಿಳೆಯರು ಸಚಿವ ಸ್ಥಾನ­ಗಳನ್ನು ಹೊಂದಿ­­ರುವಂತಹ ಮಾನದಂಡದಲ್ಲಿ 107ನೇ ಸ್ಥಾನ ಸಿಕ್ಕಿದೆ. ಹಾಗೆಯೇ ರಾಜಕೀಯ ಸಬ­ಲೀ­ಕರಣದ ಸೂಚ್ಯಂಕದಲ್ಲಿ ಭಾರತ 15ನೇ ಸ್ಥಾನ ಪಡೆದುಕೊಂಡಿರುವುದು ಮತ್ತೊಂದು ವಿಶೇಷ. ಸಾಮಾಜಿಕ ತಾರತಮ್ಯಗಳಲ್ಲಿ ನಲುಗಿ­ದರೂ ಕಾರ್ಯ­ಕ್ಷಮತೆಯ ದೃಷ್ಟಿಯಿಂದ ಮಹಿಳೆ­ಯರ ಸಾಧನೆ ಈ ಕ್ಷೇತ್ರದಲ್ಲಿ ಭಿನ್ನ ಕಥೆಯನ್ನು ಹೇಳು­ತ್ತದೆ. ಇದು ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ­­ನಿರ್ವಹಿಸುತ್ತಿರುವ ಮಹಿಳೆಯರ ಕಥಾನಕ. ಸಮು­ದಾಯಗಳಿಗೆ ಹೆಚ್ಚಿನ ಅನು­ಕೂಲ­ವಾಗುವ ರೀತಿಯಲ್ಲಿ ಈ ಮಹಿಳೆಯರು ನಿರ್ಧಾರಗಳನ್ನು ಕೈ­ಗೊಳ್ಳಬಲ್ಲರು ಎಂಬುದನ್ನು ಈ ವರದಿ ಹೇಳಿದೆ. ಈ ಮಹಿಳೆಯರು ಅಷ್ಟೇನೂ ಸುಶಿಕ್ಷಿತರಾಗಿ­ರ­ದಿದ್ದರೂ, ಪುರುಷರಂತೆ ಅಷ್ಟೊಂದು ಅನುಭವ  ಹೊಂದಿರದಿದ್ದರೂ, ವಿಶೇಷ­ವಾಗಿ ಬಜೆಟ್ ನಿರ್ಧಾ­ರ­ಗಳನ್ನು ಕೈ­ಗೊಳ್ಳ­ಬೇಕಾದ ಸಂದರ್ಭ­ಗ­ಳಲ್ಲಿ ಸಮುದಾಯ­ಕ್ಕಾಗಿ ಹೆಚ್ಚಿನ ಸಂಪನ್ಮೂಲ­ಗಳನ್ನು ಒಟ್ಟು ಮಾಡು­ವಲ್ಲಿ ಯಶಸ್ವಿಯಾಗಿ­ದ್ದಾರೆ ಎನ್ನುತ್ತದೆ ಈ ವರದಿ. ಈ ಮಾಹಿತಿಯನ್ನು ಗಂಭೀರವಾಗಿ ತೆಗೆದುಕೊಳ್ಳಲು ಇದು ಸಕಾಲ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಇಲ್ಲಿ ಬಲವಾದ ಸಂದೇಶ­ವಿದೆ. ದಶಕಗಳ ಕಾಲ ನನೆಗುದಿಯಲ್ಲಿ ಸಿಲು­ಕಿರುವ ಮಹಿಳಾ ಮೀಸಲು ಮಸೂದೆಗೆ ಜೀವ ಕೊಡಲು ಕೇಂದ್ರ ಸರ್ಕಾರಕ್ಕೆ ಇದು ಪ್ರೇರ­ಣೆ­ಯಾಗಬೇಕು. ಕೆಲವು ರಾಜ್ಯಗಳು ಪಂಚಾ­ಯಿ­ತಿ­ಗಳಲ್ಲಿ ಶೇ 50ರಷ್ಟು ಮಹಿಳಾ ಮೀಸಲು ಅನು­ಷ್ಠಾನಗೊಳಿಸಿವೆ. ಇದನ್ನು ಎಲ್ಲಾ ರಾಜ್ಯಗಳೂ ಅನು­ಸರಿಸುವಂತೆ ಮಾಡುವುದೂ ಅಷ್ಟೇ ಅವಶ್ಯ. ನಿಜ ಹೇಳಬೇಕೆಂದರೆ, ಮಹಿಳೆಯರ ರಾಜಕೀಯ ಸಬಲೀಕರಣ, ಒಟ್ಟಾರೆ ಮಹಿಳೆಯರ ಸಬಲೀಕ­ರ­ಣಕ್ಕೆ ಹಾಗೂ ಆರೋಗ್ಯಕರ ರಾಷ್ಟ್ರ ನಿರ್ಮಾಣಕ್ಕೆ ಅನಿವಾರ್ಯ. ಸಾರ್ವಜನಿಕ ಆಡಳಿತ ವಲ­ಯ­ದಲ್ಲಿ ನಿರ್ಧಾರ ಕೈಗೊಳ್ಳುವ ವಿವಿಧ ಹಂತ­ಗಳಲ್ಲಿ  ಸಕ್ರಿಯವಾಗಿ ಪಾಲ್ಗೊಳ್ಳಲು ಸಂಸತ್ ಹಾಗೂ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಇರಬೇಕಾದುದು ಮುಖ್ಯ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಳೆದ ಅನೇಕ ವರ್ಷಗಳಿಂದ ಮಹತ್ವಾಕಾಂಕ್ಷೆಯ ಮಹಿಳಾ ಕೇಂದ್ರಿತ ಕಾರ್ಯಕ್ರಮಗಳನ್ನು ಅನಾ­ವರಣಗೊಳಿಸಿವೆ.  ಆದರೆ ಇವುಗಳಿಂದ ಆಗಿರುವ ಸಾಧನೆಗಳೇನು?  ಯೋಜನೆಗಳು ಎಷ್ಟರ ಮಟ್ಟಿಗೆ ಪ್ರಾಮಾಣಿಕವಾಗಿ ಅನುಷ್ಠಾನಗೊಂಡಿವೆ ಎಂಬು­ದರ ಪರಿಶೀಲನೆಯೂ ಅಗತ್ಯ. ಶತ ಶತಮಾನಗಳ ಅಂಧ ಶ್ರದ್ಧೆಗಳ ಸಂಕೋಲೆಗಳಿಂದ ನಾವಿನ್ನೂ ಬಿಡುಗಡೆ ಪಡೆಯುವುದು ಸಾಧ್ಯವಾಗಿಲ್ಲ ಎಂಬುದು ನಮ್ಮ ಯೋಜನೆಗಳ ಮಿತಿಗಳನ್ನು ಹೇಳುತ್ತದೆ. ಮಾಸಿಕ ಋತುಚಕ್ರ  ಅಥವಾ ಮಗು ಹೆತ್ತ ಸಂದರ್ಭಗಳಲ್ಲಿ  ಊರಾಚೆ ಗುಡಿಸಿಲಿನಲ್ಲಿ ಗೊಲ್ಲರ ಹಟ್ಟಿಗಳ ಹೆಣ್ಣುಮಕ್ಕಳು ಬದುಕ­ಬೇಕಾದ ಅಮಾನವೀಯ ಸ್ಥಿತಿಯನ್ನು ನಾವಿನ್ನೂ ಬದಲಿಸ­ಲಾಗಿಲ್ಲ  ಎಂಬುದು ಕಟು ವಾಸ್ತವ. ಆದರೆ ಇಂತಹ ಮೂಢನಂಬಿಕೆಗಳಿಂದ ಪಾರಾ­ಗಲು ಅನೇಕ ಹೆಣ್ಣುಮಕ್ಕಳು ತಮ್ಮ ಗರ್ಭ­ಕೋಶ­ಗಳನ್ನೇ ತೆಗೆಸಿಕೊಂಡಿದ್ದಾರೆನ್ನಲಾದ ವರದಿ, ಪ್ರಗತಿಯ ದಿಕ್ಕಿನ ವಿಪರ್ಯಾಸಗಳಿಗೆ ದಿಕ್ಸೂಚಿ. ಭ್ರೂಣದ ಲಿಂಗ ಪತ್ತೆ ಹಚ್ಚಿ  ಹೆಣ್ಣಭ್ರೂಣಗಳನ್ನು ಗರ್ಭ­ಪಾತ ಮಾಡಿಸಿಕೊಳ್ಳಲೂ ಆಧುನಿಕ ವೈದ್ಯ­ಕೀಯ ತಂತ್ರಜ್ಞಾನ ಪಿತೃಪ್ರಧಾನ ಸಂಸ್ಕೃತಿಯ ಉಳಿವಿನ ನೆರವಿಗೆ ಬರು­ತ್ತಿದೆ.  ಹೀಗಾಗಿಯೇ  ರಾಷ್ಟ್ರದಲ್ಲಿ ಗಂಡು, ಹೆಣ್ಣು­ಮಕ್ಕಳ ಲಿಂಗ ಅನುಪಾತ ಕುಸಿ­ಯು­ತ್ತಲೇ ಸಾಗಿದೆ.  ಈ ನಿಟ್ಟಿನಲ್ಲಿ ಕಳಪೆ ಸಾಧನೆ  ತೋರುತ್ತಿ­ರುವ 20 ರಾಷ್ಟ್ರಗಳ ಸಾಲಿಗೆ ಭಾರತವೂ ಸೇರಿದೆ ಎಂಬುದನ್ನು ನಾವು ಗಂಭೀರವಾಗಿ ಪರಿಗಣಿಸ­ಬೇಕಲ್ಲವೆ?

ರಾಷ್ಟ್ರೀಯ ಅಪರಾಧ ದಾಖಲೆಗಳ  ಬ್ಯೂರೊ ಪ್ರಕಾರ, ಪ್ರತಿ 21 ನಿಮಿಷಗಳಿಗೆ ಒಂದು ಅತ್ಯಾ­ಚಾರ ಪ್ರಕರಣ ಸಂಭವಿಸುತ್ತಿದೆ.  ಆದರೆ ಇಂತಹ ಅತ್ಯಾಚಾರಕ್ಕೆ ಕಾರಣಗಳೇನು ಎಂಬ ಬಗ್ಗೆ  ಸ್ವತಃ ಪೊಲೀಸರಲ್ಲಿ ಅನೇಕ ಪೂರ್ವಗ್ರಹಗಳಿವೆ. ಇದನ್ನು ಪುಷ್ಟೀಕರಿಸುವ ಇತ್ತೀಚಿನ ತಾಜಾ ಉದಾಹರಣೆ ಇಲ್ಲಿದೆ. ಉತ್ತರಪ್ರದೇಶದಲ್ಲಿ ಹೆಚ್ಚುತ್ತಿರುವ ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಅಡಿ ಮಾಹಿತಿ ಹಕ್ಕು ಕಾರ್ಯ­ಕರ್ತರೊಬ್ಬರು ಪ್ರಶ್ನೆಗಳನ್ನು ಕೇಳಿದ್ದರು.  ಇದಕ್ಕೆ ಉತ್ತರ ಪ್ರದೇಶ ಪೊಲೀಸರು ನೀಡಿರುವ ಉತ್ತರ­ಗಳು ನಮ್ಮನ್ನು ದಂಗುಬಡಿಸುತ್ತವೆ. ಮೊಬೈಲ್ ಫೋನ್, ಹೆಣ್ಣುಮಕ್ಕಳು ಧರಿಸುವಂತಹ ಪಾಶ್ಚಿ­ಮಾತ್ಯ ಉಡುಪು  ಹಾಗೂ ಮನರಂಜನೆ ಇಲ್ಲದಿ­ರುವುದೇ ಮುಂತಾದ ಅಂಶಗಳು ಅತ್ಯಾಚಾರ­ಗಳಿಗೆ ಕಾರಣ ಎಂದು ಪೊಲೀಸರು ವ್ಯಾಖ್ಯಾನಿ­ಸಿದ್ದಾರೆ. ಗಂಡು ಹೆಣ್ಣುಮಕ್ಕಳು ಹೆಚ್ಚಾಗಿ ಬೆರೆ­ಯುವುದೂ ಅತ್ಯಾಚಾರಗಳಿಗೆ ಇನ್ನೊಂದು ಕಾರಣ ಎಂಬುದು ಮತ್ತೊಂದಿಷ್ಟು ಠಾಣೆಗಳ ಪೊಲೀಸರ ಅಭಿಪ್ರಾಯ.
ಮಹಿಳೆಯರ ಮೇಲಿನ ಅಪರಾಧಗಳನ್ನು ನಿರ್ವಹಿಸಬೇಕಾದ ಪೊಲೀಸರಲ್ಲೇ ಇಂತಹ   ಮನೋ­ಭಾವಗಳು ಅಂತರ್ಗತವಾಗಿರುವಾಗ ಹೆಣ್ಣುಮಕ್ಕಳಿಗೆ  ಇವರು ಯಾವ ರೀತಿಯಲ್ಲಿ ನ್ಯಾಯ ದೊರಕಿಸಿಕೊಡಬಲ್ಲರು? ಎಷ್ಟರಮಟ್ಟಿಗೆ ವಸ್ತುನಿಷ್ಠ ತನಿಖೆ ಸಾಧ್ಯವಾಗುತ್ತದೆ?  ಎಂಬುದು ಪ್ರಶ್ನೆ. ಮಹಿಳೆಯರ ಮೇಲಿನ ಅಪರಾಧಗಳ ನಿರ್ವ­ಹಣೆಗೆ ಅಗತ್ಯವಾಗಿ ಇರಬೇಕಾದ ಸಂವೇ­ದ­ನಾಶೀಲತೆಯ ಕೊರತೆಯನ್ನು  ಈ ಅಭಿಪ್ರಾಯ­ಗಳು ಸಾರಿ ಹೇಳುತ್ತವೆ.

ಬಿಹಾರದ ಕಲೆ, ಸಂಸ್ಕೃತಿ ಹಾಗೂ   ಯುವ­ಜನ ವ್ಯವಹಾರ ಸಚಿವ ಬಿನಯ್ ಬಿಹಾರಿ ಅವರಂತೂ, ಅತ್ಯಾಚಾರ ಪ್ರಕರಣಗಳಿಗೆ ಮಾಂಸಾ­ಹಾರ ಸೇವನೆಯೂ ಕಾರಣ ಎಂದು ಕಳೆದ ಜೂನ್‌ನಲ್ಲಿ ಹೇಳಿದ್ದು ವರದಿಯಾ­ಗಿತ್ತು. ರಾಜ­ಕಾರಣಿಗಳು ಹಾಗೂ ಸಾರ್ವಜನಿಕ ವ್ಯಕ್ತಿಗಳಲ್ಲಿ ಕಂಡುಬರುವ ಇಂತಹ ಅಸೂಕ್ಷ್ಮ ಮನ­ಸ್ಥಿತಿ ಕುರಿತ ಟೀಕೆ ಟಿಪ್ಪಣಿ­ಗಳು ಮಾಧ್ಯಮ­ಗಳಲ್ಲಿ ವ್ಯಾಪಕ ಪ್ರಚಾರ ಪಡೆ­ದಿವೆ. ಹೀಗಿದ್ದೂ ಅವೇ  ಸವಕಲು ಮಾತುಗಳ ಪುನರಾವರ್ತನೆ­ಗಳಿಗೆ ಏನು ಹೇಳಬೇಕು?

ದ್ವಂದ್ವಗಳ ನಾಡು ನಮ್ಮದು. ಒಂದೆಡೆ ಮಹಿಳಾ ಶಕ್ತಿ ಅನೇಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿ­ಸುತ್ತಿದೆ. ಗಂಡು, ಹೆಣ್ಣು ಸಮಾನರೆಂದು ಹೇಳುವ ಭಾರತದ ಸಂವಿಧಾನ ನೀಡಿರುವ ಬಲ ಬಹು ದೊಡ್ಡದು. ಮಹಿಳಾ ಹಕ್ಕುಗಳಿಗೆ ಸಂಬಂ­ಧಿಸಿ­ದಂತೆ ಅನೇಕ ಕಾನೂನುಗಳೂ ಇವೆ. ಹೀಗಿದ್ದೂ ಲಿಂಗಾನುಪಾತ  ಕುಸಿತ, ಶಾಲೆ­ಯನ್ನು ಮಧ್ಯ­ದಲ್ಲೇ ಬಿಡುವ ಹೆಣ್ಣುಮಕ್ಕಳು ಹಾಗೂ  ಅಂತ­ರ್ಗತವಾಗಿರುವ ಪಿತೃ ಸಂಸ್ಕೃ­ತಿಯ ಸಮಾಜವನ್ನು ಹೆಜ್ಜೆಹೆಜ್ಜೆಗೂ ಭಾರತೀಯ ಮಹಿಳೆ ಎದುರಿಸು­ತ್ತಲೇ ಇದ್ದಾಳೆ.

ಮೈಕ್ರೊಸಾಫ್ಟ್ ಸಿಇಒ ಸತ್ಯ ನಾದೆಲ್ಲಾ  ಅವರು, ಮಹಿಳಾ ನೌಕರರು ವೇತನ ಏರಿಕೆಗಾಗಿ ‘ಕರ್ಮ’ವನ್ನು ನೆಚ್ಚಿಕೊಳ್ಳಬೇಕೆಂದು  ಹೇಳಿದ್ದು ವಿವಾದವಾಯಿತು.  ವೇತನ ಹೆಚ್ಚಳ ಕೇಳುವಾಗ ಮಹಿಳೆಯರು ಹೇಗೆ ವರ್ತಿಸಬೇಕೆಂಬ ಬಗ್ಗೆ ಅನುಚಿತವಾದ ಈ ಉಚಿತ ಸಲಹೆ ನೀಡಿ ನಂತರ ಆ ಮಾತುಗಳನ್ನು ಹಿಂತೆಗೆದು­ಕೊಂಡಿದ್ದೂ ಇತ್ತೀ­ಚೆಗೆ ಸುದ್ದಿಯಾ­ಯಿತು. ಅಂದರೆ  ದುಡಿಯುವ ರಂಗ­ದಲ್ಲಿ ಮಹಿಳೆ ಮತ್ತು ಪುರು­ಷರ ಮಧ್ಯೆ ಮುಂದು­ವ­ರಿ­ದಿರುವ ತಾರತಮ್ಯಗಳು ಹಾಗೂ ಅವರಿಂದ ವಿಭಿನ್ನ ಮನೋಧರ್ಮಗಳ ನಿರೀಕ್ಷೆ­ಗಳು  ಬದಲಾ­ಗು­ವುದು ಅಸಾಧ್ಯ ಎಂಬು­ದನ್ನು ಈ ಮಾತುಗಳು ತೋರಿಸಿಕೊಟ್ಟವು.  ನಾದೆಲ್ಲಾ ಅವರು ತಮ್ಮ ಮಾತು­­ಗಳಲ್ಲಿ ಧ್ವನಿಸಿದ ಅರ್ಥ ಸ್ಪಷ್ಟ­ವಿತ್ತು. ಮಹಿಳೆಯರು ಪುರುಷ­ರಂತ­ಲ್ಲದೆ   ಶಾಂತ­ವಾಗಿ, ಮೃದುವಾಗಿ ಪಾತ್ರ ನಿರ್ವ­ಹಣೆ ಮಾಡ­ಬೇಕು.  ವೇತನ ಏರಿಕೆ ಕೇಳುವ ಆಕ್ರಮಣ­ಕಾರಿ ಪಾತ್ರವನ್ನು ಪುರುಷರಿಗೇ ಬಿಟ್ಟು­-ಬಿಡ­ಬೇಕು.

ಡಬ್ಲ್ಯುಇಎಫ್ ಸೂಚ್ಯಂಕದಿಂದ ಒಂದು ಅಂಶ­ವಂತೂ ಮತ್ತೊಮ್ಮೆ ಸ್ಪಷ್ಟವಾಗಿದೆ. ತಾಯಿ, ಪತ್ನಿ, ಸೊಸೆ, ಸೋದರಿ, ಮಗಳಿಗೆ  ಗುಣಮಟ್ಟದ ಬದುಕು ಪೀಳಿಗೆ ಪೀಳಿಗೆಗಳಿಂದ ನಿರಾಕರಣೆ­ಯಾ­ಗುತ್ತಲೇ ಬರುತ್ತಿದೆ. ಗುಣಮಟ್ಟದ ಬದುಕಿನ ಸೂಚ್ಯಂಕ­ಗಳಲ್ಲಿ  ಆಕೆಯದು ಈಗಲೂ ಕೆಳಗಿನ ಸ್ಥಾನ­ಮಾನವೇ. ಸಂವಿಧಾನದಲ್ಲಿ ಹೇಳಿರುವ ಸಮಾ­­ನತೆಯ ಉಲ್ಲಂಘನೆ ಇದು. ಈ ಬಗ್ಗೆ ಮತ್ತೊಮ್ಮೆ ಡಬ್ಲ್ಯುಇಎಫ್ ವರದಿ  ನಮ್ಮ ಕಣ್ತೆ­ರೆಸಿದೆ. ರಾಷ್ಟ್ರದ 60 ಕೋಟಿ ಮಹಿಳೆಯರ  ಪೂರ್ಣಶಕ್ತಿಯ ಅನಾ­ವರಣಕ್ಕೆ ರಾಷ್ಟ್ರ­­­ವನ್ನು ಸಜ್ಜುಗೊಳಿಸುವುದು ಸರ್ಕಾರ ಹಾಗೂಸಮಾ­ಜದ ಹೊಣೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT