ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವದ ಅವಾಂತರ

Last Updated 26 ಜನವರಿ 2015, 19:30 IST
ಅಕ್ಷರ ಗಾತ್ರ

ಅನುಭವದಿಂದ ಜೀವನದ ಆಳ ಹೆಚ್ಚುತ್ತದೆ, ತಿಳಿವು ಬೆಳೆಯುತ್ತದೆ ಎಂಬುದು ಸರಿ.  ಆದರೆ, ಕೆಲವೊಮ್ಮೆ ಹಿಂದಿನ ಅನುಭವಗಳು ಮುಂದೆ ತೆಗೆದು­ಕೊಳ್ಳಬೇಕಾದ ತೀರ್ಮಾನಕ್ಕೆ ಅಡ್ಡಿ­ಯಾಗಿ ನಿಲ್ಲುತ್ತವೆ ಎಂಬುದೂ ಅಷ್ಟೇ ಸತ್ಯ. ಗೋವಿಂದ ತನ್ನ ಕಂಪನಿಯ ಏಳ್ಗೆಗಾಗಿ ಬಹಳವಾಗಿ ದುಡಿಯುತ್ತಾನೆ. ಅವನು ಮತ್ತೊಂದು ಕಂಪನಿಯೊಂದಿಗೆ ಇಂದು ನಡೆಯಬೇಕಾದ ಮಾತುಕತೆ­ಗಾಗಿ ಬಹಳ ತಯಾರಿ ಮಾಡಿದ್ದಾನೆ. ನಾಲ್ಕು ದಿನ ನಿದ್ರೆ ಕೂಡ ಮಾಡಿಲ್ಲ. ಮಾತುಕತೆಯೆಲ್ಲ ಚೆನ್ನಾಗಿ ನಡೆದು ಒಪ್ಪಂದವಾಯಿತು. ಇದರಿಂದಾಗಿ ಕಂಪನಿಗೆ ಇಪ್ಪತ್ತು ಲಕ್ಷ ರೂಪಾಯಿಗಳ ಲಾಭ ಬರುವುದು ಖಂಡಿತ. 

ಅತ್ಯಂತ ಸಂತೋಷದಿಂದ ಗೋವಿಂದ ಮನೆಗೆ ನಡೆದ. ಹೆಂಡತಿಗೆ ಹೇಳಿದ, ‘ನಾನು ಹೇಳಿದ್ದಿಲ್ಲವೇ? ಹೊಸ ಒಪ್ಪಂದ­ವಾಯಿತು. ಎಲ್ಲವೂ ನಾನು ಎಣಿಸಿ­ದಂತೆಯೇ ನಡೆಯಿತು.  ಆಗದೇ ಇರು­ತ್ತದೆಯೇ? ನಾನು ಇಂದೂ ಕೂಡ ಅದೇ ಕೆಂಪು ಟೈ ಕಟ್ಟಿಕೊಂಡಿದ್ದೆ!’ ಗೋವಿಂದ­ನಿಗೆ ಖಚಿತತೆ ಇದೆ, ಕೆಂಪು ಟೈ ಕಟ್ಟಿ­ಕೊಂಡರೆ ಕೆಲಸವಾಗುವುದು ಗ್ಯಾರಂಟಿ. ಅವರು ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಆಟಗಾರರು. ಆದರೆ, ಮೈದಾನ­ದೊಳಗೆ ಹೋಗುವಾಗ ಎಂದಿಗೂ ಎಡ­ಗಾ­ಲನ್ನಿಟ್ಟು ಹೋಗುವುದಿಲ್ಲ, ಪ್ರತಿ ಸಲವೂ ನಿಂತು ಬಲಗಾಲನ್ನು ಒಳಗಿಟ್ಟೇ ಹೋಗಬೇಕು. ಹಾಗಂತ ಅವರು ಪ್ರತಿ­ಬಾರಿಯೂ ಸೆಂಚುರಿ ಹೊಡೆದಿ­ದ್ದಾರೆಂದಲ್ಲ.  ಆದರೆ, ಅಕಸ್ಮಾತ್ ಎಡ­ಗಾಲನ್ನಿಟ್ಟು ಹೋದರೆ ರನ್ನು ತೆಗೆ­ಯ­ಲಾಗುವುದಿಲ್ಲವಂತೆ, ಯಾಕೆಂದರೆ ಒಮ್ಮೆ ಹಾಗೆ ಹೋದಾಗ ಸೊನ್ನೆಗೇ ಔಟಾಗಿ­ದ್ದರಂತೆ. ಪಕ್ಕದ ಮನೆಯ ಗುಂಡಣ್ಣ ಯಾವುದಾದರೂ ಮಹತ್ವದ ಕೆಲಸಕ್ಕೆ ಹೋಗುವುದಾದರೆ ಹೆಂಡತಿಗೆ ಹೇಳಿ ಪಕ್ಕದ ಮನೆಯ ಹುಡುಗಿ ಈತ ಹೊರಗೆ ಬರುತ್ತಿದ್ದಂತೆ ಎದುರಿಗೆ ಬರುವಂತೆ ಮಾಡಿಸಿಕೊಳ್ಳುತ್ತಾನೆ. ಅವಳೇನಾದರೂ ಬೇರೆ ಕೆಲಸದಲ್ಲಿದ್ದರೆ, ಆಕೆ ಬರುವವ­ರೆಗೂ ಕಾಯುತ್ತಾನೆ.  ಆಕೆ ಅವನಿಗೆ ತುಂಬ ಶುಭಶಕುನ.  ಆಕೆ ಎದುರಿಗೆ ಬಂದರೆ ಕೆಲಸವಾಗುವುದು ಖಾತ್ರಿ. ಬಹಳಷ್ಟು ಬಾರಿ ಆಕೆ ಎದುರು ಬಂದಾ­ಗಲೂ ಕೆಲಸವಾಗದೇ ಇದ್ದದ್ದು ಇದೆ.  ಆದರೆ, ಆಕೆ ಬರದಿದ್ದರೆ ಆಗುವುದೇ ಇಲ್ಲವಂತೆ.

ರಷ್ಯಾದ ವಿಜ್ಞಾನಿ ಪಾವ್‍ಲೋವ್ ಇದನ್ನೇ ಹೇಳುತ್ತಾನೆ. ಒಮ್ಮೆ ಯಾವು­ದಾದರೂ ಅನುಭವ­ವಾದರೆ ಮುಂದೆಯೂ ಹಾಗೆಯೇ ಆಗುತ್ತದೆಂಬ ನಂಬಿಕೆ ಬಲಿಯುತ್ತದೆ.  ಬಚ್ಚಲುಮನೆ­ಯಲ್ಲಿ ಗೀಜರ್ ಹಾಕಲು ಹೋದಾಗ ಸ್ವಿಚ್ ಬಲವಾದ ಶಾಕ್ ಹೊಡೆದರೆ ಪ್ರತಿಬಾರಿಯೂ ಕೈ ಸ್ವಿಚ್ ಬಳಿ ಹೋದಾಗ ಹೆದರುತ್ತದೆ. ಬಾಲ್ಯ­ದಲ್ಲಿ ನಿಮ್ಮನ್ನು ನಾಯಿ ಕಚ್ಚಿದ್ದರೆ ಕೊನೆಯ­ವರೆಗೂ ನಾಯಿಯ ಭಯ ಕಾಡುತ್ತದೆ. ಕೆಲವರು ಮಂಗಳವಾರ ಯಾವ ಕೆಲಸ­ವನ್ನು ಮಾಡಬಾರದೆಂದು ತೀರ್ಮಾ­­ನಿ­ಸುತ್ತಾರೆ. ಯಾಕೆಂದರೆ ಮಂಗಳ­ವಾರ ಮಾಡಿದ ಯಾವ ಕೆಲಸವೂ ಸಫಲ­ವಾಗದೆಂಬ ನಂಬಿಕೆ ಅವರದು. ಅದಕ್ಕೆ ಅಮೆರಿಕದ ಮಹಾನ್ ವಿಜ್ಞಾನಿ ಕಾರ್ಲಸಗಾಸ್ ಹೇಳುತ್ತಾನೆ, ‘ಎಂದಿಗೋ ಒಂದು ಘಟನೆ ಆಗುತ್ತದೆ.

ಆಗ ಯಾವುದೋ ಒಂದು ನಕ್ಷತ್ರ ಕೂಟ ಇರುತ್ತದೆ.  ಮತ್ತೆಂದೋ, ಎಷ್ಟೋ ನೂರು ವರ್ಷಗಳ ನಂತರ ಅಂತಹುದೇ ಘಟನೆ ನಡೆದಾಗ ಅಕಸ್ಮಾತ್ ಅವೇ ನಕ್ಷತ್ರ ಕೂಟ ಇದ್ದರೆ  ಅದನ್ನು ಅಕಸ್ಮಿಕ ಎಂದು ಗ್ರಹಿಸದೇ ಅದೊಂದು ಅನಾಹುತದ ಗಳಿಗೆ ಎಂದು ತೀರ್ಮಾನಿಸಿ­ಬಿಡುತ್ತೇವೆ.  ಇಂದು ನಡೆಯುವ ಘಟನೆ­ಗಳಿಗೆ ನಿನ್ನೆಯ ಘಟನೆಗಳು ಕಾರಣವಾ­ಗುವುದಿಲ್ಲ. ಹಾಗೆ ಆದೀತು ಎಂಬ ನಿಮ್ಮ ಮನಸ್ಸಿನ ಭಯ, ಆತ್ಮವಿಶ್ವಾಸವನ್ನು ತಗ್ಗಿಸಿ, ಚಿಂತನಾಕ್ರಮವನ್ನು ಕುಗ್ಗಿಸಿ ಹಾಗೆಯೇ ಆಗುವಂತಾಗುತ್ತದೆ.  ಅದಕ್ಕೆ ನಕ್ಷತ್ರ ಕೂಟ, ಗ್ರಹಕೂಟ ಕಾರಣವಲ್ಲ. ಅದಕ್ಕೆ ಮುಖ್ಯ ಕಾರಣ ನಿಮ್ಮ ಮನಸ್ಸಿನ ಹಿಂಜರಿಕೆ’. ಇದು ತುಂಬ ಸತ್ಯದ ಮಾತು.  ನಿನ್ನೆಯ ಘಟನೆಯಿಂದ ನಾವು ಪಾಠ ಕಲಿಯಬೇಕು, ವಿವೇಚನೆಯಿಂದ ವಿಮರ್ಶೆಮಾಡಿ ನಡೆಯಬೇಕು.  ಆದರೆ, ಆ ಅನುಭವ ನಮ್ಮ ಮುಂದಿನ ತೀರ್ಮಾನವನ್ನು ಕಟ್ಟಿ ಹಾಕಬಾರದು, ಮೂಢನಂಬಿಕೆಯತ್ತ ತಳ್ಳಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT